ADVERTISEMENT

ಸ್ಮಾರಕ, ಕಲ್ಯಾಣಿಗಳ ಕಾಯಕಲ್ಪಕ್ಕೆ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
‘ಕೆಂಪೇಗೌಡ ರಥಯಾತ್ರೆ ಸಮಿತಿ’ ಸದಸ್ಯರು
‘ಕೆಂಪೇಗೌಡ ರಥಯಾತ್ರೆ ಸಮಿತಿ’ ಸದಸ್ಯರು   

-ದಂಡಿನಶಿವರ ಮಂಜುನಾಥ್
ವಾರಾಂತ್ಯ ಬಂದರೆ ರಜೆಯ ಮೋಜು ಅನುಭವಿಸಬೇಕು ಎಂದು ಬಯಸುವವರೇ ಹೆಚ್ಚು. ಇಂಥವರ ನಡುವೆ ಬೆಂಗಳೂರಿನ ಯುವಕರ ತಂಡವೊಂದು ಅಳಿವಿನ ಅಂಚಿನಲ್ಲಿರುವ ಐತಿಹಾಸಿಕ  ಕಲ್ಯಾಣಿ, ದೇವಾಲಯಗಳನ್ನು ಗುರುತಿಸಿ, ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತವಾಗಿದೆ.

ಸುಂಕದಕಟ್ಟೆಯ ‘ಕೆಂಪೇಗೌಡ ರಥಯಾತ್ರೆ ಸಮಿತಿ’ ಸದಸ್ಯರು ಕೆಲ ತಿಂಗಳಿನಿಂದ ಇಂಥದ್ದೊಂದು ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಪುರಾತನ ಸ್ಮಾರಕಗಳಿಗೆ ಕಾಯಕಲ್ಪ ಕಲ್ಪಿಸುವುದು ಈ ಯುವಕರ ಸಂಕಲ್ಪ. ಇವರ ಪರಿಶ್ರಮದಿಂದ ಇಂದು ಹಲವು ಕಲ್ಯಾಣಿಗಳು ಮರುಜೀವ ಪಡೆದು ಮಳೆ ನೀರಿನಿಂದ ತುಂಬಿವೆ, ದೇವಾಲಯಗಳು, ಉದ್ಯಾನ ಎಲ್ಲವೂ ಸ್ವಚ್ಛಗೊಂಡು ಸುಂದರವಾಗಿ ಕಾಣುತ್ತಿವೆ.

ಈ ತಂಡದಲ್ಲಿ ಸದ್ಯ 40 ಸದಸ್ಯರಿದ್ದಾರೆ. ಪ್ರತಿ ಭಾನುವಾರ ಇವರ ಕಾರ್ಯ ಆರಂಭ. ಕೇಸರಿ ಟಿ–ಶರ್ಟ್‌ ಇವರ ಗುರುತು. ನಿಗದಿತ ದಿನ ತಾವು ಯಾವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂದು ಮೊದಲೇ ನಿರ್ಧರಿಸಿಕೊಳ್ಳುತ್ತಾರೆ. 20–20 ಜನರ ಎರಡು ತಂಡ ಮಾಡಿಕೊಳ್ಳುತ್ತಾರೆ. ಕೈಯಲ್ಲಿ ಹಾರೆ, ಪಿಕಾಸಿ, ಗುದ್ದಲಿ, ಬಾಣಲೆ ಮತ್ತು ಪೊರಕೆ ಹಿಡಿದು ಬೆಳಿಗ್ಗೆ ಎರಡು ಪ್ರತ್ಯೇಕ ಗುಂಪು ಮಾಡಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಾರೆ. ಅಲ್ಲಿಂದ ಅವರ ಶುಚಿ ಕಾರ್ಯ ಆರಂಭಗೊಳ್ಳುತ್ತದೆ.

ಇವರ ಗುಂಪಿನಲ್ಲಿ ಎಂಜಿನಿಯರ್‌, ಖಾಸಗಿ ಕಂಪೆನಿ ಉದ್ಯೋಗಿಗಳು, ಸ್ವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಇದ್ದಾರೆ. ಎಲ್ಲಾ ಕೆಲಸಗಳಿಗೂ ಸರ್ಕಾರದ ಅನುದಾನ ಕಾಯುವ ಇಂದಿನ ಸಮಾಜದಲ್ಲಿ ಸ್ವಚ್ಛತೆಗೆ ತಗಲುವ ವೆಚ್ಚವನ್ನು ಸದಸ್ಯರೇ ಭರಿಸುತ್ತಿದ್ದಾರೆ.

ಸ್ವಚ್ಛತೆಯ ತುಡಿತದ ಹಿಂದೆ...
ಈ ಯುವಕರು ರಜೆಯಲ್ಲಿ ಕಾಲಕಳೆಯಲು ಪ್ರತಿ ಬಾರಿ ಹಲವು ಸ್ಥಳಗಳಿಗೆ ಹೋಗುತ್ತಿದ್ದರು. ಅದೇ ರೀತಿ ಮೂರು ತಿಂಗಳ ಹಿಂದೆ ಮಾಗಡಿ ಹತ್ತಿರದ ಸಾವನದುರ್ಗಕ್ಕೆ ಹೋಗಿದ್ದರು. ಅಲ್ಲಿನ ಕಲ್ಯಾಣಿಯೊಂದು ಮುಳ್ಳು ಗಿಡಗಳಿಂದ ಮುಚ್ಚಿ ಹೋಗಿತ್ತು. ಇದನ್ನು ಕಂಡ ಯುವಕರಿಗೆ ಅದನ್ನು ಸ್ವಚ್ಛಗೊಳಿಸುವ ತುಡಿತ ಉಂಟಾಯಿತು. ಚಾರಣಕ್ಕೆಂದು ಸಾವನದುರ್ಗಕ್ಕೆ ಹೋಗುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಅಲ್ಲಿ ಈ ಕಲ್ಯಾಣಿ ನೋಡಿ ಎಲ್ಲರೂ ಕಣ್ಮುಚ್ಚಿಕೊಂಡು ಹೋದವರೇ. ಆದರೆ ಈ ಯುವಕರು ಹಾಗೆ ಮಾಡಲಿಲ್ಲ.

ಅದನ್ನು ಹೇಗಾದರೂ ಮಾಡಿ ಸ್ವಚ್ಛಗೊಳಿಸಬೇಕೆಂದು ತೀರ್ಮಾನಿಸಿದರು.  ಮನೆಗೆ ವಾಪಸಾಗುತ್ತಿದ್ದಂತೆಯೇ ಕಲ್ಯಾಣಿ ಸ್ವಚ್ಛತೆ ಕುರಿತು ಚರ್ಚಿಸಿದರು. ಅದಕ್ಕೊಂದು ಸೂಕ್ತ ಸಮಯ ನಿಗದಿ ಮಾಡಿ ಮರು ವಾರ ಅಲ್ಲಿಗೆ ಹೋಗಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿ ಕಲ್ಯಾಣಿಗೆ ಮರುಜೀವವನ್ನೂ ನೀಡಿದರು.

ಅಲ್ಲಿ ವ್ಯಕ್ತವಾದ ಶ್ಲಾಘನೆ ಇವರನ್ನು ಇನ್ನಷ್ಟು ಕಾರ್ಯಕ್ಕೆ ಉತ್ತೇಜನ ನೀಡಿತು. ಕಲ್ಯಾಣಿ ಮೈದುಂಬಿದ್ದು ನೋಡಿ ಇದೇ ರೀತಿಯ ಕಾರ್ಯವನ್ನು ಏಕೆ ಮುಂದುವರಿಸಬಾರದು ಎಂದು ಯೋಚಿಸಿದರು. ಬೆಂಗಳೂರು  ಸುತ್ತಮುತ್ತವಲ್ಲದೇ ಅವನತಿಯಲ್ಲಿರುವ ಬೇರೆ ಊರುಗಳ ಕಲ್ಯಾಣಿಗಳನ್ನೂ ಸ್ವಚ್ಛಗೊಳಿಸುವ ನಿರ್ಧಾರಕ್ಕೆ ಬಂದರು. ಅದಕ್ಕೆಂದೇ ಸಂಘವನ್ನು ಸಂಘಟಿಸಿದರು.

‘ಕೆಂಪೇಗೌಡರ ನೆಲೆಯಾಗಿದ್ದ ಸಾವನದುರ್ಗದಲ್ಲಿ ಈ ಯೋಚನೆ ನಮಗೆ ಬಂದ ಕಾರಣ ನಮ್ಮ ಸಂಘಕ್ಕೆ ಅವರ ಹೆಸರು ಇಟ್ಟೆವು’ ಎನ್ನುತ್ತಾರೆ ಅಧ್ಯಕ್ಷರಾದ ಮಧುಗೌಡ. ‘ನಮ್ಮ ಸಂಘದಲ್ಲಿ ಜಾತಿ ಮತ್ತು ರಾಜಕೀಯಕ್ಕೆ ಪ್ರವೇಶವಿಲ್ಲ. ಕೆಲಸ ಮಾಡುವ ಆಸೆ ಇರುವವರು ಯಾರೇ ಬಂದರೂ ಇಲ್ಲಿ ಸ್ವಾಗತ’ ಎನ್ನುತ್ತಾರೆ ಅವರು. ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳನ್ನೂ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿ ಅದನ್ನೂ ಮುಂದುವರಿಸಿಕೊಂಡು ಬಂದಿದೆ ತಂಡ.

ಜೀರ್ಣೋದ್ಧಾರಗೊಂಡ ಸ್ಥಳಗಳು
ಮಾಗಡಿಯಲ್ಲಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯದ ಆವರಣ ಮತ್ತು ದೊಡ್ಡ ಕಲ್ಯಾಣಿಯನ್ನು ಸ್ವಚ್ಛಗೊಳಿಸಿರುವ ಈ ಯುವಕರು, ದೇವಾಲಯದ ಆವರಣದಲ್ಲಿ ಗಿಡ ನೆಟ್ಟು ಬಂದಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿನ ಕಲ್ಯಾಣಿಗೆ ಮರು ಜೀವ ನೀಡಿದ್ದಾರೆ.

ಅಲ್ಲದೇ ಮುಳ್ಳು ಗಿಡಗಳಿಂದ ತುಂಬಿದ್ದ ವೇಣುಗೋಪಾಲಸ್ವಾಮಿ ದೇವಾಲಯವನ್ನು ಸ್ವಚ್ಛಗೊಳಿಸಿ, ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಇದೇ ತಾಲ್ಲೂಕಿನ ಹೂತ್ರಿದುರ್ಗದಲ್ಲಿನ ಕಲ್ಯಾಣಿ ಮತ್ತು ಪುರಾತನ ದೇವಾಲಯವನ್ನು ಈ ತಂಡದವರು ಸ್ವಚ್ಛಗೊಳಿಸಿದ್ದಾರೆ. ಅಲ್ಲಿನ ಕುವೆಂಪು ಉದ್ಯಾನ ಕೂಡ ಸ್ವಚ್ಛಗೊಂಡಿದೆ.

ಮುಂದಿನ ಯೋಜನೆ: ‘ನಾವು ಸ್ವಚ್ಛಗೊಳಿಸಿ ಬರುವ ಸ್ಮಾರಕಗಳ ಮಹತ್ವದ ಬಗ್ಗೆ ಅಲ್ಲಿನ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜೊತೆಗೆ ಇನ್ನು ಮುಂದೆ ಬೀದಿ ನಾಟಕಗಳನ್ನು ಆಯೋಜಿಸಿ ಅದರ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಯೋಜನೆ ರೂಪಿಸಿದ್ದೇವೆ’ ಎನ್ನುತ್ತಾರೆ ಸಂಘದ ಖಜಾಂಚಿ ಚಲುವರಾಜು.

‘ಹಿಂದಿನ ಕಾಲದಲ್ಲಿ ಕೆರೆ ಕುಂಟೆ. ಕಲ್ಯಾಣಿ, ಬಾವಿಗಳನ್ನು ನಿರ್ಮಿಸುವುದರಿಂದ ನಮಗೆ ಉಪಯೋಗವಾಗುತ್ತದೆಂದು ತಿಳಿದಿದ್ದ ಹಿರಿಯರು ಆ ಕೆಲಸ ಮಾಡಿ ತೋರಿಸಿದ್ದಾರೆ.ಆದರೆ ನಾವು ಅವುಗಳು ಮುಚ್ಚಿ ಹೋಗುವಂತೆ ಮಾಡಿ ನೀರಿಗಾಗಿ ಹೋರಾಡುತ್ತಿರುವುದು ದುರದೃಷ್ಟ’ ಎನ್ನುತ್ತಾರೆ ಅವರು.

ಈಗಾಗಲೇ ತುಮಕೂರು ಜಿಲ್ಲಾ ಘಟಕ ಮತ್ತು ಕುಣಿಗಲ್ ತಾಲ್ಲೂಕು ಘಟಕಗಳನ್ನು ಹೊಂದಿರುವ ಈ ಸಮಿತಿಯು ಮುಂದೆ ರಾಜ್ಯದ ಹಲವು ಕಡೆಗಳಲ್ಲಿ ತನ್ನ ಘಟಕಗಳನ್ನುಸ್ಥಾಪಿಸಿ ಅದರ ಮೂಲಕ ಅಲ್ಲಿನ ಸ್ಥಳೀಯ ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಯೋಜನೆ ರೂಪಿಸುತ್ತಿದೆ.

ಅವನತಿಯಲ್ಲಿರುವ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕಲ್ಯಾಣಿಗಳನ್ನು ಈಗಾಗಲೇ ಗುರುತಿಸಿರುವ ಈ ಸಮಿತಿಯ ಸದಸ್ಯರು, ಅವುಗಳನ್ನು ಸ್ವಚ್ಛಗೊಳಿಸಲು ಯೋಜನೆ ಹಾಕಿಕೊಂಡಿದ್ದಾರೆ. ಕೇವಲ ಮೂರು ತಿಂಗಳ ಹಿಂದೆ ಪ್ರಾರಂಭವಾಗಿರುವ ಈ ಸಮಿತಿಯು ಸಮಾಜಸೇವೆಯಿಂದಾಗಿ ಹಲವು ಜನರ ಮೆಚ್ಚುಗೆ ಗಳಿಸಿದೆ. ಕೆಲವರು ತಾವು ಈ ಕಾರ್ಯದಲ್ಲಿ  ಭಾಗಿಯಾಗಲು ಮುಂದೆ ಬಂದಿದ್ದಾರೆ. ವ್ಯಾಟ್ಸ್ ಆ್ಯಪ್‌ , ಫೇಸ್‌ಬುಕ್‌ನಲ್ಲಿ ಈ ಯುವಕರ ತಂಡಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯದಲ್ಲಿ  ಸ್ವಚ್ಛತೆ ಕಾಣದ ಪ್ರಾಚೀನ  ಕಲ್ಯಾಣಿಗಳು ಮತ್ತು ದೇವಾಲಯಗಳ ಬಗ್ಗೆ ಸಾರ್ವಜನಿಕರು ಈ ಸಮಿತಿಗೆ ಮಾಹಿತಿ ನೀಡಬಹುದು. ಸಂಪರ್ಕಿಸಿ: 9535522651, 8050369387. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.