ADVERTISEMENT

ವಿಜಯ್‌ ನೆಪದಲ್ಲಿ ಚೋಮ, ತಬರರ ನೆನಪು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ಅಭಿನಯಕ್ಕಾಗಿ ಸಂಚಾರಿ ವಿಜಯ್‌ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ‘ಅತ್ಯುತ್ತಮ ನಟ’ ವಿಭಾಗದಲ್ಲಿ ಕನ್ನಡಕ್ಕೆ ಸಲ್ಲುತ್ತಿರುವ ಮೂರನೇ ರಾಷ್ಟ್ರಪ್ರಶಸ್ತಿ ಇದು. ಎಂ.ವಿ. ವಾಸುದೇವ ರಾವ್ ಹಾಗೂ ಚಾರುಹಾಸನ್‌ ಈ ಪುರಸ್ಕಾರಕ್ಕೆ ಪಾತ್ರರಾದ ಉಳಿದಿಬ್ಬರು. ಈ ಮೂವರೂ ರಂಗಭೂಮಿ ಹಿನ್ನೆಲೆ ಹೊಂದಿರುವುದು ವಿಶೇಷ.

ಬಿ.ವಿ. ಕಾರಂತರ ನಿರ್ದೇಶನದ ‘ಚೋಮನದುಡಿ’ ಸಿನಿಮಾದಲ್ಲಿ ಚೋಮನಾಗಿ ವಾಸುದೇವರಾವ್‌ ಅವರದು ಅದ್ಭುತ ನಟನೆ. ವೃತ್ತಿ ರಂಗಭೂಮಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರೂ ಎಲೆಮರೆ ಕಾಯಿಯಂತೆಯೇ ಉಳಿದಿದ್ದ ಅವರು, ಚೋಮನಾಗಿ ನೀಡಿದ ಉತ್ಕೃಷ್ಟ ಅಭಿನಯ ಸಹೃದಯರ ಗಮನಸೆಳೆಯಿತು. ಅತ್ಯುತ್ತಮ ನಟನೆಂದು ಅವರಿಗೆ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ದೊರೆತವು. ನಟನೆಯ ಮೊದಲ ಚಿತ್ರಕ್ಕೇ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಎರಡನ್ನೂ ಪಡೆದ ಸಾಧನೆ ಅವರದು.

ಗಿರೀಶ ಕಾಸರವಳ್ಳಿ ನಿರ್ದೇಶನದ ‘ತಬರನ ಕಥೆ’ ಚಿತ್ರದಲ್ಲಿನ ನಟನೆಗಾಗಿ ಚಾರುಹಾಸನ್‌ ಪ್ರಶಸ್ತಿ ಪಡೆದುದು ಕನ್ನಡ ಚಿತ್ರರಂಗಕ್ಕೆ ಸಂದ ಎರಡನೇ ‘ಅತ್ಯುತ್ತಮ ನಟ’ ಪುರಸ್ಕಾರ. ತಬರನ ಪಾತ್ರಕ್ಕೆ ಚಾರುಹಾಸನ್‌ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಗಲೂ ಕನ್ನಡದ ಚಿತ್ರರಸಿಕರಿಗೆ ಚಾರುಹಾಸನ್ ತಬರನ ರೂಪದಲ್ಲಿಯೇ ಪರಿಚಿತರು. ಆರಂಭದಲ್ಲಿ ತಬರನ ಪಾತ್ರಕ್ಕೆ ಕಾಸರವಳ್ಳಿ ಅವರು ಚಾರುಹಾಸನ್‌ರನ್ನು ಆಯ್ಕೆ ಮಾಡಿದ್ದು ಕೆಲವರಿಗೆ ವೈರುಧ್ಯದಂತೆ ಕಾಣಿಸಿತ್ತು. ತಬರನ ಪಾತ್ರಕ್ಕೆ ಬಡಕಲು ವ್ಯಕ್ತಿ ಸೂಕ್ತವೇ ಹೊರತು ಚಾರುಹಾಸನ್‌ರಂಥ ದೃಢಕಾಯರಲ್ಲ ಎನ್ನುವ ನಂಬಿಕೆ ಕೆಲವರದಾಗಿತ್ತು. ಆದರೆ, ತಬರನ ವ್ಯಕ್ತಿತ್ವವನ್ನು ಒಂದು ಮಾನಸಿಕ ಸ್ಥಿತಿಯಾಗಿ ನೋಡಬೇಕೇ ಹೊರತು, ದೈಹಿಕ ಚಹರೆಗಳಲ್ಲಿ ಅಲ್ಲ ಎನ್ನುವುದು ನಿಲುವಾಗಿತ್ತು. ಸಿನಿಮಾ ತೆರೆಕಂಡ ನಂತರ ಕಾಸರವಳ್ಳಿ ಅವರ ಆಯ್ಕೆ ಎಲ್ಲರಿಗೂ ಸರಿ ಅನ್ನಿಸಿತು. ಅಂದಹಾಗೆ, ರಾಜಕುಮಾರ್‌ ಸೇರಿದಂತೆ ಕನ್ನಡದ ಮುಖ್ಯವಾಹಿನಿ ಸಿನಿಮಾದ ಯಾವ ಕಲಾವಿದರಿಗೂ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.