ADVERTISEMENT

‘ಬೆನ್ನೂರು’ಗಳ ಬೆನ್ನಟ್ಟಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST

ವ್ಯಕ್ತಿಗೂ ಹೆಸರಿಗೂ ಸಂಬಂಧವಿಲ್ಲದಿದ್ದರೂ ಇಟ್ಟ ಹೆಸರಿನೊಂದಿಗೆ ಸಾಯುವ ತನಕ ಬಾಳುತ್ತೇವೆ. ಯಾರೋ ಇಟ್ಟ ಹೆಸರನ್ನು ಇಷ್ಟಪಟ್ಟೋ, ಕಷ್ಟಪಟ್ಟೋ ಕರೆಸಿಕೊಳ್ಳುತ್ತ ಹೋಗುವುದು ಅನಿವಾರ್ಯ.

ಆದರೆ ಹಳ್ಳಿ, ಊರು, ಗ್ರಾಮ, ಪುರ, ಪ್ರದೇಶಗಳ ಹೆಸರಿನ ಇತಿಹಾಸ ಹಾಗಲ್ಲ. ಯಾವುದಾದರೊಂದು ಚಾರಿತ್ರಿಕ, ಭೌಗೋಳಿಕ, ದೈವಿಕ, ವ್ಯಕ್ತಿತ್ವಧಾರಕ, ಗುಣ–ವಿಶೇಷತೆಗಳಿಗೆ ಅನುಗುಣವಾಗಿ ಇಟ್ಟಿದ್ದದ್ದು. ಹಿಂದೆ ಹಳ್ಳಗಳು ಹರಿಯುತ್ತಿದ್ದ ದಡದಲ್ಲಿ ನೆಲೆಗೊಂಡ ಊರುಗಳ ಮುಂದೆ ‘ಹಳ್ಳಿ’ ಎಂದು ಸೇರಿಸಲಾಯಿತು.

ಉದಾ: ಹಿರೇಹಳ್ಳಿ, ಚಿಕ್ಕಳ್ಳಿ, ತೀರ್ಥಹಳ್ಳಿ, ಬೈಲಳ್ಳಿ, ಕುಪ್ಪಳ್ಳಿ, ಗೋವಳ್ಳಿ, ವರದಳ್ಳಿ, ಫಲವಳ್ಳಿ ಹೀಗೆ... ಈಗ ಹಳ್ಳಿಗಳು ಮಾಯವಾಗಿ ಪಟ್ಟಣವಾಗಿರುವ ಕಾರಣ, ಕೆಲವು ಹಳ್ಳಿಗಳ ಜಾಗದಲ್ಲಿ ಆಯಾ ಊರಿನ ಜೊತೆ ನಗರ ಎಂದೂ ಸೇರಿಕೊಂಡಿದೆ.

ADVERTISEMENT

ಅದರಂತೆ ‘ಬೆನ್ನೂರು’ಗಳ ಕತೆ ಕೂಡ. ಇತಿಹಾಸದ ಆಧಾರದ ಮೇಲೆ ‘ಬೆನ್ನೂರು’ಗಳ ಹೆಸರುಗಳನ್ನು ಪರಿಶೀಲಿಸಿ ನೋಡಿದಾಗ ಅದು ಬಂದ ಬಗೆ ಅಚ್ಚರಿ ಮೂಡಿಸುತ್ತದೆ. ‘ಬೆನ್‌’ ಎನ್ನುವುದು ಬೆಂದ, ಬಿಸಿಯಾದ, ಪರಿಸ್ಥಿತಿಯಿಂದ ಉತ್ಪನ್ನಗೊಂಡ ಎಂಬ ಅರ್ಥ ನೀಡುತ್ತದೆ. ‘ಬೆಂದ’ ಕಾಳು(ಗುಗ್ಗರಿ)ಗಳನ್ನು ಮಾರುತ್ತಿದ್ದ ಊರೇ ಮುಂದೆ ಬೆಂದಕಾಳೂರು ಆಯಿತು. ಇದೇ ಈಗಿನ ಬೆಂಗಳೂರು.

ಇದೇ ರೀತಿ ಬೆಂದ, ಬಿಸಿಯಾದ ನೀರು, ಊಟೆ, ಬುಗ್ಗೆ, ಒರತೆಗಳ ಕಂಡು ಹರಿಯುತ್ತಿದ್ದ ಕಡೆಗಳಲ್ಲೆಲ್ಲಾ ಬೆನ್ನೂರು ಆಗಿದೆ. ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶದಲ್ಲಿ ಬಿಸಿನೀರು ಲಭ್ಯವಾಗುತ್ತಿದ್ದರಿಂದ ಮಲೆಬೆನ್ನೂರು ಆಗಿದೆ. ಆದರೆ ಈಗ ಬಿಸಿನೀರ ಲಭ್ಯತೆ ನಾಪತ್ತೆಯಾಗಿದೆ ಅನ್ನಿ. ಹೀಗೆ ‘ಹಿರೇ ಬೆನ್ನೂರು’ ‘ಚಿಕ್ಕ ಬೆನ್ನೂರು’. ದೊಡ್ಡ, ಚಿಕ್ಕ ಬಿಸಿ ನೀರಿನ ಒರತೆ, ಊಟೆಗಳು ಇಲ್ಲಿ ಕಂಡು ಬಂದಿದ್ದರಿಂದ ಇವು ಈ ಹೆಸರುಗಳನ್ನು ಪಡೆದಿವೆ.

ಇದೇ ರೀತಿ ‘ರಾಣಿ–ಬೆನ್ನೂರು’ ಕೂಡ. ತುಂಡರಸ, ಪಾಳೆಯಗಾರ, ಗಾವುಂಡ (ಗೌಡ) ಮಾಂಡಲೀಕ ಆಳುತ್ತಿದ್ದ ಕಾಲದಲ್ಲಿ ಅಲ್ಲಿ ಬಿಸಿನೀರು ಸಿಗುತ್ತಿತ್ತು. ಪ್ರಕೃತಿದತ್ತವಾಗಿ ಸಿಗುತ್ತಿದ್ದ ಈ ಬಿಸಿನೀರಿನಲ್ಲಿ ಅನೇಕ ಕಾಯಿಲೆಗಳು ವಾಸಿಯಾದದ್ದು ಇದೆ. ಮಹಾರಾಷ್ಟ್ರದ ಗಣೇಶಪುರಿಯ ಬಿಸಿನೀರ ಕೊಳಗಳು ಇದಕ್ಕೊಂದು ಉದಾಹರಣೆ). ರಾಣಿಯ ಕಾಯಿಲೆ ವಾಸಿ ಮಾಡಿದ ಆ ಪ್ರದೇಶ. ಊರಿಗೆ ‘ರಾಣಿಬೆನ್ನೂರು’ ಆಗಿದೆ.

ಬಹುಶಃ ‘ಸಂತೇ ಬೆನ್ನೂರು’ ಇದಕ್ಕೂ ಇಂಥದ್ದೇ ಐತಿಹ್ಯ ಇರಬಹುದು. ಈ ಊರಲ್ಲಿ ಇಂದು ಒಂದು ಕಲ್ಯಾಣಿ ಇದೆ. ಹಿಂದೆ ಆ ಜಾಗದಲ್ಲಿ ನೀರಿನ ಒರತೆ, ಕಂಡಿಕೆ ಇತ್ತು. ಅದರಲ್ಲಿ ಆಗ ಬಿಸಿನೀರು ಬರುತ್ತಿತ್ತು. ಇಂತಹ ನೀರ ಲಭ್ಯತೆ ಜಾಗದಲ್ಲಿ ಹಿಂದೆ ಜನ ಸರಕು– ಸಾಮಾನುಗಳನ್ನು ಪರಸ್ಪರ ವಿನಿಮಯ (ಸಂತೆ) ಮಾಡಿಕೊಳ್ಳುತ್ತಿದ್ದರು. ಅದೇ ಕಾರಣಕ್ಕೆ ಆ ಊರಿಗೆ, ಪ್ರದೇಶಕ್ಕೆ ಸಂತೇ ಬೆನ್ನೂರು ಎಂದು ರೂಢಿ ನಾಮವಾಗಿ ಬಂದಿದೆ ಎನ್ನಲಾಗುತ್ತಿದೆ.
–ಎಸ್‌. ಓಂಕಾರಯ್ಯ ತವನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.