ADVERTISEMENT

ಬಾಡೂಟಪ್ರಿಯರಿಗೆ ಸಿಹಿ ಸುದ್ದಿ

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಫೈನ್‌ ಡೈನಿಂಗ್‌ ರೆಸ್ಟೋರೆಂಟ್‌ಗಳಲ್ಲಿ ಮುಖ್ಯವಾಗಿ ಕೇಳಿಬರುವ ಹೆಸರು ‘ಪ್ಯಾಲೆಟ್‌’. ಬಾಡೂಟಪ್ರಿಯರ ಜಿಹ್ವಾ ಚಾಪಲ್ಯ ತಣಿಸುವ ದಂಡಿ ದಂಡಿ ಆಯ್ಕೆಗಳು ಇಲ್ಲಿವೆ. ಈ ರೆಸ್ಟೋರೆಂಟ್‌ನಲ್ಲಿ ಮುಖ್ಯವಾಗಿ ಈಸ್ಟ್‌ ಏಷ್ಯಾ, ಚೈನೀಸ್‌, ಜಪಾನ್‌, ಥಾಯ್‌, ಕೊರಿಯಾ ಮತ್ತು ದಕ್ಷಿಣ ಭಾರತದ ವೈವಿಧ್ಯಮಯ ಖಾದ್ಯಗಳು ದೊರೆಯುತ್ತವೆ.

ಸಮಕಾಲೀನ ಒಳಾಂಗಣ ವಿನ್ಯಾಸ ಮತ್ತು ಝಗಮಗಿಸುವ ವಿದ್ಯುದ್ದೀಪಗಳ ಪ್ರಭೆಯಿಂದ ಈ ರೆಸ್ಟೋರೆಂಟ್‌ ಗಮನ ಸೆಳೆಯುತ್ತದೆ. ಈ ರೆಸ್ಟೋರೆಂಟ್‌ನ ಊಟದ ಟೇಬಲ್ ಮತ್ತು ಕುರ್ಚಿಗಳ ಜೋಡಣೆ ಗುಂಪಾಗಿ ಕುಳಿತು ಊಟ ಮಾಡಲು ಹೇಳಿಮಾಡಿಸಿದಂತಿದೆ. ಇಲ್ಲಿನ ಕುರ್ಚಿ ಮತ್ತು ಟೇಬಲ್‌ಗಳಿಗೆ ಕೆಫೆ ಶೈಲಿಯ ಮಾಡರ್ನ್‌ ಸ್ಪರ್ಶವಿದೆ. ಈ ರೆಸ್ಟೋರೆಂಟ್‌ನ ಯಾವುದೇ ಭಾಗದಲ್ಲಿ ಕುಳಿತರೂ  ಪ್ಯಾಲೆಟ್‌ ಕಿಚನ್‌ನಲ್ಲಿ ಬಾಣಸಿಗರ ಅಡುಗೆ ಆರ್ಭಟವನ್ನೂ ಕಣ್ತುಂಬಿಕೊಳ್ಳುವ ಅವಕಾಶ ಗ್ರಾಹಕರಿಗೆ ಸಿಗುತ್ತದೆ. 

ಸೆಲೆಬ್ರಿಟಿ ಶೆಫ್‌ ಉದ್ದೀಪನ್‌ ಚಕ್ರವರ್ತಿ ಅವರ ರುಚಿಯ ಕೈಚಳದಲ್ಲಿ ತಯಾರಾಗುವ ಇಲ್ಲಿನ ಖಾದ್ಯಗಳೆಲ್ಲವೂ ಆಯಾ ಪ್ರದೇಶದ ಅಪ್ಪಟ ಸೊಗಡಿನಲ್ಲೇ ದೊರೆಯುತ್ತವೆ. ಓರಿಯೆಂಟಲ್‌ ಖಾದ್ಯಗಳ ಜೊತೆಗೆ ಸ್ವಲ್ಪ ಕಾಂಟಿನೆಂಟಲ್‌ ಮತ್ತು ಮೆಕ್ಸಿಕನ್‌ ತಿನಿಸುಗಳು ಇಲ್ಲಿ ಲಭಿಸುತ್ತವೆ.
‘ಪ್ಯಾಲೆಟ್‌ ಮಲ್ಟಿ ಕ್ವಿಸಿನ್‌ ರೆಸ್ಟೋರೆಂಟ್‌. ನಮ್ಮಲ್ಲಿ ವಾರದ ಏಳು ದಿನವೂ ಲಂಚ್‌ ಬಫೆ ಲಭ್ಯವಿದೆ. ವಾರಾಂತ್ಯದಲ್ಲಿ ಡಿನ್ನರ್‌ ಬಫೆ ದೊರೆಯುತ್ತದೆ. ಪ್ರತಿ ಭಾನುವಾರ ಸಂಡೇ ಬ್ರಂಚ್‌ ಇರುತ್ತದೆ.

ನಮ್ಮ ರೆಸ್ಟೋರೆಂಟ್‌ನ ಮೆನುವಿನಲ್ಲಿ ಓರಿಯೆಂಟಲ್‌ ಖಾದ್ಯಗಳಿಗೆ ಸಿಂಹಪಾಲಿದೆ. ಅದರ ಜೊತೆಗೆ ದಕ್ಷಿಣ ಭಾರತೀಯ ಖಾದ್ಯಗಳನ್ನು ಸೇರಿದ್ದೇವೆ. ನಮ್ಮ ರೆಸ್ಟೋರೆಂಟ್‌ಗೆ ಸ್ಥಳೀಯ ಗ್ರಾಹಕರ ಜೊತೆಗೆ ವಿದೇಶಿಗರೂ ಇದ್ದಾರೆ. ಹಾಗಾಗಿ, ನಮ್ಮಲ್ಲಿಗೆ ಬರುವ ಗ್ರಾಹಕರ ಆಯ್ಕೆಯ ಬಹುತೇಕ ಖಾದ್ಯಗಳನ್ನು ನಾವಿಲ್ಲಿ ಒದಗಿಸಿದ್ದೇವೆ. ಉತ್ತರ ಮತ್ತು ದಕ್ಷಿಣ ಭಾರತ, ಚೈನೀಸ್‌ ಮತ್ತು ಸುಶಿ ಖಾದ್ಯಗಳ ವಿಪುಲ ಆಯ್ಕೆ ನಮ್ಮಲ್ಲಿದೆ.

ವಾರದ ದಿನಗಳಲ್ಲಿ ಲಂಚ್‌ಗೆ ಗ್ರಾಹಕರು ಜಾಸ್ತಿ ಇರುತ್ತಾರೆ. ಪೀಣ್ಯ ಇಂಡಸ್ಟ್ರಿ ಭಾಗದಿಂದ ಸಾಕಷ್ಟು ಗ್ರಾಹಕರು  ಬರುತ್ತಾರೆ. ಸಂಡೇ ಬ್ರಂಚ್‌ಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಪ್ಯಾಲೆಟ್‌ ರೆಸ್ಟೋರೆಂಟ್‌ನಲ್ಲಿ ಗ್ರಾಹಕರ ಆಸೆಯ ರುಚಿ ಮೊಗ್ಗುಗಳನ್ನು ತಣಿಸುವಷ್ಟು ವಿಶಾಲವಾದ ಡೆಸರ್ಟ್ಸ್‌ ಮತ್ತು ಸಲಾಡ್‌ಗಳನ್ನು ಇರಿಸಿದ್ದೇವೆ. ಇದು ನಮ್ಮ ರೆಸ್ಟೋರೆಂಟ್‌ನ ಮತ್ತೊಂದು ವಿಶೇಷ.

ಬಫೆ ಜೊತೆಗೆ ಅ ಲಾ ಕಾರ್ಟ್‌ ಮೆನು ಕೂಡ ಲಭ್ಯವಿದೆ. ಇದರಲ್ಲೂ ಮಲ್ಟಿ ಕ್ವಿಸಿನ್‌ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದ್ದೇವೆ. ಓರಿಯೆಂಟಲ್‌ ಖಾದ್ಯಗಳ ಜೊತೆಗೆ ಗ್ರಿಲ್ಡ್‌ ತಿನಿಸುಗಳು, ಪಾಸ್ತಾ, ಪಿಜ್ಜಾ ಕೂಡ ದೊರೆಯುತ್ತದೆ. ಪ್ಯಾಲೆಟ್‌ ರೆಸ್ಟೋರೆಂಟ್‌ 24/7 ತೆರೆದಿರುತ್ತದೆ. ಚಿಕನ್‌ ಕಾಸರಗೋಡು ನಮ್ಮ ರೆಸ್ಟೋರೆಂಟ್‌ನ ಸಿಗ್ನೇಚರ್‌ ತಿನಿಸು. ಈ ಖಾದ್ಯಕ್ಕೆ ನಮ್ಮ ಗ್ರಾಹಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ಇದನ್ನು ಸವಿಯುವ ಸಲುವಾಗಿಯೇ ಅನೇಕರು ನಮ್ಮ ರೆಸ್ಟೋರೆಂಟ್‌ ಬರುತ್ತಾರೆ’ ಎನ್ನುತ್ತಾರೆ ಪ್ಯಾಲೆಟ್‌ನ ಮುಖ್ಯ ಬಾಣಸಿಗ ಉದ್ದೀಪನ್‌ ಚಕ್ರವರ್ತಿ.
*
ಕೈಯಲ್ಲೇ ತಿನ್ನಿ...
ಕಳೆದ ಹದಿನೈದು ವರ್ಷಗಳಿಂದಲೂ ತಾಜ್‌ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿರುವ ಉದ್ದೀಪನ್‌ ಚಕ್ರವರ್ತಿ ಬಾಣಸಿಗರಾಗಿ ದೇಶದಾದ್ಯಂತ ಜನಪ್ರಿಯತೆ ಪಡೆದವರು. ವೃತ್ತಿಯ ಬಗ್ಗೆ ಸಿಕ್ಕಾಪಟ್ಟೆ ಪ್ಯಾಷನ್‌ ಬೆಳೆಸಿಕೊಂಡಿರುವ ಇವರು ಆಹಾರೋದ್ಯಮದಲ್ಲಿ ಹೊಸತನ್ನು ಅನ್ವೇಷಣೆ ಮಾಡುತ್ತ ಖುಷಿ ಕಾಣಲು ಬಯಸುತ್ತಾರೆ. ‘ಫೋರ್ಕ್‌, ಸ್ಪೂನ್ ಬದಿಗಿಟ್ಟು ಕೈಯಲ್ಲಿ ಊಟ ಮಾಡಿದಾಗಲೇ ನಮ್ಮ ಲೋಕಲ್‌ ಫುಡ್‌ನ ಕಿಕ್‌ ಎಂತಹದ್ದು ಎಂದು ಗೊತ್ತಾಗುತ್ತದೆ’ ಎನ್ನುವ ಉದ್ದೀಪನ್‌ ಅವರಿಗೆ ಈವರೆಗೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಸರಳತೆ ಮತ್ತು ಅದ್ಭುತ ಕೈರುಚಿಯ ಚಮತ್ಕಾರ ತೋರುವ ಉದ್ದೀಪನ್‌ ಅವರಿಗೆ ತಾಜ್‌ ಗ್ರೂಪ್‌ನಲ್ಲಿ ಸೆಲಬ್ರಿಟಿ ಶೆಫ್‌ನ ಪಟ್ಟವಿದೆ.
*
ರೆಸ್ಟೋರೆಂಟ್‌: ಪ್ಯಾಲೆಟ್‌
ಶೈಲಿ: ಮಲ್ಟಿ ಕ್ವಿಸಿನ್‌

ಸಿಗ್ನೇಚರ್‌ ತಿನಿಸುಗಳು: ಚಿಕನ್‌ ಕಾಸರಗೋಡು, ಟೆಂಪುರ ಫ್ರೈಡ್‌ ಪ್ರಾನ್ಸ್
ಸಮಯ: 24/7
ಇಬ್ಬರಿಗೆ ತಗಲುವ ವೆಚ್ಚ: ₨1500, ಬಫೆ ಬೆಲೆ ₨1200
ಟೇಬಲ್‌ ಕಾಯ್ದಿರಿಸಲು: 080 4965 3108

ಸ್ಥಳ: ವಿವಾಂತಾ ಬೈ ತಾಜ್‌ ಯಶವಂತಪುರ, 2275, 
ತುಮಕೂರು ರಸ್ತೆ, ಯಶವಂತಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT