ADVERTISEMENT

ಅವನಲ್ಲದ ಅವಳು ಭಾರತಿಯ ಭಾರದ ಜೀವನ

ಸುಬ್ರಮಣ್ಯ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST

`ಕುಟುಂಬಕ್ಕೂ ಬೇಡ, ಸಮಾಜಕ್ಕೂ ಬೇಡ. ನಾವು ಬದುಕುವುದಾದರೂ ಹೇಗೆ? ಪ್ರಾಣಿ - ಪಕ್ಷಿಗಳನ್ನು ಪ್ರೀತಿಸುವ ಜನ ನಮ್ಮನ್ನು ಕನಿಕರದಿಂದಲೂ ಮಾತನಾಡಿಸುವುದಿಲ್ಲ. ನಾವು ಮನುಷ್ಯರು ಅಲ್ಲವೇ...?'

ಇದು, ಧಾರವಾಡ ಸಮೀಪದ ದುಮ್ಮೋಡ ಗ್ರಾಮದ ಲೈಂಗಿಕ ಅಲ್ಪಸಂಖ್ಯಾತರಾಗಿರುವ ಭಾರತಿ ಅಲಿಯಾಸ್ ಭೀಮಪ್ಪ ಕಲ್ಲಪ್ಪ ಮಾಳಗಿಯ ಮನದಾಳದ ನೋವು. ಧಾರವಾಡ ಸುಭಾಷ್ ರಸ್ತೆಯ ಹಣ್ಣಿನ ವ್ಯಾಪಾರಿ `ಈಕೆ'.

ಹತ್ತು ವರ್ಷದಿಂದ ಹಣ್ಣಿನ ವ್ಯಾಪಾರ ಮಾಡುತ್ತಿರುವ ಭಾರತಿ ಸದಾ ಹಸನ್ಮುಖಿ. ವ್ಯಾಪಾರದಲ್ಲಿಯೇ ಬದುಕು ರೂಪಿಸಿಕೊಂಡಿರುವ ಅವರು ಸ್ವಾಭಿಮಾನಿ ಕೂಡ. ಯಾರ ಹಂಗೂ ಇಲ್ಲದ ಏಕಾಂಗಿ ಬದುಕು ಅವರದ್ದು. `ಜೋಗಪ್ಪ' ಎಂದು ಕುಹಕವಾಡುವ ಜನರ ಎದುರು ಅವರದ್ದು ಆತ್ಮ ವಿಶ್ವಾಸದ ನಡೆ. ರಣಬಿಸಿಲು, ಬಿರುಗಾಳಿಗೆ ತತ್ತರಿಸದೆ ಕಲ್ಲು ಬಂಡೆಯಾಗಿದ್ದೇನೆ ಎಂದು ಭೀಮಪ್ಪ ಆಗಿ ಹುಟ್ಟಿ ಭಾರತಿಯಾದ ಕಥೆಯನ್ನು ಬಿಚ್ಚಿಟ್ಟರು.

ಕಹಿ ಅನುಭವ
`ಬಾಲ್ಯದಲ್ಲೇ ನನ್ನ ವರ್ತನೆ ಕಂಡು ನೆರೆಹೊರೆಯವರು ತಂದೆ - ತಾಯಿಗೆ ನನ್ನ ಬಗ್ಗೆ ದೂರು ಹೇಳಿದರೂ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಹೆಣ್ಣಿನಂತೆ ಇರಲು ಇಷ್ಟಪಟ್ಟೆ. ಊರಿನಲ್ಲಿ ನನ್ನದೇ ಮಾತು, ಚರ್ಚೆ. ಮನೆ ಸದಸ್ಯರು ಕಂಗಾಲಾಗಿ ಕುಗ್ಗಿ ಹೋದರು. ಈ ಅವಮಾನ, ನೋವಿನಲ್ಲೇ ಬೆಳೆದೆ. ಶಾಲೆಯಿಂದಲೂ ದೂರವಾದೆ. ಮನೆಯಿಂದ ಹೊರ ಬಂದೆ. ದೇವಸ್ಥಾನವೇ ನನಗೆ ಆಶ್ರಯವಾಯಿತು. ಸವದತ್ತಿ ಯಲ್ಲವ್ವನ ಸನ್ನಿಧಿಯಲ್ಲಿ ಮುತ್ತು ಕಟ್ಟಿಸಲಾಯಿತು.

  ನಂತರ ಅಣ್ಣನ ಜೊತೆ ದೊಡ್ಡ ಕದನವೇ ನಡೆಯಿತು. ಸ್ವತಂತ್ರವಾಗಿ ಬದುಕಲು ಬಿಡಲಿಲ್ಲ. ಸ್ವಂತ ದುಡಿಮೆಗೆ ಅವಕಾಶ ಮಾಡಿಕೊಡಲಿಲ್ಲ. ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಹೀಯಾಳಿಸಿದರು. ಜೋಗಪ್ಪನಿಗೆ ಆಸ್ತಿ ಏಕೆ ಎಂದು ತುಚ್ಛವಾಗಿ ಕಂಡರು.
`ಊರಿನ ಕೂಲಿ ಕೆಲಸಕ್ಕೂ ಬೇಡವಾದೆ. ಭೀಕ್ಷೆ ಬೇಡುವುದು ಇಷ್ಟವಾಗಲಿಲ್ಲ. ಬದುಕಿನ ಜಂಜಾಟಕ್ಕಾಗಿ ಲೈಂಗಿಕ ಕಾರ್ಯಕರ್ತೆಯಾದೆ.

ದಿನ ಕಳೆದಂತೆ ಹೀನ ಕೆಲಸ ಇಷ್ಟವಾಗಲಿಲ್ಲ. ಒಣಗಿದ ತರಗಲೆಯಾದ ಜೀವನವನ್ನು ಹೇಗಾದರೂ ರೂಪಿಸಿಕೊಳ್ಳಲೇಬೇಕಾದ ಅದಮ್ಯ ಆಸೆ ಇತ್ತು. ಹೀಗೆ; ಯೋಜಿಸುತ್ತಿರಬೇಕಾದರೆ ಹಣ್ಣಿನ ವ್ಯಾಪಾರ ಶುರು ಮಾಡಿದೆ. ಆರಂಭದಲ್ಲಿ ಅಡ್ಡಿ ಆತಂಕಗಳು ಎದುರಾದವು. ಒಡ ಹುಟ್ಟಿದ ಇಬ್ಬರು ಸಹೋದರಿಯರು ಇದಕ್ಕೆ ಸಹಾಯ ಮಾಡಿದರು. ಹೀಗೆ ಆರಂಭವಾದ ವ್ಯಾಪಾರವನ್ನು ಹತ್ತು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದೇನೆ.

`ವ್ಯಾಪಾರದಲ್ಲಿ ಯಶ ಕಾಣದಿದ್ದರೂ ಅನಿವಾರ್ಯದಿಂದ ಮಾಡುತ್ತಿದ್ದೇನೆ. ಬರುವ ಗ್ರಾಹಕರು `ಹಣ್ಣಿನ ರೇಟು ಯಂಗೈತಿ ಎಂದು ಕಣ್ಣು ಮಿಟುಕಿಸಿ ವಿಚಿತ್ರ ಹಾವಭಾವ ಪ್ರದರ್ಶಿಸುತ್ತಾರೆ'. ಇಲ್ಲಾರೀ ಅಣ್ಣಾರೇ, ನಾನ್ ಆ ದಂಧೆ ಮಾಡಂಗಿಲ್ಲರೀ ಎಂದರೂ ಮಾತನಾಡಿಸುವ ಧಾಟಿಯೇ ಬದಲಾಗುತ್ತಿಲ್ಲ' ಎಂದು ಭಾರತಿ ನೋವಿನಿಂದ ಹೇಳುತ್ತಾರೆ.

ಹಣ್ಣೇ ಜೀವನ
ಆಯಾ ಋತುಮಾನಕ್ಕೆ ತಕ್ಕಂತೆ ಮಾವು, ಬಾಳೆ, ಪೇರಳೆ, ಚಕ್ಕೋತಾ, ದ್ರಾಕ್ಷಿ ಹಣ್ಣು ಮಾರಾಟ ಮಾಡುತ್ತೇನೆ. `ನಾನು ಜೋಗಪ್ಪ ಅನ್ನೋ ಕಾರಣಕ್ಕೆ ಹಣ್ಣು ಕೊಳ್ಳುವುದಿಲ್ಲ. ಇನ್ನೂ ಹಣ್ಣಿನ ಬುಟ್ಟಿ ಹೊತ್ತು ಬಸ್‌ನಲ್ಲಿ ಬರುವಾಗ ಹೆಂಗಸರ ಆಸನದತ್ತ ಹೋದರೆ ಕೆಂಗಣ್ಣು ಬೀರುತ್ತಾರೆ. ಗಂಡಸರತ್ತ ಹೋದರೆ ದೇಹ ಸವರುತ್ತಾರೆ. `ನಮ್ಮ ಪರಿಸ್ಥಿತಿ ಯಾರ್ ಹತ್ರ ಹೇಳೋಣರೀ ಎಂದು' ಭಾರತಿ ಪ್ರಶ್ನಿಸುತ್ತಾರೆ.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಂಗಮ ಮತ್ತು ಸಮರ ಸಂಸ್ಥೆಗಳ ಒಡನಾಟದಿಂದ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿದ್ದೇನೆ. ಮಾಸಾಶನ, ವಸತಿ, ಪಡಿತರ ಇಂಥ ಮೂಲ ಸೌಲಭ್ಯಗಳು ನಮಗೂ ಸಿಗಬೇಕು. ವ್ಯಾಪಾರ - ವಹಿವಾಟು  ನಡೆಸುವವರಿಗೆ ಸಾಲ ಸೌಲಭ್ಯ ನೀಡಬೇಕು. ನಾವು ಯಾವ ತಪ್ಪು ಮಾಡಿಲ್ಲ. ನಮ್ಮ ಜನ್ಮಕ್ಕೆ ನಾವು ಕಾರಣರೂ ಅಲ್ಲ. ಸಮಾಜ ಮಾತ್ರ ಅಸಹ್ಯವಾಗಿ, ಕೀಳಾಗಿ ನೋಡುವುದು ಎಷ್ಟು ಸರಿ? ದುಡಿದು ತಿನ್ನುವುದು ತಪ್ಪೇ ಎಂದು ಅವರು ಮತ್ತೊಂದು ಪ್ರಶ್ನೆ ಮುಂದಿಡುತ್ತಾರೆ.

ಬೇಕಿದೆ ನೆರವು
ಲೈಂಗಿಕ ಅಲ್ಪಸಂಖ್ಯಾತರು ಉದ್ಯೋಗ, ವ್ಯಾಪಾರ ಮಾಡಲು ಈಗೀಗ ಮುಂದೆ ಬರುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ಮತ್ತು ಸಹಾಯ ಹಸ್ತ ಚಾಚುವುದು ಸಮಾಜದ ಕರ್ತವ್ಯ ಎಂದು ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಸಂಯೋಜಕ ಮಲ್ಲಿಕಾರ್ಜುನ ಪ್ರತಿಪಾದಿಸುತ್ತಾರೆ.

2010ರ ಬಜೆಟ್‌ನಲ್ಲಿ ಈ ಸಮುದಾಯದ ಅಭ್ಯುದಯಕ್ಕಾಗಿ 70 ಲಕ್ಷ ಘೋಷಣೆ ಮಾಡಿದ್ದರೂ ವಿನಿಯೋಗ ಆಗಿಲ್ಲ. ತಲಾ ಒಬ್ಬರಿಗೆ 20 ಸಾವಿರದಂತೆ ಹಣ ಮಂಜೂರು ಮಾಡಬೇಕಿದೆ. ಆದರೆ, ಅವರ ಸಂಖ್ಯೆ ಎಷ್ಟಿದೆ ಎಂಬುದರ ಬಗ್ಗೆ ಗಣತಿ ನಡೆದಿಲ್ಲ. ಅವರನ್ನು ಗುರುತಿಸುವ ಬಗ್ಗೆಯೂ ನಿಖರವಾದ ಮಾನದಂಡ ಇಲ್ಲ.

ಅವರ ಹಕ್ಕುಗಳ ಬಗ್ಗೆ ಹೋರಾಟ ನಡೆಸುತ್ತಿರುವ ಸಂಗಮ ಸಂಸ್ಥೆಗೆ ಸರ್ಕಾರ ಜವಾಬ್ದಾರಿ ನೀಡಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಅಧಿಕಾರಿಗಳು, ಸಂಘಟಿತ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಸದಸ್ಯರು ಇದಕ್ಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮಲ್ಲಿಕಾರ್ಜುನ ತಿಳಿಸುತ್ತಾರೆ.  ವ್ಯಾಪಾರ ಸ್ವ ಉದ್ಯೋಗ ಕೈಗೊಳ್ಳುವ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಕೌಶಲ ತರಬೇತಿಗಳನ್ನು ಏರ್ಪಡಿಸಿ ವ್ಯವಹಾರ ಚತುರರನ್ನಾಗಿ ಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಈ ಸಮುದಾಯದವರನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು. ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT