ADVERTISEMENT

ಅವಲಕ್ಕಿಯ ಬಗೆಬಗೆ ಸವಿರುಚಿ

​ಪ್ರಜಾವಾಣಿ ವಾರ್ತೆ
Published 7 ಮೇ 2017, 19:30 IST
Last Updated 7 ಮೇ 2017, 19:30 IST
ಅವಲಕ್ಕಿಯ ಬಗೆಬಗೆ ಸವಿರುಚಿ
ಅವಲಕ್ಕಿಯ ಬಗೆಬಗೆ ಸವಿರುಚಿ   

ಅವಲಕ್ಕಿ ಚಕ್ಕುಲಿ
ಬೇಕಾಗುವ ಸಾಮಗ್ರಿಗಳು:
1 ಲೋಟ ಗಟ್ಟಿ ಅವಲಕ್ಕಿ, 4 ಚಮಚ ಮೊಸರು, ಸ್ವಲ್ಪ ಅಕ್ಕಿ ಹಿಟ್ಟು, 1 ಚಮಚ ಜೀರಿಗೆ, 1 ಚಮಚ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ: ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ತೊಳೆದು, 4 ಚಮಚ ಮೊಸರು ಹಾಗೂ ಉಪ್ಪು ಸೇರಿಸಿ ಕಲಸಿ ಅರ್ಧ ಗಂಟೆಯವರೆಗೆ ನೆನೆಸಬೇಕು. ಅರ್ಧ ಗಂಟೆಯ ನಂತರ ಮಿಕ್ಸಿಯಲ್ಲಿ ಅವಲಕ್ಕಿಯನ್ನು ನುಣ್ಣಗೆ ರುಬ್ಬಬೇಕು. ರುಬ್ಬಿದ ಅವಲಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೇಕಾಗುವಷ್ಟು ಅಕ್ಕಿಹಿಟ್ಟನ್ನು ಹಾಕಿ ಕಲಸಬೇಕು. ಜೀರಿಗೆ ಹಾಗೂ ಎಳ್ಳು ಸೇರಿಸಿ ಕಲಸಿ ಚಕ್ಕುಲಿ ಒರಳಲ್ಲಿ ಹಾಕಿ ಒತ್ತಿ, ಕಾದ ಎಣ್ಣೆಯಲ್ಲಿ ಕರಿದರೆ ಗರಿ ಗರಿಯಾದ ಅವಲಕ್ಕಿ ಚಕ್ಕುಲಿ ಸವಿಯಲು ಸಿದ್ಧ. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 15 ದಿನಗಳವರೆಗೆ ಗರಿ ಗರಿಯಾಗಿ ಇರುತ್ತದೆ.

*


ಮೊಸರು ಅವಲಕ್ಕಿ
ಬೇಕಾಗುವ ಸಾಮಗ್ರಿಗಳು: 
1 ಲೋಟ ಗಟ್ಟಿ ಅವಲಕ್ಕಿ, 2 ಹಸಿಮೆಣಸು, 1 ಲೋಟ ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕ್ಯಾರೆಟ್ ತುರಿ, ಸ್ವಲ್ಪ ಕರಿಬೇವು ಸ್ವಲ್ಪ ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಗೂ ಸ್ವಲ್ಪ ಹಿಂಗು.

ADVERTISEMENT

ಮಾಡುವ ವಿಧಾನ: ಅವಲಕ್ಕಿಯನ್ನು ಅರ್ಧ ಗಂಟೆಯವರೆಗೆ ನೆನೆಯಿಸಿ. ಚೆನ್ನಾಗಿ ನೆನೆದ ಅವಲಕ್ಕಿಗೆ ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ತುರಿದ ಕ್ಯಾರೆಟ್ ಹಾಕಿ ಸೇರಿಸಿ ಕಲಸಿ ಮೇಲಿಂದ ಹಿಂಗಿನ ಒಗ್ಗರಣೆ ಹಾಕಿದರೆ ಮೊಸರು ಅವಲಕ್ಕಿ ಸವಿಯಲು ಸಿದ್ಧ. ಬೇಸಿಗೆಯಲ್ಲಿ ಫ್ರಿಜ್‌ನಲ್ಲಿ ಇಟ್ಟು ಸವಿದರೆ ಬಲು ರುಚಿ. ದಿಢೀರಾಗಿ ತಯಾರಿಸಬೇಕಾದಲ್ಲಿ ತೆಳು ಅವಲಕ್ಕಿಯಲ್ಲಿ ಮಾಡಬಹುದು.

*


ಗೊಜ್ಜವಲಕ್ಕಿ
ಬೇಕಾಗುವ ಸಾಮಗ್ರಿಗಳು:
1 ಲೋಟ ಗಟ್ಟಿ ಅವಲಕ್ಕಿ, ಸ್ವಲ್ಪ ಹುಣಸೆ ರಸ, 2 ಚಮಚ ಸಾರಿನಪುಡಿ, 1 ಚಮಚ ಬೆಲ್ಲ, ಸ್ವಲ್ಪ ಕರಿಬೇವು, ಸ್ವಲ್ಪ ಕೊಬ್ಬರಿ ತುರಿ, ಒಗ್ಗರಣೆಗೆ 3 ಚಮಚ ಎಣ್ಣೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಹಾಗೂ ಶೇಂಗಾ.

ಮಾಡುವ ವಿಧಾನ: ಮೊದಲು ಅವಲಕ್ಕಿಯನ್ನು ಮಿಕ್ಸಿಗೆ ಹಾಕಿಕೊಂಡು ರವೆ ತರಹ ಪುಡಿ ಮಾಡಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಹುಣಸೆ ರಸ ಸೇರಿಸಿ ಮುಕ್ಕಾಲು ಲೋಟ ನೀರು ಹಾಕಿ ಅದರಲ್ಲಿ ಸಾರಿನ ಪುಡಿ, ಉಪ್ಪು, ಬೆಲ್ಲಹಾಕಿ ಕಲಸಬೇಕು. ಆ ನೀರಿನಲ್ಲಿ ಪುಡಿ ಮಾಡಿದ ಅವಲಕ್ಕಿಯನ್ನು ನೆನೆಸಿ ಇಡಬೇಕು.

20 ನಿಮಿಷದ ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಶೇಂಗಾ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ನಂತರ ಅದಕ್ಕೆ ನೆನೆಸಿದ ಅವಲಕ್ಕಿಯನ್ನು ಸರಿಯಾಗಿ ಕಲಸಿ ಸೇರಿಸಿ ಮೇಲಿಂದ ಕೊಬ್ಬರಿ ತುರಿ ಸೇರಿಸಿದರೆ ರುಚಿಕರವಾದ ಗೊಜ್ಜವಲಕ್ಕಿ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.