ADVERTISEMENT

ನಿಗೂಢದ ನಡುವೆ ಕೋಟೆ, ಕೊತ್ತಲ...

ಡಾ.ಮಲಿಕ್ಲಾರ್ಜುನ ಕುಂಬಾರ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ರಾಜ ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೋಟೆ ಕೊತ್ತಲಗಳು, ಐತಿಹಾಸಿಕ ಸ್ಮಾರಕಗಳು ಎಷ್ಟೋ ನಿಗೂಢಗಳನ್ನು ತನ್ನ ತೆಕ್ಕೆಯಲ್ಲಿ ಹುದುಗಿಸಿಕೊಂಡಿದೆ. ಅವುಗಳ ಅಧ್ಯಯನ ಮಾಡುತ್ತಾ ಸಾಗಿದಂತೆ ಅನೇಕ ವಿಸ್ಮಯಗಳು, ಅಚ್ಚರಿ ಎನಿಸುವ ಕಥಾನಕಗಳು ಒಂದೊಂದಾಗಿ ತೆರೆದುಕೊಳ್ಳುತ್ತ ಸಾಗುತ್ತವೆ.

ಅಂಥ ಒಂದು ಐತಿಹಾಸಿಕ ಸ್ಥಳ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡ. ಮರಾಠ ಅರಸರ ಇತಿಹಾಸವನ್ನು ಸಾರುವ ಅನೇಕ ಊರುಗಳು ‘ಘಡ’ ಎಂಬ ಹೆಸರಿನೊಂದಿಗೆ ಪ್ರಸಿದ್ಧಿ ಪಡೆದಿವೆ. ಅಂಥವುಗಳಲ್ಲಿ ಗಜೇಂದ್ರಗಡವೂ ಒಂದು.

ಇಲ್ಲಿರುವ ಸುಂದರ ಕೋಟೆಯ ಪ್ರತಿಯೊಂದು ಕಲ್ಲೂ ಮರಾಠಾ ಇತಿಹಾಸವನ್ನು ಸಾರುತ್ತದೆ. ಗುಡ್ದದ ಮೇಲೆ ದುರ್ಗಮ ಸ್ಥಳದಲ್ಲಿರುವ ಈ ಕೋಟೆಯ ಕೆಳಗಿರುವ ಮೂರು ಹುಡೇವು (ಕೊತ್ತಲ) ಇತಿಹಾಸವೂ ಅಷ್ಟೇ ಕುತೂಹಲವಾದದ್ದು. ಈ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ ಗುಡ್ಡದ ಮೇಲಿರುವ ಸೋಮೇಶ್ವರ ದೇಗುಲ.

ಸುಮಾರು 110 ವರ್ಷ ಬದುಕಿದ್ದ ಸಮೀಪದ ಉಣಚಗೇರಿ ಗ್ರಾಮದ ಬಸಮ್ಮ ಮಠಪತಿ ಎಂಬುವವರು ಈ ಕಥಾನಕವನ್ನು ವಿವರಿಸಿದ್ದು ಹೀಗೆ: ಇಲ್ಲಿರುವ ಸೋಮೇಶ್ವರ ಊರನ್ನು ಕಾಪಾಡಿದಾತ. ಈ ಕೋಟೆಯನ್ನು ಉಣಚಗೇರಿಯ ಗೌಡರಾಗಿದ್ದ ಸೋಮನಗೌಡ ಪಾಟೀಲ ಎಂಬುವರು (ಇವನ ಹೆಸರಿನಿಂದ ಈ ಊರಿಗೆ ಗೌಡಗೇರಿ ಎನ್ನುವ ಹೆಸರು ಬಂದಿರಬೇಕು) ನೋಡಿಕೊಳ್ಳುತ್ತಿದ್ದರು. ಅದು ಬ್ರಿಟಿಷ್‌ ಆಳ್ವಿಕೆಯ ಕಾಲ. ಅವರು ಈ ಕೋಟೆಯನ್ನು ಹೇಗಾದರೂ ಮಾಡು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಹವಣಿಸುತ್ತಿದ್ದರು. ಈ ವಿಷಯ ಸೋಮನಗೌಡನಿಗೆ ತಿಳಿಯಿತು.

ಇದರಿಂದ ತಪ್ಪಿಸಿಕೊಳ್ಳಲು ಆತನಿಗೆ ಬೇರೆ ದಾರಿಕಾಣಲಿಲ್ಲ. ಕೊನೆಯದಾಗಿ ಆತ ಸೋಮೇಶ್ವರನ ಮೊರೆ ಹೋದ. ಈ ಯುದ್ಧದಲ್ಲಿ  ಬ್ರಿಟಿಷರು ಸೋತರೆ ಹೆಜ್ಜೆಗೊಂದು ಹುಡೇವುಗಳನ್ನು ನಿರ್ಮಿಸುವುದಾಗಿ ಹರಕೆ ಹೊತ್ತ. ಬ್ರಿಟಿಷರು ಕೋಟೆಯ ಮೇಲೆ ದಾಳಿ ಇಟ್ಟಾಗ ಕೋಟೆಯಲ್ಲಿ ಕುಳಿತ ಸೋಮನಗೌಡ, ಸೋಮೇಶ್ವರ ದೇವಾಲಯದ ಕಿಂಡಿಯಿಂದ ಕೆಳಗೆ ಗುಂಡು ಹಾರಿಸಿದ. ಅದು ಸುಮಾರು 10–15 ಕಿ.ಮೀ ದೂರದಲ್ಲಿರುವ ಮುಧೋಳ ಸೀಮೆಯಲ್ಲಿರುವ ಗಿಲ್ಲಿದಿಬ್ಬದ ಅಡವಿಯಲ್ಲಿ ಬಿತ್ತು. ಗಾಬರಿಗೊಂಡ ಬ್ರಿಟಿಷರು ಅಷ್ಟು ದೂರದಲ್ಲಿ ಗುಂಡು ಬೀಳಬೇಕಾದರೆ ಇದು ದೈವಿ ಪ್ರಭಾವವೇ ಇರಬೇಕೆಂದು ಹೆದರಿ ಓಡಿಹೋದರು.

ಸೋಮನಗೌಡ ಹರಕೆಯಂತೆ ಗುಡ್ಡದಲ್ಲಿರುವ ಕೋಟೆಯಿಂದ ಕೆಳಗಿಳಿದು ತನ್ನ ಕುದುರೆಯನ್ನು ಹತ್ತಿ ಅದನ್ನು ಜಿಗಿಸುತ್ತಾ, ಅದು ಜಿಗಿದ ಜಾಗದಲ್ಲಿ ಒಂದರಂತೆ ಮೂರು ಹುಡೇವುಗಳನ್ನು ಕಟ್ಟಿಸಿದ.

ಇದರಿಂದ ಇವುಗಳಿಗೆ ಇಂದಿಗೂ ಹರಕೆಯ ಹುಡೇವು, ಹೆಜ್ಜಿ ಹುಡೇವುಗಳೆಂದು ಕರೆಯುತ್ತಾರೆ. ಆದರೆ ಇವುಗಳನ್ನು ಯಾವಾಗ ಕಟ್ಟಿದರೆಂದು ಮಾತ್ರ ತಿಳಿಯುತ್ತಿಲ್ಲ. ಅವು ಬಹುಶಃ 16 ಅಥವಾ 17 ನೆಯ ಶತಮಾನದಲ್ಲಿ ನಿರ್ಮಾಣ ವಾಗಿರಬೇಕು. ಈ ಮೂರು ಹುಡೇವುಗಳು ಇತಿಹಾಸವನ್ನು ತಮ್ಮ ಒಡಲಲ್ಲಿರಿಸಿಕೊಂಡು ಸ್ಥಿರವಾಗಿ ನಿಂತಿವೆ. ಆದರೆ ಇಂದು ಸರಿಯಾದ ಕಾಳಜಿ ಇಲ್ಲದೇ ಅವೂ ಅವಸಾನದ ಅಂಚಿನಲ್ಲಿವೆ. ಈ ರಸ್ತೆಯಲ್ಲಿ ಹೋಗುವವರ ಗಮನವನ್ನು ತಮ್ಮ ಕಡೆಗೆ ಸೆಳೆಯುವಷ್ಟು ಚುಂಬಕತ್ವವನ್ನು ಇಂದಿಗೂ ಇವು ಪಡೆದುಕೊಂಡಿವೆ. ಈ ಕೋಟೆಯ ರಕ್ಷಣೆ ಆಗಬೇಕಿದೆ.

ಕುರುಚಲು ಮಧ್ಯೆ ‘ನಂದಿ’
ಇದೇ ರೀತಿ, ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ  ಕ್ಷೇತ್ರದ ಸಮೀಪ ಕುರುಚಲು ಗಿಡಗಳ ಮಧ್ಯೆ ಇರುವ ಅಪರೂಪದ ನಂದಿ ಸ್ಮಾರಕ ಶಿಲ್ಪಗಳಿದ್ದು, ಇದು ಇನ್ನಷ್ಟು ಸಂಶೋಧನೆ ಬಯಸಿದೆ.

ಈ ಸ್ಮಾರಕವನ್ನು ಇದನ್ನು ಸ್ಥಳೀಯರು ನಂದಿಕೋಲ ಬಸವಣ್ಣನೆಂದು ಕರೆಯುತ್ತಾರೆ. ಇದರಲ್ಲಿ ಒಂದು ಶಿಲಾಸ್ತಂಭದ ಸುತ್ತಲೂ ಚೌಕಾಕಾರದ ಕಲ್ಲಿನಕಟ್ಟೆ ಇದೆ. ಈ ನಂದಿ ಸ್ತಂಭದ ಎತ್ತರ 4.2 ಅಡಿ, ಅಗಲ 1.1./0.7 ಅಡಿಯುಳ್ಳ ಚೌಕಾಕಾರದ ಸ್ತಂಭದ ನಡುವೆ ಉಬ್ಬು ಶಿಲ್ಪದಲ್ಲಿ ಒಬ್ಬ ವ್ಯಕ್ತಿಯು ಕೈಮುಗಿದು ನಿಂತಿದ್ದಾನೆ. ಆತನ ಎರಡು ಬದಿಗಳಲ್ಲಿ ಇಬ್ಬರು ಸ್ತ್ರೀಯರಿದ್ದಾರೆ. ಅವರು ಆತನ ಪತ್ನಿಯರಾಗಿರಬೇಕು.



ಇವರ ಕೆಳಗೆ ನಾಗ ಶಿಲ್ಪವಿದೆ. ಸ್ತಂಭದ ಮೇಲೆ ಮಲಗಿದ ನಂದಿಯನ್ನು ಕೆತ್ತಲಾಗಿದೆ. ಅದರ ಎತ್ತರ 1.1 ಅಡಿ ಇದೆ. ಈ ಶಿಲ್ಪವು ಕಾಲಕಾಲೇಶ್ವರ ದೇವಾಲಯಕ್ಕೆ ಮುಖಮಾಡಿದೆ. ಈ ರೀತಿ ನಂದಿ ಸ್ತಂಭವನ್ನು ನಡೆಸುವುದು ಉತ್ತರಕಾಲೀನ ವಿಜಯ ನಗರ ಕಾಲದಿಂದ, ಅದರಲ್ಲೂ ವಿಶೇಷವಾಗಿ ಇದು ವೀರಶೈವರಿಂದ ಆರಂಭಿಸಲಾಯಿತೆಂದು ಇತಿಹಾಸ ತಜ್ಞ ಡಾ.ಅ.ಸುಂದರ ಅಭಿಪ್ರಾಯಪಡುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಲಕಾಲೇಶ್ವರದಲ್ಲಿರುವ ಶಾಸನವೊಂದು ವಿಜಯನಗರ ಅರಸರಿಗೆ ಸೇರಿದೆ. ಅವರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಇದಕ್ಕೆ ಅನೇಕ ದತ್ತಿಗಳನ್ನು ನೀಡಿದ್ದನ್ನು ಶಾಸನವು ಉಲ್ಲೇಖಿಸುತ್ತದೆ.
ಇಲ್ಲಿಗೆ ಸನಿಹದ ಕಣಿವೆಯಲ್ಲಿ ವಿಜಯನಗರದ ಕಾಲದ ಆನೆಗುಂದಿ ಬಸವಣ್ಣ ಕರೆಯುವ ಬೃಹದಾಕಾರದ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವಂತಹ ನಂದಿ ಶಿಲ್ಪವಿದೆ.

ಈ ಸ್ಮಾರಕ ನಂದಿ ಸ್ತಂಭದಲ್ಲಿ ಯಾವುದೇ ಬರಹವಿರದಿದ್ದರೂ ಇಲ್ಲಿರುವ ದ್ವಿಪತ್ನಿ ಸಮೇತನಾಗಿರುವ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈತನು ವಿಜಯ ನಗರ ಕಾಲಕ್ಕೆ ಸೇರಿರಬಹುದು ಎನ್ನಿಸುತ್ತದೆ. ಇಲ್ಲಿರುವ ಶಾಸನವು ವಿಜಯನಗರದ ಎರಡನೆಯ ಹರಿಹರ(1377–1404)ನ ಕಾಲಕ್ಕೆ ಸೇರಿದ್ದರಿಂದ ಈ ನಂದಿ ಸ್ಮಾರಕ ಶಿಲ್ಪವು 14–15ನೆಯ ಶತಮಾನಕ್ಕೆ ಸೇರುತ್ತದೆ.
 
ಅಂದಿನ ಕಾಲದಲ್ಲಿ ರಾಜ ಪ್ರಮುಖರು ಮಡಿದಾಗಲೂ ಅದರ ದ್ಯೋತಕವಾಗಿ ನಂದಿ ಶಿಲ್ಪವನ್ನು ನಿಲ್ಲಿಸುತ್ತಿದ್ದರೆಂಬ ಅಭಿಪ್ರಾಯ ಕೂಡಾ ಇದೆ. ಈ ಶಿಲ್ಪದ ಪಕ್ಕದಲ್ಲಿಯೇ ಮತ್ತೊಂದು ಇಂಥಹುದೇ ಸ್ಮಾರಕವುಳ್ಳ ಶಿಲ್ಪವಿದೆ. ಅದು ಭಗ್ನಗೊಂಡಿದ್ದು. ಇದರ ಮೇಲ್ಭಾಗದಲ್ಲಿ ನಂದಿ ಶಿಲ್ಪ ಇಲ್ಲ. ಅದರ ಎತ್ತರ 3.6 ಅಡಿ. ಇದು ವೃತ್ತಾಕಾರದಲ್ಲಿದ್ದು, ಇದರ ಸುತ್ತಳತೆ 3.4 ಅಡಿ ಇದೆ, ಅದು ಕೂಡಾ ಸನಿಹದ ಸ್ಮಾರಕದಲ್ಲಿರುವಂತೆ ದ್ವಿಪತ್ನಿ ಸಮೇತನಾದ ಕೈಮುಗಿದ ವ್ಯಕ್ತಿಯ ಉಬ್ಬು ಶಿಲ್ಪವಿದೆ. ಇದು ಅಪೂರ್ಣಗೊಂಡ ಒರಟಾಗಿ ಕೆತ್ತಿದ ಶಿಲ್ಪವಾಗಿದೆ.  ಈ ಬಗ್ಗೆಯೂ ಸಂಶೋಧನೆ ನಡೆಯಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.