ADVERTISEMENT

ಶಿಶುಮರಣ: ಎಚ್ಚೆತ್ತುಕೊಳ್ಳುವುದೆಂದು?

ಕೆ.ಸಿ.ರಘು
Published 1 ಸೆಪ್ಟೆಂಬರ್ 2017, 19:30 IST
Last Updated 1 ಸೆಪ್ಟೆಂಬರ್ 2017, 19:30 IST
ಶಿಶುಮರಣ: ಎಚ್ಚೆತ್ತುಕೊಳ್ಳುವುದೆಂದು?
ಶಿಶುಮರಣ: ಎಚ್ಚೆತ್ತುಕೊಳ್ಳುವುದೆಂದು?   

ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯ ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 60 ಮಕ್ಕಳ ಸಾವು ಇಡೀ ದೇಶವನ್ನೇ ದಿಗ್ಭ್ರಾಂತಗೊಳಿಸಿದೆ. ಪ್ರತಿ ವರ್ಷ ಇದೇ ಸಮಯದಲ್ಲಿ ನೂರಾರು ಮಕ್ಕಳು ಇದೇ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯ ದೇಶದಲ್ಲಿಯೇ ಮಕ್ಕಳ ಸಾವನ್ನು ತಡೆಗಟ್ಟುವಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಇದಕ್ಕಿಂತ ಕೆಟ್ಟ ದೇಶವನ್ನು ಕಡುಬಡ ಆಫ್ರಿಕಾ ಖಂಡದ ದೇಶಗಳಲ್ಲೂ ಸಹ ಕಾಣಲಾಗದು.

ಉತ್ತರಪ್ರದೇಶ ಒಂದರಲ್ಲಿಯೇ ವರ್ಷಕ್ಕೆ ಐದು ವರ್ಷದೊಳಗಿನ ಮಕ್ಕಳ ಸಾವು 4 ಲಕ್ಷ. ನಮ್ಮ ದೇಶದಲ್ಲಿ ಹುಟ್ಟುವ ಸುಮಾರು 2 ಕೋಟಿ 70 ಲಕ್ಷ ಮಕ್ಕಳಲ್ಲಿ 11 ಲಕ್ಷ ಮಕ್ಕಳು ಮೊದಲ ಹುಟ್ಟುಹಬ್ಬದ ಮುನ್ನವೇ ಸಾವಿಗೀಡಾಗುತ್ತಾರೆ. ಅದೇ ರೀತಿ 5 ವರ್ಷದೊಳಗಿನ ಮಕ್ಕಳ ಸಾವು ಪ್ರತಿ ವರ್ಷ ಒಟ್ಟು 13.5 ಲಕ್ಷ. ಈ ದೇಶಕ್ಕೆ ಇದಕ್ಕಿಂತ ಗಂಭೀರವಾದ ಸಮಸ್ಯೆ ಬೇರೊಂದು ಉಂಟೇ? ಆದರೆ ಇದರ ಚರ್ಚೆಯಾಗಲೀ ಚಿಂತನೆಯಾಗಲೀ ಸಮಸ್ಯೆಯ ಗಂಭೀರತೆಗೆ ತಕ್ಕಂತೆ ಎಲ್ಲಿಯೂ ನಡೆಯುತ್ತಿಲ್ಲ. ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗದು. ಈ ರೀತಿ ಸಾವಿನ ವರದಿಯಾದಾಗ ಸಾವಿಗೆ ಯಾವ ಕಾಯಿಲೆ ಕಾರಣ ಎಂದು ಹೇಳುವುದೇ ಮುಖ್ಯ ಗುರಿಯಾಗಿರುತ್ತದೆ.

ಈ ಸಾವುಗಳಿಗೆ ‘ಜಾಪನೀಸ್ ಎನ್‌ಸಫಲೈಟೀಸ್’ ಕಾರಣವಿರಬಹುದು. ಈ ಕಾಯಿಲೆಯಲ್ಲೂ ಹತ್ತಾರು ಬಗೆಗಳಿವೆ. ಇದಕ್ಕೆ ಸೊಳ್ಳೆಯೇ ಮುಖ್ಯ ಕಾರಣ. ಅಲ್ಲಿ ಭತ್ತ ಬೆಳೆಯುವುದು ಮತ್ತು ನೀರು ಹಾಯಿಸುವುದು ಇನ್ನೊಂದು ಕಾರಣ. ಹೀಗೆ ಕಾರಣಗಳ ರಾಶಿಯನ್ನೇ ಹುಟ್ಟುಹಾಕಲಾಗುತ್ತಿದೆ. ಇನ್ನೂ ಕೆಲವು ರಾಜಕೀಯ ಧುರೀಣರು ಇಂತಹ ದೊಡ್ಡ ದೇಶದಲ್ಲಿ ಇಂತಹ ಘಟನೆಗಳೆಲ್ಲ ನಡೆಯುವುದು ಸಾಧ್ಯ; ಇದೊಂದು ಸಹಜ ಅವಗಡ ಎಂದು ವಿವರಿಸಿದರೆ, ಇನ್ನು ಕೆಲವರು ಮಕ್ಕಳನ್ನು ನೋಡಿಕೊಳ್ಳಲಾಗದ ತಂದೆ–ತಾಯಂದಿರು ಇದ್ದು ಪ್ರಯೋಜನವೇನು ಎನ್ನುತ್ತಿದ್ದಾರೆ. ರಾಜ್ಯ ಮತ್ತು ರಾಜಕಾರಣ ತನ್ನ ಹೊಣೆಗಾರಿಕೆಯಿಂದ ಕೈ ತೊಳೆದುಕೊಳ್ಳಲು ನೂರಾರು ದಾರಿಗಳಿವೆ.

ADVERTISEMENT

ಕೆಲವು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಹೆಣ್ಣುಮಕ್ಕಳ ಶಿಶುಹತ್ಯೆ ನಡೆಯುತ್ತಿತ್ತು. ಆದರೆ ಅದನ್ನು ವೈದ್ಯಕೀಯವಾಗಿ ದೃಢಪಡಿಸಲು ವ್ಯವಸ್ಥಿತವಾಗಿ ಮಾಡಲಾಗುತ್ತಿತ್ತು. ಹುಟ್ಟಿದ ಕೂಸನ್ನು ತಣ್ಣೀರಿನಲ್ಲಿ ಅದ್ದಿ ನಿಮೋನಿಯಾ ಸೋಂಕು ತಗುಲಿಸಿ ವೈದ್ಯರಿಂದ ವೈದ್ಯಕೀಯ ಮರಣಪತ್ರ ಕಾರಣ ಸಮೇತ ಪಡೆದುಕೊಳ್ಳುತ್ತಿದ್ದರು. ಇದೇ ಉತ್ತರ ಪ್ರದೇಶದ ಮಕ್ಕಳು ಕೇರಳದಂತಹ ರಾಜ್ಯದಲ್ಲಿ ಹುಟ್ಟಿದ್ದರೆ, 4 ಲಕ್ಷ ಮಕ್ಕಳ ಸಾವು ಕೇವಲ 33 ಸಾವಿರವಾಗಿರುತ್ತಿತ್ತು. 3 ಲಕ್ಷದ 67ಸಾವಿರ ಮಕ್ಕಳು ಸಾವಿನಿಂದ ಬಚಾವಾಗುತ್ತಿದ್ದರು. ಕೇರಳ ರಾಜ್ಯವೂ ನಮ್ಮದೆ ದೇಶದ ರಾಜ್ಯವಾಗಿದೆ ಅಥವಾ ಉತ್ತರ ಪೂರ್ವ ರಾಜ್ಯಗಳಾದ ಮಣಿಪುರ, ಮೇಘಾಲಯದಲ್ಲಾಗಿದ್ದರೂ ಇಷ್ಟೇ ಸಾವನ್ನು ತಡೆಗಟ್ಟಬಹುದಾಗಿತ್ತು.

ಪ್ರಾಥಮಿಕ ಆರೋಗ್ಯ ಸೌಲಭ್ಯದ ಕೊರತೆ ಉತ್ತರ ಪ್ರದೇಶದಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ಮಹಿಳೆಯರ ವಿದ್ಯಾಭ್ಯಾಸದ ಕೊರತೆ, ಬಯಲು ಶೌಚಾಲಯದ ಸಮಸ್ಯೆ, ಸ್ವಚ್ಛತೆ, ಶಿಶುಮರಣಕ್ಕೆ ಕಾರಣಗಳಾಗಿವೆ. ಸರಾಸರಿ ಮದುವೆಯ ವಯಸ್ಸು ಮಹಿಳೆಯರಿಗೆ ಇಂದಿಗೂ 18 ಆಗಿರುವುದು ಅವರಲ್ಲಿ ವಿದ್ಯಾಭ್ಯಾಸದ ಕೊರತೆಯನ್ನು ನೇರವಾಗಿ ಸೂಚಿಸುತ್ತದೆ. ನಮ್ಮ ದೇಶದ ದುರಂತವೆಂದರೆ ಸುಮಾರು ಒಂದು ಕೋಟಿ ಮಕ್ಕಳು ಹುಟ್ಟುವಾಗ 2.5 ಕೆ. ಜಿ.ಗಿಂತ ಕಡಿಮೆ ತೂಕದವರಾಗಿರುತ್ತಾರೆ.

ಅಂಥವರಿಗೆ ಹುಟ್ಟಿನಿಂದಲೇ ಸಮಸ್ಯೆಗಳು ಆವರಿಸಿಕೊಂಡಿರುತ್ತವೆ. ಕಡಿಮೆ ತೂಕದ ಮಕ್ಕಳನ್ನು ಸರಿಯಾದ ಬೆಳವಣಿಗೆಯ ಹಾದಿಗೆ ತಲುಪಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ.ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 4ರ ಪ್ರಕಾರ 5 ವರ್ಷದೊಳಗಿನ ಮಕ್ಕಳ ಸಾವು ಉತ್ತರಪ್ರದೇಶದಲ್ಲಿ ಸಾವಿರಕ್ಕೆ 78 ಆದರೆ, ಕೇರಳದಲ್ಲಿ ಕೇವಲ 7. ಈ ಪ್ರಮಾಣ ಕರ್ನಾಟಕದಲ್ಲಿ 32 ಆದರೆ, ತಮಿಳುನಾಡಿನಲ್ಲಿ 27. ಕೇರಳದ ಸಾಧನೆ ಇಂದು ಅಮೆರಿಕದ ಸಾಧನೆಯಷ್ಟೇ ಸಮಾನವಾಗಿದೆ.

ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಿದ್ದ ಅಲ್ಲಿನ ಗುಪ್ತಚರ ಇಲಾಖೆಯ ಸಿಐಎಗೆ ಒಂದು ದೇಶ ಮತ್ತು ಸಮಾಜದ ಅವನತಿಯ ಮೂಲ ಸಂಕೇತವನ್ನು ಗುರುತಿಸುವ ಸೂಚನೆಗಳನ್ನು ತಿಳಿಸುವಂತೆ ಕೇಳಿದ್ದರು. ಆಗ ಸಿಐಎ ನೀಡಿದ ವರದಿಯಲ್ಲಿ ಒಂದು ರಾಷ್ಟ್ರದ ದೌರ್ಬಲ್ಯವನ್ನು, ದುರ್ಗತಿಯನ್ನು ಸೂಚಿಸಲು ಶಿಶುಮರಣವೊಂದೇ ಸಾಕು ಎಂದು ವರದಿ ಮಾಡಿತ್ತು. ಭಾರತಾಂಬೆಯ ಮಡಿಲಲ್ಲಿ ಲಕ್ಷಾಂತರ ಮಕ್ಕಳ ಸಾವನ್ನು ಸಹಿಸುವುದಾದರೂ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.