ADVERTISEMENT

ಬೆಂಕಿ ಕಡ್ಡಿಯಲ್ಲಿ `ಕನಸಿನ ಸೌಧ'

ಹರವು ದೇವೇಗೌಡ
Published 4 ಮಾರ್ಚ್ 2013, 19:59 IST
Last Updated 4 ಮಾರ್ಚ್ 2013, 19:59 IST

ಹವ್ಯಾಸಕ್ಕೆ ಶಿಸ್ತಿನ ಚೌಕಟ್ಟು ರೂಪಿಸಿಕೊಂಡರೆ ಏನನ್ನಾದರು ಸಾಧಿಸಬಹುದು ಎಂಬುದಕ್ಕೆ ಹಾರೋಹಳ್ಳಿಯ ಹೆಚ್.ಎನ್. ಯಮುನಾ ಜ್ವಲಂತ ಸಾಕ್ಷಿ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು, ಹಾರೋಹಳ್ಳಿಯ ಹೆಚ್.ಕೆ. ನಾರಾಯಣಗೌಡ ಹಾಗೂ ಕುಮಾರಿ ದಂಪತಿಯ ಪುತ್ರಿ ಯಮುನಾ ಐದು ಸಾವಿರ ಬೆಂಕಿ ಕಡ್ಡಿ ಬಳಕೆ ಮಾಡಿ ಕಲಾತ್ಮಕವಾದ ಮನೆಯೊಂದನ್ನು ಕಟ್ಟಿದ್ದಾರೆ! ಇದೇನೂ ಮಹಾ ಎನ್ನಬೇಡಿ, ಮನೆಯ ಒಳಾಗಂಣವನ್ನು ಅಗತ್ಯಕ್ಕೆ ತಕ್ಕಹಾಗೆ ರೂಪಿಸಿರುವುದೇ ಗಮನ ಸೆಳೆಯುವ ಸಂಗತಿ.

ಮಹಡಿ ಮನೆ, ಮನೆಯ ಮುಂದೆ ಕಾಂಪೌಂಡ್, ಗಾಜು ಬಳಸಿರುವ ತಾರಸಿ, ಮೇಲೆ ಹೋಗಲು ಮೆಟ್ಟಿಲು, ನೀರಿನ ಟ್ಯಾಂಕ್, ಸೋಲಾರ್... ಅಬ್ಬಾ! ತಾರಸಿಯನ್ನು ಬಿಚ್ಚಿ ಮನೆಯ ಒಳಗೆ ಯಮುನ ಕರೆದೊಯ್ದು ಎಲ್ಲವನ್ನು ಪರಿಚಯ ಮಾಡುತ್ತಾರೆ.  ಅಡಿಗೆ ಮನೆ, ಗ್ಯಾಸ್ ಸಿಲಿಂಡರ್, ಸಿಂಕ್, ದೇವರಮನೆ ಒಳಗೆ ಕಳಸ, ಊಟದ ಮನೆ, ಮೇಜು ಕುರ್ಚಿಗಳು, ಹಜಾರ ಅಲ್ಲಿಯೇ ಟಿ.ವಿ., ಮೂಲೆಯಲ್ಲಿ ಅಕ್ವೇರಿಯಂ ಹೀಗೆ ಒಂದು ಮನೆಯ ಎಲ್ಲಾ ಸೌಕರ್ಯಗಳನ್ನು ಬೆಂಕಿ ಕಡ್ಡಿಯಲ್ಲೇ ತನ್ನ ಅದ್ಭುತ ಕಲೆಗಾರಿಕೆಯನ್ನು ಅಭಿವ್ಯಕ್ತಿಗೊಳಿಸಿ, ರೂಮಿನ ಬಾಗಿಲು, ಕಿಟಕಿಗಳನ್ನು ತೆರೆದು ಮುಚ್ಚುವ ವ್ಯವಸ್ಥೆ ಮಾಡಿದ್ದಾಳೆ ಈ ಪೋರಿ.

ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಯಮುನಾ ಕಳೆದ ವರ್ಷ ತನ್ನ ಮಾಸದ ಮನೆಯ ನವೀಕರಣ ಸಂದರ್ಭದಲ್ಲಿ ಗಾರೆ ಕೆಲಸದವರು ಬೀಡಿ ಸೇದಿ ಎಸೆಯುತ್ತಿದ್ದ ಬೆಂಕಿ ಕಡ್ಡಿಗಳನ್ನು ಕಸ ಗುಡಿಸಿ ಬೊಗಸೆಯಲ್ಲಿ ತುಂಬಿ ಆಚೆ ಎಸೆಯುವಾಗ, ಇವನ್ನು ಬಳಸಿ ಏನನ್ನಾದರು ಮಾಡಬಹುದಲ್ಲಾ ಎನ್ನುವ ಕನಸಿನ ಮೊಳಕೆ ಮೂಡಿತಂತೆ. ಹೀಗೆ ರೂಪುಗೊಂಡ ತನ್ನ ಕನಸಿಗೆ ಹೆತ್ತವರ ಸಹಕಾರದಿಂದ ಬಳಕೆಯಾದ ಬೆಂಕಿ ಕಡ್ಡಿ, ಹೊಸ ಕಡ್ಡಿ ಹಾಗೂ ಫೆವಿಕಾಲ್ ಬಳಸಿ ಎರಡು ತಿಂಗಳ ಅವಧಿಯಲ್ಲಿ ಚಂದದ ಮನೆಯನ್ನು ಸಿದ್ಧ ಪಡಿಸಿದ್ದಾರೆ.  ಇದಕ್ಕೆ  ಅವರು ಖರ್ಚು ಮಾಡಿದ್ದು ಸುಮಾರು ಐನೂರು ರೂಪಾಯಿ.

ಕೆ.ಆರ್. ಪೇಟೆಯ ಸರ್ಕಾರಿ ಕಾಲೇಜಿನಲ್ಲಿ ಡಿಪ್ಲೊಮಾ - ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿರುವ ಯಮುನಾ ಅವರು ಮೈಸೂರು ಅರಮನೆ, ವಿಧಾನಸೌಧ ಹಾಗೂ ರಾಜ್ಯದ ಪಾರಂಪರಿಕ ಕಟ್ಟಡಗಳ ಪ್ರತಿಕೃತಿಗಳನ್ನು ನಿರ್ಮಿಸುವ ಅದಮ್ಯ ಆಸಕ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.