ADVERTISEMENT

ಮಹಿಳೆಯರಿಗೆಂದೇ ಡಯಾಲಿಸಿಸ್‌ ಕೇಂದ್ರ

ಎನ್.ನವೀನ್ ಕುಮಾರ್
Published 23 ಸೆಪ್ಟೆಂಬರ್ 2016, 19:30 IST
Last Updated 23 ಸೆಪ್ಟೆಂಬರ್ 2016, 19:30 IST
ಚಿತ್ರ: ಚಂದ್ರಹಾಸ ಕೋಟೆಕಾರ್‌
ಚಿತ್ರ: ಚಂದ್ರಹಾಸ ಕೋಟೆಕಾರ್‌   

‘ಕುಟುಂಬ ನಿರ್ವಹಣೆ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಉದ್ದೇಶದಿಂದ ದುಡಿಮೆಯಲ್ಲಿ ತೊಡಗಿದೆ. ನನ್ನ ಆರೈಕೆ ಕಡೆಗೆ ಗಮನವನ್ನೇ ನೀಡಲಿಲ್ಲ. ಇದರಿಂದ ನನ್ನ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಆರು ವರ್ಷಗಳಿಂದ ಡಯಾಲಿಸಿಸ್‌ ಮಾಡಿಸುತ್ತಿದ್ದೇನೆ. ಇದ್ದ ಒಂದು ಮನೆಯನ್ನೂ ಮಾರುವ ಸ್ಥಿತಿಗೆ ತಲುಪಿದ್ದೆ. ಅಷ್ಟರಲ್ಲೇ ರಂಗದೊರೆ ಮೆಮೋರಿಯಲ್‌ ಆಸ್ಪತ್ರೆಯ ಮಹಿಳೆಯರ ಡಯಾಲಿಸಿಸ್‌ ಕೇಂದ್ರದ ಬಗ್ಗೆ ಮಾಹಿತಿ ದೊರೆಯಿತು. ಇಲ್ಲಿಗೆ ಬಂದ ಮೇಲೆ ಇದ್ದ ಸ್ವಲ್ಪ ಜೀವ ಈಗ ಉಸಿರಾಡುತ್ತಿದೆ.’

ಇದು ಕಮಲಾನಗರದ ನಿವಾಸಿ ಆಂಜನಮ್ಮ ಅವರ ನೋವಿನ ನುಡಿಗಳು. ಬಸವನಗುಡಿಯ ಶಂಕರಪುರದಲ್ಲಿರುವ ರಂಗದೊರೆ ಮೆಮೋರಿಯಲ್‌ ಆಸ್ಪತ್ರೆಯ ಮಹಿಳೆಯರ ಡಯಾಲಿಸಿಸ್‌ ಕೇಂದ್ರದಲ್ಲಿ ಅವರು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ.

‘ನಾನು ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ ಎದ್ದು ತಿಂಡಿ ಮಾಡಿ, ಮಕ್ಕಳಿಗೆ ತಿನ್ನಿಸಿ ಅವರನ್ನು ಶಾಲೆಗೆ ಕಳುಹಿಸುತ್ತಿದ್ದೆ. ಬಳಿಕ ನಾನು ಕೆಲಸಕ್ಕೆ ಹೋಗುತ್ತಿದ್ದೆ. ತಡವಾದರೆ ಬಸ್‌ ಸಿಗುವುದಿಲ್ಲವೆಂದು ತಿಂಡಿ ತಿನ್ನದೆ ಹಸಿದ ಹೊಟ್ಟೆಯಲ್ಲೇ ಓಡುತ್ತಿದ್ದೆ. ಸಂಜೆ ಮನೆಗೆಲಸದಲ್ಲಿ ತೊಡಗುತ್ತಿದ್ದೆ.

ಹೀಗೆ ದಣಿವರಿಯದೆ ಕೆಲಸ ಮಾಡುತ್ತಿದ್ದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಯಿತು. ಬಿಪಿ ಬಂತು. ಸೂಕ್ತ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದರಿಂದ ಎರಡೂ ಕಿಡ್ನಿಗಳನ್ನು ಕಳೆದುಕೊಳ್ಳಬೇಕಾಯಿತು’ ಎಂದು ಹೇಳುವಾಗ ಅವರ ಕಣ್ಣಾಲಿಗಳು ಒದ್ದೆಯಾದವು.

‘ಕಳೆದ ಆರು ವರ್ಷಗಳಿಂದ ಆಸ್ಪತ್ರೆಗಳಲ್ಲೇ ಕಾಲ ಕಳೆಯುವಂತಾಗಿದೆ. ಡಯಾಲಿಸಿಸ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಬೇಕಾಯಿತು. ಅತ್ತ ಸಾಲ ತೀರಿಸಲಾಗದೆ, ಇತ್ತ ಚಿಕಿತ್ಸಾ ವೆಚ್ಚ ಭರಿಸಲಾಗದೆ ಇದ್ದ ಒಂದು ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದೆವು.

ಈ ಸಂದರ್ಭದಲ್ಲಿ ರಂಗದೊರೆ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ರಿಯಾಯಿತಿಯಲ್ಲಿ ಡಯಾಲಿಸಿಸ್‌ ಮಾಡುವ ವಿಷಯ ತಿಳಿದು ಇಲ್ಲಿಗೆ ಬಂದಿದ್ದೇನೆ. ದಾನಿಗಳ ನೆರವಿನಿಂದ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೇನೆ’ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

‘ಡಯಾಲಿಸಿಸ್‌ ವೆಚ್ಚ, ಚುಚ್ಚುಮದ್ದು, ಔಷಧ ಸೇರಿ ತಿಂಗಳಿಗೆ ಹತ್ತು ಸಾವಿರ ರೂಪಾಯಿಗಳಷ್ಟು ಖರ್ಚು ಬರುತ್ತದೆ. ನನಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಮಗ ಓದಿಗೆ ವಿರಾಮವಿಟ್ಟು, ಕೆಲಸಕ್ಕೆ ಸೇರಿದ್ದಾನೆ. ಅವನ ದುಡಿಮೆಯಲ್ಲೇ ಕುಟುಂಬದ ನಿರ್ವಹಣೆ ನಡೆಯುತ್ತಿದೆ’ ಎಂದರು.

ಶ್ರೀರಾಂಪುರದ ನಿವಾಸಿ ಕೆ.ಉಷಾ ಮೂರು ವರ್ಷಗಳಿಂದ ಡಯಾಲಿಸಿಸ್‌ ಮಾಡಿಸುತ್ತಿದ್ದಾರೆ. ಅವರು ಕೌಟುಂಬಿಕ ಸಮಸ್ಯೆಯಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಸಾವಿನಿಂದ ಪಾರಾದರೂ ಕಿಡ್ನಿಗಳನ್ನು ಕಳೆದುಕೊಳ್ಳಬೇಕಾಯಿತು. ಗಂಡನಿಂದ ದೂರವಿರುವ ಉಷಾ ಅವರಿಗೆ ತಾಯಿ ಹಾಗೂ ಒಬ್ಬ ಮಗಳಿದ್ದಾಳೆ.

‘ನಾನು ನೆಮ್ಮದಿಯಾಗಿ ಸಾಯಲು ವಿಧಿ ಬಿಡಲಿಲ್ಲ. ಕಿಡ್ನಿಗಳನ್ನು ಕಳೆದುಕೊಂಡು ಆಸ್ಪತ್ರೆಯ ಹಾಸಿಗೆ ಮೇಲೆ ಹೀಗೆ ಮಲಗಿದ್ದೇನೆ. ಯಾರೋ ದಾನಿಗಳು ನನ್ನ ಡಯಾಲಿಸಿಸ್‌ ವೆಚ್ಚ ಭರಿಸುತ್ತಿದ್ದಾರೆ. ಖಾಸಗಿ ಶಾಲೆಯೊಂದು ಮಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ’ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಂ.ಎಸ್‌. ಶಾಲಿನಿ ಅವರದ್ದು ಬೇರೊಂದು ಕಥೆ. ಡಯಾಲಿಸಿಸ್‌ ಮಾಡಿಸಲೆಂದೇ ಯಲಹಂಕದಲ್ಲಿ ಬಾಡಿಗೆ ಮನೆ ಮಾಡಿದ್ದಾರೆ. ಅವರ ಗಂಡ ಸತ್ತು 20 ವರ್ಷಗಳೇ ಕಳೆದಿವೆ.

‘ಗರ್ಭಿಣಿಯಾಗಿದ್ದಾಗ ಬಿ.ಪಿ ಶುರುವಾಯಿತು; ಮಗು ಹುಟ್ಟಿದ ಬಳಿಕವೂ ಹೋಗಲಿಲ್ಲ. ವರ್ಷಗಳು ಉರುಳಿದಂತೆ ಕಿಡ್ನಿ ಸಮಸ್ಯೆ ಉಂಟಾಯಿತು. ಎರಡು ವರ್ಷದಿಂದ ಡಯಾಲಿಸಿಸ್‌ ಮಾಡಿಸುತ್ತಿದ್ದೇನೆ’ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡರು.

ಡಯಾಲಿಸಿಸ್‌ ಕೇಂದ್ರ
ಬೆಂಗಳೂರಿನ ಇನ್ನರ್‌ವೀಲ್‌ ಕ್ಲಬ್‌ ಹಾಗೂ ಬೆಂಗಳೂರು ಕಿಡ್ನಿ ಫೌಂಡೇಷನ್‌ (ಬಿಕೆಎಫ್‌) ಜಂಟಿ ಸಹಯೋಗದಲ್ಲಿ  ‘ಮಹಿಳೆಯರ ಡಯಾಲಿಸಿಸ್‌ ಕೇಂದ್ರ’ವನ್ನು ಆರಂಭಿಸಲಾಗಿದೆ. ಇನ್ನರ್‌ವೀಲ್‌ ಕ್ಲಬ್‌  ಸುವರ್ಣ ಮಹೋತ್ಸವ ನೆನಪಿಗಾಗಿ 10 ಡಯಾಲಿಸಿಸ್‌ ಯಂತ್ರಗಳನ್ನು ಒದಗಿಸಿದ್ದು, ನಿರ್ವಹಣೆಗೂ ಆರ್ಥಿಕ ಸಹಾಯ ನೀಡಿದೆ.

ಮಹಿಳೆಯರಿಗೆಂದೇ ಡಯಾಲಿಸಿಸ್‌ ಕೇಂದ್ರವನ್ನು ಆರಂಭ ಮಾಡಿರುವುದು ದೇಶದಲ್ಲೇ ಇದೇ ಮೊದಲು. ನರ್ಸ್‌ಗಳು ಹಾಗೂ ತಂತ್ರಜ್ಞರು ಮಹಿಳೆಯರೇ ಇದ್ದಾರೆ. ಪ್ರತಿದಿನ ಎರಡು ಪಾಳಿಯಲ್ಲಿ 10–15 ಮಂದಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಡಯಾಲಿಸಿಸ್‌ ಮಾಡಲಾಗುತ್ತದೆ.

ಪ್ರತಿ ಡಯಾಲಿಸಿಸ್‌ಗೆ ಒಂದು ಸಾವಿರ  ರೂಪಾಯಿಗಳ ವೆಚ್ಚವಾಗಲಿದ್ದು, ಮಹಿಳೆಯರಿಗಾಗೆ ಆರು ನೂರು ರೂಪಾಯಿಗಳಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಉಳಿದ ಹಣವನ್ನು ಶೃಂಗೇರಿ ಶಾರದಾ ಪೀಠ, ಬಿಕೆಎಫ್‌ ಸಂಸ್ಥೆ ಭರಿಸುತ್ತದೆ. ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ದಾನಿಗಳ ನೆರವಿನಿಂದ ಉಚಿತವಾಗಿ ಡಯಾಲಿಸಿಸ್‌ ಮಾಡಲಾಗುತ್ತದೆ’ ಎಂದರು  ಡಾ. ಜಯಂತ್‌.

‘ಡಯಾಲಿಸಿಸ್‌ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲದವರಿಗೆ ದಾನದ ಪತ್ರ ನೀಡುತ್ತೇವೆ. ಈ ಪತ್ರವನ್ನು ತೋರಿಸಿ ದಾನಿಗಳು, ಬ್ಯಾಂಕ್‌ಗಳಿಂದ ಆರ್ಥಿಕ ಸಹಾಯ ಪಡೆಯಬಹುದು. ಅಲ್ಲದೆ ಬಿಕೆಎಫ್‌ ಸಂಸ್ಥೆಯಲ್ಲಿ ನೋಂದಾಯಿಸಿದ ದಾನಿಗಳು ರೋಗಿಗಳಿಗೆ ಆರ್ಥಿಕ ಸಹಾಯ ಮಾಡುತ್ತಾರೆ’ ಎಂದು ಹೇಳಿದರು.

‘ಕಿಡ್ನಿ ವಿಫಲವಾಗುವ ಹಂತ ತಲುಪಿದ ಬಳಿಕ ಚಿಕಿತ್ಸೆಗೆ ಬರುತ್ತಾರೆ. ಕಿಡ್ನಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ತಪಾಸಣೆ ಮಾಡಿಸಿಕೊಳ್ಳಬೇಕು. ಕಿಡ್ನಿ ವಿಫಲವಾದಲ್ಲಿ ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕು, ಇಲ್ಲವೇ ನಿರಂತರವಾಗಿ ಡಯಾಲಿಸಿಸ್‌ಗೆ ಒಳಗಾಗಬೇಕು. ಇದರಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡಬೇಕಿರುತ್ತದೆ’ ಎನ್ನುತ್ತಾರೆ ಕೇಂದ್ರದ ಸಂಯೋಜಕ ಡಾ. ಜಯಂತ್‌.

ಮಾಹಿತಿಗೆ 96115 37816, 080– 2698 3300/22

ADVERTISEMENT

*
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು ಆರ್ಥಿಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ತೊಂದರೆಗೆ ಸಿಲುಕುತ್ತಾರೆ. ಇದರಿಂದ ಶ್ರೀಮಂತ ಬಡವನಾದರೆ, ಬಡವ ಸಾಯುತ್ತಾನೆ. ಆದ್ದರಿಂದ ಇಂತಹ ವ್ಯಕ್ತಿಗಳಿಗೆ ಉಳ್ಳವರು ಆರ್ಥಿಕ ಸಹಾಯ ಮಾಡಬೇಕು.
-ಡಾ. ಜಯಂತ್‌,  ಸಂಯೋಜಕ 
ಮಹಿಳೆಯರ ಡಯಾಲಿಸಿಸ್‌ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.