ADVERTISEMENT

ಸಸ್ಯಶಾಮಲೆಯ ಮಡಿಲಲಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಸಸ್ಯಶಾಮಲೆಯ ಮಡಿಲಲಿ
ಸಸ್ಯಶಾಮಲೆಯ ಮಡಿಲಲಿ   
ನರಸಿಂಹ ಆರ್.ಹೊಳ್ಳ
ಮಲೆನಾಡಿನ ದೇಗುಲಗಳ ದರ್ಶನಕ್ಕೆ ಇದು ಸಕಾಲ. ಏಕೆನ್ನುತ್ತೀರಾ... ಕಾನನದ ಮಧ್ಯೆ ರಮ್ಯವಾಗಿ ಹರಿವ ನೀರು ಎತ್ತರದ ಪ್ರದೇಶದಿಂದ ಧುಮ್ಮಿಕ್ಕುವಾಗ ಜಲಪಾತದ ರೂಪ ಪಡೆಯುತ್ತದೆ. ತಾತ್ಕಾಲಿಕವಾಗಿ ಝರಿಯಾಗುವ ಇದರ ಕೆಳಗೆ ಎಷ್ಟು ಹೊತ್ತು ಬೇಕಾದರೂ ಜಲಕ್ರೀಡೆ ಆಡಬಹುದು.
 
ಅಲ್ಲಿ ಹೋಗಬೇಡಿ ಜಾರುತ್ತದೆ, ಇಲ್ಲಿ ಹೋಗಬೇಡಿ ಅಪಾಯವಿದೆ ಎನ್ನಲು ಇಲ್ಲಿ ಯಾವ ಭದ್ರತಾ ಸಿಬ್ಬಂದಿಯೂ ಇಲ್ಲ. ಇಷ್ಟಕ್ಕೂ ನಮ್ಮ ಪ್ರಯಾಣ ಹೊರಟಿದ್ದು ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ.
 
ಆದರೆ ದಾರಿಯುದ್ದಕ್ಕೂ ಆಕರ್ಷಿಸುತ್ತಿದ್ದ ಕೆಲ ಅನಾಮಿಕ ಜಲತಾಣಗಳು ನಮ್ಮ ಪ್ರಯಾಣವನ್ನು ಮತ್ತಷ್ಟು ನಿಧಾನಗೊಳಿಸಿದವು. ಆಗಷ್ಟೇ ಸುರಿದು ನಿಂತಿದ್ದ ಮಳೆ ನಿಸರ್ಗದ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಅಲ್ಲಲ್ಲಿ ನಿಂತು ಫೋಟೊ ತೆಗೆದು ಸೊಬಗನ್ನು ಕಣ್ತುಂಬಿಕೊಳ್ಳುವುದೇ ನಮ್ಮ ಕಾಯಕವಾಯಿತು.
 
ಶೃಂಗೇರಿಯಿಂದ ಜಯಪುರ–ಕಳಸ ರಸ್ತೆಯಲ್ಲಿ ಮಂಕಿಕೊಪ್ಪ ಕಳೆದು ಎರಡು ಕಿ.ಮೀ. ದಾಟುವಾಗಲೇ ಈ ಝರಿ ಕಾಣಸಿಕ್ಕಿತು. ಸಮೃದ್ಧ ಸಸ್ಯ ಶ್ಯಾಮಲೆಯ ಮಡಿಲಲ್ಲಿ ಜುಳುಜುಳು ಹರಿಯುತ್ತಿದ್ದ ಜಲಲ ಜಲಧಾರೆ ನಮ್ಮ ಕಾರಿನ ವೇಗಕ್ಕೆ ಕಡಿವಾಣ ಹಾಕಿತು.
 
 
‘ಏನು ಹೆಸರು ಈ ಫಾಲ್ಸ್‌ಗೆ’ ಎಂದು ಅಲ್ಲೊಬ್ಬರ ಬಳಿ ಪ್ರಶ್ನಿಸಿದ್ದಕ್ಕೆ, ‘ನೀವೇ ನಾಮಕರಣ ಮಾಡಿ ನೋಡೋಣ’ ಅಂದ್ರು ಆ ಆಸಾಮಿ. ‘ಶಿವಮೊಗ್ಗದ ಜೋಗ ಜಲಪಾತದಲ್ಲಾದರೂ ನೀರು ಖಾಲಿಯಾಗಬಹುದು, ಆದರೆ ನಮ್ಮ ಈ ಝರಿ ಮಳೆಗಾಲ ಮುಗಿಯುವ ತನಕ ಬತ್ತೋದೇ ಇಲ್ಲ ನೋಡಿ’ ಎಂದರು.
 
ಸುಮಾರು 35 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದ ಬಿಳಿ ಹಾಲಿನ ನೊರೆಯಂತೆ ಕಾಣುತ್ತಿದ್ದ ನೀರು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಲ್ಲಾ ಪ್ರವಾಸಿಗರು ತಡೆದು ನಿಲ್ಲಿಸುತ್ತಿತ್ತು. ಕೊರಕಲಾದ ಬಂಡೆಕಲ್ಲುಗಳ ಮಧ್ಯೆ ಜುಳುಜುಳು ನಾದದೊಂದಿಗೆ ಕೆಳಗೆ ಹರಿದು ಪುಟ್ಟ ಸೇತುವೆ ಹಾದು ಮತ್ತೆ ಕಿರಿದಾದ ಕಣಿವೆಯಲ್ಲಿ ಹರಿದು ಹೋಗುತ್ತಿತ್ತು. 
 
‘ಇಂಥ ಮನೋಹರ ಜಲಪಾತಗಳು ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಾಣಸಿಗುತ್ತವೆ. ಇದು ರಸ್ತೆಯ ಅಂಚಿನಲ್ಲೇ ಇರುವುದರಿಂದ ಹೆಚ್ಚಿನ ಯಾತ್ರಿಕರು ಇಲ್ಲಿ ಕಾರು ನಿಲ್ಲಿಸಿ ಸೆಲ್ಫಿ ಕ್ಲಿಕ್ಕಿಸಿ, ಮೈ ತಂಪಾಗಿಸಿಕೊಂಡು ಮುಂದೆ ಸಾಗುತ್ತಾರೆ. ಹೆಚ್ಚಿನ ಪಾಚಿಯಿಂದ ಈ ಕಲ್ಲುಗಳು ವಿಪರೀತ ಜಾರುತ್ತವೆ. ಹೊಸಬರಾರೂ ಹತ್ತುವ ಸಾಹಸ ಮಾಡಬಾರದಷ್ಟೇ’ ಎನ್ನುತ್ತಾರೆ ಝರಿ ಸಮೀಪದ ನಿವಾಸಿ.
 
ಅವರು ಹೇಳಿದ್ದೇ ನಿಜವಾಗಿತ್ತು. ಮುಂದಿನ 50 ಕಿ.ಮೀ. ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚಿನ ಚಿಕ್ಕ ಪುಟ್ಟ ತಾತ್ಕಾಲಿಕ ಜಲಪಾತಗಳು ಜುಳುಜುಳು ಮಂಜುಳ ಗಾನದೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಹರಿಯುತ್ತಿದ್ದವು.
 
ಆಳೆತ್ತರಕ್ಕೆ ಬೆಳೆದು ನಿಂತಿದ್ದ ಕಾಫಿ ಗಿಡಗಳು ಮೈ ತುಂಬಾ ಕಾಯಿ ಹೊದ್ದುಕೊಂಡು ಜೀಕುತ್ತಿದ್ದವು. ಅಕೇಶಿಯಾ, ಹೊನ್ನೆ, ನೀಲಗಿರಿ ಮರಗಳೂ ಬೀಸುತ್ತಿದ್ದ ತಂಗಾಳಿಗೆ ತಲೆಯಾಡಿಸುತ್ತಿದ್ದವು. ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟಗುಡ್ಡಗಳಿಗೆ ಮೋಡಗಳು ಮೈದಾಗಿಸುತ್ತಿದ್ದವು!
 
ಆನ್ನಪೂರ್ಣೆಯ ಸನ್ನಿಧಿಯಲ್ಲಿ ಪೂಜೆ, ದರ್ಶನ, ಊಟ ಮುಗಿಸಿ ಹಿಂದಿರುಗಿದ್ದು ಕಳಸ ಮತ್ತು ಮಂಜೇಶ್ವರ ಎಸ್.ಕೆ.ಬಾರ್ಡರ್ ರಸ್ತೆಯಲ್ಲಿ. ಮತ್ತದೇ ಕಾಫಿ ಎಸ್ಟೇಟ್‌ಗಳು ಕ್ಯಾಮೆರಾ ಕೈಯಲ್ಲಿ ಹಿಡಿದ ಪ್ರವಾಸಿಗರನ್ನು ತಡೆಹಿಡಿಯುತ್ತಿದ್ದವು.
 
ಘಮ್ಮೆಂದು ಪರಿಮಳ ಸೂಸುವ ಸಣ್ಣ ಕಾಫಿ ಹಟ್‌ಗಳು ಅಷ್ಟೇ, ಪಟ್ಟಣದ ದೊಡ್ಡ ಕಾಫಿಡೇಗಿಂತಲೂ ಅಧಿಕ ಸಂಖ್ಯೆಯ ಗ್ರಾಹಕರನ್ನು ತನ್ನ ಗೂಡೊಳಗೆ ಸೇರಿಸಿಕೊಂಡಿತ್ತು.  ಚಹಾ ಎಸ್ಟೇಟ್‌ಗಳಲ್ಲಿ ಮಹಿಳೆಯರು ಚೀಲಗಳನ್ನು ಬೆನ್ನಿಗೇರಿಸಿಕೊಂಡು ಸೊಪ್ಪು ಕೊಯ್ಯುವುದರಲ್ಲಿ ಮಗ್ನರಾಗಿದ್ದರು.
 
ಸದ್ದಿಲ್ಲದೆ ಬೆಳೆಯುತ್ತಿದೆ ಎಸ್ಟೇಟ್ ಉದ್ಯಮ!
ಹಾಗೆ ಅಲ್ಲಿದ್ದ ಮಳಿಗೆಯೊಂದರ ಮಾಲೀಕರನ್ನು ಮಾತಿಗೆಳೆದೆ. ಇಲ್ಲಿ ಪ್ರಯಾಣಿಸುವ ಹತ್ತರಲ್ಲಿ ಎಂಟು ಪ್ರವಾಸಿ ಕಾರು ಇಲ್ಲವೇ ಬಸ್ಸುಗಳು ಇಲ್ಲಿ ನಿಲ್ಲುತ್ತವೆ. ಈ ಸ್ಮಾರ್ಟ್‌ಫೋನ್‌ಗಳು ಬಂದ ಮೇಲೆ ಛಾಯಾಗ್ರಾಹಕರ ಸಂಖ್ಯೆಯೂ ಹೆಚ್ಚಿದೆ ನೋಡಿ.
 
ಹಾಗಾಗಿ ಬಂದವರೆಲ್ಲಾ ಒಂದಷ್ಟು ಫೋಟೊ ಹೊಡೆದು ಬಳಿಕ ಚಹಾ, ಕಾಫಿ ಕುಡಿಯಲು ನಮ್ಮಲ್ಲಿಗೆ ಬರುತ್ತಾರೆ. ಒಮ್ಮೆ ಕುಡಿದವರು ಮತ್ತೊಮ್ಮೆ ನೆನಪಿಟ್ಟು ಬರುತ್ತಾರೆ. ರಜಾ ದಿನಗಳಲ್ಲಿ ನಮ್ಮ ವ್ಯಾಪಾರ ಒಂದು ಲಕ್ಷದ ಗಡಿ ದಾಟುವುದುಂಟು ಎಂದರು.
 
ಆ ಪುಟ್ಟ ಅಂಗಡಿಯಲ್ಲೇ ಮನೆಯಲ್ಲೇ ತಯಾರಾದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತಾಜಾ ಜೇನುತುಪ್ಪ, ಚಹಾ ಹುಡಿ, ಕಾಫಿ ಹುಡಿ, ನಾನಾ ವಿಧದ ಮದ್ದಿನ ಎಣ್ಣೆಗಳು, ಸಾಬೂನುಗಳು ಇದ್ದವು. ಎಲ್ಲದರ ಮೇಲೂ ಮಲೆನಾಡಿನ ಉತ್ಪನ್ನಗಳು ಎಂಬ ವಿಶೇಷ ಸ್ಟಿಕ್ಕರ್ ಅಂಟಿಸಲಾಗಿತ್ತು. ದೇಗುಲ ದರ್ಶನಕ್ಕೆಂದು ಹೊರಟ ನಮ್ಮ ಪ್ರಯಾಣ ಒಂದಷ್ಟು ಸವಿನೆನಪುಗಳ ಅನುಭವವನ್ನು ಕಟ್ಟಿಕೊಟ್ಟದ್ದು ಮಾತ್ರ ಸುಳ್ಳಲ್ಲ.
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.