ADVERTISEMENT

‘ಸಂಜೆಯಲ್ಲಿ ಅರಳಿದ ಹೂವು’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST
ದಿಲೀಪ್ ಪೈ  ಮತ್ತು ಕೀರ್ತನಾ ಪೋಡವಾಲ್
ದಿಲೀಪ್ ಪೈ ಮತ್ತು ಕೀರ್ತನಾ ಪೋಡವಾಲ್   

ಕಿರುತೆರೆ ಧಾರಾವಾಹಿ ನಿರ್ದೇಶಕ ಎಂ. ಕೌಶಿಕ್ ಅವರು ಚಿತ್ರ ನಿರ್ದೇಶಕನಾಗಿ ‘ಸಂಜೆಯಲ್ಲಿ ಅರಳಿದ ಹೂವು’ ಸಿನಿಮಾದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರೈಸಿದ್ದಾರೆ. ಎಸ್.ಜಿ. ಮಾಲತಿ ಶೆಟ್ಟಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ ಇದು. ಸುಮ್ಮನೆ ಕೂರಲು ಸಾಧ್ಯವಾಗದ ಕಾರಣ ಈ ಚಿತ್ರ ಮಾಡಿದ್ದಾಗಿ ಹೇಳುವ ಕೌಶಿಕ್ ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

‘ಮಾಲತಿ ಅವರ ಕಾದಂಬರಿ ಚಿತ್ರಕ್ಕೆ ತುಂಬ ಸೂಕ್ತವಾಗಿತ್ತು. ಹಾಗಾಗಿ ಹೆಚ್ಚೇನೂ ಚಿತ್ರಕಥೆ ಬರೆಯುವ ಅವಶ್ಯಕತೆಯೇ ಬೀಳಲಿಲ್ಲ. ಅದೊಂದು ರೀತಿ ಸಿದ್ಧ ವಸ್ತುವಾಗಿತ್ತು’ ಎಂದು ಕಾದಂಬರಿಯ ತಂತ್ರಗಾರಿಕೆಯನ್ನು ಬಣ್ಣಿಸುತ್ತಾರೆ ಕೌಶಿಕ್. ಚಿತ್ರವನ್ನು ತೀರಾ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ್ದೇವೆ ಎನ್ನುವ ನಿರ್ದೇಶಕರು, ಇನ್ನು ಮುಂದೆ ಮಾಡುವ ಯಾವ ಚಿತ್ರಗಳೂ ₹ 20 ಲಕ್ಷ ಬಜೆಟ್ ಮೀರದಂತೆ ಎಚ್ಚರ ವಹಿಸುತ್ತಾರಂತೆ.

ಪ್ರೀತಿಸಿ ಮದುವೆಯಾಗುವ ಎಂಜಿನಿಯರ್ ಮತ್ತು ವೈದ್ಯೆ. ಎಂಜಿನಿಯರ್‌ಗೆ ಅಮೆರಿಕಕ್ಕೆ ಹೋಗುವ ಆಸೆ. ಆದರೆ ವೈದ್ಯೆಗೆ ಆತ ತನ್ನ ಜೊತೆಗೇ ಇರಬೇಕೆಂಬ ಹಂಬಲ. ಅಂತೂ ಇಂತೂ ಮಗು ಹುಟ್ಟಿದ ಸಮಯದಲ್ಲೇ ಎಂಜಿನಿಯರ್ ಎರಡು ವರ್ಷಗಳ ಕಾಲ ಅಮೆರಿಕಕ್ಕೆ ಹೋಗಿಬಿಡುತ್ತಾನೆ. ನಂತರ ಅಲ್ಲಿ ಬಿಳಿ ಹುಡುಗಿಯನ್ನು ಮದುವೆಯಾಗಿ ಅಲ್ಲೇ ವಾಸವಾಗುತ್ತಾನೆ. ಇತ್ತ ಒತ್ತಡಕ್ಕೆ ಕಟ್ಟುಬಿದ್ದು ವೈದ್ಯೆ ತನ್ನ ಹಳೆಯ ಸ್ನೇಹಿತನೊಂದಿಗೆ ಮತ್ತೊಂದು ವಿವಾಹ ಮಾಡಿಕೊಳ್ಳುತ್ತಾಳೆ. ಇದು ಕಥೆಯ ಮುಖ್ಯ ಅಂಶ. ಆದರೆ ಕ್ಲೈಮ್ಯಾಕ್ಸ್ ತೀರಾ ಭಿನ್ನವಾಗಿರುತ್ತದೆ ಎನ್ನುತ್ತಾರೆ ಕೌಶಿಕ್.

ಕಿರುತೆರೆ ಕಲಾವಿದರೇ ಹೆಚ್ಚಾಗಿರುವ ಚಿತ್ರದಲ್ಲಿ ಎಂಜಿನಿಯರ್ ಪಾತ್ರದಲ್ಲಿ ನಾರಾಯಣ ಸ್ವಾಮಿ, ವೈದ್ಯೆಯಾಗಿ ಜಯಶ್ರೀ ರಾಜ್ ಹಾಗೂ ಸ್ನೇಹಿತನಾಗಿ ಯೋಗೀಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಮಾಲತಿ ಸರ್‌ದೇಶಪಾಂಡೆ, ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಕೂಡ ಬಣ್ಣ ಹಚ್ಚಿದ್ದಾರೆ. ಕೇಶಾಲಂಕಾರಕ್ಕೆ ಹೆಸರಾಗಿದ್ದ ಜಿ.ನಾಗೇಶ್ವರ್ ರಾವ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಮಾರುತಿ ಮೀರಜಕರ್ ಸಂಗೀತ ನೀಡಿದ್ದು, ದೊಡ್ಡರಂಗೇಗೌಡ ಹಾಗೂ ಎಂ.ಡಿ.ಕೌಶಿಕ್ ಗೀತ ಸಾಹಿತ್ಯ ರಚಿಸಿದ್ದಾರೆ. ನಾರಾಯಣ ಸ್ವಾಮಿ, ಜಯಶ್ರೀ ರಾಜ್, ಯೋಗೀಶ್, ಸಾಹಿತಿ ಮಾಲತಿ ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.