ADVERTISEMENT

ಶತಮಾನದ ನಾಲೆಯಲಿ ಉಕ್ಕುತಿದೆ ನೀರು...

ಹರವು ಸ್ಫೂರ್ತಿ
Published 26 ಜುಲೈ 2016, 13:17 IST
Last Updated 26 ಜುಲೈ 2016, 13:17 IST
ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ನಾಲೆ ನವೀಕರಣ
ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ನಾಲೆ ನವೀಕರಣ   

ಬಯಲು ಸೀಮೆಯಾಗಿದ್ದ ಹಳೆ ಮೈಸೂರು ಪ್ರಾಂತ್ಯ, ನೀರಾವರಿ ಪ್ರದೇಶವಾಗಿ ಮಾರ್ಪಡಲು ಕಾರಣವಾಗಿರುವ ಶತಮಾನದ ಚಿಕ್ಕದೇವರಾಯ ಸಾಗರ ನಾಲೆ (ಸಿ.ಡಿ.ಎಸ್ ನಾಲೆ) ಮತ್ತೆ ಜೀರ್ಣೋದ್ಧಾರವಾಗಿದೆ. 1673ರಲ್ಲಿ ಕಾಡು ಕಲ್ಲಿನಿಂದ ನಿರ್ಮಾಣವಾಗಿರುವ ಈ ನಾಲೆ ಇದೀಗ ಮೊದಲ ಬಾರಿ ಪುನರುಜ್ಜೀವನಗೊಂಡಿದೆ. ಹರಿದು ಸಾಗರ ಸೇರುತ್ತಿದ್ದ ಕಾವೇರಿ ನದಿಗೆ ಅಡ್ಡಲಾಗಿ 17ನೇ ಶತಮಾನದಲ್ಲೇ ಯದುವಂಶದ ಅರಸ ಚಿಕ್ಕದೇವರಾಯ, ಚಿಕ್ಕಾಯಾರಹಳ್ಳಿ ಬಳಿ ನಿರ್ಮಿಸಿದ  ನಾಲೆಯಿದು.

ಕಾಮಗಾರಿಯಿಂದಾಗಿ ಆರು ತಿಂಗಳಿನಿಂದ ಕೆ.ಆರ್‌.ಎಸ್ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಜೀರ್ಣೋದ್ಧಾರ ಕಾರ್ಯದಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಯೂ ನಿಂತಿತ್ತು. ಈಗ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದೇ ಗುರುವಾರ (ಜುಲೈ 28) ನಾಲೆ ಮೂಲಕ ಮತ್ತೆ ಕಾವೇರಿ ಹರಿಯಲಿದ್ದಾಳೆ.

ಸುರಕಿ ಗಾರೆ, ಗಟ್ಟಿ ಜೇಡಿ ಮಣ್ಣಿನಿಂದ ಸುಭದ್ರವಾಗಿ ತಯಾರಾಗಿದ್ದ ನಾಲೆ ಇತ್ತೀಚೆಗೆ ಶಿಥಿಲಗೊಂಡು ಹೆಚ್ಚುವರಿ ನೀರು ಪೋಲಾಗುತ್ತಿತ್ತು. ಇಂದು ಕಾವೇರಿ ನೀರಾವರಿ ನಿಗಮ ಜೀರ್ಣೋದ್ಧಾರ ಕಲ್ಯಾಣ ಕೆಲಸವನ್ನು ಮಾಡಿದೆ. ಸಿ.ಡಿ.ಎಸ್. ನಾಲೆ ಜೀರ್ಣೋದ್ಧಾರ ಕಾಮಗಾರಿಯು ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ತಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ಹೂಳು ತುಂಬಿದ್ದ ಕಾಲುವೆಗಳನ್ನು ಸ್ವಚ್ಛಗೊಳಿಸಿರುವುದರಿಂದ ಸಮರ್ಪಕ ನೀರು ಹರಿವು ಇರುತ್ತದೆ. ಅಲ್ಲದೆ ಶಿಥಿಲವಾಗಿದ್ದ ಏರಿಗಳನ್ನು ರಿಪೇರಿ ಮಾಡಲಾಗಿದೆ. ನಾಲೆ ಆಧುನೀಕರಣವಾಗುವ ಮುನ್ನ ವಾರ್ಷಿಕ ಸರಾಸರಿ 6.85 ಟಿಎಂಸಿ ನೀರಿನ ಹರಿವು ಇತ್ತು. ಕೃಷಿ ಮತ್ತು ಇತರೆ ಚಟುವಟಿಕೆಗೆ ಬಳಕೆಯಾಗುತ್ತಿತ್ತು. ಇಂದು ನಾಲೆಯ ಆಧುನೀಕರಣದಿಂದ ವಾರ್ಷಿಕ ಬಳಕೆ 5.52 ಟಿಎಂಸಿ ನೀರು ಸಾಕು ಎಂದು ಅಂದಾಜಿಸಲಾಗಿದೆ. ಇದರಿಂದ ವಾರ್ಷಿಕ 1.33 ಟಿಎಂಸಿ ನೀರು ಉಳಿತಾಯವಾಗಲಿದೆ.ನಾಲೆಯ ಉದ್ದಕ್ಕೂ ಒಟ್ಟು 241 ತೂಬುಗಳು ಇವೆ.

ಯೋಜನೆ ವಿವರ
ಈ ಸಿ.ಡಿ.ಎಸ್ ನಾಲೆ 104.00 ಕಿ.ಮೀ ಉದ್ದವಿದ್ದು, 18,822 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆಗೆ ನೀರಾವರಿ ಒದಗಿಸುತ್ತಿದೆ. ₹240 ಕೋಟಿ ವೆಚ್ಚದಲ್ಲಿ ಸಿ.ಡಿ.ಎಸ್ ನಾಲೆಯ ಜೀರ್ಣೋದ್ಧಾರ ಕಾರ್ಯ ನಡೆಯಿತು. ಆಧುನೀಕರಣ ಕಾಮಗಾರಿಯನ್ನು ಶೀಘ್ರ ಮುಗಿಸುವ ಸಲುವಾಗಿ ಅದನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಒಂದನೇ ಪ್ಯಾಕೇಜ್‌ನಲ್ಲಿ 0.00– 42.00 ಕಿ.ಮೀ ನಾಲೆ ನವೀಕರಣವನ್ನು ಸ್ಟಾರ್ ಬಿಲ್ಡರ್ಸ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

ನಾಲೆ 42ಕಿ.ಮೀ ಒಳಗೆ ಒಟ್ಟು 337 ಅಡ್ಡ ಮೋರಿಗಳು (ಪೈಪ್‌ಲೈನ್ ಔಟ್‌ಲೆಟ್, ಸೇತುವೆಗಳು, ಕ್ಯಾಟಲ್ ರ್‍್ಯಾಂಪ್) ಬರುತ್ತವೆ. ಇವುಗಳಲ್ಲಿ 4 ಮೋರಿಗಳು ಮಾತ್ರ ಸ್ಥಿತಿಯಲ್ಲಿ ಇವೆ, ನಾಲೆಯೊಂದಿಗೆ ದುಃಸ್ಥಿತಿಯಲ್ಲಿ ಇರುವ 333 ಮೋರಿಗಳನ್ನು ಪುನರ್ ನಿರ್ಮಾಣ ಮಾಡಿದ್ದಾರೆ.

ಎರಡನೇ ಪ್ಯಾಕೇಜ್‌ನಲ್ಲಿ 42.00 ಕಿ.ಮೀನಿಂದ 104.00 ಕಿ.ಮೀ ನಾಲೆ ನವೀಕರಣವನ್ನು ಬಿ.ಎಸ್.ಆರ್. ಇನ್‌ಫ್ರಾಟೆಕ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ.ಎರಡನೇ ಹಂತದ ಕಾಮಗಾರಿಯಲ್ಲಿ ಒಟ್ಟು 321 ಅಡ್ಡ ಮೋರಿಗಳು ಇವೆ. ಇವುಗಳಲ್ಲಿ 12 ಮೋರಿಗಳು ಸುಸ್ಥಿತಿಯಲ್ಲಿದ್ದು, 309 ಮೋರಿಗಳ ಪುನರ್ ನಿರ್ಮಾಣ ಕಾರ್ಯ ನಡೆಯಿತು.

‘ಐತಿಹಾಸಿಕ ನಾಲೆ ಜೀರ್ಣೋದ್ಧಾರವಾಗುತ್ತಿರುವುದು ಸಂತಸದ ಸಂಗತಿ. ಎಂಜಿನಿಯರ್ ತಂಡ ಉತ್ತಮ ಕೆಲಸ ಮಾಡಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಎಲ್. ಕೆಂಪೂಗೌಡ.

ಮೂಲ ವೃತ್ತಿ ಕಳೆದುಕೊಂಡ ಜನ
ನಾಲೆ ನವೀಕರಣದ ಹಿನ್ನೆಲೆಯಲ್ಲಿ ಈ ವರ್ಷ ಇಲ್ಲಿಯ ಜನರು ತಮ್ಮ ಮೂಲ ವೃತ್ತಿಯನ್ನು ಕಳೆದುಕೊಂಡಿದ್ದಾರೆ. ಕೃಷಿ ಆಧಾರಿತ ವೃತ್ತಿ ಮಾಡುತ್ತಿರುವವರು, ಕೃಷಿ ಕಾರ್ಮಿಕರು, ದಿನಗೂಲಿಗಳು ಇಂದು ಮೈಸೂರು, ಹುಣಸೂರು ಮತ್ತು ನಂಜನಗೂಡಿನ ಕಾರ್ಖಾನೆಗಳಿಗೆ ದುಡಿಯಲು ಹೋಗಲಾರಂಭಿಸಿದ್ದಾರೆ. ಪಾರಂಪರಿಕ ವೃತ್ತಿಯ ಸ್ಥಾನ ಪಲ್ಲಟವಾಗಿದೆ.

ಕಾರ್ಖಾನೆಯ ತಿಂಗಳ ಸಂಬಳ, ನಗರ ಪ್ರದೇಶದ ಬದುಕಿಗೆ ಒಗ್ಗಿರುವ ಯುವಕರು ಕೃಷಿಗೆ ಮರಳಲು ಹಿಂಜರಿಯುತ್ತಿದ್ದಾರೆ. ಕೂಲಿ ಕಾರ್ಮಿಕರದ್ದು ಈ ಪಾಡಾದರೆ, ಬೆಳೆಗಾರರದ್ದು ಇದಕ್ಕಿಂತ ವ್ಯತ್ಯಾಸವೇನೂ ಇಲ್ಲ. ಕಟಾವಾದ ಅಳಿದುಳಿದ ಕಬ್ಬಿನ ಕೂಳೆಯನ್ನೇ ಬಿಟ್ಟು ಮಳೆ ಬಂದಾಗ ಒಂದಿಷ್ಟು ಗೊಬ್ಬರ ಹಾಕಿ ಅಚ್ಚುಕಟ್ಟು ಮಾಡಿಕೊಳ್ಳುತ್ತಿದ್ದಾರೆ.

ನಾಲೆ ಜೀರ್ಣೋದ್ಧಾರದ ಶ್ರಮದಲ್ಲಿ  ಎಂಜಿನಿಯರ್‌ಗಳಾದ ಬಿ.ಶಿವಶಂಕರ್, ಶಂಕರೇಗೌಡ, ಬಿ. ಬಸವರಾಜೇಗೌಡ, ಬಿ.ಆರ್. ಉಮೇಶ್, ರಾಮಕೃಷ್ಣ ಡಿ.ಎನ್, ಎನ್.ಕೆ.ಜ್ಞಾನಮೂರ್ತಿ, ಜಯರಾಮ್, ಪಿ.ರವಿ, ಹೊನ್ನೊಜಿ ರಾವ್, ಪುನೀತ್, ಆರ್ ರವಿಕುಮಾರ್, ಎಸ್. ಅಜಯ್, ಆರ್. ರವಿಕುಮಾರ್, ಕೆ.ಎನ್.ಆನಂದ್, ಎಂ.ಎಲ್.ಕುಮಾರಸ್ವಾಮಿ, ಎಸ್.ಎಂ.ಭಾನು ಸೇರಿದ್ದಾರೆ.

ರೈತರ ಜವಾಬ್ದಾರಿ
ಚಿಕ್ಕದೇವರಾಯ ಸಾಗರ ನಾಲೆ ಕೋಟ್ಯಂತರ ರೂಪಾಯಿ ಖರ್ಚಿನಿಂದ ನವೀಕರಣಗೊಂಡಿದೆ. ನಾಲೆ ಜೀರ್ಣೋದ್ಧಾರಕ್ಕಾಗಿ ರೈತರು ಒಂದು ವರ್ಷ ಬೆಳೆ ಬೆಳೆಯದೇ ಬಹು ದೊಡ್ಡ ತ್ಯಾಗ ಮಾಡಿದ್ದಾರೆ. ಇನ್ನು ಮುಂದೆ ನಾಲೆಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ರೈತರ ಜವಾಬ್ದಾರಿ. ನೀರಿಗಾಗಿ ನಾಲೆ ಮಧ್ಯೆ ಗುಂಡಿ ತೋಡುವುದು, ತೂಬು, ಸಣ್ಣ ಏರಿಗಳನ್ನು ಒಡೆಯುವುದು, ನಾಲೆ ಮಧ್ಯೆ ಕಟ್ಟೆ ಕಟ್ಟುವುದನ್ನು ಮಾಡದೆ ನಾಲೆ ಬಗ್ಗೆ ಕಾಳಜಿ ವಹಿಸುವಂತೆ ಕಾವೇರಿ ನೀರಾವರಿ ನಿಗಮ ಮನವಿ ಮಾಡಿದೆ. 

ಚಿಕ್ಕದೇವರಾಯ ಸಾಗರ ನಾಲೆ ಇತಿಹಾಸ
ಚಿಕ್ಕದೇವರಾಯ ಸಾಗರ ನಾಲೆಯನ್ನು ಯದುವಂಶದ ಅರಸ ಚಿಕ್ಕದೇವರಾಯ ಒಡೆಯರು 1673ರಲ್ಲಿ ನಿರ್ಮಾಣ ಮಾಡಿದರು (1704 ಮುಕ್ತಾಯ) ಈ ನಾಲೆ ಹಳೆ ಮೈಸೂರು ಪ್ರಾಂತ್ಯದ ಮೊದಲ ನಾಲೆ ಎನಿಸಿಕೊಂಡಿತು. ಶ್ರೀರಂಗ ಪಟ್ಟಣದ ಪಶ್ಚಿಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಎರಡು ನಾಲೆಗಳನ್ನು ನಿರ್ಮಿಸಿದರು. ಚಿಕ್ಕದೇವರಾಜ ನಾಲೆ ಹಾಗೂ ದೇವರಾಜ ನಾಲೆ ಎಂಬ ಈ ನಾಲೆ ಹಳೆ ಮೈಸೂರು ಪ್ರಾಂತ್ಯದ ಕೃಷಿಗೆ ನೀರೊದಗಿಸಿತು.


ಕಾಮಗಾರಿಯ ವೈಶಿಷ್ಟ್ಯಗಳು
ಸಿ.ಡಿ.ಎಸ್ ನಾಲೆಯು 300 ವರ್ಷಗಳ ಹಿಂದಿನ ನಾಲೆ. ಈ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ 15,10,061.26 ಘನಮೀಟರ್ ಹೂಳನ್ನು ಹೊರ ತೆಗೆಯಲಾಗಿದೆ.ಕಾಮಗಾರಿಗೆ 2,21,826.95 ಘನಮೀಟರ್ ಕಾಂಕ್ರೀಟ್‌, 3 ಸಾವಿರ ಟನ್ ಸ್ಟೀಲ್ ಬಳಸಲಾಗಿದೆ. 20,92,519.69  ಘನಮೀಟರ್ ಮಣ್ಣನ್ನು ಹೊಸದಾಗಿ ಬಳಸಿಕೊಳ್ಳಲಾಗಿದೆ. 300 ವರ್ಷಗಳ ಹಿಂದೆ ಸಿ.ಡಿ.ಎಸ್‌ ನಾಲೆ ನಿರ್ಮಾಣವಾಗುವ ಸಂದರ್ಭ ಹಾಕಿದ್ದ 10 ಗೇಟುಗಳನ್ನು ಬದಲಾಯಿಸಿ  ಹೊಸ 10 ಗೇಟುಗಳನ್ನು ಅಳವಡಿಸಲಾಗಿದೆ.

ಸಿ.ಡಿ.ಎಸ್ ನಾಲೆಯಲ್ಲಿ 241 ನೇರ ತೂಬುಗಳಿದ್ದು, ಇವುಗಳಲ್ಲಿ 219 ತೂಬುಗಳು ತೀರಾ ಹಳೆಯದಾಗಿದ್ದು, ಈ ತೂಬುಗಳನ್ನು ಆಧುನೀಕರಣ ಕಾಮಗಾರಿಯಲ್ಲಿ ಮರು ನಿರ್ಮಿಸಲಾಗಿದೆ ಮತ್ತು ಎಲ್ಲಾ ತೂಬುಗಳಿಗೂ ಹೊಸ ಗೇಟುಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲಾ ಅಚ್ಚುಕಟ್ಟುದಾರರಿಗೂ ಸರಿಯಾದ ಸಾಮರ್ಥ್ಯದ ನೀರು ಹರಿದು ಹೋಗಲಿದೆ. ಸಿ.ಡಿ.ಎಸ್ ನಾಲೆಗೆ ಒಟ್ಟು 33 ಸೇತುವೆಗಳನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಇದರಿಂದ ರೈತರಿಗೆ ಬೆಳೆದ ಬೆಳೆಗಳನ್ನು ಸಾಗಿಸಲು ಅನುಕೂಲವಾಗುವಲ್ಲಿ ಈ ಆಧುನೀಕರಣ ಕಾಮಗಾರಿ ಮುಖ್ಯ ಪಾತ್ರ ವಹಿಸಿದೆ.

ಈ ಕಾಮಗಾರಿಯಲ್ಲಿ ಇನ್‌ಟೆಲ್ ಕಾಮಗಾರಿಗಳು ಬಹು ಮುಖ್ಯವಾಗಿದ್ದು, 300 ಇನ್‌ಟೆಲ್‌ಗಳನ್ನು ಕಾಲುವೆಯ ಉದ್ದಕ್ಕೂ  ಹಳ್ಳಗಳು ಬರುವ ಸ್ಥಳಗಳಲ್ಲಿ ನಿರ್ಮಿಸಲಾಗಿದೆ.ಇದರಿಂದ ಮಳೆನೀರನ್ನು ಸಹ ಕಾಲುವೆಗೆ ಬಳಸಿಕೊಳ್ಳಲು ಇನ್‌ಟೆಲ್‌ಗಳು ಸಹಾಯಕ್ಕೆ ಬರುತ್ತವೆ. 50 ಸೋಪಾನ ಮತ್ತು ಇಳಿಜಾರುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದರಿಂದ ರೈತರು ಮತ್ತು ದನಕರುಗಳು ನಾಲೆಗೆ ಸುರಕ್ಷಿತವಾಗಿ ಇಳಿಯಬಹುದು. ಈ ಎಲ್ಲಾ ಕಾಮಗಾರಿಗಳು 6 ತಿಂಗಳ ಒಳಗೆ ಮುಕ್ತಾಯಗೊಂಡಿವೆ.ಕಾಲುವೆಯ ಎರಡೂ ಬದಿಗಳಲ್ಲಿ ರಸ್ತೆಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ಈ ದಾರಿ ಅನುಕೂಲ ಮಾಡಿಕೊಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.