ADVERTISEMENT

ಸಿನಿಮಾ ಉಡುಪು ಏನಾಡ್ಮಾರೆ?

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 14:14 IST
Last Updated 7 ಜುಲೈ 2018, 14:14 IST

ತಮ್ಮ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಧರಿಸಿದ ಬಟ್ಟೆಗಳು ಟ್ರೆಂಡ್‌ ಸೃಷ್ಟಿಸಬೇಕು ಎಂದು ನಿರ್ಮಾಪಕರು ಮತ್ತು ನಿರ್ದೇಶಕರು ಲೆಕ್ಕಾಚಾರ ಹಾಕಿಯೇ ಹೆಜ್ಜೆ ಮುಂದಿಡುತ್ತಾರೆ. ಅಪರೂಪದ ಹಾಗೂ ವಿಶಿಷ್ಟ ವಿನ್ಯಾಸದ ಬಟ್ಟೆಗಳನ್ನು ಪರಿಚಯಿಸಿದ ಖ್ಯಾತಿ ತಮ್ಮ ಚಿತ್ರದ್ದಾಗಬೇಕು. ಅದಕ್ಕಾಗಿ ಲಕ್ಷಗಟ್ಟಲೆ ವ್ಯಯಿಸಲೂ ಅವರು ಹಿಂದೇಟು ಹಾಕುವುದಿಲ್ಲ.

ರಾಣಿ ಪದ್ಮಾವತಿ ಪಾತ್ರಕ್ಕಾಗಿ 400 ಕೆ.ಜಿ. ತೂಕದ ಒಡವೆಗಳು ಬಳಕೆಯಾಗಿದ್ದವು. ದೀಪಿಕಾ ಪಡುಕೋಣೆ ಪ್ರತಿದಿನ ಭಾರಿ ತೂಕದ ಒಡವೆಗಳನ್ನು ಧರಿಸಿ ದಿನವಿಡೀ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದುದೂ ದೊಡ್ಡ ಸುದ್ದಿಯಾಗಿತ್ತು. ದೆಹಲಿ ಮೂಲದ ರಿಂಪಲ್‌ ಮತ್ತು ಹರ್‌ಪ್ರೀತ್‌ ನರೂಲಾ ಎಂಬ ವಸ್ತ್ರವಿನ್ಯಾಸಕರು ಅಧ್ಯಯನ ಮಾಡಿ ವಿನ್ಯಾಸ ಮಾಡಿದ್ದ ಲೆಹೆಂಗಾ, ಚೋಲಿ ಮತ್ತು ದುಪಟ್ಟಾಗಳೂ ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿಸಿದ್ದವು. ‘ಪದ್ಮಾವತ್‌’ ಸಿನಿಮಾದ ಉಡುಗೆಗಳನ್ನು ವಿನ್ಯಾಸಕರು ತಮ್ಮ ಕೌಶಲದ ಪ್ರತೀಕವಾಗಿ ಶೋಕೇಸ್‌ನಲ್ಲಿಟ್ಟುಕೊಂಡಿದ್ದಾರಂತೆ. ಆದರೆ ‘ತನಿಷ್ಕ್‌’ ಈ ವಿನ್ಯಾಸಗಳನ್ನು ‘ಪದ್ಮಾವತಿ ವಿನ್ಯಾಸ’ ಎಂಬ ಲೇಬಲ್‌ನಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

‘ಯಶ್‌ರಾಜ್‌ ಫಿಲಂಸ್‌’ನ ಚಿತ್ರಗಳಲ್ಲಿ ಬಳಕೆಯಾದ ಉಡುಗೆ ತೊಡುಗೆಗಳು ಸಾಮಾನ್ಯವಾಗಿ ಕಂಪೆನಿಯ ತಿಜೋರಿ ಸೇರುತ್ತವೆ. ಪ್ರತಿ ತಿಜೋರಿಗೆ ಸಿನಿಮಾದ ಹೆಸರಿನ ಲೇಬಲ್‌ ಜೊತೆಗೆ ಯಾವ ನಟ, ನಟಿ, ಕಲಾವಿದರು ಬಳಸಿದ್ದು ಎಂಬ ವಿವರಗಳನ್ನೂ ಲಗತ್ತಿಸಲಾಗುತ್ತದೆ. ಮುಂದಿನ ಸಿನಿಮಾಗಳಿಗೆ ಅವುಗಳನ್ನು ಮಿಕ್ಸ್‌ ಅಂಡ್‌ ಮ್ಯಾಚ್‌ ಮಾಡಿ ಮರುಬಳಕೆ ಮಾಡಲಾಗುತ್ತದೆ.

ADVERTISEMENT

ಅನುಷ್ಕಾ ಶರ್ಮಾ ‘ಬಾಂಬೆ ವೆಲ್ವೆಟ್‌’ ಸಿನಿಮಾದಲ್ಲಿ ಧರಿಸಿದ್ದ ಹಸಿರು ಬಣ್ಣದ ಗೌನ್‌ ಮರೆಯಲು ಸಾಧ್ಯವೇ ಇಲ್ಲ. ಇದು, ಆ ಸಿನಿಮಾಕ್ಕಾಗಿ ವಿಶೇಷವಾಗಿ ವಿನ್ಯಾಸ ಮಾಡಿದ್ದ ಉಡುಗೆ. ಚಿನ್ನದ ಲೇಪನದ ಹೂಬಳ್ಳಿಯಿದ್ದ ಈ ಗೌನ್‌ ಬರೋಬ್ಬರಿ 35 ಕೆ.ಜಿ. ತೂಗುತ್ತಿತ್ತು. ಇದನ್ನು ವಿನ್ಯಾಸ ಮಾಡಿದವರು ನಿಹಾರಿಕಾ ಭಾಸಿನ್‌ ಖಾನ್‌. ಅದರ ಕಸುಬುದಾರಿಕೆ ಮತ್ತು ಪರಿಶ್ರಮದ ನೆನಪಿಗಾಗಿ ನಿಹಾರಿಕಾ ಇಂದಿಗೂ ಅದನ್ನು ತಮ್ಮ ತಿಜೋರಿಯಲ್ಲಿ ಜೋಪಾನವಾಗಿಟ್ಟುಕೊಂಡಿದ್ದಾರೆ.

ಐಶ್ವರ್ಯಾ ರೈ ಬಚ್ಚನ್‌ ಮತ್ತು ರಜನಿಕಾಂತ್ ನಟಿಸಿದ ‘ಎಂಧಿರನ್‌ ದಿ ರೋಬೊ’ ಚಿತ್ರದಲ್ಲಿ ಈ ಇಬ್ಬರ ದಿರಿಸುಗಳು ಫ್ಯಾಷನ್‌ ಲೋಕಕ್ಕೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದವು. ನಿರ್ಮಾಪಕ ಕಳಾನಿಧಿ ಮಾರನ್‌ ಅವರು ಸಿನಿಮಾ ಬಿಡುಗಡೆಯಾದ ಬಳಿಕಅವುಗಳನ್ನುಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದರು. ಸರ್ಕಾರೇತರ ಸಂಸ್ಥೆಯೊಂದರ ಸಹಾಯಾರ್ಥವಾಗಿ ಈ ಹರಾಜು ನಡೆದಿತ್ತು.ಬಂದ ಮೊತ್ತ ₹1.42 ಲಕ್ಷ.

ಕತ್ರಿನಾ ಕೈಫ್‌ ‘ರೇಸ್‌’ ಚಿತ್ರದಲ್ಲಿ ‘ಝರಾ ಝರಾ ಟಚ್‌ ಮಿ’ ಹಾಡಿನಲ್ಲಿ ಹಾಕಿದ್ದ ವಿಶಿಷ್ಟ ಉಡುಗೆ ಯುವಜನರ ಮನಸ್ಸು ಗೆದ್ದಿತ್ತು.‘ಗೋಲಿಯೋಂ ಕಿ ರಾಸ್‌ಲೀಲಾ ರಾಮ್‌–ಲೀಲಾ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಲೆಹೆಂಗಾಗಳು, ಅನಾರ್ಕಲಿ ಸಲ್ವಾರ್‌ಗಳು ಇಂದಿಗೂ ಫ್ಯಾಷನ್‌ಪ್ರಿಯರ ನೆಚ್ಚಿನ ಆಯ್ಕೆಯಾಗಿ ಉಳಿದಿವೆ. ‘ಬಾಜಿರಾವ್‌ ಮಸ್ತಾನಿ’ಯಲ್ಲಿ ದೀಪಿಕಾ ಧರಿಸಿದ್ದ ಬಂಗಾರದ ಬಣ್ಣದ ಅನಾರ್ಕಲಿಯಂತೂ ದಕ್ಷಿಣ ಮತ್ತು ಉತ್ತರ ಭಾರತದ ಹೆಣ್ಣುಮಕ್ಕಳಿಗೆ ಮದುವೆ ಸಮಾರಂಭಕ್ಕೆ ಕಡ್ಡಾಯ ಆಯ್ಕೆ ಎಂಬಂತಾಗಿದೆ.

ಅಜಯ್‌ ದೇವಗನ್‌ ಮತ್ತು ನಿರ್ದೇಶಕ ರೋಹಿತ್‌ ಶೆಟ್ಟಿ (ಸಂಬಂಧದಲ್ಲಿ ಭಾವನೂ ಹೌದು) ಅವರಿಗೆಸ್ಟೈಲಿಸ್ಟ್‌ ಆಗಿರುವ ನವೀನ್‌ ಶೆಟ್ಟಿ ಮಾತ್ರ ಯಾವುದೇ ಉಡುಗೆ ತೊಡುಗೆಗಳನ್ನು ಮರುಬಳಕೆ ಮಾಡುವುದನ್ನು ವಿರೋಧಿಸುತ್ತಾರೆ. ನಟ ಯಾರು ಮತ್ತು ಅವರು ಮಾಡಬೇಕಾದ ಪಾತ್ರ ಎಂತಹುದು ಎಂಬುದನ್ನು ತಿಳಿದುಕೊಂಡು ನಂತರ ಉಡುಪುಗಳ ವಿನ್ಯಾಸದ ಬಗ್ಗೆ ಅವರು ಚಿಂತನೆ ನಡೆಸುತ್ತಾರಂತೆ. ಚಿತ್ರದ ಚಿತ್ರೀಕರಣ ನಡೆದ ಬಳಿಕ ಆ ಉಡುಪುಗಳನ್ನು ಏನು ಮಾಡಬೇಕೆಂಬುದು ನಿರ್ಮಾಪಕರಿಗೆ ಬಿಟ್ಟ ವಿಚಾರ ಎಂಬುದು ನವೀನ್‌ ಸ್ಪಷ್ಟ ನುಡಿ. ರೋಹಿತ್‌ ಶೆಟ್ಟಿ ಅವರ ‘ಖತ್ರೋಂಕೆ ಕಿಲಾಡಿ’ ಶೋಗಾಗಿ ವಿನ್ಯಾಸ ಮಾಡಿದ ಉಡುಪುಗಳೂ ನಿರ್ಮಾಪಕರ ಸಂಗ್ರಹ ಸೇರಿವೆಯಂತೆ.

‘ಬುಡ್ಡಾ ಹೋಗಾ ತೇರಾ ಬಾಪ್‌’ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಅವರಿಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದವರು ಲೇಪಾಕ್ಷಿ ಎಳವಾಡಿ. ಬಿಗ್‌ ಬಿ ಜೊತೆ ಲಂಡನ್‌ನಲ್ಲಿ ಹತ್ತಾರು ಶೋರೂಂಗಳಿಗೆ ಅಲೆದಾಡಿ ದುಬಾರಿ ಬ್ರ್ಯಾಂಡ್‌ಗಳ ಉಡುಗೆ ತೊಡುಗೆಗಳನ್ನು ಜೋಡಿಸಿಕೊಳ್ಳಲಾಗಿತ್ತು. ಅವುಗಳಲ್ಲಿ ಕೆಲವನ್ನು ಅಮಿತಾಬ್‌ ಅವರು ತಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಾರಂತೆ.

ತಾವೇ ಆಯ್ದುಕೊಂಡ ಬಟ್ಟೆಗಳನ್ನು ಕೆಲವೊಮ್ಮೆ ನಟ/ನಟಿಯರು ತಮ್ಮ ಸಂಗ್ರಹಕ್ಕೆ ಸೇರಿಸಿಕೊಳ್ಳುವುದೂ ಉಂಟು ಎಂಬುದು ಲೇಪಾಕ್ಷಿ ಅನುಭವದ ಮಾತು.

ಹೀಗೆ, ಮುಂಚೂಣಿ ಪಾತ್ರಗಳಿಗೆ ನಿರ್ಮಾಪಕರು ತೊಡಿಸಿದವಿಭಿನ್ನ ಮತ್ತು ವಿಶಿಷ್ಟ ಉಡುಗೆ ತೊಡುಗೆಗಳ ಸಿನಿಮಾ ನಂತರದ ಪಯಣ ರಸವತ್ತಾಗಿರುತ್ತದೆ.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.