ADVERTISEMENT

‘ವಿವಾದಗಳಿಗೆ ನಾನು ಹೆದರೊಲ್ಲ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

‘ಹಲವು ವರ್ಷಗಳಿಂದ ವಿವಾದಗಳು ನನ್ನ ಬೆನ್ನ ಹಿಂದೆ ಬರುತ್ತಿವೆ. ನನ್ನ ವೃತ್ತಿ ಜೀವನದುದ್ದಕ್ಕೂ ಅವುಗಳು ಹಾಗೆಯೇ ಮುಂದುವರೆಯಲಿವೆ’ ಎಂದು ನಟ ಹಾಗೂ ನಿರ್ದೇಶಕ ಕಮಲ್‌ ಹಾಸನ್‌ ಹೇಳಿಕೊಂಡಿದ್ದಾರೆ.

‘ಕಳೆದ ವಾರದವರೆಗೆ ನನ್ನ ‘‘ಪಾಪನಾಶಂ’’ ಚಿತ್ರಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ಹೋರಾಟ ನಡೆಸುತ್ತಿದ್ದೆ. ಯಾರು ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಮತ್ತು ಎಲ್ಲಿಂದ ಎಂಬುದು ನಮಗೆ ಗೊತ್ತು. ಈ ರೀತಿಯ ತೊಂದರೆ. ವಿವಾದಗಳು ಹಿಂದಿನಿಂದಲೂ ನನ್ನ ಬೆನ್ನು ಹತ್ತಿಕೊಂಡು ಬಂದಿವೆ’ ಎಂದು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಸದ್ಯ ಕಮಲ ಹಾಸನ್‌ ಅವರು, ತಮ್ಮ ಮುಂಬರಲಿರುವ ‘ಉತ್ತಮ್‌ ವಿಲನ್‌’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

‘ಮೊದಲಿನಿಂದಲೂ ನನ್ನನ್ನು ಗುರಿ ಮಾಡಲಾಗು­ತ್ತಿದೆ. ಈ ಹಿಂದೆಯೂ ನನ್ನ ವಿರುದ್ಧ ಹೀಗೆಯೇ ಮಾಡಲಾಗಿತ್ತು. ನಿದರ್ಶನಕ್ಕೆ ತೆಗೆದುಕೊಳ್ಳುವುದಾದರೆ, ನನ್ನ ‘ಮುಂಬೈ ಎಕ್ಸ್‌ಪ್ರೆಸ್‌’ ಚಿತ್ರದ ಶೀರ್ಷಿಕೆ ವಿಷಯವಾಗಿ ಕೆಲವರು ತಗಾದೆ ತೆಗೆದಿದ್ದರು. ಚಿತ್ರದ ಟೈಟಲ್‌ ತಮಿಳು ಭಾಷೆಯಲ್ಲಿ ಇಲ್ಲ ಎನ್ನುವುದು ಅವರ ಆಕ್ಷೇಪ. ಆದರೆ, ಮುಂಬೈಗೆ ತಮಿಳಿನಲ್ಲಿ ಯಾವ ಶಬ್ದ ಬಳಸಬೇಕು? ಇದಕ್ಕೂ ಮುನ್ನ ನನ್ನದೇ ಚಿತ್ರ ‘ಸ್ಯಾಂಡಿಯರ್‌’ ವಿಷಯವಾಗಿಯೂ ವಿರೋಧ ಕೇಳಿಬಂದಿತ್ತು. ಆದರೆ, ಕೆಲ ತಿಂಗಳ ಬಳಿಕ ಆ ಚಿತ್ರ ಅದೇ ಹೆಸರಿನಲ್ಲಿ ತೆರೆ ಕಂಡಿತು.  ಆದರೆ, ಯಾರೊಬ್ಬರೂ ಅದಕ್ಕೆ ಆಕ್ಷೇಪ ಎತ್ತಲಿಲ್ಲ ಏಕೆ?’ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಸಮುದಾಯದವರನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಕಳೆದ ವರ್ಷ ತೆರೆಕಂಡಿದ್ದ ಕಮಲ್‌ ಹಾಸನ್‌ ಅವರ ‘ವಿಶ್ವರೂಪಂ’ ಚಿತ್ರಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದಾಗಿ ಕಮಲ್‌ ಹಾಸನ್‌, ಹಂಚಿಕೆದಾರರ ಸಿಟ್ಟಿಗೆ ಗುರಿಯಾಗಬೇಕಾಯಿತು. ಆದಕಾರಣ ಅವರು ಚಿತ್ರಮಂದಿರಗಳಲ್ಲಿ ತೆರೆಕಂಡ ದಿನವೇ ಡಿಟಿಎಚ್‌ನಲ್ಲೂ ಚಿತ್ರವನ್ನು ರಿಲೀಸ್‌ ಮಾಡಿದ್ದರು. ಈಗಲೂ ಅವರು ಆ ಯೋಚನೆ ಹೊಂದಿದ್ದಾರೆ.

‘ಚಿತ್ರೋದ್ಯಮಕ್ಕೆ ಸಂಬಂಧಿಸಿ ಹೇಳುವುದಾದರೆ ಅದು ಕೂಡ ಒಂದು ವಿಭಾಗ. ನಾವು ಎಲ್ಲ ದೃಷ್ಟಿಯಿಂದಲೂ ವ್ಯವಹಾರ ಮಾಡಲು ಬಯಸುತ್ತೇವೆ’ ಎಂದು ಕಮಲ್‌ ಹೇಳಿದ್ದಾರೆ.
ಚಲನಚಿತ್ರ ಪ್ರಮಾಣಪತ್ರ ಮಂಡಳಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲು ಪ್ರಯತ್ನಿಸುತ್ತಿದೆ ಎಂದು ಅದರ ವಿರುದ್ಧ ಕಿಡಿಕಾರಿದ್ದಾರೆ.

‘ನಾನು ಏನಾದರೂ ನನ್ನ ಭಾಷೆಯಲ್ಲಿ ಹೇಳಲು ಬಯಸಿದರೆ, ಚಲನಚಿತ್ರ ಮಂಡಳಿಗೆ ಪತ್ರ ಬರೆದು ಅದರಿಂದ ಅನುಮತಿ ಪಡೆದುಕೊಳ್ಳಬೆಕು.  ಇದು ಬ್ರಿಟಿಷರ ಕಾಲದ ಆಡಳಿತದಂತಾಗಿದೆ. ಒಬ್ಬ ಕಲಾವಿದನಾಗಿ ನಾನು ಏನು ಹೇಳಬೇಕು ಮತ್ತು ಯಾರನ್ನಾದರೂ ಪ್ರಶ್ನಿಸುವ ಎಲ್ಲ ಹಕ್ಕು ಇದೆ’ ಎಂದಿದ್ದಾರೆ.

ಸದ್ಯ ಕಮಲ್‌ ಅವರ ಕೈಯಲ್ಲಿ ‘ಪಾಪನಾಶಂ’ ಮತ್ತು ‘ವಿಶ್ವರೂಪಂ 2’ ಚಿತ್ರಗಳಿವೆ. ‘ಈ ಚಿತ್ರಗಳ ಬಿಡುಗಡೆ ತಡವಾದರೂ ಆ ನಿಟ್ಟಿನಲ್ಲಿ ಕೆಲಸ ಮುಂದುವರೆಸುತ್ತೇನೆ. ನಾನು ಸುಮ್ಮನೇ ಕೂರುವವನಲ್ಲ. ಜನರು ನನ್ನಿಂದ ಸಾಕಷ್ಟು ನಿರೀಕ್ಷಿಸುತ್ತಾರೆ. ಹೀಗಾಗಿ ಒಳ್ಳೆಯ ಕಥೆ ಇರುವ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೇನೆ’ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.