ADVERTISEMENT

ಸಿದ್ಧ ಸೂತ್ರಗಳ ‘ಭರ್ಜರಿ’ ಊಟ!

ಪದ್ಮನಾಭ ಭಟ್ಟ‌
Published 15 ಸೆಪ್ಟೆಂಬರ್ 2017, 10:10 IST
Last Updated 15 ಸೆಪ್ಟೆಂಬರ್ 2017, 10:10 IST
ರಚಿತಾ ರಾಮ್‌, ಧ್ರುವ ಸರ್ಜಾ, ಹರಿಪ್ರಿಯಾ
ರಚಿತಾ ರಾಮ್‌, ಧ್ರುವ ಸರ್ಜಾ, ಹರಿಪ್ರಿಯಾ   

ಸಿನಿಮಾ: ಭರ್ಜರಿ

ನಿರ್ಮಾಪಕ: ಎಸ್‌. ಶ್ರೀನಿವಾಸ್‌

ನಿರ್ದೇಶಕ: ಚೇತನ್‌ ಕುಮಾರ್‌

ADVERTISEMENT

ತಾರಾಗಣ: ಧ್ರುವ ಸರ್ಜಾ, ರಚಿತಾ ರಾಮ್‌, ಹರಿಪ್ರಿಯಾ, ತಾರಾ, ಸುಚೇಂದ್ರಪ್ರಸಾದ್‌, ಅವಿನಾಶ್‌, ಶ್ರೀನಿವಾಸಮೂರ್ತಿ, ಸಾಧುಕೋಕಿಲ

ಅವನು ಸೂರ್ಯ. ಹೆಸರಿಗಷ್ಟೇ ಅಲ್ಲ, ಸ್ವಭಾವದಲ್ಲೂ ಸೂರ್ಯನೇ. ಅವನು ಕಾಲಿಟ್ಟಲ್ಲಿ ಭೂಮಿ ದೂಳು ಕೊಡವಿಕೊಳ್ಳುತ್ತದೆ. ಕೋಪದ ಕೈಯಿಂದ ತಟ್ಟಿದ್ದೆಲ್ಲ ಪುಡಿಪುಡಿಯಾಗತ್ತದೆ. ಮೂರು ನಾಲ್ಕಲ್ಲ. ಹತ್ತಿಪ್ಪತ್ತು ಜನ ಮುತ್ತಿಕೊಂಡರೂ, ಸಿಡಿದೆದ್ದರೆ ಅವರೆಲ್ಲ ಆಕಾಶಕಾಯಗಳಾಗುತ್ತಾರೆ. ಮರುಕ್ಷಣವೇ ಧರಾಶಾಹಿಗಳೂ ಆಗುತ್ತಾರೆ! ಡಾನ್ಸಿಗೆ ನಿಂತರೆ ಕೀಲು ಕಳಚಿಕೊಳ್ಳುವಂತೆ ಕೈಕಾಲು ಆಡಿಸುತ್ತಾನೆ. ಹುಡುಗಿ ಒಲಿಸಿಕೊಳ್ಳಲು ಪಡ್ಡೆಯೂ ಆಗುತ್ತಾನೆ. ತಾರಕ ಸ್ವರದಲ್ಲಿ ಗಂಟಲ ನರವುಬ್ಬಿಸಿಕೊಂಡು ಡೈಲಾಗ್‌ಗಳನ್ನು ಉದುರಿಸಲು ಶುರುವಾದರೆ ತರಗೆಲೆಗಳೂ ಗಡಗಡ ನಡುಗಿ ಮೇಲಕ್ಕೇಳುತ್ತವೆ. ಎದುರಾಳಿಗಳಿಗೆ ಮಾತ್ರವಲ್ಲ, ತಾಯಿ, ತಂಗಿ, ಗೆಳತಿ ಎಲ್ಲರ ಎದುರೂ ಅಷ್ಟೇ ತಾರಕ ಸ್ವರದಲ್ಲಿ ಮಾತನಾಡುತ್ತಾನೆ. ಆ ನಿಟ್ಟಿನಿಂದ ಕೋಪದಲ್ಲೂ ಪ್ರೇಮದಲ್ಲೂ ಯಾವ ಬದಲಾವಣೆಯೂ ಇರದ ಸ್ಥಿತಪ್ರಜ್ಞ ಅವನು. ಹಾಗಂತ ಹೆಣ್ಣುಮಕ್ಕಳ ಹಾಗೆ ಅಳು ಬಂದಾಗೆಲ್ಲ ತುಪುಕ್‌ ತುಪುಕ್‌ ಎಂದು ಕಣ್ಣೀರು ಸುರಿಸುವುದೆಲ್ಲ ಅವನಿಂದ ಸಾಧ್ಯವಾಗದ ಕೆಲಸ (ಈ ಮಾತನ್ನು ಆ ಪಾತ್ರಕ್ಕಷ್ಟೇ ಅಲ್ಲ, ಅದನ್ನು ನಿರ್ವಹಿಸಿದ ಧ್ರುವ ಸರ್ಜಾ ಅವರಿಗೂ ಅನ್ವಯಿಸಬಹುದು!).

ಪಕ್ಕಾ ಧ್ರುವ ಸರ್ಜಾ ಅವರ ತಾರಾ ವರ್ಚಸ್ಸನ್ನೇ ನೆಚ್ಚಿಕೊಂಡು ಬಂದಿರುವ ಸಿನಿಮಾ ‘ಭರ್ಜರಿ’. ಧ್ರುವ ಸರ್ಜಾ ಅವರಿಂದ ಅಭಿಮಾನಿಗಳು ಏನನ್ನು ಬಯಸುತ್ತಾರೆ ಎಂಬುದನ್ನೆಲ್ಲವನ್ನೂ ಒಂದೇ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ ನಿರ್ದೇಶಕ ಚೇತನ್‌. ಹೀಗೆ ತಮಗೆ ಬೇಕಾದ ಊಟ ಸಿಕ್ಕಾಗ ತಟ್ಟೆಯ ಕಡೆಗಷ್ಟು ಲಕ್ಷ್ಯ ಹೋಗುವುದಿಲ್ಲವಲ್ಲ!

ಈ ಸಿನಿಮಾದ ಕಥೆಯಲ್ಲಿ ಯಾವ ಹೊಸತನವೂ ಇಲ್ಲ. ಹಾಗೆ ನೋಡಿದರೆ ನಿರ್ದೇಶಕರಿಗೆ ಕಥೆಯೇ ಮುಖ್ಯ ಎಂದು ಅನಿಸಿದಂತಿಲ್ಲ. ಅಥವಾ ‘ಅಭಿಮಾನಿ ದೇವರು’ಗಳು ಅವನ್ನೆಲ್ಲ ಅಷ್ಟಾಗಿ ಗಮನಿಸುವುದಿಲ್ಲ ಎಂಬುದು ಅವರ ಯೋಚನೆಯಿರಬೇಕು. ನಾಯಕನ ಮೈಕಟ್ಟು, ನುಡಿಗಟ್ಟುಗಳನ್ನು ಪೋಣಿಸಲು ಒಂದು ದಾರದಂತೆಯೇ ಪ್ರಸಂಗಗಳನ್ನು ಹೆಣೆಯುತ್ತಾ ಹೋಗಿದ್ದಾರೆ. ಸಿದ್ಧಸೂತ್ರಗಳ ಇಟ್ಟಿಗೆಗಳಲ್ಲಿ ಸಿನಿಮಾವನ್ನು ಭರ್ಜರಿಯಾಗಿಯೇ ಕಟ್ಟಿದ್ದಾರೆ. ಆ ಸೂತ್ರಗಳು ನಿರ್ದೇಶಕನ ಅನುಕೂಲಕ್ಕೆ ತಕ್ಕಹಾಗೆ ಅನವಶ್ಯಕವಾಗಿ ಪೆಕರು ಪೆಕರಾಗಿ ಸುತ್ತಿ ಸಿಕ್ಕಿಹಾಕಿಕೊಳ್ಳುವುದೂ ಇದೆ. ಧ್ರುವ ಸರ್ಜಾ ಅವರ ಮಿತಿ ಮತ್ತು ಶಕ್ತಿ ಎರಡನ್ನೂ ಅರಿತಿರುವ ಅವರು ಆ್ಯಕ್ಟಿಂಗ್‌ಗಿಂತ ಆ್ಯಕ್ಷನ್‌ಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಧ್ರುವ ತಮ್ಮ ಹಿಂದಿನ ಸಿನಿಮಾಗಳ ಪಾತ್ರದಲ್ಲಿಯೇ ಇನ್ನೂ ಮುಂದುವರಿಯುತ್ತಿದ್ದಾರೆ ಎಂದು ಅನಿಸಲೂ ಇದೇ ಕಾರಣ ಇರಬಹುದು.

ಮೊದಲರ್ಧ ನಗರದಲ್ಲಿ ಪ್ರೇಮಪೀಡಿತನಾಗಿ, ದ್ವಿತೀಯಾರ್ಧ ಹಳ್ಳಿಯ ಎರಡು ಮನೆತನಗಳ ದ್ವೇಷವನ್ನು ನಿವಾರಿಸುವ ಜವಾಬ್ದಾರಿಯುತ ಜಾಣ ಹುಡುಗನಾಗಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಕಿಲಾಡಿ ಹುಡುಗಿಯಾಗಿ ರಚಿತಾ ರಾಮ್‌ ಇಷ್ಟವಾಗುತ್ತಾರೆ. ದ್ವಿತೀಯಾರ್ಧದಲ್ಲಿ ಕಾಣಿಸಿಕೊಳ್ಳುವ ಹರಿಪ್ರಿಯಾ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಒಮ್ಮೆ ಗಂಭೀರ ಹುಡುಗಿಯಾಗಿ, ಇನ್ನೊಮ್ಮೆ ಕಾಮಿಡಿ ಪೀಸ್‌ ಆಗಿ ಬದಲಾಗಿಬಿಡುವ ಅವರ ಪಾತ್ರಕ್ಕೊಂದು ಗಂಭೀರ ವ್ಯಕ್ತಿತ್ವವೇ ಇಲ್ಲ. ಅನವಶ್ಯಕವಾಗಿ ತುರುಕಿರುವ ಕೆಲವು ದೃಶ್ಯಗಳು ಕಿರಿಕಿರಿ ಹುಟ್ಟಿಸುತ್ತವೆ. ಸೈನಿಕರನ್ನು ಒಮ್ಮೆ ಜೋಕರ್‌ ಆಗಿಯೂ ಇನ್ನೊಮ್ಮೆ ಅವರು ಪಾಕಿಸ್ತಾನದ ವಿರುದ್ಧ ಮಾತ್ರವೇ ಯುದ್ಧ ಮಾಡುವುದು ಎಂಬಂತೆ ತೋರಿಸುವುದಕ್ಕೆ ಆ ಕ್ಷಣದ ಶಿಳ್ಳೆ–ಚಪ್ಪಾಳೆಯ ಹೊರತು ಇನ್ಯಾವ ಸಮರ್ಥನೆಯೂ ಕಾಣುವುದಿಲ್ಲ. ಮೊದಲರ್ಧದಲ್ಲಿ ಸಾಧುಕೋಕಿಲ ಮತ್ತು ದ್ವಿತೀಯಾರ್ಧದಲ್ಲಿ ರಂಗಾಯಣ ರಘು, ಜಹಾಂಗೀರ್‌ ಅವರಿಗೆ ನಗಿಸುವ ಗುತ್ತಿಗೆಯನ್ನು ನೀಡಲಾಗಿದೆ. ತಾರಾ ಮತ್ತು ಸುಚೇಂದ್ರ ಪ್ರಸಾದ್‌ ಅವರದು ಪಕ್ವ ಅಭಿನಯ.

ಹರಿಕೃಷ್ಣ ಸಂಯೋಜನೆಯ ಥೀಮ್‌ ಸಾಂಗ್‌ ಹಿಂದೆ ಹಲವು ಸಲ ಕೇಳಿದಂತಿದೆ. ‘ಪುಟ್ಟ ಗೌರಿ’ ಹಾಡಿನ ನೃತ್ಯಸಂಯೋಜನೆ ಗಮನಸೆಳೆಯುತ್ತದೆ. ಚಿತ್ರ ಭರ್ಜರಿಯಾಗಿ ಬರಲು ‘ಶ್ರೀಶ ಕುಡುವಳ್ಳಿ’ ಛಾಯಾಗ್ರಹಣದ ಪಾಲೂ ದೊಡ್ಡದಿದೆ.

ಒಟ್ಟಾರೆ ಆ್ಯಕ್ಷನ್‌ ಪ್ರೇಮಿಗಳಿಗೆ ಭರ್ಜರಿ ಊಟವೇ. ಆದರೆ ಅಷ್ಟೇ ರುಚಿಕರ– ಆರೋಗ್ಯಕರ ಊಟ ಎಂದು ಹೇಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.