ADVERTISEMENT

ಮಹಿಳೆಯರನ್ನೇ ಕಾಡುವ ನೋವು

ಡಾ.ಕೆ.ಎಸ್‌.ಪಲ್ಲವಿ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ಸುಜಾತ ಒಬ್ಬ ಸಾಂಪ್ರದಾಯಿಕ ಕುಟುಂಬದಿಂದ ಬಂದ ಸಂಕೋಚ ಸ್ವಭಾವದ ಹುಡುಗಿ. ಮದುವೆಯಾಗಿ ಒಂದು ತಿಂಗಳಲ್ಲೇ ಅವಳಿಗೆ ಹೊಟ್ಟೆ ನೋವು ಶುರುವಾಯಿತು, ಪದೇ ಪದೇ ಮೂತ್ರ ವಿಸರ್ಜಿಸಬೇಕೆನ್ನಿಸುವುದು ಎಲ್ಲಾ ಶುರುವಾಯಿತು. ಕೆಲವು ದಿನಗಳ ನಂತರ ಅವಳಿಗೆ ಜ್ವರ ಬರಲು ಆರಂಭವಾಯಿತು. ಆಗ ವೈದ್ಯರ ಬಳಿ ಕರೆದೊಯ್ದಾಗ, ಮೂತ್ರ ಪರೀಕ್ಷೆಯಿಂದ ಅವಳಿಗೆ ಅತಿಯಾದ ಮೂತ್ರದ ಸೋಂಕು ಇರುವುದು ತಿಳಿಯಿತು.

ರಾಗಿಣಿ ಒಬ್ಬ ಜಿಲ್ಲಾ ಮಟ್ಟದ ಸ್ವಸಹಾಯ ಸಂಘದ ಕಾರ್ಯದರ್ಶಿಯಾಗಿದ್ದು, ಅವಳಿಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಜನರಿಗೆ ಮಾಹಿತಿ ನೀಡುವ ಕೆಲಸ. ಅವಳು ಹಳ್ಳಿಗೆ ಹೋದರೆ ಅಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಮೂತ್ರವಿಸರ್ಜಿಸುವುದು ಅವಳಿಗೆ ಕಷ್ಟವಾಗಿತ್ತು. ಹೀಗೆ ಒಮ್ಮೆ ಒಂದು ಹಳ್ಳಿಯಲ್ಲಿ ಅವಳು ಶೌಚಾಲಯವನ್ನು ಉಪಯೋಗಿಸಿದ ನಂತರ, ಮೂತ್ರ ವಿಸರ್ಜಿಸಲು ನೋವು, ಪದೇ ಪದೇ ಮೂತ್ರ ವಿಸರ್ಜಿಸಬೇಕೆನ್ನಿಸುವುದು ಶುರುವಾಯಿತು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದರೂ ಪ್ರತಿ 2 ತಿಂಗಳಿಗೋಮ್ಮೆ ಹೀಗೆಯಾಗುತಿತ್ತು. ಇದರಿಂದ ಬೇಸತ್ತು ರಾಗಿಣಿ ತನ್ನ ಕೆಲಸವನ್ನೇ ಬಿಡಬೇಕಾದ ಪರಿಸ್ಥಿತಿ ಬಂದಿತು.
ಇವೆಲ್ಲವೂ ಮೂತ್ರಾಶಯದ ಸೋಂಕಿನಿಂದಾಗುವ ತೊಂದರೆಗಳು. ಇದು ಬಹಳ ಗಂಭೀರ ಅಲ್ಲದೇ ಇದ್ದರೂ ಅನುಭವಿಸಲೂ ಆಗದ, ಹೆಚ್ಚು ಮಹಿಳೆಯರನ್ನೇ ಕಾಡುವ ತೊಂದರೆ.

ಮೂತ್ರಾಶಯದ ಸೋಂಕಿನ 2 ಹಂತಗಳಿರುತ್ತದೆ
*ಮೂತ್ರಾಕೋಶದ ಸೋಂಕು/ ಕೆಳ ಮೂತ್ರಾಶಯದ ಸೋಂಕು
ಇದರ ಲಕ್ಷಣಗಳು ಉರಿ ಮೂತ್ರ, ಮೂತ್ರ ವಿಸರ್ಜೀಸುವಾಗ ನೋವು, ಬೆನ್ನು ನೋವು, ಸೊಂಟ ನೋವು, ಪದೇ ಪದೇ ಮೂತ್ರ ವಿಸರ್ಜಿಸಬೇಕೆನ್ನಿಸುವುದು.

*ಮೂತ್ರಪಿಂಡದ ಸೋಂಕು/ ಮೇಲು ಮೂತ್ರಾಶಯದ ಸೋಂಕು
ಮೂತ್ರಕೋಶದ ಸೋಂಕನ್ನು ನಿರ್ಲಕ್ಷಿಸಿ ಸರಿಯಾದ ಚಿಕಿತ್ಸೆ ಪಡೆಯದೇ ಇದ್ದಾಗ ಸೋಂಕು ಹರಡಿ ಮೂತ್ರಪಿಂಡಕ್ಕೆ ತಲುಪುತ್ತದೆ.
ಲಕ್ಷಣಗಳು- ಬಿಡದ ಜ್ವರ, ಹೊಟ್ಟೆ ನೋವು, ಬೆನ್ನುನೋವು, ರಕ್ತ ಮಿಶ್ರಿತ ಮೂತ್ರ, ವಾಂತಿ, ತಲೆ ತಿರುಗು, ವಾಕರಿಕೆ ಮುಂತಾದವು ಮೂತ್ರಕೋಶದ ಸೋಂಕಿನ ಲಕ್ಷಣಗಳು.

ಮೂತ್ರಾಶಯದ ಸೋಂಕಿನ ಕಾರಣಗಳು
*ಮಧುಮೇಹ, ಮೂತ್ರವಿಸರ್ಜನೆಗೆ ತೊಂದರೆ, ಮಲಬದ್ಧತೆ
*ಸಾರ್ವಜನಿಕ ಶೌಚಾಲಯವನ್ನು ಬಳಸುವುದರಿಂದ
*ತುಂಬ ಸಮಯದವರೆಗೆ ಮೂತ್ರವನ್ನು ತಡೆಹಿಡಿಯುವುದರಿಂದ
*ನೀರು/ ದ್ರವ ಪದಾರ್ಥವನ್ನು ಕಡಿಮೆ ಉಪಯೋಗಿಸುವುದರಿಂದ
*ಗರ್ಭಿಣಿಯರಲ್ಲಿ, ಮುಟ್ಟು ನಿಂತವರಲ್ಲಿ ಇದು ಸಾಮಾನ್ಯ
*ರಕ್ತದ ಆಮ್ಲೀಯತೆ ಹೆಚ್ಚವುದರಿಂದ
*ವೈಯುಕ್ತಿಕ ಅಶುಚಿತ್ವ
*ಒಳ ಉಡುಪು ಸಿಂಥೆಟಿಕ್‌ ವಸ್ತ್ರದ್ದಾಗಿದ್ದಲ್ಲಿ 
*ಒಳ ಉಡುಪನ್ನು ಸರಿಯಾಗಿ ಸ್ವಚ್ಛಗೊಳಿಸದೆ, ಸರಿಯಾಗಿ ಒಣಗಿಸದೇ ಇದ್ದಲ್ಲಿ
*ಅನುವಂಶೀಯವಾಗಿಯೂ ಇದು ಬರಬಹುದು

ಪರಿಹಾರೋಪಾಯಗಳು
*ಆಹಾರ ಪದ್ದತಿಯನ್ನು ಸುಧಾರಿಸಿಕೊಂಡರೆ ಈ ಸಮಸ್ಯೆಯನ್ನು ತಡೆಗಟ್ಟಬಹುದು- ರಕ್ತದ ಆಮ್ಲೀಯತೆಯನ್ನು ಹೆಚ್ಚಿಸದ ಹಸಿ ತರಕಾರಿ, ಮೃದು ಆಹಾರ ಸೇವನೆ. ಕರೆದ ಪದಾರ್ಥ, ಹೊರಗಿನ ತಿಂಡಿ, ಅತಿಯಾದ ಹಸಿಮೆಣಸು, ಮಸಾಲೆ ಪದಾರ್ಥವನ್ನು ತಿನ್ನದೇ ಇರುವುದು.
*ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಸರಿಯಾಗಿ ನಿದ್ದೆ ಮಾಡುವುದು.
*ದಿನಕ್ಕೆ 2-ರಿಂದ 3 ಲೀಟರ್ ನೀರು ಕುಡಿಯುವುದು
*ದಿನಕ್ಕೊಂದು ಎಳನೀರು, 1 ಲೋಟ ಬೂದುಕುಂಬಳದ ರಸ, ಬಾಳೇದಿಂಡಿನ ರಸದಿಂದ ಉರಿಮೂತ್ರವನ್ನು ನಿವಾರಿಸಿಕೊಳ್ಳಬಹುದು
*ನೀರನ್ನು ಕುಡಿಯುವುದು.
*ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವಾಗ ಚೆನ್ನಾಗಿ ನೀರಿನಿಂದ ಸ್ವಚ್ಚಗೊಳಿಸಿಕೊಂಡು ಉಪಯೋಗಿಸುವುದು
*ಹೆಚ್ಚು ಕಾಲ ಮೂತ್ರವನ್ನು ತಡೆಗಟ್ಟದೇ ಇರುವುದು
*ಹತ್ತಿಯ ಒಳ ಉಡುಪನ್ನು ಉಪಯೋಗಿಸುವುದು
*ಒಳ ಉಡುಪನ್ನು ಪ್ರತಿನಿತ್ಯ ಒಗೆದು ಬಿಸಿಲಲ್ಲಿ ಒಣಗಿಸಿ ಉಪಯೋಗಿಸುವುದು
*ಮಲ, ಮೂತ್ರ ವಿಸರ್ಜಿಸಿದ ನಂತರ, ಸಂಭೋಗದ ನಂತರ ನೈರ್ಮಲ್ಯಕ್ಕೆ ಹೆಚ್ಚು ಮಹತ್ವ ನೀಡುವುದು
*ಮಲ ಬದ್ಧತೆಯಾಗದಂತೆ ಆಹಾರ, ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದು.

ಆಯುರ್ವೇದ ಚಿಕಿತ್ಸೆ
ಮೂತ್ರದ ತೊಂದರೆಗೆ ಆಯುರ್ವೇದದಲ್ಲಿ ಉತ್ತಮವಾದ ಪರಿಹಾರವಿದ್ದು, ಇದನ್ನು ಸರಿಯಾಗಿ ತೆಗೆದುಕೊಂಡು, ಸರಿಯಾಗಿ ಪಥ್ಯಮಾಡಿದ್ದಲ್ಲಿ ಖಂಡಿತ ನಿವಾರಿಸಬಹುದಾಗಿದೆ. ಚಂದನಾಸವ, ಉಶೀರಾಸವ, ಚಂದನಾದಿ ಚೂರ್ಣ, ಗೂಕ್ಷೂರಾದಿ ಚೂರ್ಣ, ಶ್ವೇತ ಪರ್ಪಟಿ, ಅಪಾಮಾರ್ಗ ಕ್ಷಾರ, ಚಂದ್ರಪ್ರಭಾವಟಿ, ಗೂಕ್ಷೂರಾದಿ ಗುಗ್ಗುಲು, ಧನ್ವಂತರಿ ವಟಿ, ಕಾಲಶಕ ಏರಂಡ ತೈಲ, ಪಂಚವಲ್ಕಲ ಕಷಾಯ, ಗೋಕ್ಷೂರಾದಿ ಕಷಾಯ, ಪಿಚು, ಉತ್ತರ ಬಸ್ತಿ, ಪ್ರಕ್ಷಾಲನ, ಬಸ್ತಿ.
-ಡಾ. ಕೆ.ಎಸ್‌. ಪಲ್ಲವಿ
(9481074220)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.