ADVERTISEMENT

300ರ ಸಂಭ್ರಮದಲ್ಲಿ ಸಿಂಧೂರ ತಂಡ...

ರೇಷ್ಮಾ ಶೆಟ್ಟಿ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಸುಮಾ
ಸುಮಾ   

‘ಧಾರಾವಾಹಿಗಳ ಯಶಸ್ಸು ನಿಂತಿರುವುದು ಕತೆಯ ಮೇಲೆ. ಜನರು ಹೇಗೆ ಕತೆಯನ್ನು ಒಪ್ಪಿಕೊಂಡು ಮುಂದೆ ಸಾಗುತ್ತಾರೋ ಹಾಗೆ ಧಾರಾವಾಹಿ ಸಾಗುತ್ತದೆ. ಇನ್ನು, ನಿರ್ದೇಶನ ಎನ್ನುವುದು ನಿರಂತರ ಕಲಿಕೆ. ನಿರ್ದೇಶಕರೂ ಈ ಕಲಿಕೆಯಲ್ಲಿ ಪ್ರತಿದಿನವೂ ಒಂದನೇ ತರಗತಿಯಲ್ಲೇ ಇರುತ್ತಾರೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಕಲಿಕೆ ಇರುತ್ತದೆ’ ಎನ್ನುತ್ತಾ ಮಾತು ಆರಂಭಿಸುವ ಇವರು ನಿರ್ದೇಶಕ ಸಕ್ರೆಬೈಲು ಶ್ರೀನಿವಾಸ್‌.

‘ಸಾಧನೆ’, ‘ಬಿದಿಗೆ ಚಂದ್ರಮ’, ‘ಅಪಾರ್ಟ್‌ಮೆಂಟು’, ‘ಮನೆಯೊಂದು ಮೂರು ಬಾಗಿಲು’, ‘ಆಕಾಶದೀಪ’ದಂತಹ ಯಶಸ್ವಿ ಧಾರಾವಾಹಿಗಳ ರೂವಾರಿಯಾಗಿರುವ ಇವರು ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸಿಂಧೂರ’ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ.

ತಾಯಿ ಇಲ್ಲದೇ ಬೆಳೆದ ಅಕ್ಕ–ತಂಗಿ, ತಾಯಿಯ ಮಾತಿನಂತೆ ತಂಗಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ಧಳಿರುವ ಅಕ್ಕ, ಈ ನಡುವೆ ತನಗೆ ವೈರಿಯಾಗಿರುವ ರಾಜೇಶ್ವರಿಯ (ಖಳನಾಯಕಿ) ಮಗನನ್ನೇ ‍ಪ್ರೀತಿಸುವ ತಂಗಿ, ನಿನ್ನ ತಂಗಿ ನನ್ನ ಮಗನನ್ನು ಮದುವೆಯಾಗಬೇಕಾದರೆ ನನ್ನ ಹಿರಿಯ ಮಗನನ್ನು ನೀನು ಮದುವೆಯಾಗಬೇಕು, ಅದಕ್ಕಾಗಿ ನೀನು ಗರ್ಭಕೋಶವನ್ನು ತೆಗೆಸಿಕೊಳ್ಳಬೇಕು ಎಂದು ಷರತ್ತು ವಿಧಿಸುವ ರಾಜೇಶ್ವರಿ – ಹೀಗೆ ಸಾಗುತ್ತಿರುವ ಧಾರಾವಾಹಿಯ ಮಧ್ಯದಲ್ಲಿ ನಾಯಕಿ (ಅಕ್ಕ) ಸುಮಾ ಗರ್ಭವತಿಯಾಗುತ್ತಾಳೆ. ಹೀಗೆ ಧಾರಾವಾಹಿಗೆ ಟ್ವಿಸ್ಟ್ ಸಿಗುವುದು 300ನೇ ಕಂತಿನಲ್ಲಿ.

ADVERTISEMENT

ಹೌದು, ಸಿಂಧೂರ ಧಾರಾವಾಹಿ ತನ್ನ 300ನೇ ಕಂತನ್ನು ಯಶಸ್ವಿಯಾಗಿ ಮುಗಿಸಿ ಮುಂದೆ ಸಾಗುತ್ತಿದೆ. ಏಪ್ರಿಲ್ 18ರಂದು ಇದರ 300ನೇ ಕಂತು ಪ್ರಸಾರವಾಗಿದೆ. ತೆಲುಗು ಮೂಲದ ‘ಲಕ್ಷ್ಮೀಕಲ್ಯಾಣಂ’ ಧಾರಾವಾಹಿಯ ಕತೆಯನ್ನೇ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿದ್ದಾರೆ.

ಸುಮಾ ಗರ್ಭವತಿಯಾದಾಗಿನಿಂದ ಕತೆ ತಿರುವು ಪಡೆಯುತ್ತದೆ ಎನ್ನುವ ನಿರ್ದೇಶಕರು ‘ಧಾರಾವಾಹಿಯಲ್ಲಿ ಪಾತ್ರಗಳ ಆಯ್ಕೆ ತುಂಬಾ ಮುಖ್ಯವಾಗುತ್ತದೆ. ಪಾತ್ರದಲ್ಲಿ ನಟಿಸುತ್ತಿರುವವರು ಆ ಪಾತ್ರಕ್ಕೆ ಜೀವ ತುಂಬಬೇಕು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಬೇಕು, ಹೀಗೆ ಪಾತ್ರಕ್ಕೆ ಎಲ್ಲವೂ ಒಗ್ಗಿಕೊಂಡರೆ ಅರ್ಧ ಗೆದ್ದ ಹಾಗೆ’ ಎಂದು ತಮ್ಮ ಅನುಭವದ ಮಾತನ್ನು ಹೇಳುತ್ತಾರೆ.

‘ಯಾವುದೇ ಧಾರಾವಾಹಿ ಮಾಡಬೇಕಾದರೂ ಇಂತಿಷ್ಟೇ ಕಂತು ಮಾಡಬೇಕು ಎಂದು ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ನಿರ್ಧರಿಸುವುದು ಜನ. ನಾವು ನಮ್ಮ ಕೆಲಸ ಮಾಡಿಕೊಂಡು ಹೋಗುತ್ತೇವೆ. 100, 200, 300 ಎನ್ನುವುದು ಕೇವಲ ಲೆಕ್ಕಕ್ಕೆ ಮಾತ್ರ, ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಪ್ರತಿ ಕಂತು ಕೂಡ ಮೊದಲನೇ ಕಂತಿನಂತೆ. 100ನೇ ಕಂತು ಪೂರೈಸಿತು ಎಂದ ಮಾತ್ರಕ್ಕೆ ಇನ್ನೂರಾಗುತ್ತದೆ, ಮುನ್ನೂರಾಗುತ್ತದೆ ಎಂದುಕೊಂಡರೆ ಖಂಡಿತ ಅದು ಆಗುವುದಿಲ್ಲ. ಹೊಸತನ ಕೊಟ್ಟರೆ ಮಾತ್ರ ಜನ ವೀಕ್ಷಿಸುತ್ತಾರೆ’ ಎಂದು 300ನೇ ಕಂತು ಮುಗಿಸಿದ ಸಂಭ್ರಮದಲ್ಲಿ ಹೇಳುತ್ತಾರೆ.


ಸ್ವಾತಿ

ಧಾರಾವಾಹಿಯ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದ್ದು ಕೆಲ ಕಂತುಗಳಿಗಾಗಿ ಕುಂದಾಪುರದ ಕಮಲಶಿಲೆ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಿದೆ ಸಿಂಧೂರ ತಂಡ.

ಒಬ್ಬ ನಿರ್ದೇಶಕನಾಗಿ ನೋಡುವುದಾದರೆ ಧಾರಾವಾಹಿಯಲ್ಲಿ ಕತೆಯೇ ಹೈಲೈಟ್. ಸಿನಿಮಾ ಎಂದರೆ ವಿಶುವಲ್ ಮಿಡಿಯಾ. ಅಲ್ಲಿ ಮೂರು ಗಂಟೆ ಜನರನ್ನು ಹಿಡಿದಿಟ್ಟುಕೊಂಡರೆ ಸಾಕು‌. ಆದರೆ ಧಾರಾವಾಹಿ ಹಾಗಲ್ಲ, ವರ್ಷಾನುಗಟ್ಟಲೆ ಜನರನ್ನು ಹಿಡಿದಿಡಬೇಕು. ಇಲ್ಲಿ ಕತೆಯೇ ತುಂಬಾ ಮುಖ್ಯ ಎನ್ನಿಸುತ್ತದೆ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಾರೆ.

ಧಾರಾವಾಹಿಯ ನಿರೀಕ್ಷೆಗಳ ಬಗ್ಗೆ ಮಾತನಾಡುತ್ತಾ ‘ಜನ ನಮ್ಮ ಧಾರಾವಾಹಿಯನ್ನು ನೋಡಿಕೊಂಡು ಬಂದಿದ್ದಾರೆ, ಕತೆ ಅದ್ಭುತವಾಗಿದೆ, ಜನರ ಮನಸ್ಸಿನಲ್ಲಿ ಕತೆಯ ಗುನುಗುವಿಕೆ ಇರುವಾಗಲೇ ಅದು ನಿಂತುಹೋಗಬೇಕೇ ಹೊರತು, ಅಯ್ಯೋ ಈ ಧಾರಾವಾಹಿ ಯಾವಾಗ ನಿಲ್ಲುತ್ತಪ್ಪಾ ಅನ್ನಿಸುವಂತಾಗಬಾರದು. ಜನರಲ್ಲಿ ಕೂತುಹಲ ಇದ್ದಾಗಲೇ ಕತೆಗೆ ವಿರಾಮ ನೀಡಬೇಕು ಎಂಬುದು ನನ್ನ ಹಂಬಲ’ ಎನ್ನುತ್ತಾರೆ.

‘ನಾನು ರಾತ್ರಿ ಒಂದು ಬಾರಿ ಸ್ಕ್ರೀನ್ ಪೇಪರ್ ಓದುತ್ತೇನೆ, ಬೆಳಿಗ್ಗೆ ಎದ್ದ ಮೇಲೆ ಇನ್ನೊಮ್ಮೆ ಓದುತ್ತೇನೆ. ಅಷ್ಟು ಓದಿದ್ರೂ ನನಗೆ ತೃಪ್ತಿ ಇರುವುದಿಲ್ಲ, ಅಯ್ಯೋ, ನಾನು ಹೀಗೆ ಮಾಡಬೇಕಿತ್ತು, ಹಾಗೇ ಮಾಡಬೇಕಿತ್ತು ಎಂದು ಆಮೇಲೆ ಅಂದುಕೊಳ್ಳುತ್ತೇನೆ, ನಮ್ಮ ಕೆಲಸವೇ ಹಾಗೆ ತೃಪ್ತಿ ಎನ್ನುವುದು ಇರುವುದೇ ಇಲ್ಲ. ಯಾವತ್ತು ನನಗೆ ತೃಪ್ತಿ ಸಿಗುತ್ತದೋ ಅವತ್ತೇ ನನ್ನ ವೃತ್ತಿಜೀವನ ಕೊನೆಯಾಗುತ್ತದೆ’ ಎಂದು ಅರ್ಥಪೂರ್ಣವಾಗಿ ಮಾತನಾಡುತ್ತಾರೆ.

ತಾರಾಗಣದಲ್ಲಿ ಸೌಮ್ಯಲತಾ, ಚಂದ್ರಕಲಾ ಮೋಹನ್, ಕವಿತಾ ರೈ, ಆನಂದ್ ನಾಗರ್‌ಕರ್‌ ಮತ್ತು ಮುತ್ತುರಾಜ್‌ರಂತಹ ಅನುಭವಿ ಕಲಾವಿದರ ಜೊತೆಗೆ  ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ನಟಿಸಿದ್ದಾರೆ. ಧಾರಾವಾಹಿಗೆ ನಿಂಗೇಗೌಡ ಕ್ಯಾಮೆರಾ ಹಿಡಿದಿದ್ದು, ಶುಭರಾಜ್ ಜೈನ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ ಸುದರ್ಶನ್ ರಾವ್ ಸಂಕಲನವಿದೆ. ಅಂಬರ್ ಪ್ರೊಡಕ್ಷನ್ಸ್‌ ಧಾರಾವಾಹಿ ನಿರ್ಮಾಣ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.