ADVERTISEMENT

ಹೊಸ ಕನಸು, ಹೊಸ ಸವಾಲು...

ಪ್ರಮೋದ ಜಿ.ಕೆ
Published 16 ನವೆಂಬರ್ 2014, 19:30 IST
Last Updated 16 ನವೆಂಬರ್ 2014, 19:30 IST

ಏಷ್ಯಾದಲ್ಲಿ ಪ್ರಾಬಲ್ಯ ಹೊಂದಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಆಸ್ಟ್ರೇಲಿಯ ಪ್ರವಾಸ ಎಂದರೆ ಅದೇನೋ ಆತಂಕ. ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುವ ಪಿಚ್‌ಗಳಲ್ಲಿ ರನ್‌ ಗಳಿಸುವುದು ಸುಲಭದ ಮಾತಲ್ಲ. ಈ ಸವಾಲಿಗೆ ಕರ್ನಾಟಕದ ಕೆ.ಎಲ್‌. ರಾಹುಲ್ ಸಜ್ಜಾಗಿದ್ದಾರೆಯೇ?

‘ದೇಶಿಯ ಕ್ರಿಕೆಟ್‌ನಲ್ಲಿ ರಾಹುಲ್‌ ಅಮೋಘ ಪ್ರದರ್ಶನ ತೋರಿದ್ದಾರೆ. ಅವರು ಟೆಸ್ಟ್‌ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ... ’
‘ದಿ ವಾಲ್‌‘ ಖ್ಯಾತಿಯ ರಾಹುಲ್‌ ದ್ರಾವಿಡ್‌ ಹೋದವಾರವಷ್ಟೇ ಭರವಸೆಯ ಯುವ ಪ್ರತಿಭೆ ಕೆ.ಎಲ್‌. ರಾಹುಲ್ ಬಗ್ಗೆ ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಹೇಳಿಕೆ ನೀಡಿ ಮೂರೇ ದಿನದಲ್ಲಿ ರಾಹುಲ್‌ ಬದುಕಿನ ಕನಸು ನನಸಾಯಿತು. ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡರು. ಮುಂದಿನ ವರ್ಷ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಅಭ್ಯಾಸದ ಸರಣಿ ಎನಿಸಿರುವ ಆಸ್ಟ್ರೇಲಿಯ ಪ್ರವಾಸಕ್ಕೆ 22 ವರ್ಷದ ರಾಹುಲ್ ಆಯ್ಕೆಯಾಗಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಬಂದ ಹೊಸದರಲ್ಲಿ ಬಿಯುಎಫ್‌ಸಿ ಕ್ಲಬ್‌ ಸೇರಿದ ರಾಹುಲ್‌ ನಂತರ ವಲ್ಚರ್ಸ್‌ ಕ್ಲಬ್‌ ಪ್ರತಿನಿಧಿಸಿದರು. ಏಕದಿನ, ರಣಜಿ ಮತ್ತು ಐಪಿಎಲ್‌ ಹೀಗೆ ಎಲ್ಲಾ ಮಾದರಿಗಳಿಗೂ ಹೊಂದಿಕೊಳ್ಳುವ ಕೌಶಲ ಅವರಿಗೆ ಕರಗತವಾಗಿದೆ. ಹೋದ ವರ್ಷದ ರಣಜಿ ಋತುವಿನಲ್ಲಿ ರಾಹುಲ್‌ ಗಳಿಸಿದ್ದ ಸಾವಿರಕ್ಕೂ ಅಧಿಕ ರನ್‌ಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಚಾಂಪಿಯನ್‌ ಆಗಿತ್ತು.
ರಾಹುಲ್‌ ಮೊದಲು 19 ಮತ್ತು 23 ವರ್ಷದ ಒಳಗಿನವರ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. ಸಿಂಗಪುರ ಮತ್ತು  ಪಾಕಿಸ್ತಾನದ ನೆಲದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಜೂನಿಯರ್ ತಂಡದಲ್ಲಿದ್ದಾಗ ವಿದೇಶಿ ನೆಲದಲ್ಲಿ ಆಡಿದ ಅನುಭವ ಇದೆಯಾದರೂ ಆಸೀಸ್‌ ನೆಲದಲ್ಲಿ ಆಡುವುದು ಕೊಂಚ ಕಷ್ಟ.

ಆಸೀಸ್‌ ಎದುರಿನ ಟೆಸ್ಟ್‌ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಶಿಖರ್‌ ಧವನ್‌, ಮುರಳಿ ವಿಜಯ್‌, ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ  ಕೂಡಾ ಇದ್ದಾರೆ. ಆದ್ದರಿಂದ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಗಳಿಸಲು ಸಾಕಷ್ಟು ಪೈಪೋಟಿಯಿದೆ.
ಬದ್ಧತೆಯೇ ಶಕ್ತಿ: ಪ್ರಥಮ ದರ್ಜೆ ಪಂದ್ಯ ಆಡಲು ಆರಂಭಿಸಿದ ನಾಲ್ಕೇ  ವರ್ಷಗಳಲ್ಲಿ ರಾಹುಲ್‌ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಟದ ಸೊಗಸು ಮತ್ತು ಬ್ಯಾಟಿಂಗ್‌ ಶೈಲಿ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿದೆ.

2010ರಲ್ಲಿ ಮೊಹಾಲಿಯಲ್ಲಿ ಪಂಜಾಬ್‌ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು. 2012–13ರ ರಣಜಿ ಋತುವಿನಲ್ಲೂ ರಾಹುಲ್‌ ರಾಜ್ಯ ತಂಡದಲ್ಲಿದ್ದರು. ಐದು ಪಂದ್ಯಗಳಿಂದ ಒಟ್ಟು 400 ರನ್‌ ಕಲೆ ಹಾಕಿದ್ದರು. ಆಗ, ರಾಹುಲ್‌ ಅಷ್ಟೇನೂ ಗಮನ ಸೆಳೆದಿರಲಿಲ್ಲ. ಹಿಂದಿನ ರಣಜಿ ಋತುವಿನಲ್ಲಿ ಅಪೂರ್ವ ಪ್ರದರ್ಶನ ತೋರಿ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮುಂದಿದೆ ಸವಾಲಿನ ಹಾದಿ: ರಾಹುಲ್‌ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ಖುಷಿಯ ವಿಚಾರವೇ. ಆದರೆ, ಅವರ ಮುಂದಿನ ಹಾದಿ ಮಾತ್ರ ಮುಳ್ಳಿನ ಮೇಲಿನ ನಡಿಗೆಯಾಗಿದೆ. ಈ ಮಾತನ್ನು ರಾಹುಲ್‌ ಕೂಡ ಒಪ್ಪಿಕೊಳ್ಳುತ್ತಾರೆ.

‘ರಾಷ್ಟ್ರೀಯ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಸಿಕ್ಕಿರುವುದರಿಂದ ಖುಷಿಯಾಗಿದೆ. ಆಸ್ಟ್ರೇಲಿಯ ಎದುರಿನ ಸರಣಿ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ತಂಡದಲ್ಲಿ ಸಾಕಷ್ಟು ಪೈಪೋಟಿಯೂ ಇದೆ. ಆದ್ದರಿಂದ ಪ್ರತಿ ಅವಕಾಶದಲ್ಲೂ ಶಕ್ತಿ ಮೀರಿ ಆಡುವುದು ಅಗತ್ಯವಿದೆ’ ಎಂದು ರಾಹುಲ್‌ ಹೇಳುತ್ತಾರೆ.

ಬ್ಯಾಟ್ಸ್‌ಮನ್‌ ಆಗಿ ಅಷ್ಟೇ ಅಲ್ಲದೆ, ವಿಕೆಟ್‌ ಕೀಪರ್‌ ಆಗಿಯೂ ರಾಹುಲ್‌ ಸಮರ್ಥ ಆಟಗಾರ. ದೇಶಿಯ ಕ್ರಿಕೆಟ್‌ನಲ್ಲಿ ಇದು ಸಾಬೀತಾಗಿದೆ. ರಾಷ್ಟ್ರೀಯ ತಂಡದಲ್ಲಿ ಅನುಭವಿ ಆಟಗಾರರ ಜೊತೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಳ್ಳುವ ಅವಕಾಶ ಪಡೆದಿರುವ ರಾಹುಲ್‌ ಮನದಲ್ಲಿ ಈಗ ನೂರಾರು ಆಸೆ ಹಾಗೂ ಕನಸುಗಳು ಗರಿಗೆದರಿವೆ. ಜೊತೆಗೆ, ಸಾಲು ಸಾಲು ಸವಾಲುಗಳು ಎದುರಿಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT