ADVERTISEMENT

‘ಆಕೆ’ಯ ಭೂತಚೇಷ್ಟೆಯ ಪ್ರಲಾಪ

ಆಕೆ

ಕೆ.ಎಚ್.ಓಬಳೇಶ್
Published 30 ಜೂನ್ 2017, 12:56 IST
Last Updated 30 ಜೂನ್ 2017, 12:56 IST
‘ಆಕೆ’ಯ ಭೂತಚೇಷ್ಟೆಯ ಪ್ರಲಾಪ
‘ಆಕೆ’ಯ ಭೂತಚೇಷ್ಟೆಯ ಪ್ರಲಾಪ   

ಚಿತ್ರ: ಆಕೆ
ನಿರ್ದೇಶಕ: ಕೆ.ಎಂ. ಚೈತನ್ಯ
ನಿರ್ಮಾಪಕರು: ಸುನಂದ ಮುರಳಿ ಮನೋಹರ್, ಕಲೈ, ಸೂರಿ
ತಾರಾಗಣ: ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ, ಅಚ್ಯುತ್‌ಕುಮಾರ್‌, ಪ್ರಕಾಶ್‌ ಬೆಳವಾಡಿ

ಚಂದನವನದಲ್ಲಿ ಇದೀಗ ಎದ್ದಿರುವ ಹೊಸ ಅಲೆಯ ಚಿತ್ರಗಳಲ್ಲಿ ಹಾರರ್ ಸಿನಿಮಾಗಳು ಹನುಮಂತನ ಬಾಲದಂತೆ ಬೆಳೆಯುತ್ತಿವೆ. ಈ ಪಟ್ಟಿಗೆ ‘ಆಕೆ’ ಮತ್ತೊಂದು ಸೇರ್ಪಡೆಯಷ್ಟೇ.

ತಮಿಳಿನಲ್ಲಿ ನಯನತಾರಾ ನಟಿಸಿ ಗಮನ ಸೆಳೆದಿದ್ದ ‘ಮಾಯಾ’ ಸಿನಿಮಾದ ಕನ್ನಡ ಅವತರಣಿಕೆಯೇ ‘ಆಕೆ’. ಭೂತಚೇಷ್ಟೆಗಳನ್ನೇ ಜೀವಾಳವಾಗಿಟ್ಟುಕೊಂಡ ಕಥಾನಕ.

ADVERTISEMENT

ಇದು ಮಸಾಲೆ ಮಿಶ್ರಿತ ಹಾರರ್‌ ಚಿತ್ರವಲ್ಲ ಎನ್ನುವುದೇ ಸಮಾಧಾನದ ಸಂಗತಿ. ಇಂತಹ ಸಿನಿಮಾಗಳಲ್ಲಿ ಭೀಬತ್ಸ ದೃಶ್ಯಗಳು ಸಾಮಾನ್ಯ. ಈ ಚಿತ್ರದಲ್ಲಿಯೂ ಇದನ್ನು ಹಸಿ ಹಸಿಯಾಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಹಾಲಿವುಡ್‌ನ ಹಾರರ್‌ ಸಿನಿಮಾಗಳಲ್ಲಿ ಕಗ್ಗತ್ತಲ ರಾತ್ರಿ, ಸಮಾಧಿ, ರುಂಡ ಇಲ್ಲದ ದೇಹಗಳು, ಬೆಚ್ಚಿಬೀಳಿಸುವ ಬಿಳಿಗಣ್ಣುಗಳು ನೋಡುಗರನ್ನು ಭಯದ ಕೂಪಕ್ಕೆ ದೂಡುತ್ತವೆ. ‘ಆಕೆ’ಯೂ ಪ್ರೇಕ್ಷಕರಿಗೆ ಇಂತಹ ಅನುಭವ ನೀಡುತ್ತಾಳೆ.

ತಾಯಿ ಮತ್ತು ಮಗುವಿನ ವಾತ್ಸಲ್ಯ ಇಟ್ಟುಕೊಂಡು ಕಥೆ ಹೊಸೆಯಲಾಗಿದೆ. ಇದಕ್ಕೆ ಹಾರರ್‌ ಸ್ಪರ್ಶ ನೀಡಲಾಗಿದೆ. ಶರ್ಮಿಳಾ ದೇವಿ ರಾಜಮನೆತನದಳು. ಆಕೆಗೆ ಯುವಕನೊಂದಿಗೆ ಪ್ರೇಮಾಂಕುರವಾಗುತ್ತದೆ. ಮರ್ಯಾದೆಗೆ ಅಂಜಿದ ಅಪ್ಪ ಇಬ್ಬರಿಗೂ ಮದುವೆ ಮಾಡುತ್ತಾನೆ. ಬದುಕು ಅರಳುವ ಮೊದಲೇ ಗಂಡ ಪರಸ್ತ್ರೀಯೊಂದಿಗೆ ಸಲುಗೆಯಿಂದ ಇರುವುದು ತಿಳಿಯುತ್ತದೆ.

ಅದೇ ವೇಳೆಗೆ ಆಕೆಯೊಳಗೆ ಜೀವವೊಂದು ಮೊಳೆಯುತ್ತಿರುತ್ತದೆ. ಅಪ್ಪ, ಅಮ್ಮ, ಗಂಡನ ಸಾವು ಸಂಭವಿಸಿದಾಗ ಆಕೆಯ ಜೀವನದ ಸುಂದರ ಹೂತೋಟದಲ್ಲಿ ಅಲ್ಲೋಲ ಕಲ್ಲೋಲ. ಮಾನಸಿಕ ಸ್ಥಿಮಿತ ಕಳೆದುಕೊಂಡ ಆಕೆ ಆಸ್ಪತ್ರೆಗೆ ಸೇರಿದಾಗ ಮಗುವೂ ದೂರವಾಗುತ್ತದೆ. ಕೊನೆಗೆ, ಅವಳದ್ದೂ ದಾರುಣ ಅಂತ್ಯ.

ತಾಯಿಯ ವಾತ್ಸಲ್ಯವನ್ನು ಥ್ರಿಲ್ಲರ್‌, ಹಾರರ್‌ ಮೂಲಕ ಹೇಳಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ. ಕನ್ನಡ ಪ್ರೇಕ್ಷಕರಿಗೆ ಹಾಲಿವುಡ್‌ನ ಹಾರರ್‌ ಅನುಭವ ಕಟ್ಟಿಕೊಡುವ ಅವರ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ.

ಮೊದಲಾರ್ಧದಲ್ಲಿ ಕಥೆ ನೀರಸವಾಗಿ ಸಾಗುತ್ತದೆ. ದ್ವಿತೀಯಾರ್ಧ ಭೂತಚೇಷ್ಟೆಗಳಿಗೆ ಮೀಸಲು. ಶರ್ಮಿಳಾ ದೇವಿ ಸೇಡು ತೀರಿಸಿಕೊಳ್ಳಲು ಹೊರಟಾಗ ನಡೆಯುವ ಸಾಲು ಸಾಲು ಕೊಲೆಗಳು ಪ್ರೇಕ್ಷಕರ ತಾಳ್ಮೆಗೆ ಸವಾಲು ಒಡ್ಡುತ್ತವೆ.

ನಾಯಕಿ ಶರ್ಮಿಳಾ ಮಾಂಡ್ರೆ ಅವರದು ಸಂಕೀರ್ಣ ಪಾತ್ರ. ತಾಯಿ ಮತ್ತು ಪುತ್ರಿಯಾಗಿ ಮಾಗಿದ ಅಭಿನಯ. ತನ್ನ ಪುತ್ರಿಗಾಗಿ(ಮೀರಾ)  ಹಂಬಲಿಸುವುದು, ಭೂತಚೇಷ್ಟೆಯ ದೃಶ್ಯಗಳಲ್ಲಿ ಅವರು ತಮ್ಮ ಪಾತ್ರವನ್ನು ಜೀವಂತವಾಗಿರಿಸಿದ್ದಾರೆ. ನಾಯಕ ಚಿರಂಜೀವಿ ಸರ್ಜಾ, ಅಚ್ಯುತ್‌ಕುಮಾರ್‌, ಪ್ರಕಾಶ್‌ ಬೆಳವಾಡಿ ಅವರದ್ದು ಅಚ್ಚುಕಟ್ಟು ಅಭಿನಯ.

‘ಹ್ಯಾರಿ ಪಾಟರ್‌’ ಚಿತ್ರಕ್ಕೆ ಕೆಲಸ ಮಾಡಿದ ಇಯನ್‌ ಹಾವ್ಸ್ ಮತ್ತು ಮನೋಹರ್‌ ಜೋಷಿ ಅವರ ಪರಿಶ್ರಮ ಪ್ರತಿ ಫ್ರೇಮ್‌ನಲ್ಲೂ ಎದ್ದುಕಾಣುತ್ತವೆ. ಗುರುಕಿರಣ್‌ ಸಂಯೋಜನೆಯ ‘ತೂಗಾಡುವ ಉಯ್ಯಾಲೆ’ಯ ಹಾಡು ಮನದಲ್ಲಿ ಉಳಿಯುತ್ತದೆ. ಹಾಲಿವುಡ್‌ನ ಹಾರರ್‌, ಥ್ರಿಲ್‌ ಅನುಭವಿಸುವವರಿಗೆ ‘ಆಕೆ’ ಇಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.