ADVERTISEMENT

ಅಡುಗೆ ಗೊತ್ತಿದ್ದರಷ್ಟೇ ಹುಡುಗ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ದೀಪಿಕಾ
ದೀಪಿಕಾ   

ಶಾಲಾದಿನಗಳಲ್ಲಿ ನಾನು ಸಂಜೆ ಬಂದ ಮೇಲೆ ಏನಾದರೂ ಖಾರ ತಿನ್ನಬೇಕು ಅನಿಸಿದರೆ, ಬ್ರೆಡ್‌ ಟೋಸ್ಟ್‌, ಖಾರ ಅವಲಕ್ಕಿ ಮಾಡಿಕೊಂಡು ತಿನ್ನುತ್ತಿದ್ದೆ. ಶಾಲೆ 3 ಗಂಟೆಗೆ ಮುಗಿಯುತ್ತಿತ್ತು. ಅಮ್ಮ ಮನೆಯಲ್ಲಿದ್ದರೆ ಏನಾದರೂ ರುಚಿಯಾಗಿ ತಿಂಡಿ ಮಾಡಿಕೊಡೋರು. ಅವರು ಮನೆಯಲ್ಲಿಲ್ಲ ಅಂದ್ರೆ ನಾನೇ ಅಡುಗೆ ಮನೆಗೆ ಹೋಗಿ ನಂಗೆ ಹೇಗೆ ಬೇಕೋ ಹಾಗೇ ಖಾರ ಖಾರವಾಗಿ ಬ್ರೆಡ್‌ ಟೋಸ್ಟ್‌, ಆಮ್ಲೆಟ್‌, ಖಾರ ಅವಲಕ್ಕಿ, ಅದರ ಜೊತೆ ಟೀ ಮಾಡಿಕೊಂಡು ಟಿ.ವಿ. ನೋಡಲು ಕೂರುತ್ತಿದ್ದೆ. ಸಣ್ಣವಳಿದ್ದಾಗಿನಿಂದಲೂ ನನಗೆ ಈ ಅಭ್ಯಾಸ ಇದೆ. ಈಗಲೂ ಮನೆಯಲ್ಲಿ ಬಿಡುವು ಸಿಕ್ಕಾಗ ಅಡುಗೆ ಮನೆಗೆ ಹೋಗಿ ನಾನೇ ಏನಾದರೂ ಹೊಸರುಚಿ ಮಾಡಿಕೊಂಡು ತಿನ್ನುತ್ತೇನೆ.

ನನಗೆ ಅಡುಗೆ ಮಾಡೋಕೆ ಗೊತ್ತು. ಹಾಗಂತ ತುಂಬಾ ಬಗೆ  ಅಡುಗೆಗಳು ಬರಲ್ಲ. ತುರ್ತು ಸ್ಥಿತಿ ಅಂತಾ ಏನಾದರೂ ಬಂದ್ರೆ ನನ್ನ ಅಡುಗೆಯನ್ನು ತಿಂದುಕೊಂಡು ಬದುಕಬಹುದು. ಅಷ್ಟರಮಟ್ಟಿಗೆ ಅಡುಗೆ ಗೊತ್ತು.

ಕಾಲೇಜಿಗೆ ಹೋಗುತ್ತಿದ್ದಾಗ ಒಮ್ಮೆ  ಅಮ್ಮನಿಂದ ಹೇಳಿಸಿಕೊಂಡು ಚಿಕನ್‌ ಬಿರಿಯಾನಿ ಮಾಡಿದ್ದೆ. ಅಮ್ಮ ಹೇಳಿದ ಹಾಗೆನೇ ಮಾಡಿದ್ದಲ್ವಾ? ರುಚಿ ಅಮ್ಮ ಮಾಡುವ ಹಾಗೇ ಇದೆ ಎಂದು ಮನೆಯವರೆಲ್ಲರೂ ಹೊಗಳಿದ್ದರು. ಆದ್ರೂ ಅಮ್ಮನ ಕೈರುಚಿನೇ ಬೇರೆ.

ADVERTISEMENT

ನಾನು ಡಯೆಟ್‌ ಅಂತ ತೀರಾ ತಲೆಕೆಡಿಸಿಕೊಳ್ಳಲ್ಲ. ಇಷ್ಟ ಆಯ್ತು ಅಂತಾ ಅಂದ್ರೆ ಎಲ್ಲಾ ಬಗೆಯ ಆಹಾರವನ್ನು ತಿನ್ನುತ್ತೇನೆ. ಅಮ್ಮ ಮಾಡುವ ಅಡುಗೆ ಅಂದ್ರೆ ನನಗೆ ಭಾರಿ ಇಷ್ಟ. ಅದಕ್ಕೆ ತುಪ್ಪ, ಬೆಣ್ಣೆ ಎಷ್ಟು ಹಾಕಿದ್ರೂ ನಾನು ಡಯೆಟ್, ತೂಕ ಹೆಚ್ಚಾಗುತ್ತದೆ ಎಂದು ಏನೂ ಯೋಚಿಸುವುದೇ ಇಲ್ಲ.

ಮನೆಯಡುಗೆಯ ರುಚಿಯೇ ಅಂತಹದು. ಹೋಟೆಲ್‌ ಊಟ ನಾನು ತಿನ್ನುವುದೇ ಇಲ್ಲ. ಶೂಟಿಂಗ್‌ನಲ್ಲಿ ಅನಿವಾರ್ಯವಿದ್ದಾಗ ಅಷ್ಟೇ ನಾನು ಹೋಟೆಲ್‌ ಊಟ ಮಾಡ್ತೀನಿ. ಇಲ್ಲಾಂದ್ರೆ ನಾನು ಹೊರಗೆ ತಿನ್ನುವುದಿಲ್ಲ.

ನನಗೆ ಸಸ್ಯಾಹಾರ, ಮಾಂಸಾಹಾರ ಎರಡೂ ಇಷ್ಟ. ಚಿಕನ್‌, ಮೀನಿನಲ್ಲಿ ಮಾಡುವ ಗ್ರೇವಿ, ಅದಕ್ಕೆ ಅಕ್ಕಿರೊಟ್ಟಿ ಕಾಂಬಿನೇಷನ್‌. ಚಪಾತಿ ಕಂಡರೇನೇ ನನಗೆ ಆಗಲ್ಲ. ದೋಸೆ, ಇಡ್ಲಿ, ಪೂರಿ ಎಲ್ಲಾ ಇಷ್ಟ. ಇದಕ್ಕೆ ಸಾಂಬಾರು ಅಥವಾ ಸಾಗು ಇರಲೇಬೇಕು. ನನಗೆ ಚಟ್ನಿಯಲ್ಲಿ ತಿನ್ನೋಕೆ ಇಷ್ಟ ಆಗಲ್ಲ.

ಅಡುಗೆ ವಿಷಯಕ್ಕೆ ನಾನು ಸ್ವಲ್ಪ ಸೋಂಬೇರಿ. ಅಡುಗೆ ಬಗ್ಗೆ ಗೊತ್ತಿದೆ. ಆದ್ರೆ ಅದನ್ನು ಮಾಡೋಕೆ ತುಂಬ ಸಮಯ ಬೇಕಾಗುತ್ತದೆ.

ನನ್ನ ವೃತ್ತಿಯಲ್ಲಿಯೂ ಚಿತ್ರೀಕರಣ ಯಾವಾಗಿರುತ್ತದೋ ಆವಾಗ ನಾನು ಹೊರಡಬೇಕು. ಹಾಗಾಗಿ ನನ್ನನ್ನು ಮದುವೆಯಾಗುವ ಹುಡುಗನಿಗೆ ಅಡುಗೆ ಬರಲೇಬೇಕು.

ಹುಡುಗ ಪ್ರಾಮಾಣಿಕ, ನಿಷ್ಠಾವಂತ, ಸತ್ಯವಂತ ಆಗಿರುವುದರ ಜೊತೆಗೆ ಆತನಿಗೆ ಅಡುಗೆಯೂ ಗೊತ್ತಿರಬೇಕು. ತಿಂಗಳಲ್ಲಿ ಒಮ್ಮೆಯಾದರೂ ಆತ ನನಗೆ ವಿಶೇಷ ಅಡುಗೆ ಮಾಡಿ ಬಡಿಸುತ್ತಿರಬೇಕು ಎಂಬ ಆಸೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.