ADVERTISEMENT

ಭತ್ತ ಬೇರ್ಪಡಿಕೆಗೆ ಸುಲಭ ಯಂತ್ರ

ಚಂದ್ರಹಾಸ ಚಾರ್ಮಾಡಿ
Published 15 ಡಿಸೆಂಬರ್ 2014, 19:30 IST
Last Updated 15 ಡಿಸೆಂಬರ್ 2014, 19:30 IST
ಭತ್ತ ಬೇರ್ಪಡಿಕೆಗೆ ಸುಲಭ ಯಂತ್ರ
ಭತ್ತ ಬೇರ್ಪಡಿಕೆಗೆ ಸುಲಭ ಯಂತ್ರ   

ಭತ್ತ ನಾಟಿ, ಕಟಾವು ಕೆಲಸಗಳಿಗಿಂತಲೂ ತ್ರಾಸದಾಯಕ ಕೆಲಸವೆಂದರೆ ಅದು ಭತ್ತದ ಪೈರಿನಿಂದ ತೆನೆಯನ್ನು ಬೇರ್ಪಡಿಸುವುದು. ಇತರ ಕೆಲಸಗಳಿಗೆ ಹಳ್ಳಿಗಳಲ್ಲಿ ಹೇಗಾದರೂ ಕಷ್ಟಪಟ್ಟರೆ ಇಂದಿಗೂ ಕೂಲಿಯಾಳುಗಳು ತಕ್ಕಮಟ್ಟಿಗೆ ಸಿಗುತ್ತಾರೆ. ಒಂದು ವೇಳೆ ಸಿಗದಿದ್ದರೂ ನಾಟಿ, ಕಟಾವು, ಕಳೆ ತೆಗೆಯಲು ಹೀಗೆ ಇಲ್ಲಿನ ಹೆಚ್ಚಿನ ಕೆಲಸಗಳಿಗೆ ಪೂರಕವಾಗಿ ಯಂತ್ರಗಳ ಆವಿಷ್ಕಾರವಾಗಿದೆ. ಆದರೆ ಭತ್ತದ ಪೈರನ್ನು ಕಟಾವು ಮಾಡಿದ ನಂತರ ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಯಂತ್ರದ ಆವಿಷ್ಕಾರ ಇದುವರೆಗೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ.

ಆದ್ದರಿಂದ ಅದಕ್ಕಾಗಿ ಕೂಲಿಯಾಳುಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ಇದೀಗ ಈ ಸಮಸ್ಯೆಗೆ ಪರಿಹಾರವೆಂಬಂತೆ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿಯ ಯುವಕ ದಯಾನಂದ ಪೂಜಾರಿ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಆವಿಷ್ಕಾರಗೊಂಡ ಯಂತ್ರವೀಗ ಮೂರು ತಿಂಗಳಿನಿಂದ ಬಿಡುವಿಲ್ಲದೆ ದುಡಿಯುತ್ತಿದೆ. ಈ ಭಾಗದ ಜನರ ಮನೆಗೆದ್ದಿದೆ. ಭತ್ತದ ತ್ರಾಸದಾಯಕ ಕೆಲಸಕ್ಕೆ ಮುಕ್ತಿಯನ್ನು ನೀಡಿದೆ. ಕೃಷಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ದಯಾನಂದ ಕಳೆದ ವರ್ಷ ನೆಲದಿಂದಲೇ ಅಡಕೆ ಗಿಡಗಳಿಗೆ ಔಷಧ ಸಿಂಪಡಿಸುವ ಯಂತ್ರವನ್ನು ಆವಿಷ್ಕರಿಸುವ ಮೂಲಕ ಅಡಕೆ ಬೆಳೆಗಾರರ ಗಮನ ಸೆಳೆದಿದ್ದರು. ದಯಾನಂದ ಕೂಡ ಒಬ್ಬ ಭತ್ತ ಬೆಳೆಗಾರ. ಈ ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಂತೆ ಶ್ರೀ ಪದ್ಧತಿಯಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ.

ಪ್ರತಿವರ್ಷ ಭತ್ತದ ಕಟಾವು ಆದ ನಂತರ ಉರಿಬಿಸಿಲಿನಲ್ಲಿ ನಿಂತು ‘ಪಡಿ’ ಎಂಬ ಮರದ ಸಾಧನದ ಮೂಲಕ ಭತ್ತ ಬೇರ್ಪಡಿಸುವ ಕೂಲಿಯಾಳುಗಳನ್ನು ಹುಡುಕುವುದೇ ಇವರ ಪಾಲಿಗೆ ಬಹು ದೊಡ್ಡ ಕಷ್ಟದ ಕೆಲಸವಾಗಿತ್ತು. ಭತ್ತದ ಹೊಟ್ಟು ಬೇರ್ಪಡಿಸಲು ಅನುಭವವಿರಬೇಕಾದುದು ಅತ್ಯಗತ್ಯ. ಜೊತೆಗೆ ಭತ್ತದ ಹೊಟ್ಟು ಮೈಯೆಲ್ಲಾ ಹಾರಿ ತುರಿಕೆ ಉಂಟಾಗುವುದು, ಮುಖದಲ್ಲಿ ಕಪ್ಪು ಕಳೆಗಳಾಗುವುದು ಇವೆಲ್ಲಾ ಮಾಮೂಲಿ. ಇವನ್ನೆಲ್ಲಾ ಲೆಕ್ಕಿಸದೆ ದುಡಿಯುವ ಮಂದಿ ಸಿಗುವುದೇ ಕಷ್ಟವಾಗತೊಡಗಿತು. ಈ ಬಾರಿಯಂತೂ ಕೂಲಿಯಾಳುಗಳು ಸಿಗಲೇ ಇಲ್ಲ. ಈ ಸಮಸ್ಯೆಯಿಂದ ಭತ್ತ ಬೆಳೆಗಾರರಿಗೆ ಮುಕ್ತಿ ದೊರೆಯಬೇಕು, ಆ ಮೂಲಕ ಇನ್ನಷ್ಟು ರೈತರು ಭತ್ತ ಬೆಳೆಯುವತ್ತ ಮನಸ್ಸು ಮಾಡಬೇಕೆಂಬ ನಿಟ್ಟಿನಲ್ಲಿ ತನ್ನ ಸಹೋದರ ಶ್ರೀಧರ್ ಪೂಜಾರಿಯವರೊಂದಿಗೆ ಸೇರಿಕೊಂಡು ಹೊಟ್ಟು ಬೇರ್ಪಡಿಸುವ ಯಂತ್ರವೊಂದನ್ನು ಕಂಡುಹಿಡಿಯುವ ಪ್ರಯತ್ನಕ್ಕೆ ಕೈಹಾಕಿದರು.

ಯಂತ್ರ ತಯಾರಿಸುವುದಕ್ಕಾಗಿ ಇವರು ಯಾವ ಕಂಪೆನಿಗಳಿಂದಲೂ ವಸ್ತುಗಳನ್ನು ಖರೀದಿಸಲಿಲ್ಲ. ಬದಲಾಗಿ ತನ್ನ ಮಾವನ ಮನೆಯಲ್ಲಿದ್ದ ಕಾಲು ಹೆಚ್.ಪಿ ಸಾಮರ್ಥ್ಯದ ಹಳೆಯ ಗ್ರೈಂಡರ್ ಯಂತ್ರದ ಮೋಟಾರ್, ಅದಕ್ಕೆ ಪೂರಕವಾಗಿ ಬೆಲ್ಟ್ ಮುಂತಾದ ಬಿಡಿಭಾಗಗಳನ್ನು ಸಂಬಂಧಿಕರ ಮನೆಯಿಂದ ತಂದು ಅಣ್ಣತಮ್ಮಂದಿರಿಬ್ಬರು ಸೇರಿಕೊಂಡು ತಮ್ಮ ಯೋಜನೆಯಂತೆ ಯಂತ್ರವನ್ನು ತಯಾರಿಸಿದ್ದಾರೆ. ಈ  ಭತ್ತ ಬೇರ್ಪಡೆ ಯಂತ್ರದ ತಯಾರಿಯಂತೂ ತುಂಬಾ ಸುಲಭ. ಹೊಟ್ಟು ಬೇರ್ಪಡಿಸುವಲ್ಲಿ ಕಬ್ಬಿಣದ ರಿಂಗ್ ಪಟ್ಟಿ ಮತ್ತು ಮರದ ಸಲಕೆಗಳನ್ನು ಉಪಯೋಗಿಸಿದ್ದಾರೆ. ಕಬ್ಬಿಣದ ರಿಂಗ್ ಪಟ್ಟಿಗೆ ಒಂದೊಂದು ಇಂಚು ಅಂತರ ಬಿಟ್ಟು ಸ್ಟೀಲ್‌ನ ಸರಿಗೆಗಳನ್ನು ಬಗ್ಗಿಸಿ ವೆಲ್ಡಿಂಗ್ ಮಾಡಿದ್ದಾರೆ. ಈ ರಿಂಗ್‌ಪಟ್ಟಿಯನ್ನು ಕೂರಿಸಲು ‘ಯು’ ಆಕಾರದಲ್ಲಿ ಕಬ್ಬಿಣದ ಪಟ್ಟಿಗಳನ್ನು ಜೋಡಿಸಿದ್ದಾರೆ. ಇದಕ್ಕೆ ಇವರಿಗೆ ತಗಲಿದ ಖರ್ಚು ಕೇವಲ ಐದು ಸಾವಿರ ರೂಪಾಯಿ.

60 ಕೆ.ಜಿ ತೂಗುವ ಯಂತ್ರವನ್ನು ಇಬ್ಬರು ಸುಲಭವಾಗಿ ಒಯ್ಯಬಹುದು. ಮಕ್ಕಳು, ಹೆಂಗಸರೂ ಇದರಲ್ಲಿ ಭತ್ತವನ್ನು ಬೇರ್ಪಡಿಸಬಹುದಾಗಿದೆ. ಇಲ್ಲಿ ಯಾವುದೇ ಅನುಭವ, ಹೆಚ್ಚಿನ ಶ್ರಮದ ಅಗತ್ಯವಿಲ್ಲ. ಒಮ್ಮೆಗೆ 4 ಜನ ಭತ್ತದ ಕಂತೆಗಳನ್ನು ತಿರುಗುವ ಯಂತ್ರಕ್ಕೆ ಹಿಡಿಯಬಹುದು. ನಿಮಿಷಕ್ಕೆ ಒಬ್ಬ ವ್ಯಕ್ತಿ ಏಳು ಭತ್ತದ ಕಂತೆಗಳಿಂದ ಹೊಟ್ಟನ್ನು ಬೇರ್ಪಡಿಸಬಹುದು. ಕಂತೆಗಳ ಹಿಡಿಯನ್ನು ಬಲವಾಗಿ ಹಿಡಿಯಬೇಕು. ಇಲ್ಲವಾದರೆ ಕಂತೆಯಿಂದ ಬೈಹುಲ್ಲು ಎಸೆದು ಯಂತ್ರಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಯಿದೆ. ವಿಶೇಷವೆಂದರೆ ಬೈಹುಲ್ಲಿನಲ್ಲಿ ಒಂದೇ ಒಂದು ಭತ್ತವು ಬೇರ್ಪಡದೆ ಉಳಿಯಲು ಇಲ್ಲಿ ಸಾಧ್ಯವೇ ಇಲ್ಲ.
ವಿದ್ಯುತ್ ಮತ್ತು ಜನರೇಟರ್ ಚಾಲಿತ ಯಂತ್ರವನ್ನು ಅರ್ಧ ಹೆಚ್.ಪಿ ಸಾಮರ್ಥ್ಯದ ಜನರೇಟರ್ ಬಳಸಿ ಕೂಡ ಸುಲಭವಾಗಿ ಉಪಯೋಗಿಸಬಹುದು. ವಿದ್ಯುತ್ ಕೈಕೊಟ್ಟರೆ ಒಂದು ಕಿ.ಲೋ ವೋಲ್ಟ್‌ನ ಇನ್‌ವಾಟರ್ ಬಳಸಬಹುದಾಗಿದೆ.

ಇದೀಗ ಬಿಡುವಿಲ್ಲದೇ ದುಡಿಯುತ್ತಿರುವ ಈ ಯಂತ್ರಕ್ಕೆ ಬಾಡಿಗೆಯಾಗಿ ದಿನವೊಂದಕ್ಕೆ 400 ರೂಪಾಯಿ ನಿಗದಿಗೊಳಿಸಿದ್ದಾರೆ. ತಮಗೆ ಬೇಕಾದಲ್ಲಿ ಇದನ್ನು ಇಡಬಹುದಾಗಿದ್ದು ಯಂತ್ರದ ಗಾತ್ರವನ್ನು ಅಗತ್ಯಬಿದ್ದಲ್ಲಿ ಇನ್ನೂ ದೊಡ್ಡದು ಮಾಡಲು ಅವಕಾಶವಿದೆ. ಆದರೆ ಆಟೊ ರಿಕ್ಷಾದಲ್ಲಿ ಸಾಗಿಸುವುದು ಕಷ್ಟವಂತೆ.
ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಭತ್ತ ಬೆಳೆಗಾರರ ಮನಗೆದ್ದ ಈ ಯಂತ್ರಕ್ಕೆ ಇದೀಗ ದಿನದ ಎಲ್ಲಾ ತಾಸುಗಳಲ್ಲಿ ಕೆಲಸವಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಕೂಡಾ ದಯಾನಂದರವರಿಗೆ ರಾತ್ರಿ ಗಂಟೆ 7 ರಿಂದ 8ರ ಅವಧಿಯಲ್ಲಿ ಫೋನಾಯಿಸಬಹುದು. ಸಂಪರ್ಕ ಸಂಖ್ಯೆ: 9008136094.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.