ADVERTISEMENT

ಸತ್ಯವೆಂದರೆ ಈ ಹರಿಶ್ಚಂದ್ರನಿಗೆ ಅಲರ್ಜಿ!

ಕೆ.ಎಚ್.ಓಬಳೇಶ್
Published 20 ಅಕ್ಟೋಬರ್ 2017, 11:46 IST
Last Updated 20 ಅಕ್ಟೋಬರ್ 2017, 11:46 IST
‘ಸತ್ಯ ಹರಿಶ್ಚಂದ್ರ’ ಚಿತ್ರದ ದೃಶ್ಯ
‘ಸತ್ಯ ಹರಿಶ್ಚಂದ್ರ’ ಚಿತ್ರದ ದೃಶ್ಯ   

ಚಿತ್ರ: ಸತ್ಯ ಹರಿಶ್ಚಂದ್ರ

ನಿರ್ಮಾಪಕರು: ಕೆ. ಮಂಜು

ನಿರ್ದೇಶನ: ದಯಾಳ್‌ ಪದ್ಮನಾಭನ್

ADVERTISEMENT

ತಾರಾಗಣ: ಶರಣ್‌, ಸಂಚಿತಾ ಪಡುಕೋಣೆ, ಚಿಕ್ಕಣ್ಣ, ಸಾಧುಕೋಕಿಲ, ಶರತ್‌ ಲೋಹಿತಾಶ್ವ, ಭಾವನಾ ರಾವ್

ಅಸತ್ಯದ ಕಥೆ ಎಂದು ಹೇಳಿಕೊಂಡು ಬಂದಿರುವ ಚಿತ್ರ ‘ಸತ್ಯ ಹರಿಶ್ಚಂದ್ರ’. ಹಾಗಾಗಿ, ಸತ್ಯಪಾಲನೆಯ ಸಂಕೇತನಾದ ಸತ್ಯ ಹರಿಶ್ಚಂದ್ರನ ಆದರ್ಶ ಈ ಆಧುನಿಕ ಹರಿಶ್ಚಂದ್ರನಲ್ಲಿ ಕಾಣಸಿಗುವುದಿಲ್ಲ. ಚಿತ್ರದ ಹೆಸರು ನೋಡಿದ ತಕ್ಷಣ ಇದು ಪುರಾಣ ಕಾಲದ ಸತ್ಯ ಹರಿಶ್ಚಂದ್ರನ ಕಥೆ ಎಂದು ಅರ್ಥೈಸಿಕೊಳ್ಳುವಂತಿಲ್ಲ.

ದ್ವಂದ್ವಾರ್ಥ ಸಂಭಾಷಣೆ ಆಧರಿಸಿ ಬಂದಿರುವ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ಸಾಮಾನ್ಯ ಅಂಶಗಳು ಈ ಸಿನಿಮಾದಲ್ಲಿಯೂ ಹೇರಳವಾಗಿವೆ. ‘ಸತ್ಯ ಹರಿಶ್ಚಂದ್ರ’ ಚಿತ್ರದ ಕಥೆಯಲ್ಲಾಗಲಿ, ಅದರ ನಿರೂಪಣೆಯಲ್ಲಾಗಲಿ ವಿಶೇಷ ಇಲ್ಲ. ಶರಣ್ ಮತ್ತು ಚಿಕ್ಕಣ್ಣ ಜೋಡಿಯ ಕಾಮಿಡಿ ಇಮೇಜ್‌ ಬಳಸಿಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕ ದಯಾಳ್‌ ಪದ್ಮನಾಭನ್‌.

ಕಥಾ ನಾಯಕನ ಹೆಸರೇ ಸತ್ಯ ಹರಿಶ್ಚಂದ್ರ(ಶರಣ್). ಅವನನ್ನು ಕಂಡರೆ ಇಡೀ ಊರಿಗೆ ಆತಂಕ. ಸುಳ್ಳು ಹೇಳುವುದರಲ್ಲಿ ಆತ ಸಿದ್ಧಹಸ್ತ. ಸತ್ಯವೆಂದರೆ ಅವನಿಗೆ ಅಲರ್ಜಿ. ಮಗನ ಸುಳ್ಳಿನ ಬದುಕು ಕಂಡರೆ ತಾಯಿಗೆ ಬೇಸರ. ಮಗ ಸತ್ಯದ ಹಾದಿಯಲ್ಲಿ ಸಾಗಬೇಕು ಎಂಬುದು ಅಮ್ಮನ ಆಸೆ. ಆದರೆ, ಆತನದ್ದು ತದ್ವಿರುದ್ಧ ಮನಸ್ಥಿತಿ. ಜತೆಗೆ, ಅವನ ಎಲ್ಲ ಕೃತ್ಯ ಬೆಂಬಲಿಸುವ ಸ್ನೇಹಿತರು. ಸುಳ್ಳಿನ ಸರಮಾಲೆ ಮೂಲಕವೇ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ತನಗಿಷ್ಟ ಬಂದ ಅಭ್ಯರ್ಥಿಯನ್ನು ಗೆಲ್ಲಿಸುವ ತಾಕತ್ತು ಅವನದ್ದು.

ಸುಳ್ಳು ಹೇಳುವುದರಿಂದಾಗಿಯೇ ಸತ್ಯ ಹರಿಶ್ಚಂದ್ರನಿಗೆ ತೊಂದರೆ ಎದುರಾಗುತ್ತದೆ. ಹುಡುಗಾಟವು ಊರಿನ ಪಂಚಾಯಿತಿ ಕಟ್ಟೆಯ ಮೆಟ್ಟಿಲೇರುತ್ತದೆ. ಜನರಿಗೆ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಬಹಿಷ್ಕಾರ ಹಾಕುವುದಾಗಿ ಪಟೇಲ ಎಚ್ಚರಿಸುತ್ತಾನೆ. ಇದರಿಂದ ಪಾರಾಗಲು ಹೋಗಿ ಸತ್ಯ ಹರಿಶ್ಚಂದ್ರನಿಗೆ ಮತ್ತೊಂದು ಆಪತ್ತು ಎದುರಾಗುತ್ತದೆ.

ಪಟೇಲನ ಪುತ್ರಿ ಅವನನ್ನು ಪ್ರೀತಿಸುತ್ತಾಳೆ. ಈ ಸಂಕಷ್ಟದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಸುಳ್ಳು ಪೋಣಿಸುತ್ತಾನೆ. ಪಟೇಲನಿಗೆ ಫೇಸ್‌ಬುಕ್‌ನಲ್ಲಿದ್ದ ಹುಡುಗಿಯ ಫೋಟೊ ತೋರಿಸಿ ನಂಬಿಸುತ್ತಾನೆ. ನಾಯಕಿ (ಸಂಚಿತಾ ಪಡುಕೋಣೆ) ಜರ್ಮನಿಯಲ್ಲಿ ನೆಲೆಗೊಂಡಿರುತ್ತಾಳೆ. ಸುಳ್ಳುಗಾರನ ಹೃದಯವನ್ನು ಅನಾಥಳಾದ ನಾಯಕಿ ಪ್ರವೇಶಿಸಿದಾಗ ಚಿತ್ರ ಮತ್ತೊಂದು ಮಗ್ಗಲಿಗೆ ಹೊರಳುತ್ತದೆ.

ಪ್ರೀತಿ, ಸುಳ್ಳು, ದ್ವಂದ್ವಾರ್ಥ, ತಾಯಿಯ ವಾತ್ಸಲ್ಯ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ದಯಾಳ್. ಚಿತ್ರದ ಕೆಲವು ದೃಶ್ಯಗಳಲ್ಲಿ ಶರಣ್‌, ಚಿಕ್ಕಣ್ಣ, ಸಾಧುಕೋಕಿಲ ಪ್ರೇಕ್ಷಕರಿಗೆ ನಗೆಯ ಕಚಗುಳಿ ಇಡುತ್ತಾರೆ. ಕೆಲವೆಡೆ ದ್ವಂದ್ವಾರ್ಥದ ಸಂಭಾಷಣೆಗಳು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತವೆ.

‘ಕುಲದಲ್ಲಿ ಕೀಳ್ಯಾವುದೋ...’ ಹಾಡು ಹಳೆಯ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ನೆನಪಿಸುತ್ತದೆ. ಸಂಚಿತಾ ಅಭಿನಯದಲ್ಲಿ ಇನ್ನೂ ಪಕ್ವತೆ ಬೇಕಿದೆ. ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ಸಾಧುಕೋಕಿಲ, ಸಂಚಾರಿ ವಿಜಯ್, ಭಾವನಾ ರಾವ್ ಅವರದು ಅಚ್ಚುಕಟ್ಟಾದ ಅಭಿನಯ. ಅರ್ಜುನ್‌ ಜನ್ಯ ಸಂಗೀತದಲ್ಲಿ ಹೊಸದೇನು ಇಲ್ಲ. ಫೈಜಲ್ ಕ್ಯಾಮೆರಾ ಕೈಚಳಕ ಸೊಗಸಾಗಿದೆ.

ಸುಳ್ಳಿನಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಹಾಗೂ ದ್ವಂದ್ವಾರ್ಥದ ಸಂಭಾಷಣೆ ಇಷ್ಟಪಡುವವರು ನೋಡಬಹುದಾದ ಸಿನಿಮಾ ‘ಸತ್ಯ ಹರಿಶ್ಚಂದ್ರ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.