‘ಗುಡಿ ಮತ್ತು ಗೃಹ ಕೈಗಾರಿಕೆಗಳು ದೇಶದ ಬೆನ್ನೆಲುಬು. ಇವುಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದಿದ್ದರು ಮಹಾತ್ಮಾ ಗಾಂಧೀಜಿ.
ಗಾಂಧೀಜಿಯ ಈ ಆಶಯವನ್ನು ಉತ್ತರ ಕರ್ನಾಟಕದ ಹಿಂದುಳಿದ ತಾಲ್ಲೂಕೊಂದರ ಮಹಿಳೆಯರು ಸದ್ದಿಲ್ಲದೇ ನೆರವೇರಿಸುತ್ತಾ ಬಂದಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೃಹಿಣಿಯರು ಆಲಂಕಾರಿಕ ಮುತ್ತಿನ ಹಾರಗಳನ್ನು ತಯಾರಿಸಿ ಸ್ವಾವಲಂಬಿ ಬದುಕಿನೆಡೆ ಸಾಗುತ್ತಿರುವುದು ಮಾತ್ರವಲ್ಲದೇ, ದೆಹಲಿ, ಮುಂಬೈ, ಮೈಸೂರು ಮುಂತಾದ ದೂರದೂರುಗಳಿಗೆ ಹಾರ ಸರಬರಾಜು ಮಾಡುತ್ತ ಇತರರಿಗೆ ದಾರಿದೀವಿಗೆಯಾಗಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಚೆನ್ನಮ್ಮ ಎಂಬುವರು ಪ್ರಾರಂಭಿಸಿದ ಸಣ್ಣ ಉದ್ಯಮ ಇವತ್ತು ‘ಅನ್ನಪೂರ್ಣೇಶ್ವರಿ ಟ್ರೇಡರ್ಸ್’ ಎಂಬ ಹೆಸರಿನಲ್ಲಿ ವರ್ಷಕ್ಕೆ 50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. 45ಕ್ಕಿಂತ ಹೆಚ್ಚಿನ ಗೃಹಿಣಿಯರು ಮುತ್ತಿನ ಹಾರ ತಯಾರಿಕೆಗೆ ತರಬೇತಿ ಪಡೆದುಕೊಂಡು ವೈವಿಧ್ಯಮಯ ಹಾರಗಳನ್ನು ತಯಾರಿಸುತ್ತಿದ್ದಾರೆ. ಮನೆ ಕೆಲಸದ ಜೊತೆಗೆ ಪ್ರತಿ ನಿತ್ಯ 250 ರಿಂದ 300 ರೂಪಾಯಿಯವರೆಗೆ ಸಂಪಾದನೆ ಮಾಡುತ್ತಿದ್ದಾರೆ, ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ.
ಇಲ್ಲಿ ಮುಖ್ಯವಾಗಿ ಏಲಕ್ಕಿ ಹಾರ, ರುದ್ರಾಕ್ಷಿ ಹಾರ, ರೇಷ್ಮೆಗೂಡಿನ ಹಾರ, ಕಟ್ಟಿಗೆಹಾರ, ಮಣಿ ಹಾರ ಮುಂತಾದ ಸುಮಾರು ನೂರಕ್ಕಿಂತ ವಿವಿಧ ಮಾದರಿಯ ಆಲಂಕಾರಿಕ ಹಾರಗಳನ್ನು ತಯಾರಿಸಲಾಗುತ್ತದೆ. ರೂ 5 ರಿಂದ ಹಿಡಿದು ಒಂದು ಸಾವಿರದವರೆಗೂ ಹಾರಗಳಿವೆ. ಜಾತ್ರೆ ಹಾಗೂ ವಿಶೇಷ ಸಂದರ್ಭದಲ್ಲಿ ರೂ 25 ಸಾವಿರದ ಹಾರಗಳನ್ನು ತಯಾರಿಸಿದ ಉದಾಹರಣೆಗಳೂ ಇವೆ.
ಇವುಗಳಷ್ಟೇ ಅಲ್ಲದೇ, ಯಾವುದೇ ಯಂತ್ರೋಪಕರಣ, ವಿದ್ಯುತ್, ಆಧುನಿಕ ತಂತ್ರಜ್ಞಾನ ಇಲ್ಲದೇ ಕೇವಲ ಮಾನವ ಸಂಪನ್ಮೂಲವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಮೇಣದ ಬತ್ತಿ, ಅಗರಬತ್ತಿಗಳೂ ಇಲ್ಲಿ ತಯಾರಾಗುತ್ತವೆ.
ಚೆನ್ನಮ್ಮ ಕುಟುಂಬದ ಪವಾಡ
ಚೆನ್ನಮ್ಮ ಅವರ ಜೊತೆಗೆ ಮಗನಾದ ಬುದಯ್ಯಸ್ವಾಮಿ ಮಾರುಕಟ್ಟೆ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಮೊದಲು ಇವರು ತಿಂಗಳಿಗೆ 12 ಸಾವಿರ ರೂಪಾಯಿ ಸಿಗುವ ಕಂಪೆನಿಯೊಂದರಲ್ಲಿ ನೌಕರಿ ಮಾಡುತ್ತಿದ್ದರು. ಆದರೆ ಇದಕ್ಕಿಂತ ಸ್ವಂತ ಉದ್ಯಮ ಆರಂಭಿಸಿದರೆ ಒಳಿತು ಎಂದುಕೊಂಡು ತಾಯಿಯ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ಈಗ ಈ ಉದ್ಯಮದಿಂದ 6 ರಿಂದ 7 ಲಕ್ಷದವರೆಗೆ ವಹಿವಾಟು ಅವರದ್ದು. ಕೆಲಸಗಾರರ ವೇತನ, ಕಚ್ಚಾ ವಸ್ತುಗಳ ಖರ್ಚು ಮತ್ತು ಸಾಗಾಣಿಕೆ ವೆಚ್ಚ ತೆಗೆದು ತಿಂಗಳಿಗೆ ಏನಿಲ್ಲವೆಂದರೂ ಒಂದು ಲಕ್ಷ ನಿವ್ವಳ ಲಾಭ ಸಿಗುತ್ತಿದೆ. ಮುತ್ತಿನ ಹಾರಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಬೆಂಗಳೂರು, ಮುಂಬೈ ಮತ್ತು ದೆಹಲಿಗಳಿಂದ ತರಿಸಿಕೊಳ್ಳುತ್ತಾರೆ.
ಸುವಾಸನೆ ಹೊಂದಿದ ಏಲಕ್ಕಿಯನ್ನು ಹಾಸನ ಜಿಲ್ಲೆಯ ಸಕಲೇಶಪುರದಿಂದ ತರಿಸಿಕೊಳ್ಳುತ್ತಾರೆ. ಏಲಕ್ಕಿ ಹಾರಗಳಿಗೆ ಪ್ರತಿ ತಿಂಗಳು ಒಂದು ಕ್ವಿಂಟಾಲ್ ಏಲಕ್ಕಿ ಬೇಕಾಗುತ್ತದೆ. ಆಲಂಕಾರಿಕ ದಾರಗಳು, ಚೆಂಡು, ಮಿಂಚುಗಳು ಮತ್ತು ಪೈಪುಗಳನ್ನು ಬೇರೆ ಬೇರೆ ಜಿಲ್ಲೆಗಳಿಂದ ತರಿಸಿಕೊಳ್ಳುತ್ತಾರೆ. ಇಲ್ಲಿ ತಯಾರಾದ ಅಗರಬತ್ತಿ, ಮೇಣದ ಬತ್ತಿ ಮತ್ತು ವಿವಿಧ ರೀತಿಯ ಮುತ್ತಿನ ಹಾರಗಳನ್ನು ಸೂಕ್ಷ್ಮವಾಗಿ ಪ್ಯಾಕಿಂಗ್ ಮಾಡಿ ವಿವಿಧ ಸ್ಥಳಗಳಿಗೆ ಕಳುಹಿಸಲಾಗುತ್ತದೆ.
ಹೊಸ ಮಾದರಿಗಳು
ವರ್ಷವಿಡೀ ಬೇಡಿಕೆಯ ಉದ್ಯಮವಾಗಿ ಬೆಳೆದ ಈ ಹಾರ ತಯಾರಿಕೆಯಲ್ಲಿ ಹೊಸ ಹೊಸ ಮಾದರಿ ಸೇರ್ಪಡೆಯಾಗುತ್ತಿದೆ. ಜನರು ಬಯಸಿದಂತೆ ಬದಲಾವಣೆ ಆಗುತ್ತಿದೆ. ಇಲ್ಲಿ ತಯಾರಾದ ವಸ್ತುಗಳನ್ನು ವರ್ಷಾನುಗಟ್ಟಲೆ ಕೆಡದಂತೆ ದಾಸ್ತಾನು ಇಟ್ಟುಕೊಳ್ಳಬಹುದು. ರಾಜಕೀಯ ನಾಯಕರ, ವಿವಿಧ ಕ್ಷೇತ್ರದ ಗಣ್ಯರ, ಆಯಾ ಧರ್ಮದವರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಯ ಹಾರಗಳನ್ನು ಮಾಡಿಕೊಡುತ್ತಾರೆ.
ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಳಿತಾಯದ ಪ್ರವೃತ್ತಿಯನ್ನೂ ಬೆಳೆಸಲಾಗುತ್ತಿದೆ. ‘ಶ್ರೀ ಅನ್ನಪೂಣೇಶ್ವರಿ ವಿವಿಧೋದ್ದೇಶ ಸಹಕಾರಿ ನಿಯಮಿತ’ ಎಂಬ ಸಂಸ್ಥೆಯನ್ನು ಕಟ್ಟಿ ಉಳಿತಾಯ ಸಾಲ ಸೌಲಭ್ಯವನ್ನು ನೀಡುತ್ತಿದ್ದಾರೆ. ವಿವಿಧ ಹಬ್ಬಗಳಿಗೆ ಸೀರೆಯನ್ನು ಉಡುಗೊರೆ ಕೊಡುವುದರ ಜೊತೆಗೆ ಪ್ರತಿ ವರ್ಷ ದೆಹಲಿ, ಕರ್ನಾಟಕ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ.
ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಗುಡಿ ಕರಕುಶಲ ಉದ್ಯಮ ನಶಿಸಿಹೋಗುತ್ತಿರುವ ಇಂತಹ ಸನ್ನಿವೇಶದಲ್ಲಿ ಈ ಗ್ರಾಮೀಣ ಸಂಸ್ಥೆ ಪ್ರತಿ ವರ್ಷ ಲಾಭದಾಯಕವಾಗಿ ಮುನ್ನುಗ್ಗುತ್ತಿದೆ. ಕೃಷಿ ಮೇಳ, ವಸ್ತು ಪ್ರದರ್ಶನ ಮತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸದಾ ಕೌಶಲ್ಯ ಪ್ರದರ್ಶಿಸುತ್ತಿದೆ.
ಸಂಪರ್ಕಕ್ಕೆ 9741607704.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.