ADVERTISEMENT

ಕಬಾಬ್‌, ಕೋಫ್ತಾ ಉತ್ಸವ

ಹೇಮಾ ವೆಂಕಟ್
Published 30 ಸೆಪ್ಟೆಂಬರ್ 2016, 19:30 IST
Last Updated 30 ಸೆಪ್ಟೆಂಬರ್ 2016, 19:30 IST
ಕಬಾಬ್‌, ಕೋಫ್ತಾ ಉತ್ಸವ
ಕಬಾಬ್‌, ಕೋಫ್ತಾ ಉತ್ಸವ   

ಮೈ ಫಾರ್ಚೂನ್‌ ಹೋಟೆಲ್‌ನ ಮೈ ಇಂಡಿಯನ್‌ ಒವನ್‌ನಲ್ಲಿ ಅಕ್ಟೋಬರ್‌ 2ರವರೆಗೆ ‘ಕಬಾಬ್‌ ಮತ್ತು ಕೋಫ್ತಾ’ ಉತ್ಸವ ನಡೆಯಲಿದೆ.
ಉತ್ಸವದಲ್ಲಿ ಕಬಾಬ್‌ ಪ್ರಿಯರಿಗೆ ರುಚಿಕರವಾದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಕಬಾಬ್‌ ಸವಿಯುವ ಅವಕಾಶ ಕಲ್ಪಿಸಲಾಗಿದೆ.

ಕಬಾಬ್‌ ಎಂದ ತಕ್ಷಣ ಚಿಕನ್ ಕಬಾಬ್‌, ಫಿಶ್‌ ಕಬಾಬ್‌ ನೆನಪಿಗೆ ಬರುತ್ತದೆ. ಆದರೆ ಮೈ ಇಂಡಿಯನ್‌ ಒವನ್‌ನ ಎಕ್ಸಿಕ್ಯುಟಿವ್‌ ಶೆಫ್‌ ಸಚಿನ್‌ ತಲ್ವಾರ್‌ ಕಾಳುಗಳಿಂದ ಕಬಾಬ್‌ ತಯಾರಿಸಿ ಸಸ್ಯಾಹಾರಿಗಳಿಗೂ ಕಬಾಬ್‌ ರುಚಿ ಸವಿಯುವ ಅವಕಾಶ ಕಲ್ಪಿಸಿದ್ದಾರೆ. ‘ಹರೇ ಮೂಂಗ್‌ ಕಿ ಗಲೋಟಿ’ ಇಂಥ ಪ್ರಯತ್ನಗಳಲ್ಲಿ ಒಂದು. ಇದು ಮೊಳಕೆ ಕಾಳಿನ ಖಾದ್ಯ.

ಬಾಳೆಕಾಯಿಯಿಂದ ತಯಾರಿಸಿದ ‘ಬನಾನ ರಾ ಫ್ರೈ (ಸಬ್ಜ್‌ ಗುಲಾರ್‌)’ ನೋಡುವುದಕ್ಕೂ ಆಕರ್ಷಕವಾಗಿದೆ. ರುಚಿಯೂ ವಿಭಿನ್ನವಾಗಿದೆ.
ಬಾಳೆಕಾಯಿಯನ್ನು ಬೇಯಿಸಿ  ಸ್ಮ್ಯಾಷ್‌ ಮಾಡಿ ದುಂಡಗೆ ಉಂಡೆಕಟ್ಟಿ, ಗಸಗಸೆಯ ಕವರ್‌ ಮಾಡಿ ಕರಿದು ತಯಾರಿಸಿದ ರಾ ಬನಾನ ಫ್ರೈ ಸಚಿನ್‌ ತಲ್ವಾರ್‌ ಅವರ ಸ್ವಂತ ರೆಸಿಪಿಯಂತೆ. ಉಂಡೆಯ ಮಧ್ಯದಲ್ಲಿ ಇಟ್ಟಿರುವ ಕಿತ್ತಳೆ ಎಸಳುಗಳು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಈ ಉತ್ಸವದಲ್ಲಿ ಸಾಂಪ್ರದಾಯಿಕ ಅಡುಗೆಗಳಿಗೆ ಆಧುನಿಕ ಫ್ಲೇವರ್‌ ನೀಡುವ  ಪ್ರಯತ್ನ ಮಾಡಲಾಗಿದೆ ಎಂಬುದಕ್ಕೆ ಮಾವಿನ ಕಾಯಿಯ ಜ್ಯೂಸ್‌ ಸಾಕ್ಷಿಯಾಗಿತ್ತು. ಮಾವಿನ ಕಾಯಿಯ ರಸ ತೆಗೆದು ಅದಕ್ಕೆ ಲಿಚಿ ಹಣ್ಣಿನ ರಸ ಮತ್ತು ಸೋಡಾ ಬೆರೆಸಿದ ಗ್ರೀನ್‌ ಮ್ಯಾಂಗೋ ಜ್ಯೂಸ್‌ ರುಚಿಯಲ್ಲಿ ಬೇರೆಲ್ಲ ಜ್ಯೂಸ್‌ಗಳನ್ನು ಹಿಂದಿಕ್ಕುವಂತಿದೆ.

ಚಾರ್‌ಮಿನಾರ್‌ ಕಿ ಸೀಕ್,  ಚಿಕನ್‌ ಬ್ಯಾಂಬು ಫಿಶ್‌, ಆತಿಶ್‌ ಇ ಸೀಕ್‌ ಮುಂತಾದ ಕಬಾಬ್‌ಗಳು ತಯಾರಿಸಿದ ರೀತಿ ಮತ್ತು ರುಚಿಯಿಂದಲೂ ಭಿನ್ನವಾಗಿದೆ. ಮಾಂಸವನ್ನು  ರುಬ್ಬಿ, ಮಸಾಲೆ ಬೆರೆಸಿ  ಮಾಡಿದ ಕಬಾಬ್‌ ಉತ್ಸವದ ಮತ್ತೊಂದು ವಿಶೇಷ.

‘ಕಬಾಬ್‌ ತಿನ್ನುವಾಗ ಹಲ್ಲು ನೋಯಬಾರದು. ಬಾಯಲ್ಲಿಟ್ಟರೆ ಹಾಗೇ ಕರಗಬೇಕು. ಮಕ್ಕಳಿಂದ ಹಿಡಿದು ಮುದುಕರವರೆಗೂ  ಸುಲಭವಾಗಿ ಕಬಾಬ್‌ ತಿನ್ನುವಂತಿರಬೇಕು. ಈ ಉದ್ದೇಶದಿಂದ ಸೀಕ್‌ ಕಬಾಬ್‌ಗಳನ್ನು ತಯಾರಿಸಲಾಗಿದೆ’ ಎಂದು ವಿವರಣೆ ನೀಡುತ್ತಾರೆ ಬಾಣಸಿಗ ಸಚಿನ್‌. ‘ಇಲ್ಲಿನ ಮುಖ್ಯ ಬಾಣಸಿಗ ಹನೀಫ್‌. ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಬಂದವರು. ಅಡುಗೆ ಮಾಡುತ್ತಲೇ ಅವರು ಪಾಕ ಪ್ರವೀಣರೆನಿಸಿದವರು.   ಅಡುಗೆ ಮಾಡುವುದರಲ್ಲಿ ಅವರಿಗೆ ಇಪ್ಪತ್ತು ವರ್ಷದ ಅನುಭವವಿದೆ. ಆದರೆ, ತನ್ನ ಅಡುಗೆಯ  ಬಗ್ಗೆ ಮಾತನಾಡುವುದಕ್ಕೆ ಅವರು ಇಷ್ಟ ಪಡುವುದಿಲ್ಲ’ ಎಂದು ಅಲ್ಲಿನ  ಮ್ಯಾನೇಜರ್ ಹೇಳುತ್ತಾರೆ.

ಬಗೆ ಬಗೆ ಕೋಫ್ತಾ
ಉತ್ಸವದ ಮತ್ತೊಂದು ವಿಶೇಷ ಖಾದ್ಯ ಕೋಫ್ತಾ. ನದ್ರು ಕೋಫ್ತಾ, ಪಾಲಕ್‌ ಕೋಫ್ತಾ, ಮಹಿ ಕೋಫ್ತಾ, ಮುರ್ಗ್‌ ಫಾಲ್ದರಿ ಕೋಫ್ತಾ ಮತ್ತು ಫಿಷ್‌ ಕೋಫ್ತಾ. ಎಲ್ಲ ಕೋಫ್ತಾಗಳಲ್ಲೂ ಮೈ ಇಂಡಿಯನ್‌ ಒವನ್‌ನ  ಟಚ್‌ ಇದೆ. 

ಗೋಡಂಬಿ, ಬಾದಾಮಿ ಮತ್ತು ಮೊಸರು, ಕಡಿಮೆ ಮಸಾಲೆ ಬಳಸಿ ತಯಾರಿಸಿದ ಗ್ರೇವಿ ಇಲ್ಲಿನ ವಿಶೇಷ.    ರೋಟಿ, ನಾನ್‌, ಚಪಾತಿ ಜೊತೆ ತಿನ್ನಲು ರುಚಿಯಾಗಿದೆ. ಡಯೆಟ್‌ ಪ್ರಿಯರಿಗೆ ಕೋಫ್ತಾ ಸೂಕ್ತ ಆಯ್ಕೆ. ಮಕ್ಕಳಿಗೂ ಹೆಚ್ಚು ಇಷ್ಟವಾಗಲಿದೆ.

ರೆಸ್ಟೊರೆಂಟ್‌: ಮೈ ಫಾರ್ಚೂನ್‌ ಹೋಟೆಲ್‌
ವಿಶೇಷತೆ: ‘ಕಬಾಬ್‌ ಮತ್ತು ಕೋಫ್ತಾ’ ಉತ್ಸವ
ಸಮಯ: ಮಧ್ಯಾಹ್ನದ 12ರಿಂದ 3.30,
ರಾತ್ರಿ  7ರಿಂದ 11.30.

ಕೊನೆಯ ದಿನ: ಅ. 2
ಸ್ಥಳ: ಮೈ ಫಾರ್ಚೂನ್‌, ನಂ. 46, ರಿಚ್ಮಂಡ್‌ ರಸ್ತೆ.
ಸ್ಥಳ ಕಾಯ್ದಿರಿಸಲು: 080–25001700

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.