ADVERTISEMENT

ಅಭಿವೃದ್ಧಿಯೊಂದಿಗೆ ಹಳ್ಳಿಗಳ ‘ಮೈತ್ರಿ’!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 19:30 IST
Last Updated 11 ಸೆಪ್ಟೆಂಬರ್ 2017, 19:30 IST
ಮೃತ್ರಿ ಸಂಘದ ಸಹಾಯದಿಂದ ಮೆನೆಯಲ್ಲೆ ಕೆಲಸ  ಮಾಡಿ ಆದಾಯ ಗಳಿಸುವ ಮಹಿಳೆಯರು.
ಮೃತ್ರಿ ಸಂಘದ ಸಹಾಯದಿಂದ ಮೆನೆಯಲ್ಲೆ ಕೆಲಸ ಮಾಡಿ ಆದಾಯ ಗಳಿಸುವ ಮಹಿಳೆಯರು.   

– ಪೂರ್ಣಿಮಾ ಕಾನಹಳ್ಳಿ

ಗ್ರಾಮೀಣ ಯುವ ವರ್ಗ ಉದ್ಯೋಗ ಅರಸಿ ಪಟ್ಟಣ ಸೇರುತ್ತಿದ್ದರೆ, ವಯಸ್ಕ ಪೋಷಕ ವರ್ಗ ಅನಿವಾರ್ಯವಾಗಿ ಹಳ್ಳಿಗಳಲ್ಲಿ ದಿನ ದೂಡುವಂತಾಗಿದೆ. ಇದು ಒಂದೆರಡು ಗ್ರಾಮಗಳ ಗೋಳಲ್ಲ, ದೇಶದ ಬಹುತೇಕ ಗ್ರಾಮಗಳ ಚಿತ್ರಣ ಹೀಗೆಯೇ ಇದೆ.

ಗ್ರಾಮೀಣಾಭಿವೃದ್ದಿಯ ಹೆಸರಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ತಂದಿದ್ದರೂ ಅಭಿವೃದ್ಧಿ ಹೊಂದಿದ ಗ್ರಾಮಗಳು ಬೆರಳೆಣಿಕೆಯಷ್ಟು. ಇದಕ್ಕೆ ಅಪವಾದ ಎನ್ನುವಂತೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಕೆಲವು ಗ್ರಾಮಗಳು ಇತ್ತೀಚೆಗೆ ಸಮುದಾಯದ ಪ್ರಯತ್ನದಿಂದಲೇ ಅಭಿವೃದ್ಧಿ ಹೊಂದಿವೆ.

ADVERTISEMENT

ಹುಟ್ಟಿದ ಊರಿಗೆ ಅಳಿಲು ಸೇವೆ ಸಲ್ಲಿಸಬೇಕೆಂಬ ಕನಸು ಕಂಡ ಅಜ್ಜಂಪುರ ಸಮೀಪದ ಕಾಟಿಗನೆರೆ ಗ್ರಾಮದ ಬಿಬಿಎಂ ಪದವೀಧರ ಶಿವಪ್ರಸಾದ್, ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಮಧುಕರ್, ಕಿರಣ್ ಮತ್ತು ನಾಗರಾಜಪ್ಪ ಅವರ ತಂಡ ಗ್ರಾಮಗಳ ಸುಧಾರಣೆಯಲ್ಲಿ ತೊಡಗಿದೆ.

ಮೈತ್ರಿ ಇಂಟರ್‌ನ್ಯಾಷನಲ್ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿರುವ ಅವರು, ಕಳೆದ ಒಂದು ವರ್ಷದಿಂದ ತರಿಕೆರೆ ತಾಲ್ಲೂಕಿನ ನಾಗರಾಳ, ಜೋಡಿಹೋಚಿಹಳ್ಳಿ ಮತ್ತು ಕಬ್ಬಳ್ಳಿ ಗ್ರಾಮಗಳ ರೈತರನ್ನು ಒಗ್ಗೂಡಿಸಿ ಸ್ವಯಂ ಉದ್ಯೋಗ ಕಲಿಸಿ ಗುಳೇ ಹೋಗುವುದನ್ನು ತಪ್ಪಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಕಳೆದೆರಡು ವರ್ಷಗಳಿಂದ ಮುಂಗಾರು ಮುನಿಸಿಕೊಂಡಿದೆ. ಅದರ ಬಿಸಿ ನಾಗರಾಳ, ಜೋಡಿಹೋಚಿಹಳ್ಳಿ ಮತ್ತು ಕಬ್ಬಳ್ಳಿ ಗ್ರಾಮಗಳಿಗೂ ತಟ್ಟಿದೆ. ಕೊಳವೆ ಬಾವಿಗಳ ನೀರು ಕೃಷಿಗೆ ಸಾಕಾಗುತ್ತಿಲ್ಲ. ಈ ವರ್ಷದ ಬಿಸಿಲ ಬೇಗೆಗಂತೂ ಬಹುತೇಕ ಕಡೆ ಕೃಷಿ ನೆಲಕಚ್ಚಿದೆ. ಇಂತಹ ಸನ್ನಿವೇಶದಲ್ಲಿ ಹೈನುಗಾರಿಕೆ ಮತ್ತು ಹಾಲಿನ ಉತ್ಪನ್ನಗಳಷ್ಟೆ ಅಲ್ಲದೆ ಗೋಮೂತ್ರ ಮತ್ತು ಸಗಣಿಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ತರಬೇತಿ ನೀಡಿದ್ದಾರೆ.

ಈ ಗ್ರಾಮಗಳ ಆಸಕ್ತ ರೈತರಿಗೆ 50 ಗಿರ್ ತಳಿಯ ಹಸುಗಳನ್ನು ಕೊಡಿಸಿ, ಹಾಲಿನ ಸಂಸ್ಕರಣೆಗಾಗಿ ಅಲ್ಲೆ ಡೇರಿಯನ್ನು ತೆರೆದಿದ್ದಾರೆ. ರೈತರ ಮನೆ ಬಾಗಿಲಿಗೆ ಹೋಗಿ ಹಾಲನ್ನು ಸಂಗ್ರಹಿಸಲಾಗುತ್ತದೆ. ಇಲ್ಲಿಯ ಔಷಧಿಯ ಮಹತ್ವವುಳ್ಳ ದೇಸಿ ಆಕಳ ತುಪ್ಪಕ್ಕೆ ಕಿಲೋಗೆ ₹ 2,000ದಷ್ಟು ಬೆಲೆಯಿದೆ. ಹಾಸನ, ಮೈಸೂರು ಮತ್ತು ಹೈದರಾಬಾದ್‌ನಿಂದ ಬೇಡಿಕೆ ಇದೆ. ಯಾವುದೇ ಪ್ರಚಾರ ತಂತ್ರವಿಲ್ಲ. ತನ್ನ ರುಚಿಯಿಂದಾಗಿ ಜನಗಳಿಂದ ಜನಗಳಿಗೆ ಸುದ್ದಿಯಾಗಿದೆ ಎನ್ನುತ್ತಾರೆ ಡೇರಿ ಮಾಲೀಕ ಕೃಷ್ಣಮೂರ್ತಿ. ಮೈತ್ರಿ ಸಂಸ್ಥೆಯ ಬೆಂಬಲದಿಂದ ಕೆಎಂಎಫ್‌ನಲ್ಲಿ ತರಬೇತಿ ಪಡೆದಿದ್ದಾರೆ. ‘ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾರಾಟ ಜೋರಾಗಿದೆ’ ಎಂದು ಅವರು ಹೇಳುತ್ತಾರೆ.

ಕಡೂರು ಸಮೀಪದ ಊರು ನಾಗರಾಳ. ಇಲ್ಲೂ ಮನೆ ಮನೆಯಲ್ಲಿ ದೇಸಿ ಹಸುಗಳಿವೆ. ಹಸು ಗಂಜಲ ಹುಯ್ಯುತ್ತಿದೆ ಎಂದರೆ ಓಡಿ ಬಂದು ಹಿಡಿದು ಸಂಗ್ರಹಿಸುತ್ತಾರೆ. ಗೋಮೂತ್ರವನ್ನು ಬಟ್ಟಿ ಇಳಿಸಿ ಸ್ಥಳೀಯ ಗಿಡಮೂಲಿಕೆಗಳಾದ ಹರಳು, ಎಕ್ಕ. ಅಮೃತಬಳ್ಳಿ, ನೇರಳೆ ಬೀಜ, ನೆಲ್ಲಿಕಾಯಿ ಕಾಳುಮೆಣಸು, ಜೀರಿಗೆ, ಲವಂಗ ಬಳಸಿ ಹಲ್ಲುಜ್ಜುವ ಪುಡಿ, ನೋವಿನ ಎಣ್ಣೆ, ಅಜೀರ್ಣಕ್ಕೆ, ಮಧುಮೇಹಕ್ಕೆ ಔಷಧಿ ತಯಾರಿಸುತ್ತಾರೆ. ಹಸುವಿನ ಹಾಲು, ಅಂಟುವಾಳಕಾಯಿ ಬೂದಿ ಬಳಸಿ ಸ್ನಾನ ಮತ್ತು ಪಾತ್ರೆ ತೊಳೆಯುವ ಸಾಬೂನು, ಫೆನಾಯಿಲ್ ತಯಾರಿಸುತ್ತಿದ್ದಾರೆ.

ಘನ ಜೀವಾಮೃತದ ಉಂಡೆ, ಸಗಣಿ, ದ್ವಿದಳ ಧಾನ್ಯದ ಉಂಡೆ, ಸಾವಯವ ಬೆಲ್ಲ ಗಂಜಲ ಹುತ್ತದ ಮಣ್ಣು, ಮಜ್ಜಿಗೆ ತುಪ್ಪ ಸೇರಿಸಿ ಉಂಡೆ ಮಾಡಿ ನೆರಳಿನಲ್ಲಿ ಒಣಗಿಸಿದ ಘನ ಜೀವಾಮೃತದ ಉಂಡೆಗಳು ಎಲ್ಲಾ ವಿಧದ ಬೆಳೆಗಳಿಗೂ ಅತ್ಯುತ್ತಮ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಹಾಸನ ಚಿಕ್ಕಮಗಳೂರಿನಲ್ಲಿ ಕಾಳುಮೆಣಸು ಬಳ್ಳಿಗಳಿಗೆ ಯಶಸ್ವಿಯಾಗಿ ಬಳಕೆಯಾಗುತ್ತಿದೆ. ಒಂದು ಉಂಡೆಯ ಮೇಲೆ ಒಂದು ತೆಂಗಿನ ನಾರಿನ ಸಿಪ್ಪೆಯನ್ನಿಟ್ಟು ನೀರುಣಿಸಿದರೆ ಹಲವಾರು ದಿನಗಳ ಕಾಲ ತೇವಾಂಶ ಹಿಡಿದಿಡುತ್ತದೆ. ಈ ಎಲ್ಲಾ ತರಬೇತಿಯನ್ನು ಆಗುಂಬೆ ಸಮೀಪದ ಹೆಬ್ರಿ ಗ್ರಾಮದ ಪರಿಣಿತರಿಂದ ಕೊಡಿಸಲಾಗಿದೆ.

ಸಗಣಿಯನ್ನು ಬಿಸ್ಕೆಟ್ ಆಕಾರದಲ್ಲಿ ತಟ್ಟಿ ಜೀವಾಮೃತದಲ್ಲಿ ಅದ್ದಿ ನೆರಳಿನಲ್ಲಿ ಒಣಗಿಸಿ ತಯಾರಿಸಿದ ಬೆರಣಿಗಳನ್ನು ಹೂವಿನ ಕುಂಡಗಳಿಗೆ, ಕೈತೋಟಕ್ಕೆ ಬಳಸಬಹುದು. ಸಗಣಿ ಮುಟ್ಟಲು ಹಿಂಜರಿಯುವವರಿಗೆ ಕಿರಿಕಿರಿ ಆಗದಂತೆ ಜೀವಾಮೃತದ ಬಿಸ್ಕೆಟ್‌ ರೂಪಿಸಲಾಗಿದೆ.

ಈ ಎಲ್ಲಾ ಉತ್ಪನ್ನಗಳನ್ನು ಪರಿಚಿತರಿಗೆ, ಸ್ಥಳೀಯರಿಗೆ ಪರೀಕ್ಷಾರ್ಥವಾಗಿ ನೀಡಿದ್ದೆವು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಸ್ಥಳೀಯ ಮಾರುಕಟ್ಟೆಯ ಬೇಡಿಕೆ ಪೂರೈಸಿದ ನಂತರ ಮುಂದಿನ ಹೆಜ್ಜೆ ಎನ್ನುತ್ತಾರೆ ಮೈತ್ರಿ ತಂಡದ ಶಿವಪ್ರಸಾದ್.

ಬರದ ಬೇಗೆಯಿಂದ ಬೇಸತ್ತು ಬಸವಳಿದ ಮಹಿಳೆಯರಿಗಂತೂ ಸ್ವ–ಉದ್ಯೋಗ ವರದಾನವಾಗಿದೆ. ಇದುವರೆಗೆ ನಮ್ಮ ಮಹಿಳೆಯರು ಹೊರಹೋಗಿ ದುಡಿದವರಲ್ಲ, ಹೋಗಬೇಕಾದ ಅನಿವಾರ್ಯತೆಯಲ್ಲಿ ಮೈತ್ರಿ ತಂಡದ ಮಾರ್ಗದರ್ಶನದಿಂದ ಮನೆಯಲ್ಲೇ ಕೈತುಂಬ ಕೆಲಸದ ಜೊತೆಗೆ ಆದಾಯವೂ ದೊರೆಯುತ್ತಿದೆ ಎನ್ನುತ್ತಾರೆ ನಾಗರಾಳ ಗ್ರಾಮದ ರೈತ ಧರಣೇಶಪ್ಪ.

ಫಿಲಿಪ್ಪೀನ್ಸ್‌ನಲ್ಲಿ ನೆಲೆಸಿರುವ ಬಿ.ಡಿ. ಜತ್ತಿಯವರ ಮೊಮ್ಮಗ ಚನ್ನು ಜತ್ತಿ ಅವರು, ಕಳೆದ ವರ್ಷ ರಾಜ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆವು. ಮೈತ್ರಿ ಸಂಸ್ಥೆಯ ಸಾಮಾಜಿಕ ಕಳಕಳಿ ಗಮನಿಸಿ ನೆರವು ನೀಡಿದ್ದಲ್ಲದೆ, ಇತ್ತೀಚೆಗೆ ಸಂಸ್ಥೆಯ ಗೋಶಾಲೆಯ ಉದ್ಘಾಟನೆಗೂ ಬಂದಿದ್ದರು ಎಂದು ಮೈತ್ರಿ ಸಂಸ್ಥೆಯವರು ನೆನೆಯುತ್ತಾರೆ.

ಬರದ ಊರುಗಳಲ್ಲಿ ಬದಲಾವಣೆ ತಂದ ಯಾರಿಗೂ ಲಾಭದ ಉದ್ದೇಶವಿಲ್ಲ. ಬದಲಿಗೆ ಜನರು ಈ ಗೋವಿನ ಉತ್ಪನ್ನಗಳನ್ನು ಖರೀದಿಸಿದರೆ ಸಾಕು. ಗೋವುಗಳ ರಕ್ಷಣೆ ಜತೆಗೆ ಹಳ್ಳಿಗಳ ಸುಸ್ಥಿರ ಅಭಿವೃದ್ಧಿಗೂ ನೆರವು ನೀಡಿದಂತಾಗುತ್ತದೆ ಎನ್ನುವುದು ಅವರ ಅಭಿಲಾಷೆ. ವಯಸ್ಸಾದ ದನಗಳಿಗಾಗಿ ಗೋಶಾಲೆಯನ್ನೂ ನಡೆಸಲಾಗುತ್ತಿದೆ. ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಇವುಗಳಿಗೆ ಮೇವನ್ನು ಬೆಳೆಯುತ್ತಿದ್ದಾರೆ.

ತರಿಕೆರೆ ಮತ್ತು ಕಡೂರು ತಾಲ್ಲೂಕುಗಳಲ್ಲಿ ರೈತರಿಂದ ಸಾವಯವ ತರಕಾರಿಗಳನ್ನೂ ಬೆಳೆಸುತ್ತಿದ್ದಾರೆ. ಇದನ್ನು ಅಲ್ಲಿಯ ಎಲ್ಲಾ ಶಾಲೆಗಳಿಗೂ ಬೆಂಗಳೂರಿನ ಕೆಲವು ಅಪಾರ್ಟ್ ಮೆಂಟ್‌ಗಳಿಗೂ ಸರಬರಾಜು ಮಾಡಿ ವಿಷಮುಕ್ತ ಆಹಾರದ ಅರಿವು ಮೂಡಿಸುತ್ತಿದ್ದಾರೆ.

ಶಿಕ್ಷಣ ಮತ್ತು ದುಡಿಮೆಯೇ ದೇಶದ ಬಡತನಕ್ಕೆ ಮದ್ದು ಎಂಬ ಮಹಾತ್ಮ ಗಾಂಧಿಯವರ ಮಾತಿನಂತೆ ಆಸಕ್ತ ದುಡಿಯುವ ಕೈಗಳಿಗೆ ಕೆಲಸ ಕೊಡುವ ಕಾಯಕದಲ್ಲಿ ನಿರತವಾಗಿರುವ ಮೈತ್ರಿ ಸಂಸ್ಥೆ ವಾರ್ಷಿಕ ₹ 1.5 ಕೋಟಿ ವಹಿವಾಟು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.