ADVERTISEMENT

ಭೂಮಿಯ ಆಭರಣಗಳನ್ನು ಕಾಪಾಡೋಣ

ದೀಪಾ ಫಡ್ಕೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST
ಭೂಮಿಯ ಆಭರಣಗಳನ್ನು ಕಾಪಾಡೋಣ
ಭೂಮಿಯ ಆಭರಣಗಳನ್ನು ಕಾಪಾಡೋಣ   

ಮರ ಮತ್ತು ಮಾನವನ ಸಂಬಂಧ ಪುರಾತನವಾದುದು. ನಮ್ಮ ನೆಲದ ಸಂತರು, ದಾರ್ಶನಿಕರು, ಋಷಿಮುನಿಗಳೆಲ್ಲರೂ ತಮ್ಮ ಮನದೊಳಗೆ ಜ್ಞಾನದ ಬೆಳಕನ್ನು ಹುಟ್ಟಿಸಿಕೊಂಡು ಹೆಚ್ಚಿಸಿಕೊಂಡದ್ದು ಮರಗಳ ಮಡಿಲಿನಲ್ಲಿಯೇ. ಪುರಾಣದ ಪುಟಗಳನ್ನು ತಿರುಗಿಸಿದಾಗಲೂ ಕಥೆಗಳು ಆರಂಭವಾಗುವುದು ನೈಮಿಷಾರಣ್ಯವೆಂಬ ಕಾನನದ ಹಸಿರಿನ ಮಡಿಲಿನಲ್ಲಿಯೇ. ಇಂದಿಗೂ ನಮ್ಮ ಪ್ರಜ್ಞೆಗೆ ಕೃಷ್ಣ ಎಂದೊಡನೆ ದಕ್ಕುವ ಚಿತ್ರ ಬೃಂದಾವನವೆಂಬ ತುಳಸೀತೋಟದ ನಡುವೆ ಕೊಳಲನ್ನೂದುವ ಮುರಳೀಧರ; ಬುದ್ಧ ಎಂದೊಡನೇ ಬೋಧಿವೃಕ್ಷದ ಕೆಳಗೆ ಧ್ಯಾನಸ್ಥನಾದ ಚಿತ್ರವೇ ಕಣ್ಣಿಗೆ ಮೂಡುವುದು. ಬದುಕು, ಜ್ಞಾನ, ಆಶ್ರಯ, ನೀರು  – ಹೀಗೆ ಮನುಷ್ಯನ ಬಾಳಿಗೆ ಅಗತ್ಯವೆನಿಸಿದ ಎಲ್ಲವೂ ಕಾಡಿನ ಜೋಳಿಗೆಯಿಂದಲೇ ಬಂದಿರುವುದು. ಅದ್ಭುತ ಜೀವಜಗತ್ತನ್ನು ಬಸಿರಲ್ಲಿ ಹೊತ್ತುಕೊಂಡಿರುವ ಅರಣ್ಯವೆಂಬ ಸಂಜೀವಿನಿ ಶತಶತಮಾನಗಳಿಂದ ಮಾನವಕುಲವನ್ನು ಉದ್ಧರಿಸಿಕೊಂಡು ಬರುತ್ತಿದೆ, ಪಾಲಿಸಿಕೊಂಡು ಸಾಗುತ್ತಿದೆ. ನಮ್ಮನ್ನು ಪೋಷಿಸುತ್ತಿರುವ ಕಾನನದ ಎಲ್ಲ ಮೂಲೆಗಳೂ ಸಮೃದ್ಧಿಯನ್ನು ಮತ್ತೆ ತುಂಬಿಕೊಳ್ಳುವ ಕಾಲವೇ ಮಳೆಗಾಲ.

ಮಲೆನಾಡಿನ ಪ್ರತಿ ಊರಿನ ಬೆನ್ನಿಗೊಂದು ಕಾಡಿದೆ.  ಮನೆ ಕಟ್ಟಲು, ಉರುವಲು, ಜೇನು, ಬಿದಿರು –ಹೀಗೆ ಎಲ್ಲ ಉಪಯೋಗವನ್ನು ಕಾಡಿಂದ ಪಡೆಯುತ್ತಾ ಊರೂ ಬದುಕುತ್ತಾ ಬಂದಿದೆ. ಇಷ್ಟಿದ್ದೂ, ಕಾಡಿನ ಒಂದು ಭಾಗದ ಮರ, ಸೊಪ್ಪು, ಜೇನು – ಇಂತಹ ಯಾವುದೇ ವಸ್ತುಗಳನ್ನು ಊರ ಜನರು ತಪ್ಪಿಯೂ ಮುಟ್ಟುವುದಿಲ್ಲ. ಆ ಭಾಗದೆಡೆಗೆ ಎಲ್ಲ ಜನರದ್ದು ಒಂದು ನಂಬುಗೆಯ ನೋಟ. ‘ಅದು ಊರದೈವದ ಕಾಡು’. ಅಲ್ಲಿ ಊರದೈವದ ಸಂಚಾರವಿದೆಯೆನ್ನುವ ನಂಬಿಕೆಯಿಂದಾಗಿ ಶ್ರದ್ಧೆ, ಆರಾಧನೆಯಿಂದ ಆ ಕಾಡಿನ ಭಾಗವನ್ನು ನೋಡುತ್ತಾ ಅಲ್ಲಿನ ಒಂದೆಲೆಯನ್ನೂ ಉಪಯೋಗಿಸದೇ ಕಾಡಿನ ಘನತೆಗೆ ಗೌರವ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಕಾಡಿನ ಅಷ್ಟು ಭಾಗ ಉಳಿದ ಭಾಗಕ್ಕಿಂತ ಹೆಚ್ಚು ಹಸಿರನ್ನು ಹೊದ್ದುನಿಂತಿದೆ. ಮರಗಳು ಅಲ್ಲಿ ಮುಗಿಲಿಗೇ ಮುಟ್ಟುವಂತೆ ಸಮೃದ್ಧತೆಯಿಂದ ಇದ್ದು ಅಲ್ಲಿನ ಪಕ್ಷಿಸಂಕುಲ, ಪ್ರಾಣಿಸಂಕುಲಗಳು ಸ್ವಚ್ಛಂದವಾಗಿ ಬದುಕುತ್ತಿರುತ್ತವೆ. ಇದು ಕೇವಲ ಒಂದೂರಿನ ಕಥೆಯಲ್ಲ, ಕಾಡಿರುವ ಎಲ್ಲ ಪ್ರದೇಶಗಳಲ್ಲೂ ಇಂಥ ನಂಬಿಕೆಗಳ ಕಥೆಯಿರುತ್ತವೆ. ಅದು ನಮ್ಮ ಹಿರಿಯರು ಕಾಡನ್ನು ಉಳಿಸಲು ಮಾಡಿರುವ ಅತ್ಯಂತ ಶ್ರದ್ಧೆಯ ಉಪಾಯ. ಕಾಡು ನಮ್ಮನ್ನು ಕಾಪಾಡುವ ಸಂಜೀವಿನಿ ಎಂದು ನಮ್ಮ ಹಿರಿಯರ ಅರಿವಿಗೆ ಬಂದಿತ್ತು. ಪಶ್ಚಿಮ ಘಟ್ಟದ ಅನೇಕ ಕಡೆಗಳಲ್ಲಿ ಇಂಥ ‘ದೈವದ ಕಾಡು’ ಅಥವಾ ’ದೇವರ ಕಾಡು’ನ್ನು ನೋಡಬಹುದು.

ಕಾಡುಗಳು ಭೂಮಿಯ ಶ್ವಾಸಕೋಶವಿದ್ದಂತೆ. ನಾವು ಉಸಿರಾಡುವ ಗಾಳಿ ಶುದ್ಧವಾಗಲು ಕಾಡಿನ ಗಿಡಮರಗಳು ಹೆಚ್ಚಬೇಕು. ಹೆಚ್ಚು ಮಳೆ ಬೀಳುವ ಮಳೆಕಾಡುಗಳನ್ನು ಭೂಮಿಯ ಆಭರಣವೆನ್ನುತ್ತಾರೆ. ಆಭರಣಗಳನ್ನು ಸಹಜವಾಗಿ ಜೋಪಾನವಾಗಿ ಕಾಪಾಡುವುದು ಅಭ್ಯಾಸ. ಕಾಡೆಂಬ ಈ ಆಭರಣಗಳನ್ನು ಸಮೃದ್ಧವಾಗಿಸುವುದೇ ನಮ್ಮ ಮುಂದಿರುವ ಜವಾಬ್ದಾರಿ. ಇದು ಮಳೆ ಹೊಯ್ಯುವ ತಿಂಗಳು, ಹೊಯ್ಯುವ ಮಳೆಗೆ ಕಾಡು ಕೂಡ ಅರಳುವ ತಿಂಗಳು. ಪ್ರಕೃತಿ ಮತ್ತೆ ಹಾಡಲು ಆರಂಭಿಸುವ ತಿಂಗಳು. ಶ್ರಾವಣ ಭಾದ್ರಪದಗಳು ಪ್ರಕೃತಿಯ ಒಡಲನ್ನು ಜೀವಜಲದಿಂದ ತುಂಬಿ ಹೊಸಚಿಗುರನ್ನು ಮರವಾಗಿಸಲು ಅಣಿಯಾಗಿಸುವ ಹೊತ್ತು. ಮಳೆಯ ಆಲಾಪ ಆರಂಭವಾಗಿರುವ ಈ ಸಮಯದಲ್ಲಿ ನಾವು ನಮ್ಮ ಪರಿಸರದ ಹಸಿರನ್ನು ಉಳಿಸಲು–ಬೆಳೆಸಲು ಪಣ ತೊಡಬೇಕಿದೆ. ನಾಡಿನ ಆರೋಗ್ಯಕ್ಕೂ ಕಾಡಿನ ಹಸಿರಿಗೂ ನೇರ ಸಂಬಂಧವಿದೆ. ಈ ವಿವೇಕ ನಮ್ಮದಾಗಬೇಕಿದೆ.

ADVERTISEMENT

ಮನುಷ್ಯ ಮತ್ತು ಪ್ರಕೃತಿ ಒಂದರೊಳಗೊಂದು ಬೆರೆತ ಸಂಗಾತಿಗಳು ಮನುಷ್ಯನ ಪ್ರಾಣವಾಯು ಎನಿಸಿರುವ ಆಮ್ಲಜನಕ ನಿಸರ್ಗದ ಕೊಡುಗೆ.  ಚೈತನ್ಯಮೂಲವಾದ ವೃಕ್ಷಸಂಕುಲವು ಮನುಷ್ಯನ ನಾಗರಿಕತೆಯ ಸಂಭ್ರಮದ ಉನ್ಮಾದದಲ್ಲಿ ಇಂದು ಬಡವಾಗುತ್ತಿದೆ.  ‘ಈ ಜಗತ್ತಿನಲ್ಲಿ ಮನುಷ್ಯನೆಂಬ ಏಕೈಕ ಪ್ರಾಣಿ ಮಾತ್ರವೇ ಮರ ಕಡಿಯುತ್ತಾನೆ, ಆ ಮರದಿಂದ ಕಾಗದ ತಯಾರಿಸುತ್ತಾನೆ ಮತ್ತೆ ಆ ಕಾಗದದ ಮೇಲೆ ಬರೆಯುತ್ತಾನೆ – “ಮರ ಉಳಿಸಿ’’ ಎಂದು! ಎಷ್ಟೆಂದರೂ ಮನುಷ್ಯ ವೈರುದ್ಧ್ಯಗಳ ಮೂಟೆ ಅಲ್ಲವೇ!

ಪ್ರಕೃತಿಯೊಂದಿಗೆ ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಮಾಡಿಕೊಂಡ ಒಪ್ಪಂದವೊಂದಿತ್ತು. ಆ ಒಪ್ಪಂದದ ಪ್ರಕಾರ, ಮಾನವ ತನ್ನ  ಅಗತ್ಯಗಳಿಗಾಗಿ ಒಂದು ಮರವನ್ನು ಕಡಿದರೆ ತಪ್ಪೊಪ್ಪಿಗೆಯಾಗಿ ಐದಕ್ಕೆ ಕಡಿಮೆ ಇಲ್ಲದಂತೆ ಗಿಡಗಳನ್ನು ನೆಡಬೇಕು. ಪ್ರಕೃತಿ ತುಂಬಾ ಸಮಾಧಾನಿ. ಆಕೆಯ ಉಸಿರಾಟಕ್ಕೆ ತೊಂದರೆಯಾದರೂ ಅವಳು ಅಗತ್ಯ ಚಲನೆಗೆ ಬೇಕಾದ ಬೇರೆ ಬೇರೆ ದಿಕ್ಕುಗಳನ್ನು ಹುಡುಕಿಕೊಳ್ಳುತ್ತಾಳೆ. ಅಲ್ಲಿ ಅದ್ಭುತವೆನಿಸುವ ಹಸಿರಿನ ಚಿಗುರನ್ನು ಮೂಡಿಸುತ್ತಾಳೆ. ಪ್ರಾಯಶಃ ಇದಕ್ಕಾಗಿಯೇ ಇರಬೇಕು, ನಿಸರ್ಗವನ್ನು ತಾಯಿ ಎಂದಿರುವುದು. ತನ್ನ ಮಕ್ಕಳ ಅನುಕೂಲಕ್ಕೆ ಸ್ವಲ್ಪವೂ ಭಂಗ ತರದೇ ತನ್ನಷ್ಟಕ್ಕೆ ಒಳಿತನ್ನಷ್ಟೇ ನೀಡುತ್ತಾ ನಮ್ಮೊಂದಿಗಿರುವ ತಾಯಿಯಂತೆ ಪ್ರಕೃತಿ ನಡೆದುಕೊಳ್ಳುತ್ತದೆ. ಈ ಹಸಿರು ಮಾತೃಸ್ವರೂಪಿಯೇ ಹೌದು. ಕಡಿದಷ್ಟೂ ಚಿಗುರುತ್ತಾ, ತನ್ನ ಮಡಿಲಲ್ಲಿ ಮಾನವನ ಮಕ್ಕಳನ್ನು ಇನ್ನೂ ಕಾಪಿಟ್ಟುಕೊಳ್ಳುತ್ತಿರುವ ಪ್ರಕೃತಿಯ ವೃಕ್ಷಸಂಕುಲವೇ ನಮ್ಮ ಉಸಿರಿನ ಮೂಲ. ಉಸಿರಿಗಾಗಿ ಹಸಿರೇ ನಮ್ಮ ಸಿರಿಯಾಗಬೇಕು.

ಮಾನವನ ಉಳಿವಿಗೆ ಹಿತವಾದ ನಾಳೆಗಳು ಬೇಕು. ಪುರಾಣದಲ್ಲಿ ನೈಮಿಷಾರಣ್ಯದ ಮಹತ್ವದ ಬಗೆಗೆ ಒಂದು ಕಥೆಯಿದೆ. ಕಲಿಯ ನಡೆ ಆರಂಭದ ಹೊತ್ತಿನಲ್ಲಿ, ಮಾನವನ ಬದುಕಿನ ಹಿತಕ್ಕಾಗಿ ಬ್ರಹ್ಮನು ಚಕ್ರವೊಂದನ್ನು ಭೂಮಿಯ ಮೇಲೆ ಬಿಟ್ಟಾಗ ಅದು ಉರುಳುತ್ತ ನೈಮಿಷಾರಣ್ಯದಲ್ಲಿ ಬಂದು ತನ್ನ ಅರಗಳನ್ನು ಕಳಚುತ್ತದೆ. ಆ ಜಾಗವನ್ನೇ ಋಷಿಮುನಿಗಳ ತಪಸ್ಸಿಗೆ ಪೂರಕವಾದ ಭೂಮಿಯ ಭಾಗವೆಂದು ನಿರ್ಣಯಿಸಲಾಯಿತು. ಎಂದರೆ ಅರಣ್ಯವೇ ಭೂಮಿಯ ಸಮೃದ್ಧತೆಯ ಸಂಕೇತ; ಸಾಧನೆಯ ಸಂಕೇತ. ಕಾಡು ಸಮೃದ್ಧವಾಗಿದ್ದರಷ್ಟೇ ಮನುಷ್ಯ ನಿರಾಳವಾಗಿ ಬದುಕಬಲ್ಲ. ಅವನ ಉಸಿರಾಟ ಸರಾಗವಾಗಿ ನಡೆಯಲು ಕಾಡಿನ ಹಸಿರು ಸಮೃದ್ಧವಾಗಿರಬೇಕು. ನಾಳೆಯ ಒಳಿತಿಗಾಗಿ ಎಲ್ಲ ಅರಣ್ಯವೂ ನಮ್ಮ ಪಾಲಿಗೆ ‘ದೇವರ ಕಾಡು’ ಆಗಬೇಕಿದೆ. ಈಗ ಮತ್ತೆ ಮಳೆ ಹೊಯ್ಯುತ್ತಿದೆ, ಗಿಡಗಳು ಮರವಾಗುವತ್ತ ಬೇರೂರುತ್ತಿವೆ. ನಾವೀಗ ಭೂಮಿಯ ಈ ಆಭರಣಗಳನ್ನು ಕಾಪಿಟ್ಟುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.