ADVERTISEMENT

ಒತ್ತಡವೇ ನಿತ್ಯದ ಸಂತೋಷ ಆದಾಗ!

ಸುಮಲತಾ ಎನ್, ಪದ್ಮನಾಭ ಭಟ್ಟ
Published 29 ಆಗಸ್ಟ್ 2017, 19:30 IST
Last Updated 29 ಆಗಸ್ಟ್ 2017, 19:30 IST
ಒತ್ತಡವೇ ನಿತ್ಯದ ಸಂತೋಷ ಆದಾಗ!
ಒತ್ತಡವೇ ನಿತ್ಯದ ಸಂತೋಷ ಆದಾಗ!   

ನಗರದ ಬದುಕಿನಲ್ಲಿ, ಅದರಲ್ಲೂ ಒಂದು ಕಾರ್ಪೊರೇಟ್‌ ವ್ಯವಸ್ಥೆಯಲ್ಲಿ ಒತ್ತಡ ಎನ್ನುವುದು ನೈಸರ್ಗಿಕ ಪ್ರಕ್ರಿಯೆಯೇ ಆಗಿಬಿಟ್ಟಿದೆ. ಜೀವನವನ್ನೂ ‘ಕಾರ್ಪೊರೇಟ್ ಸ್ಟ್ರಕ್ಚರ್’ ಆವರಿಸಿದೆ.

ಒತ್ತಡದಿಂದ ತಪ್ಪಿಸಿಕೊಂಡು ಬದುಕುತ್ತೇವೆ ಎನ್ನುವುದು ಸಾಧ್ಯವೇ ಇಲ್ಲ. ನಮ್ಮ ಬದುಕಿನ ರೀತಿಯೇ ಹಾಗಿದೆ. ಆದ್ದರಿಂದ ನಮ್ಮ ಮುಂದಿರುವ ಒಂದೇ ಆಯ್ಕೆ ಎಂದರೆ ಒತ್ತಡದೊಂದಿಗೇ ಕೆಲಸ ನಿರ್ವಹಿಸುವುದನ್ನು ಕಲಿಯುವುದು.

ಒತ್ತಡ ಬರುವ ಮುಖ್ಯ ಕಾರಣ, ನಮ್ಮ ದಿನದ ಸಮಯದ ಹಂಚಿಕೆಯಲ್ಲಿ ಏರುಪೇರಾಗುವುದು. ಆಫೀಸಿಗೆ ಸರಿಯಾದ ಸಮಯಕ್ಕೆ ಸೇರುವ ಪುಟ್ಟ ವಿಷಯದಿಂದ ಹಿಡಿದು ಹಣದ ವ್ಯವಸ್ಥೆ, ಬದುಕುವ ವ್ಯವಸ್ಥೆ ಹೀಗೆ ಬಹುದೊಡ್ಡ ಸಂಗತಿಗಳವರೆಗೂ ಗೊತ್ತಿಲ್ಲದೇ ಒತ್ತಡ ಸೇರಿಕೊಂಡು ಬಿಟ್ಟಿರುತ್ತದೆ. ಹೀಗಿರಲು, ಅದರಿಂದ ದೂರವುಳಿದು ಬದುಕುತ್ತೇವೆ ಅನ್ನುವುದು ಸುಳ್ಳೇ ಅಲ್ಲವೇ?

ADVERTISEMENT

ಕೆಲವು ವರ್ಷಗಳ ಹಿಂದೆ ಕೆಲಸದ ಮಿತಿ ಆರು ಗಂಟೆ ಇತ್ತು. ಇರುವ ಸಮಯದಲ್ಲಿ ಸರಿಯಾಗಿ ಯೋಜಿಸಿ ಕೆಲಸ ಮಾಡುತ್ತಿದ್ದೆವು. ನಮ್ಮದೇ ಸಮಯವೂ ಸಿಗುತ್ತಿತ್ತು. ಗುಣಮಟ್ಟ ವೃದ್ಧಿಸಿಕೊಳ್ಳಲೂ ಸಾಧ್ಯವಿತ್ತು. ಕಚೇರಿಯಲ್ಲಿ ವಿಶ್ವಾಸಪೂರ್ವಕ ವಾತಾವರಣ ಇರುತ್ತಿತ್ತು. ಆದರೆ ಈಗ ಬೆಳಿಗ್ಗೆಯಿಂದ ರಾತ್ರಿವರೆಗೂ ದುಡಿತ. ಪ್ರತಿಯೊಂದರಲ್ಲೂ ‘ಕನ್‌ಸ್ಯೂಮರಿಸಂ’ ಇಣುಕಿದೆ. ಕೆಲಸದ ಹಂಚಿಕೆಯೇ ಭಾರ. ಇಂಥ ವಾತಾವರಣದಲ್ಲಿ ಕಚೇರಿಯಲ್ಲಿ ಕಷ್ಟಸುಖ ಹಂಚಿಕೊಳ್ಳುವುದಾದರೂ ಎಲ್ಲಿ? ಹಾಗಾಗಿ ಒತ್ತಡ ಅಲ್ಲಿ ಸಹಜವೇ.

ನಗರದಲ್ಲಂತೂ ಜೀವನವೇ ರೇಸ್; ಓಡುತ್ತಲೇ ಇರಬೇಕು. ಹಾಗೆ ಓಡುತ್ತಲೇ ಒಮ್ಮೆ ನಿಂತು ನೋಡುವಷ್ಟರಲ್ಲಿ ಕಾಲ ಸರಿದುಹೋಗಿರುತ್ತದೆ. ಕಾಲದ ಜೊತೆ ನಮ್ಮದೇ ಒಂದು ಬದುಕನ್ನು ಹೊಂದಿಸಿಕೊಳ್ಳಲು ಆಗುವುದೇ ಇಲ್ಲ. ಹಾಗಾಗಿ ಒತ್ತಡವನ್ನು ಈಗ ಬದುಕಿನಿಂದ ಬೇರೆಯಾಗಿ ನೋಡುವಂತೆಯೇ ಇಲ್ಲ. ಒತ್ತಡದ ಜೊತೆಗೇ ಬದುಕಬೇಕು. ಹಾಗೆ ಬದುಕುವುದು ಅನಿವಾರ್ಯ ಕೂಡ. ಒತ್ತಡದ ಬದುಕಿಗೆ ನಾವೂ ಒಗ್ಗಿಕೊಂಡಿದ್ದೇವೆ. ಉಸಿರಾಡಿದಷ್ಟೇ ಸಹಜವಾಗಿ ಒತ್ತಡವೂ ನಮ್ಮೊಳಗೆ ಸೇರಿಕೊಂಡಿರುತ್ತದೆ. ಹೀಗೆ ಒತ್ತಡದಲ್ಲಿ ಆರಾಮಾಗಿ ಉಸಿರಾಡುವುದನ್ನು ಕಲಿತವನು ಈ ರೇಸ್‌ನಲ್ಲಿ ಗೆಲ್ಲುತ್ತಾನೆ.

ಕಲಾವಿದನಾದವನಿಗೆ ಒತ್ತಡ ಎರಡು ರೀತಿ ಇರುತ್ತದೆ. ಒಂದು, ವೃತ್ತಿಯ ಒತ್ತಡ. ಒಬ್ಬ ಕಮರ್ಷಿಯಲ್ ಕಲಾವಿದನಿಗೆ ಸಮಯದ ಮಿತಿಯಲ್ಲಿ ಕೆಲಸ ನಡೆಯಬೇಕಾಗುತ್ತದೆ.

ಒಬ್ಬ ಕಥೆಗಾರ ಒಂದು ಕಥೆ ಬರೆಯಲು, ಅವನೊಳಗೆ ಕಥೆ ಹುಟ್ಟಿ, ಪದಗಳ ರೂಪದಲ್ಲಿ ಹೊರಗೆ ಬಂದು ಎಲ್ಲಾ ಹಂತಗಳನ್ನೂ ದಾಟಲು ತಿಂಗಳುಗಳೇ ಹಿಡಿದಿರುತ್ತವೆ. ಆದರೆ ಚಿತ್ರ ಬರೆಯಲು ಕೆಲವೇ ದಿನ ಇಲ್ಲವೇ ಗಂಟೆಗಳು ಉಳಿದಿರುತ್ತವೆ. ಆಗ ಕಲಾವಿದನಾಗಿ, ಲೇಖಕನ ಶ್ರಮಕ್ಕೆ ನ್ಯಾಯ ಕೊಡುವುದು ನನ್ನ ಜವಾಬ್ದಾರಿಯಾಗಿರುತ್ತದೆ. ಲೇಖಕರು ಕಟ್ಟಿಕೊಟ್ಟ ಇಮೇಜ್‌ಗೆ ನನ್ನ ಭಾಷೆಯಲ್ಲಿ, ಅಂದರೆ ಬಣ್ಣ, ರೇಖೆಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತೇನೆ ಎಂಬುದು ಸವಾಲಾಗುತ್ತದೆ. ಆ ಕಾಲಮಿತಿಯಲ್ಲಿ ಎಷ್ಟು ನ್ಯಾಯ ಕೊಡುತ್ತೇವೆ ಎಂಬುದು ಮೊದಲ ಒತ್ತಡದ ಕೆಲಸ.

ಈಗಿನ ಕೆಲವು ಚಿತ್ರಗಳನ್ನು ಗಮನಿಸಿದರೆ ಅವು ಒತ್ತಡದಲ್ಲಿ ಬರೆದಂಥ ಚಿತ್ರಗಳು ಎಂಬುದು ಸ್ಪಷ್ಟವಾಗಿ ಕಾಣುತ್ತವೆ. ಒಬ್ಬ ಕಲಾವಿದನಿಗೆ ಮನಸ್ಸು ಬಿಚ್ಚಿ ಬರೆಯುವುದೇ ಮುಖ್ಯವಲ್ಲವೇ?

ಇನ್ನೊಂದು, ಒಬ್ಬ ಕಲಾವಿದನಾಗಿ ನನ್ನನ್ನು ನಾನು ವ್ಯಾಖ್ಯಾನಿಸಿಕೊಳ್ಳುವ ಪರಿ. ಕಥೆಯನ್ನು ಗ್ರಹಿಸಿ, ಅದಕ್ಕೆ ಧಕ್ಕೆ ಬರದಂತೆ ನನ್ನ ಚಿತ್ರದ ಮೂಲಕ ನಿರೂಪಿಸುವುದು ಸವಾಲು. ದುಡ್ಡು ದುಡಿದು ಬದುಕುವ ರೀತಿ ಒಂದು ಒತ್ತಡವಾದರೆ, ನನಗಾಗಿ ಮಾಡಿಕೊಳ್ಳುವ ಕಲೆಯಲ್ಲಿನ ಒತ್ತಡ ಬೇರೆ.

ಕ್ಯಾನ್ವಾಸ್ ಮುಂದೆ ಕೂತರೆ ಬಿಡಿಸುತ್ತಿರುವ ಚಿತ್ರ ನಮ್ಮನ್ನು ಪರೀಕ್ಷಿಸುತ್ತಾ ಹೋಗುತ್ತಿರುತ್ತದೆ. ಕಲಾವಿದನ ಸಾಮರ್ಥ್ಯವನ್ನು ಪ್ರಶ್ನಿಸುತ್ತಾ ಹೋಗುತ್ತದೆ. ಚಿತ್ರ ಸರಿ ಬರಲಿಲ್ಲ ಎಂದರೆ ಬೇಸರ. ರಾತ್ರಿಯೆಲ್ಲಾ ಅದೇ ಚಿತ್ರಗಳೇ ಕಣ್ಣ ಮುಂದೆ ಬರುತ್ತಿರುತ್ತವೆ. ಇಲ್ಲಿ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಸೋಲುವ ಭಯ, ಇಲ್ಲವೇ ಸರಿ ಮಾಡಬೇಕು ಎಂಬ ಹಟ, ಇವೆಲ್ಲಾ ಸೇರಿ ಮನಸ್ಸಿನಲ್ಲಿ ಒತ್ತಡ ಸೃಷ್ಟಿಸುತ್ತವೆ. ಕೆಲವೊಮ್ಮ ರಾತ್ರಿ ಯೋಚಿಸುತ್ತಿರುವಾಗ ಅದಕ್ಕೆ ಪರಿಹಾರ ಸಿಕ್ಕಿಬಿಟ್ಟಿರುತ್ತದೆ. ನಂತರ ಒತ್ತಡವೇ ಸಂತೋಷವಾಗಿ ಪರಿವರ್ತನೆ ಆಗುತ್ತದೆ. ಈ ಒತ್ತಡ ನನಗಿಷ್ಟ.

ಒತ್ತಡ ತಂತಾನೇ ಕರಗುತ್ತದೆ. ಆದರೆ ಸ್ವಲ್ಪ ಸಮಯ ಬೇಡುತ್ತದೆ ಅಷ್ಟೆ. ಒತ್ತಡದಲ್ಲಿದ್ದೇವೆ ಎಂದು ಕೆಲಸದ ಗುಣಮಟ್ಟ ಕುಗ್ಗಿಸಬಾರದು. ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದ ಹಾಗೆ ಕೆಲಸ ಮಾಡುವ ರೀತಿಯಲ್ಲೇ ಇರುವುದು ಒತ್ತಡದ ನಿಭಾವಣೆ.

ನನಗೆ ಇಂಥ ಒತ್ತಡಗಳು ಸಹಜ. ಆದ್ದರಿಂದ ನನಗೆ ಕಥೆ, ಪದ್ಯಗಳು ಕೊಟ್ಟರೆ ಒಂದು ಬಾರಿ, ಎರಡು ಬಾರಿ, ಮೂರು ಬಾರಿ ಓದುತ್ತೇನೆ. ಮೂವತ್ತು ನಿಮಿಷ ಮೌನವಾಗಿ ಇದ್ದುಬಿಡುತ್ತೇನೆ. ಧ್ಯಾನಿಸುತ್ತೇನೆ. ನಾನು ನನ್ನ ಭಾಷೆಯಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸುತ್ತೇನೆ. ನನ್ನೊಳಗೆ ಏನು ಹೊಳೆಯುತ್ತದೋ ಅದನ್ನು ಯೋಜಿಸಿಕೊಂಡು ಅಂತಿಮ ಚಿತ್ರಣವನ್ನು ಕಟ್ಟಿಕೊಳ್ಳುತ್ತೇನೆ. ನನ್ನ ಮೆದುಳಿಗೆ ಬೇಕಾದ ಸಮಯವನ್ನು ಕೊಡುತ್ತೇನೆ. ಆಗ ಆರಾಮಾಗಿ ಕೆಲಸ ಮಾಡಲು ಸಾಧ್ಯ.

ಒತ್ತಡವನ್ನು ಸಂತೋಷದಿಂದ ನಿರ್ವಹಿಸುವುದನ್ನು ಕಲಿತಿದ್ದೇನೆ. ಸಂತೋಷವಾಗಿ ಕೆಲಸ ಮಾಡಿದರೆ ಒತ್ತಡ ಸಹಜವಾಗೇ ದೂರವುಳಿಯುತ್ತದೆ. ಬೇಸರಿಸಿದರೆ ಒತ್ತಡ ನಮ್ಮನ್ನು ಆಳುತ್ತದೆ. ಆದ್ದರಿಂದ ಕೆಲಸದ ವಾತಾವರಣವನ್ನು ಹಾಗೆ ಸೃಷ್ಟಿಸಿಕೊಳ್ಳಬೇಕು ಅಷ್ಟೆ.

ಪ್ರಾಮಾಣಿಕವಾಗಿ ಹೇಳುವುದಾದರೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಎನ್ನುವುದು ಸುಳ್ಳು; ಅದು ಸಹಜತೆಯನ್ನು ಕಳೆದುಕೊಂಡಂತೆ. ಆದ್ದರಿಂದ ಒತ್ತಡವನ್ನು ನಿರ್ವಹಿಸಿಕೊಂಡು ಅದರೊಂದಿಗೆ ನಡೆಯುವ ಕಲೆಯನ್ನು ರೂಢಿಸಿಕೊಳ್ಳುವುದೇ ಮುಖ್ಯ.

ನಿರೂಪಣೆ: 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.