ADVERTISEMENT

ಅದೇ ಮಚ್ಚು, ಹೊಡಿ ಚಚ್ಚು

ಪದ್ಮನಾಭ ಭಟ್ಟ‌
Published 10 ಮಾರ್ಚ್ 2017, 13:13 IST
Last Updated 10 ಮಾರ್ಚ್ 2017, 13:13 IST
ಆದಿತ್ಯ
ಆದಿತ್ಯ   

ಚಿತ್ರ: ಬೆಂಗಳೂರು ಅಂಡರ್‌ವರ್ಲ್ಡ್‌
ನಿರ್ಮಾಪಕ:  ಜಿ. ಆನಂದ್  
ನಿರ್ದೇಶಕ: ಪಿ.ಎನ್‌. ಸತ್ಯ
ತಾರಾಗಣ: ಆದಿತ್ಯ, ಪಾಯಲ್‌ ರಾಧಾಕೃಷ್ಣ, ಭಾವನಾ

ಇದು ಪಕ್ಕಾ ಭೂಗತಲೋಕದ ಪಾತಕಗಳ ಕಥೆ. ಮಾರುದ್ದದ ಮಚ್ಚುಗಳು, ಕಬ್ಬಿಣದ ಸಲಾಕೆಗಳು, ಫಳ ಫಳ ಹೊಳೆವ ಪಿಸ್ತೂಲುಗಳು, ಬೀಸುಗಾಳಿಗೆ ರಪರಪ ಬೀಳುವ ತರಗೆಲೆಗಳಂತೆ ಹೆಣವಾಗಿ ಉರುಳುವ ಪುಡಿ ರೌಡಿಗಳು, ಎದೆಯ ಮೇಲೆ ಒದ್ದು ದೂಳೆಬ್ಬಿಸುವ ಖದರಿನ ನಾಯಕ, ಸೇಡಿನ ಹೊಗೆ, ಎದುರಾಳಿಯನ್ನು ಚಚ್ಚಿ ಬಿಸಾಕುವ ಹೊಸ ಹೊಸ ಬಗೆ, ಕೈಯಲ್ಲಿನ ಗನ್‌ ಉಗುಳುವ ಬುಲೆಟ್‌ಗಳ ಹಾಗೆಯೇ ಬಾಯಿಂದಲೂ ಸಿಡಿಯುವ ಖಡಕ್‌ ಡೈಲಾಗ್‌ಗಳು, ಈ ಮರಣ ಮಹಾಹೋಮದ ನೆತ್ತರ ಕಮಟಿನ ನಡುವೆ ಪಕ್ಕನೆ ಅರಳಿ ಕಂಪುಬೀರಿ ಮಾಯವಾಗುವ ಕೆಂಡಸಂಪಿಗೆಯಂಥ ಹುಡುಗಿ, ಥೀಮ್‌ ಸಾಂಗ್‌ ಜತೆಗೊಂದು ಡ್ಯೂಯೆಟ್‌ ಸಾಂಗ್‌...

ಈ ಎಲ್ಲ ಹಳೆ ಸೂತ್ರಗಳ ಮೂಲಕವೇ ‘ಬೆಂಗಳೂರು ಅಂಡರ್‌ವರ್ಲ್ಡ್‌’ ಅನ್ನು ತೋರಿಸಿದ್ದಾರೆ ನಿರ್ದೇಶಕ ಪಿ.ಎನ್‌. ಸತ್ಯ. ಪಾತಕಲೋಕದ ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವುದು ಸತ್ಯ ಅವರಿಗೆ ಹೊಸದೇನೂ ಅಲ್ಲ. ಹೊಸ ವಿಷಯವನ್ನು ಹೇಳಬೇಕು ಅಥವಾ ಅದೇ ವಿಷಯವನ್ನು ಹೊಸ ರೀತಿಯಲ್ಲಿ ಹೇಳಬೇಕು ಎಂಬ ಮಹಾತ್ವಾಕಾಂಕ್ಷೆಯೇನೂ ಇಲ್ಲದ ಕಾರಣ ಅವರಿಗದು ಕಷ್ಟವೂ ಅನಿಸಿದಂತಿಲ್ಲ.

ಸಿನಿಮಾದ ಕೊನೆಯಲ್ಲಿ ನಾಯಕಿಯ ಮಡಿಲಲ್ಲಿ ನಾಯಕ ಅಸುನೀಗುವ ತಮ್ಮ ‘ಮಾರ್ಕ್‌’ ಅನ್ನು ಈ ಸಿನಿಮಾದಲ್ಲಿಯೂ ಸತ್ಯ ಮುಂದುವರಿಸಿದ್ದಾರೆ. ಸಿನಿಮಾದ ಉದ್ದಕ್ಕೂ ಹರಿಸಿದ ರಕ್ತವನ್ನು ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ಸುರಿವ ಮಳೆಯಲ್ಲಿ ‘ಹಿಂಸೆಯ ಪ್ರತಿಪಾದನೆಯ ಕೊನೆ ದಾರುಣವಾಗಿರುತ್ತದೆ’ ಎಂಬ ಸಂದೇಶ ನೀಡಿ ಕೈತೊಳೆದುಕೊಳ್ಳುವ ಪ್ರಯತ್ನ ಇಲ್ಲಿದೆ.

ಬುಲೆಟ್‌ ಶಬ್ದದಷ್ಟೇ ಖಡಕ್‌ ಸಂಭಾಷಣೆಗಳ ಬಿರುಮಳೆಯ ನಡುನಡುವೆಯೇ ಅಕ್ಕಂದಿರನ್ನೂ ಅಮ್ಮಂದಿರನ್ನೂ ಬಳಸಿಕೊಂಡಿರುವುದು ಅಸಹನೀಯವಾಗಿದೆ. ಮೇಲುನೋಟಕ್ಕೆ ಗ್ಯಾಂಗ್‌ಸ್ಟರ್‌ ಆಗಬೇಕು ಎಂಬ ಆಸೆಯ ಬೆನ್ನುಬಿದ್ದಂತೆ ಕಾಣುವ ‘ಮಾಲೀಕ’ನ (ಆದಿತ್ಯ) ಮನಸಲ್ಲಿ ಎದೆಯಲ್ಲಿರುವುದು ಸೇಡಿನ ಕುದಿ.

ಕುಟುಂಬವನ್ನು ಸರ್ವನಾಶ ಮಾಡಿದ ರೌಡಿಗಳು, ಸಾಕು ತಾಯಿಯನ್ನು ಹತ್ಯೆ ಮಾಡಿದ ಭ್ರಷ್ಟ ಪೊಲೀಸ್‌ ಅಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ವ್ಯವಸ್ಥಿತವಾಗಿ ಹೊಂಚು ಹಾಕುತ್ತಾನೆ.

ಈ ನಡುವೆ ಅಚಾನಕ್ಕಾಗಿ ಪರಿಚಯವಾಗುವ ಶಿರೀಷಾ (ಪಾಯಲ್‌) ಜೊತೆ ಅಷ್ಟೇ ವೇಗವಾಗಿ ಪ್ರೇಮವೂ ಉಂಟಾಗುತ್ತದೆ. ತನ್ನ ಸೇಡಿನ ಬೆಂಕಿಯನ್ನು ತಣಿಸಿಕೊಂಡು, ಭೂಗತಲೋಕದ ನಾಶಕ್ಕೂ ನಾಂದಿ ಹಾಡಿ, ನಾಯಕಿಯೊಂದಿಗೆ ಮುಂಬೈಗೆ ಹೋಗಿ ಸೆಟಲ್‌ ಆಗುವ ಹಂತದಲ್ಲಿ ಪ್ರಾಣಸ್ನೇಹಿತನಿಂದಲೇ ಕೊಲೆಯಾಗುತ್ತಾನೆ.

ಗುಂಪುಗುಂಪು ಜನರನ್ನು ಚಚ್ಚಿ ಬಿಸಾಕುವುದರಲ್ಲಿ, ಸಾಲು ಸಾಲು ಸಂಭಾಷಣೆಗಳನ್ನು ಉದುರಿಸುವುದರಲ್ಲಿ ಆದಿತ್ಯ ಅವರಿಗಿರುವ ಸಲೀಸುತನ ಸರಸದಲ್ಲಿಯಾಗಲಿ, ಹಾಸ್ಯದಲ್ಲಿಯಾಗಲಿ ಕಾಣುವುದಿಲ್ಲ.

ಹಿಂಸೆಯನ್ನು ರೋಚಕಗೊಳಿಸುವುದರಲ್ಲಿ ಛಾಯಾಗ್ರಾಹಕ ಆರ್ಯವರ್ಧನ್‌ ಮತ್ತು ಸಂಗೀತ ನಿರ್ದಶಕ ಅನೂಪ್‌ ಸೀಳಿನ್‌ ಕೊಡುಗೆಯೂ ದೊಡ್ಡದಿದೆ. ನಾಯಕಿ ಪಾಯಲ್‌ ಅವರಿಗೆ ಅಭಿನಯಕ್ಕೆ ಸಿಕ್ಕ ಅವಕಾಶವೇ ಕಮ್ಮಿ. ಹೀಗೆ ಬಂದು ಹಾಗೆ ಹೋಗುವ ರಮೇಶ್‌ ಭಟ್‌, ವಿನಯಾ ಪ್ರಸಾದ್‌, ನಾಯಕನ ಸಾಕುತಾಯಿಯಾಗಿ ಪಾತ್ರದಲ್ಲಿ ಕಾಣಿಸಿಕೊಂಡ ಭಾವನಾ ಯಾರೂ ನೆನಪಿನಲ್ಲುಳಿಯುವುದಿಲ್ಲ.

‘ಬೆಂಗಳೂರು ಅಂಡರ್‌ವರ್ಲ್ಡ್‌’ ಸಿನಿಮಾ ಶೀರ್ಷಿಕೆಯನ್ನೇ ನೆಚ್ಚಿಕೊಂಡು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕನಿಗೆ ತೀರಾ ನಿರಾಸೆ ಮಾಡುವುದಿಲ್ಲ. ಆದರೆ ಅವೇ ಮಚ್ಚು–ಗನ್ನಿನ ಕಥೆಯ ಹೊರತಾಗಿ ಹೊಸತೇನನ್ನೂ ಹೇಳುವುದೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT