ADVERTISEMENT

ಚಿಣ್ಣರ ‘ಸರಿಗಮ’ದ ಹೊಸ ಋತು

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST
ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಮತ್ತು ವಿಜಯ್‌ ಪ್ರಕಾಶ್
ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಮತ್ತು ವಿಜಯ್‌ ಪ್ರಕಾಶ್   

ಭವಿಷ್ಯದ ಗಾಯಕರನ್ನು ಗುರುತಿಸುವ ‘ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸೀಸನ್‌–10’ ಕಾರ್ಯಕ್ರಮಕ್ಕೆ ‘ಜೀ ಕನ್ನಡ’ ವಾಹಿನಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಒಂಬತ್ತು ಸೀಸನ್‌ಗಳ ಮೂಲಕ ಮನೆಮಾತಾಗಿರುವ ‘ಲಿಟ್ಲ್‌ ಚಾಂಪ್ಸ್‌’, ತನ್ನದೇ ಆದ ವೀಕ್ಷಕ ವಲಯ ಹಾಗೂ ಜನಪ್ರಿಯತೆ ಪಡೆದಿದೆ.

ಹುಬ್ಬಳ್ಳಿ, ಶಿವಮೊಗ್ಗ, ಉಡುಪಿ, ದಾವಣಗೆರೆ, ಮೈಸೂರು ಹಾಗೂ ಬೆಂಗಳೂರಿನಲ್ಲಿ 12 ದಿನಗಳ ಕಾಲ ಸುಮಾರು ಐದು ಸಾವಿರ ಮಕ್ಕಳಿಗೆ ಆಡಿಷನ್‌ ನಡೆಸಿ, ಅದರಲ್ಲಿ 30 ಅತ್ಯುತ್ತಮ ಗಾಯಕರನ್ನು ಆಯ್ಕೆ ಮಾಡಲಾಗಿದೆ. ಈ ಹಾಡುಗಾರರ ಪ್ರತಿಭೆ ಗುರುತಿಸಲು ವಿಜಯ್‌ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಜತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಲಿಟ್ಲ್‌ ಚಾಂಪ್ಸ್‌ನ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಹುಣಸೂರು, ‘ಈ ಸೀಸನ್‌ನಲ್ಲಿ ಮಕ್ಕಳ ಹಾಡಿನ ಜತೆ ವಿಭಿನ್ನ ಮನೋರಂಜನೆಯನ್ನೂ ವೀಕ್ಷಕರು ಸವಿಯಬಹುದು. ಬೇರೆ ಬೇರೆ ಜಿಲ್ಲೆಗಳಿಂದ ಗಾಯನ ಸುಧೆಯನ್ನು ಮಕ್ಕಳು ಹೊತ್ತು ತಂದಿದ್ದಾರೆ. ನಿರೂಪಣೆ ಹೊಣೆಯನ್ನು ಅನುಶ್ರೀ ವಹಿಸಿಕೊಳ್ಳಲಿದ್ದಾರೆ’ ಎಂದರು.

ಮ್ಯೂಸಿಕ್ ರಿಯಾಲಿಟಿ ಷೋ ಅಂದಾಕ್ಷಣ ಹಾಡು, ಸ್ಪರ್ಧೆ ಹಾಗೂ ಅದರಲ್ಲಿ ಹೊರಬೀಳುವವರ ಅಳು ಸಾಮಾನ್ಯ. ಆದರೆ ‘ಲಿಟ್ಲ್‌ ಚಾಂಪ್ಸ್‌’ನಲ್ಲಿ ಇಂಥ ಘಟನೆಗಳನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಲಾಗಿದೆ ಎನ್ನುವ ರಾಘವೇಂದ್ರ, ಮಕ್ಕಳ ಕಂಠಸಿರಿಗೆ ಒತ್ತು ಕೊಡುವುದು ಮತ್ತು ಅವರಲ್ಲಿನ ಪ್ರತಿಭೆಗೆ ಸಾಣೆ ಹಿಡಿಯುವುದು ಇದರ ಉದ್ದೇಶ ಎಂದು ಹೇಳುತ್ತಾರೆ.

ಮಕ್ಕಳ ವೇಷಭೂಷಣ ಗಮನಿಸಿ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ದೂರು ಹಲವು ವೀಕ್ಷಕಕರಿಂದ ಬಂದಿದೆ. ಹೀಗಾಗಿ ಮೂವತ್ತು ಮಕ್ಕಳ ಪೈಕಿ ಹದಿನೈದು ಜನರನ್ನು ಆಯ್ಕೆ ಮಾಡುವ ಸುತ್ತಿನಲ್ಲಿ ಮೂವರು ತೀರ್ಪುಗಾರರ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಇದು ವಿನೂತನ ವಿಧಾನ ಎಂದು ರಾಘವೇಂದ್ರ ವಿವರಿಸಿದರು. ತೀರ್ಪುಗಾರರಾದ ವಿಜಯ್‌ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ನಿರೂಪಕಿ ಅನುಶ್ರೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ಆಗಸ್ಟ್‌ 1ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ‘ಸರಿಗಮಪ ಲಿಟ್ಲ್‌ ಚಾಂಪ್ಸ್‌’ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.