ADVERTISEMENT

ರಂಗು ರಂಗಿನ ಗುಂಗು

ಅರಿವೆಯ ಹರವು

ನಿಷ್ಕಾ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST
ರಂಗು ರಂಗಿನ ಗುಂಗು
ರಂಗು ರಂಗಿನ ಗುಂಗು   

ಬಣ್ಣದ ಬಟ್ಟೆ ಧರಿಸುವ ಬಯಕೆ ಇದ್ದರೆ ಸಾಲದು. ಅವು ನಮಗೆ ಒಪ್ಪುವಂತಿರಬೇಕು. ಏಕೆಂದರೆ ಎಲ್ಲ ಬಣ್ಣಗಳು ಎಲ್ಲರಿಗೂ ಒಪ್ಪುವುದಿಲ್ಲ. ಕೆಲವೊಂದು ಬಣ್ಣಗಳ ಉಡುಪನ್ನು ಧರಿಸಿದಾಗ ನಮಗೆ ಚೆನ್ನಾಗಿ ಕಂಡರೂ ನಾವು ನಿರಾಳವಾಗಿರುವುದಿಲ್ಲ. ಮೊದಲೇ ಬೇಸಿಗೆ, ಹೊಸ ಟ್ರೆಂಡ್‌ ಎಂದು ಫ್ಲೋರೋಸೆಂಟ್‌ ಬಣ್ಣದ ಬಟ್ಟೆ ಧರಿಸಿ ಹೊರನಡೆದರೆ ನೋಡುವವರಿಗೂ ಕಿರಿ ಕಿರಿ ಆಗಿ, ನಮಗೂ ಹಿತವೆನಿಸದೆ ಬಿಸಿಲ ಧಗೆಯೊಡನೆ ನಾವೂ ಧಗಧಗ ಎನಿಸೀತು.

ಅಷ್ಟಕ್ಕೂ ನಾವು ದಿನವೂ ಧರಿಸುವ ಕ್ಯಾಶುವಲ್‌ ಉಡುಪಿನಲ್ಲಿ ಇಂಥ ಬಣ್ಣ ಆರಿಸುವುದು ಸೂಕ್ತ. ಆದರೆ ಮಧ್ಯವಯಸ್ಸಿಗೆ ಬಂದವರು ಸಾಂಪ್ರದಾಯಿಕ ಉಡುಪಿನಲ್ಲೇ ಈ ಪ್ರಯೋಗ ಮಾಡುವುದು ಉತ್ತಮ . ಡ್ರೆಸ್ಸೂ ಪಾಶ್ಚಿಮಾತ್ಯ ಶೈಲಿಯದು, ಅದರ ಬಣ್ಣವೂ ತೀರಾ ಫ್ಯಾಷನಬಲ್‌ ಆದರೆ, ಅತ್ಯಾಧುನಿಕ ಶೈಲಿ ಒಗ್ಗದೇ ಹೋಗಬಹುದು. ಸಮಾಜದ ಸ್ವೀಕೃತಿಯೂ ಮುಖ್ಯ. ಕಾಲೇಜು ಕ್ಯಾಂಪಸ್ಸಿನಲ್ಲಿ ಅಲ್ಲದಿದ್ದರೂ ಆ ವಯಸ್ಸಿನವರು ಏನು ಧರಿಸಿದರೂ ಈಗಿನ ಕಾಲದ ಹುಡುಗರು ಬಿಡಿ ಎಂಬ ರಕ್ಷಾ ನುಡಿ ಅವರ ಸುತ್ತ ಇರುತ್ತದೆ.

ಆದರೆ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿದ್ದರೆ, ಈಗಾಗಲೇ ಕೆಲಸದಲ್ಲಿದ್ದರೆ ಉದ್ಯೋಗದ ಸ್ಥಳದಲ್ಲಿ, ತುಂಬ ಸಾಂಪ್ರದಾಯಿಕವಾದ ವಿಶೇಷ ಪೂಜೆಯ ಸಂದರ್ಭ, ದೇವಸ್ಥಾನದ ಪ್ರಾಂಗಣ, ಮುಖ್ಯವಾಗಿ  ಅಂತ್ಯಕ್ರಿಯೆಯಂತಹ ಗಂಭೀರ ವಾತಾವರಣಕ್ಕೆ ಈ ಬಣ್ಣಗಳು ಹೊಂದುವುದಿಲ್ಲ. ನಿಷಿದ್ಧವೆಂದರೂ ಆದೀತು.

ಆದರೆ ಸಾಂಪ್ರದಾಯಿಕವಾದರೂ ಮದುವೆ ರಿಸೆಪ್ಷನ್‌ನಂತಹ ಸಮಾರಂಭಗಳಲ್ಲಿ ಸಭಿಕರ ಗಂಭೀರ ನಿಲುವಿಗೆ ಧಕ್ಕೆಯಾಗದಂತೆ ಈ ಬಣ್ಣಗಳನ್ನೂ ತುಸು ಬಳಸಬಹುದು. ಡ್ರೆಸ್‌ನಲ್ಲಿ, ಅದಕ್ಕೆ ಹೊಂದುವ ಆಕ್ಸೆಸರಿಗಳಲ್ಲಿ, ಮೇಕಪ್‌ನಲ್ಲಿಯೂ ಸೂಕ್ತವಾಗಿ, ಮಿತವಾಗಿ ಬಳಸಿದರೆ ಯಾವ ವಯಸ್ಸಿನವರಿಗೂ ಚೆನ್ನಾಗೇ ಕಾಣುತ್ತವೆ ಈ ನಿಯಾನ್‌ ವರ್ಣಗಳು.

ಒಂದಷ್ಟು ಸಾಮಾನ್ಯ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಅಷ್ಟೆ. ಕೂದಲು, ತ್ವಚೆಗೆ ಹೊಂದುವ ಬಣ್ಣ ಆರಿಸಿದರೆ ಸರಿ. ಈಗಾಗಲೇ ಪಿಂಕ್‌ ಬಣ್ಣ ನಿಮ್ಮ ಮುಖದ ಮೇಲೆ ಚೆನ್ನಾಗಿ ಪ್ರತಿಫಲಿಸುತ್ತದೆ ಅಂತ ಸ್ನೇಹಿತೆಯರು ಮೆಚ್ಚುಗೆ ಸೂಸುತ್ತಿದ್ದರೆ, ಹಾಟ್‌ ಪಿಂಕ್‌ ಬಣ್ಣದ ಟಾಪ್‌, ಅಥವಾ ಕುರ್ತಿ ಆರಿಸಿ ನೋಡಿ. ನೇವಿ ನೀಲಿ ಬಣ್ಣದಲ್ಲಿ ಮುದ್ದಾಗಿ ಕಾಣ್ತೀ ಅಂತ ಕಾಮೆಂಟ್‌ ಸಿಕ್ಕಿತ್ತಾ? ನಿಯಾನ್‌ ನೀಲಿ ಧರಿಸಿ ನೋಡಿ. ಕಡುಹಸಿರು ಬಣ್ಣ ಕಣ್ಣ ಬಣ್ಣದೊಡನೆ ಸರಸವಾಡಿತ್ತೆ? ಹಂಗಂದ್ರೆ ನಿಯಾನ್‌ ಗ್ರೀನ್‌ ಏನು ಮಾಡಬೇಡ?

ಡ್ರೆಸ್‌ ಪೂರಾ ನಿಯಾನ್‌ ಬಣ್ಣಗಳಿಂದ ತುಂಬಿಹೋದರೆ ತಲೆ ತಿರುಗುವಂತಾಗುತ್ತಾ? ನ್ಯೂಟ್ರಲ್‌  ಜತೆ ನಿಯಾನ್‌ ಜೋಡಿ ಏನು ಮೋಡಿ ಮಾಡುತ್ತೆ ನೋಡಿ. ನ್ಯೂಟ್ರಲ್‌ ಅನ್ನು ಒದ್ದು ಆಚೆ ದೂಡಿದರೂ ಒಟ್ಟಾರೆಯಾಗಿ ನಿಯಾನ್‌ನ ಪ್ರಭಾವ ಕಡಿಮೆ ಮಾಡುವಂತಿರುತ್ತದೆ. ಹಾಟ್‌ ಪಿಂಕ್‌ ಲೆದರ್‌ ಸ್ಕರ್ಟ್‌ನ ಜತೆ ಬಿಳಿ ಟಿ ಶರ್ಟ್‌ ಆಧುನಿಕ ಎನಿಸಿದರೂ ನೀಟ್‌ ಆಗಿ ಕಾಣುತ್ತದೆ, ಜತೆಜತೆಗೇ ಅನಿರೀಕ್ಷಿತ ನೋಟ ಕೊಡುತ್ತದೆ.

ಯಾವುದೇ ಪ್ಯಾಟರ್ನ್‌ ವಿನ್ಯಾಸವಿಲ್ಲದ ಪ್ಲೇನ್‌ ಸ್ವೀಟ್‌ ಡ್ರೆಸ್‌ ಜತೆ ನಿಯಾನ್‌ ಬಣ್ಣವೂ ಬೆರೆತರೆ ಆಸಕ್ತಿಕರ. ಲೈಟ್‌ ವೇಟ್‌ನ ಪಾರದರ್ಶಕ ತೆಳು ಟಾಪ್‌ನ ಒಳಗೆ ನಿಯಾನ್‌ ಬಣ್ಣದ ಸ್ಪೋರ್ಟ್ಸ್‌ ಟಾಪ್‌ ಹಾಕಿದರೆ, ತುಸುವೇ ಆದರೂ  ಗಮನ ಸೆಳೆಯುವ ಬಣ್ಣ ಕಣ್ಣು ಮಿಟುಕಿಸುತ್ತದೆ.

ಜೀನ್ಸ್‌ ಧರಿಸುವವರಾದರೆ, ನಿಯಾನ್‌್‌ ಜೀನ್ಸ್‌ ಅತ್ಯುತ್ತಮ ಆಯ್ಕೆ. ಉಡುಪಿನ ಹಚ್ಚಿನ ಭಾಗ ಆವರಿಸಿದರೂ ಶರ್ಟ್‌ ಅಥವಾ ಟಾಪ್‌ ತಿಳಿ ಬಣ್ಣದ್ದಾಗಿಬಿಟ್ಟರೆ ಅಷ್ಟೇನೂ ಎದ್ದುಕಾಣುವುದಿಲ್ಲ. ಡೆನಿಮ್‌ ಜಾಕೆಟ್‌ ಹಾಕಿಬಿಟ್ಟರಂತೂ ನಿತ್ಯದ ನೋಟವೇ.  ಕಾಟನ್‌ನ ನ್ಯೂಟ್ರಲ್‌ ಬಣ್ಣದ ಟಾಪ್‌, ಕುರ್ತಿ, ಅಥವಾ ಟ್ಯೂನಿಕ್‌ ಟಾಪ್‌ ಹಾಕಿ ಜೊತೆಗೆ ದಿಟ್ಟ ಬಣ್ಣದ ಹ್ಯಾಂಡ್‌ಬ್ಯಾಗ್‌ ಮಸ್ತ್‌ ಎನಿಸುತ್ತದೆ.

ಬೂದು ಬಣ್ಣ, ಅಥವಾ ಬೇಜ್‌ ಬಣ್ಣ, ಖಾಕಿ ಛಾಯೆಯ ಕಾರ್ಡ್ರಾ ಪ್ಯಾಂಟ್‌ ಜತೆ ರೇಡಿಯಂ ಟಾಪ್‌ ಹಾಕಿದರೆ ಪ್ರೊಫೆನಷನಲ್‌ ಗಂಭೀರ ನೋಟ ನಿಮ್ಮದು. ಸಾಂಪ್ರದಾಯಿಕ ವಿನ್ಯಾಶದ ಷೂ, ಚಪ್ಪಲಿಗಳೂ ಈಗ ಎದ್ದು ಕಾಣುವ ಅನಿರೀಕ್ಷಿತ ಬಣ್ಣಗಳಲ್ಲಿ ಲಭ್ಯ. ಜೀನ್ಸ್‌ನ ಜತೆ ಇಂಥ ಚಪ್ಪಲಿ ಧರಿಸಿ, ಮ್ಯಾಚಿಂಗ್‌ ಅಥವಾ ಕಾಂಟ್ರ್ಯಾಸ್ಟ್‌ ಫ್ಲೋರೋಸೆಂಟ್‌ ಬಣ್ಣದ ಟಾಪ್‌ ಹಾಕಿದರೆ ಅತಿ ಎನಿಸುವುದಿಲ್ಲ.

ಕ್ಲಾಸಿಕ್‌ ಎ ಲೈನ್‌ ಚೂಡಿ ಟಾಪ್‌, ಕುರ್ತಿ, ಚೂಡಿದಾರ್‌, ಲೆಗ್ಗಿಂಗ್‌, ಸ್ಟೋಲ್‌, ಸ್ಕಾರ್ಫ್‌, ದುಪಟ್ಟಾ ಕಡೆಗೆ ಸೀರೆಯ ಅಂಚಾದರೂ ಸರಿ, ನಿಯಾನ್‌ ಬಣ್ಣದಲ್ಲಿದ್ದರೆ, ಆಧುನಿಕ ಎನಿಸುತ್ತದೆ. ಹೊಸದಾಗಿ ಈ ಹೊಸ ಬಣ್ಣದ ಟ್ರೆಂಡ್‌ ಆರಂಭಿಸಲು ಅತ್ಯುತ್ತಮ ಉಪಾಯ. ಇಲ್ಲವಾದರೆ ಕಪ್ಪು ಬಿಳುಪಿನ ಸಂಯೋಜನೆಯ ವಿನ್ಯಾಸ ಸೀರೆಯದ್ದಾದರೆ ಜತೆಗೆ ಕೈಯಲ್ಲಿ ಹಿಡಿಯುವ ಕ್ಲಚ್‌ ಮತ್ತು ಆಗಾಗ ಕಂಡೂ ಕಾಣದಂತೆ ಇಣುಕುವ ಚಪ್ಪಲಿ ನಿಯಾನ್‌ ಬಣ್ಣದ್ದಾದರೂ ವಾವ್‌. ಆದರೆ ಚಪ್ಪಲಿ ಮತ್ತು ಕ್ಲಚ್‌ ಬೇರೆ ಬೇರೆ ಬಣ್ಣದ್ದಾದರೆ ಚೆನ್ನ. ಒಂದು ಹಸಿರಾದರೆ ಇನ್ನೊಂದು ಕಿತ್ತಳೆ ಬಣ್ಣ, ಅಥವಾ ಅಕ್ವಾ ಬಣ್ಣದ ಜತೆ ಹಳದಿ ಒಪ್ಪುತ್ತದೆ. ಯುವಜನರಾದರೆ ಜರ್ಕಿನ್‌ ಅಥವಾ  ಶಾಲ್‌ ತರಹದ ಸ್ಟೋಲ್‌ ನಿಯಾನ್‌ ಬಣ್ಣದ್ದು ಧರಿಸಿ ಸಮಾರಂಭ ಪ್ರವೇಶಿಸಬಹುದು.

ತಿಳಿಛಾಯೆಯ ಉಡುಪಿನ ಜತೆ ಹೊಳೆಯುವ ನಿಯಾನ್‌ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಬಹುದು. ಆದರೆ ಮೇಕಪ್‌ನಲ್ಲಿ ಫ್ಲೋರೋಸೆಂಟ್‌ ಬಣ್ಣ ಇದ್ದಾಗ ಹೇರ್‌ಸ್ಟೈಲ್‌ ಮತ್ತು ಉಡುಪು ಸರಳವಾಗಿರಲಿ. ಮೇಕಪ್‌ನಲ್ಲಾದರೂ ಅಷ್ಟೆ. ಎಲ್ಲೋ ಒಂಚೂರು ಒಂದು ಕಡೆ ಮಾತ್ರ ಹೊಳೆವ ಬಣ್ಣ ಇರಲಿ. ಕಣ್ಣಿಗೆ ನಾಟಕೀಯ ಬಣ್ಣ ಬೆರೆತಾಗ ತುಟಿಗೆ ಬಣ್ಣರಹಿತವಾಗಿರುವ ತ್ವಚೆಗೆ ಹೊಂದುವ ವರ್ಣಗಳನ್ನು ಆಯ್ಕೆ ಮಾಡಿಕೊಳ್ಳಿ (‘ನ್ಯುಡ್‌ ಕಲರ್ಸ್‌’) ಬಣ್ಣ ಮೆತ್ತಿಕೊಳ್ಳಲಿ. ತುಟಿ ಹೊಳೆವ ಗಾಢ ಗುಲಾಬಿ, ಕೆಂಪು ಬಣ್ಣ ಬಳಿದುಕೊಂಡಾಗ ಕಣ್ಣಿಗೆ ನ್ಯೂಟ್ರಲ್‌ ಛಾಯೆಗಳೇ ಇರಲಿ.

ನೇಲ್‌ಪಾಲಿಶ್‌ ಅಂಥ ಹೊಸ ಬಣ್ಣಗಳಲ್ಲಿ ಇದ್ದೇ ಇವೆ.  ಸ್ನೇಹಿತರೊಂದಿಗೆ ನೈಟ್‌ಔಟ್‌ ಪಾರ್ಟಿ, ಬೀಚ್‌ ವಿಹಾರಕ್ಕೆ ಇಂಥ ಬಣ್ಣ ಧರಿಸುವುದು ಆರಂಭದಲ್ಲಿ ಸೂಕ್ತ. ಕ್ರಮೇಣ ನಮ್ಮೂರಲ್ಲಿ ಎಲ್ಲೆಲ್ಲೂ ಇಂಥ ಬಣ್ಣ ಕಂಡಾಗ ನಾವೂ ಧರಿಸಿದರೆ ನಾವೊಬ್ರೇ ಅಷ್ಟೇನೂ ಎದ್ದು ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.