ADVERTISEMENT

ಕೃತಕ ಬಸಿರು: ಎಚ್ಚರವಿರಲಿ

ಡಾ.ಮಹೇಶ ಕೋರೆಗೋಳ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ಅಥವಾ ದಂಪತಿ ಮಗು ಪಡೆಯಲು ಬೇರೆ ವ್ಯಕ್ತಿಯ ಅಂಡಾಣು (ಅಂಡಾಣು ದಾನ), ವೀರ್ಯಾಣು  (ವೀರ್ಯಾಣು ದಾನ), ಭ್ರೂಣ (ಭ್ರೂಣ ದಾನ), ಅಥವಾ ಗರ್ಭಕೋಶದ ದಾನದ ಸಹಾಯ ಪಡೆದರೆ ಅದಕ್ಕೆ ಮೂರನೆಯ ವ್ಯಕ್ತಿ ಮೂಲಕ ಸಂತಾನೋತ್ಪತ್ತಿ ಅಥವಾ ದಾನಿಗಳಿಂದ ಪೋಷಕತ್ವ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಸಾಮಾನ್ಯವಾಗಿ ಗರ್ಭಧಾರಣೆ ಅಥವಾ ಮಗು ಪಡೆಯಲು ಇದೇ ಏಕೈಕ ಮಾರ್ಗ ಎಂಬ ಸಂದರ್ಭದಲ್ಲಿ ಮಾತ್ರ ಇದನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. 

ಬಾಡಿಗೆ ತಾಯ್ತನ ಅಥವಾ ದಾನಿಗಳಿಂದ ಪೋಷಕತ್ವದ ಬಗ್ಗೆ ಯೋಚಿಸುತ್ತಿದ್ದಲ್ಲಿ ಈ ಕ್ರಮಗಳ ಬಗ್ಗೆ ಮಾಹಿತಿ ಇರಬೇಕಾದುದು ಅತ್ಯಗತ್ಯ. 

*ದಂಪತಿ ಪರಸ್ಪರ ಒಪ್ಪಿಗೆಯಿಲ್ಲದೆ ಎಆರ್‌ಟಿ (ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಿಕ್ - ಬೆಂಬಲಿತ ಸಂತಾನೋತ್ಪತ್ತಿ ತಂತ್ರ) ವಿಧಾನವನ್ನು ಮಾಡುವುದಿಲ್ಲ.

*ಗರ್ಭಧಾರಣೆಯ ಯಾವುದೇ ಹಂತದಲ್ಲಿ, ಭ್ರೂಣದ ಲಿಂಗ ಆಯ್ಕೆ ಮಾಡುವುದು ಅಥವಾ ಯಾವುದಾದರೂ ನಿರ್ದಿಷ್ಟ ಲಿಂಗದ ಗರ್ಭಪಾತ ಮಾಡುವುದಕ್ಕೆ ಅನುಮತಿ ಇಲ್ಲ. 

*ಎಆರ್‌ಟಿ ವಿಧಾನದ ಮೂಲಕ ಜನಿಸುವ ಮಗುವನ್ನು, ವಿವಾಹದ ನಂತರ ದಂಪತಿ ಸಮಾಗಮದಿಂದ ಹಾಗೂ ಸಂಗಾತಿಗಳಿಬ್ಬರ ಅನುಮತಿಯ ಮೇರೆಗೆ ಜನಿಸಿದಂತಹ, ಕಾನೂನುಬದ್ಧ ಮಗು ಎಂದು ಪರಿಗಣಿಸಬೇಕು. ದಾನಿ ವೀರ್ಯಾಣು, ದಾನಿ ಅಂಡಾಣು, ದಾನಿ ಭ್ರೂಣಗಳು ಹಾಗೂ ಬಾಡಿಗೆ ತಾಯಿ ಪದ್ಧತಿಗೆ ಸಂಬಂಧಿಸಿದಂತೆ ಉತ್ತಮ ಜ್ಞಾನ ಹಾಗೂ ಅನುಭವವನ್ನು ಹೊಂದಿರುವ ವೈದ್ಯರು ಹಾಗೂ ಸಿಬ್ಬಂದಿ, ಕೃತಕ ಬಸಿರಿನ ಆಯ್ಕೆ ಪರಿಗಣಿಸುವ ದಂಪತಿಯನ್ನು ಈ ಪ್ರಕ್ರಿಯೆಗಳಿಗೆ ಒಳಪಡಿಸಬಹುದು.

ಅಂಡಾಣು ದಾನ
ಮೊದಲು ಅಂಡಾಣು ದಾನಿಗಳನ್ನು ಗುರುತಿಸಲಾಗುತ್ತದೆ, ಹಾಗೂ, ಐವಿಎಫ್ ಪ್ರಕ್ರಿಯೆ ಮೂಲಕ, ದಾನಿಯ ಅಂಡಾಣು  ಪಡೆದು, ಅದನ್ನು ಸ್ವೀಕರಿಸುವವರಿಗೆ ದಾನ ಮಾಡಲಾಗುತ್ತದೆ.  ಸ್ವೀಕರಿಸುವ ಮಹಿಳೆಯ ಪತಿಯಿಂದ (ಅಥವಾ ವೀರ್ಯಾಣು ದಾನಿಯಿಂದ) ವೀರ್ಯಾಣುಗಳನ್ನು ಪಡೆದು, ಭ್ರೂಣ ಫಲಿತಗೊಳಿಸಲು ಯತ್ನಿಸಲಾಗುತ್ತದೆ. ನಂತರ ಫಲಿತ ಭ್ರೂಣವನ್ನು ಗರ್ಭಕ್ಕೆ ವರ್ಗಾಯಿಸಲಾಗುತ್ತದೆ. 

ಬಾಡಿಗೆ ಗರ್ಭಧಾರಣೆ 
ಮಗುವನ್ನು ಪಡೆಯಲು ಬಯಸುವ ಪೋಷಕರು ಹಾಗೂ ದಾನಿ, ಇಬ್ಬರಿಗೂ ತೃಪ್ತಿ ನೀಡುವ ವಿಧಾನವನ್ನು ಖಾತರಿಪಡಿಸಲು, ವೈದ್ಯಕೀಯ ವೃತ್ತಿಪರರು ಹಾಗೂ ಕಾನೂನು ವೃತ್ತಿಪರರಿಂದ ಎಚ್ಚರಿಕೆಯ ಮೌಲ್ಯಮಾಪನದ ಅಗತ್ಯವಿರುವಂತಹ, ವೈದ್ಯಕೀಯವಾಗಿ ಹಾಗೂ ಭಾವನಾತ್ಮಕವಾಗಿ ಸಂಕೀರ್ಣವಾದಂತಹ ಪ್ರಕ್ರಿಯೆ. ಬಾಡಿಗೆ ತಾಯಿ ಎಂದರೆ, ಮತ್ತೊಬ್ಬ ದಂಪತಿ ಅಥವಾ ಮಹಿಳೆಗಾಗಿ ಗರ್ಭವನ್ನು ಧರಿಸುವ ಮಹಿಳೆ.

ಬಾಡಿಗೆ ತಾಯಿ, ಮಗುವಿನ ಅನುವಂಶಿಕ ಸಂಬಂಧವನ್ನು ಹೊಂದಿರುವುದಿಲ್ಲ. ಕೃತಕ ಗರ್ಭಧಾರಣಾ ಪ್ರಕ್ರಿಯೆಯಲ್ಲಿ ಸೂಕ್ತ ದಾನಿಯನ್ನು ಗುರುತಿಸಿ, ಒದಗಿಸುವುದು ವೈದ್ಯರೇ ಆಗಿರುತ್ತಾರೆ. ದಾನಿಯು ಆರೋಗ್ಯಪೂರ್ಣವಾಗಿರಬೇಕು. ಎಚ್‌ಐವಿ, ಹೆಪಟೈಟಿಸ್, ಥಲಸ್ಸೆಮಿಯ, ಇತ್ಯಾದಿಯಂಥ ಯಾವುದೇ ಆನುವಂಶಿಕ ಅಸಹಜತೆಗಳನ್ನು ಹೊಂದಿರಬಾರದು. 

ಬಾಡಿಗೆ ತಾಯಿ ಅಪರಿಚಿತ ವ್ಯಕ್ತಿ ಅಥವಾ ಸಂಬಂಧಿ ಅಥವಾ ಸ್ನೇಹಿತೆಯೂ ಆಗಿರಬಹುದು. ಮಗುವಿಗೆ ಜನ್ಮ ನೀಡಲು ಒಪ್ಪಿರುವ ಮಹಿಳೆಯನ್ನು ವೈದ್ಯರು ಹಲವು ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. ದಾನಿ ಅಥವಾ ಬಾಡಿಗೆ ತಾಯಿಯ ಗುರುತನ್ನು ಗೌಪ್ಯವಾಗಿರಿಸಲಾಗುತ್ತದೆ ಹಾಗೂ ಯಾವುದೇ ಸಂದರ್ಭದಲ್ಲಿಯೂ ಬಹಿರಂಗಗೊಳಿಸಲಾಗುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.