ADVERTISEMENT

ಹಿಗ್ಗಿತು ಹುಗ್ಗಿಕೆರೆ

ಇ.ಎಸ್.ಸುಧೀಂದ್ರ ಪ್ರಸಾದ್
Published 8 ಮೇ 2017, 19:30 IST
Last Updated 8 ಮೇ 2017, 19:30 IST
ಚಿತ್ರಗಳು: ಬಿ.ಎಂ.ಕೇದಾರನಾಥ
ಚಿತ್ರಗಳು: ಬಿ.ಎಂ.ಕೇದಾರನಾಥ   

ಹಸಿರು ಹೊದ್ದಿರುವ ಗುಡ್ಡಗಳ ನಡುವೆ ಪವಡಿಸಿದೆ ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದ ಕುಡಿಕೆರೆ. ಇದಕ್ಕೆ ಹುಗ್ಗಿಕೆರೆ ಹಾಗೂ ಬೇಳೆಕೆರೆ ಎಂಬ ಅಡ್ಡಹೆಸರುಗಳು ಬೇರೆ. ಈ ಕೆರೆಯ ನೀರಿನಲ್ಲಿ ಏನೋ ದಿವ್ಯ ಸಾಮರ್ಥ್ಯವಿದೆ ಎಂಬುದನ್ನು ಗ್ರಾಮದ ಜನ ಸಂಶಯಕ್ಕೆ ಆಸ್ಪದವೇ ಇಲ್ಲದಂತೆ ಖಚಿತಪಡಿಸಿಕೊಂಡಿದ್ದಾರೆ. ಹೇಗೆ ಅಂತೀರಾ?

ಅವರೇನು ಯಾವುದೋ ಪ್ರಯೋಗಾಲಯಕ್ಕೆ ಅಲ್ಲಿನ ನೀರನ್ನು ಕಳಿಸಲಿಲ್ಲ, ಬದಲಿಗೆ ಸುತ್ತಲಿನ ಗ್ರಾಮದ ಅಡುಗೆಕೋಣೆಗಳೇ ನೀರಿನ ಗುಣಮಟ್ಟ ಪರೀಕ್ಷಿಸಿ ಫಲಿತಾಂಶ ಘೋಷಿಸಿದ್ದವು!

ಕುಡಿಕೆರೆಯ ನೀರಿನಿಂದ ಅಡುಗೆ ಮಾಡಿದರೆ ಬೇಳೆ ಬೇಗ ಬೇಯುತ್ತದೆ; ಹುಗ್ಗಿ ಮಾಡಲು ಗೋಧಿಯನ್ನು ಹೆಚ್ಚು ಕುದಿಸುವ ಅಗತ್ಯವಿಲ್ಲ. ಅಲ್ಲದೆ, ಈ ನೀರಿನಲ್ಲಿ ಸಿದ್ಧಪಡಿಸಿದ ಹುಗ್ಗಿಯ ಪರಿಮಳವೇ ಬೇರೆ ಎಂದು ಎಲ್ಲ ಅಡುಗೆಕೋಣೆಗಳು ಒಂದೇ ಅಭಿಪ್ರಾಯ ನೀಡಿದ್ದವು. ಅಂದಹಾಗೆ, ಇದಕ್ಕೆ ಕಾರಣವನ್ನೂ ಇದೇ ಗ್ರಾಮದ ಜನ ಹುಡುಕಿದ್ದಾರೆ.

ಕುಡಿಕೆರೆಗೆ ಗುಡ್ಡದ ಕೊರಕಲಿನಲ್ಲಿ ಹರಿದು ಬರುವ ನೀರು ಮೂರು ಮೂತಿ ಮುಳ್ಳಿನಗಿಡದ ಬೇರಿಗೆ ನೀರುಣಿಸಿ ಅದನ್ನು ಸ್ಪರ್ಶಿಸುತ್ತಾ ಮುಂದೆ ಸಾಗುತ್ತದೆ. ಅಲ್ಲಿಂದ ಮುಂದೆ ಕಾರಿಕಡ್ಡಿ, ಮಾವಿನ ತೋಪಿನಲ್ಲಿ ಸಾಗಿ, ಮುಂದೆ ಕೌಳಿ ಮೇಳಿಯಲ್ಲಿ ಇಳಿದು ಗಿಡ ಹಾಗೂ ಮರಗಳ ಬೇರಿನ ನಡುವೆ ಸೋಸುತ್ತಾ ಕುಡಿಕೆರೆಗೆ ಬಂದು ಸೇರುತ್ತದೆ. ಈ ಪ್ರಕ್ರಿಯೆಯಲ್ಲಿ ನೀರು ಪರಿಶುದ್ಧಗೊಂಡು ಔಷಧಿ ಗುಣವನ್ನು ಮೈಗೂಡಿಸಿಕೊಂಡು ಏನೋ ವಿಶೇಷ ಸಾಮರ್ಥ್ಯವನ್ನೂ ಪಡೆದಿರುತ್ತದೆ... ಅವರ ವಿವರಣೆ ಹೀಗೇ ಸಾಗುತ್ತದೆ.

ಕುಡಿಕೆರೆಯ ನೀರಿನ ಪರಿಶುದ್ಧತೆಯನ್ನು ಹಾಗೇ ಕಾಪಾಡಿಕೊಳ್ಳಲು ಗ್ರಾಮಸ್ಥರು ಕೆರೆಗೆ ಕಾವಲು ಹಾಕಿದ್ದರು. ಕೆರೆಯ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೂ ಉಪಯೋಗ ಮಾಡದಂತೆ ಕಾವಲಿಗಿದ್ದ ದೊಣ್ಣೆ ನಾಯಕರು ತಡೆಯುತ್ತಿದ್ದರು. ಸುತ್ತಲಿನ ಹಳ್ಳಿಗಳ ಜನ ತಮ್ಮ ಮನೆಗಳಲ್ಲಿ ಏರ್ಪಡಿಸುತ್ತಿದ್ದ ಸಮಾರಂಭಗಳಿಗೆ ಇಲ್ಲಿನ ನೀರನ್ನು ಬ್ಯಾರೆಲ್‌ನಲ್ಲಿ ತುಂಬಿಸಿಕೊಂಡು, ಎತ್ತಿನ ಗಾಡಿಗಳಲ್ಲಿ ಇಟ್ಟುಕೊಂಡು ಒಯ್ಯುತ್ತಿದ್ದರು.
ಹಾಗೆ ಒಯ್ಯಲು ಬರುವುದಕ್ಕಿಂತ ಮುಂಚೆ ಕೆರೆ ಕಾವಲು ಸಮಿತಿಗೆ ‘...ಇಂತಹ ಕಾರ್ಯಕ್ರಮಕ್ಕೆ ನೀರು ಬೇಕಾಗಿದೆ’ ಎಂಬ ಮಾಹಿತಿ ನೀಡುತ್ತಿದ್ದರು.

ನೂರಾರು ವರ್ಷಗಳಿಂದ ಜನರಿಗೆ ಶುದ್ಧ ನೀರುಣಿಸುತ್ತಾ ಬಂದಿರುವ ಕುಡಿಕೆರೆ ಮಲೆನಾಡಿನ ಸೆರಗಿನಂಚಿನಲ್ಲಿದ್ದರೂ ಈಗ ಬತ್ತಿದೆ. ಸತತ ಬರಗಾಲವೇ ಇದಕ್ಕೆ ಕಾರಣ. ‘ಕೆರೆಯಲ್ಲಿ ಬೊಗಸೆಯಷ್ಟು ನೀರೂ ಇಲ್ಲದಿದ್ದರಿಂದ ನಮ್ಮ ಸುತ್ತಲಿನ ಗ್ರಾಮಗಳಲ್ಲಿ ಹುಗ್ಗಿಯ ಪರಿಮಳ ಮೊದಲಿನಂತೆ ಹರಡುತ್ತಿಲ್ಲ’ ಎನ್ನುವುದು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ ಕರಿಗೌಡ್ರ ಮತ್ತವರ ಸ್ನೇಹಿತರ ನಿರಾಸೆಯ ಮಾತು.

ಕೆರೆಯ ಅಂಗಳದ ಆಳವನ್ನು ಮತ್ತಷ್ಟು ಹೆಚ್ಚಿಸಿ, ಏರಿಯನ್ನು ಇನ್ನಷ್ಟು ಎತ್ತರಿಸಿ, ಬದಿಗೆ ಕಲ್ಲು ಕಟ್ಟಿ ಶಾಶ್ವತಗೊಳಿಸುವ ಸಾಹಸಕ್ಕೆ ಗ್ರಾಮದ ಸಿದ್ಧಾಶ್ರಮದ ಸಿದ್ಧಶಿವಯೋಗಿ ಸ್ವಾಮೀಜಿ ಮುಂದಾದರು. ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಈ ಹಿಂದೆ ಬಂದಿದ್ದ ಹಣ ಎಲ್ಲಿ ಸೋರಿಹೋಯಿತು ಎಂಬ ಚಿಂತೆಯೇನೋ ಅವರನ್ನು ಕಾಡಿತು. ಆದರೆ, ಕೆರೆಯನ್ನು ಸರ್ಕಾರದ ಹಣದಿಂದಲ್ಲ, ಸಮುದಾಯದ ಶ್ರಮದಿಂದಲೇ ಸರಿಪಡಿಸಬೇಕು ಎಂಬ ಸಂಕಲ್ಪವನ್ನು ಅವರು ಮಾಡಿದರು. ಭೂಮಿಗೆ ತೂತು ಕೊರೆಯಲು ಉದಾರವಾಗಿ ಕೊಳವೆಬಾವಿ ರಿಗ್‌ ಕೊಡಿಸುವ ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗದಿರುವುದು ಅವರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿತ್ತು.

ಸಿದ್ಧಶಿವಯೋಗಿ ಸ್ವಾಮೀಜಿಯವರು ಊರಿನ ಹಿರಿಯರನ್ನು ಸೇರಿಸಿದರು. ಮಠದಿಂದಲೂ ಧನಸಹಾಯ ಮಾಡಿದರು. ವಿವಿಧ ಮೂಲಗಳಿಂದ ಹಣ ಸಂಗ್ರಹವಾದರೂ ಅದು ಯೋಜನಾ ಗಾತ್ರದ ಅರ್ಧದಷ್ಟನ್ನೂ ತಲುಪಲಿಲ್ಲ. ಟೈಲ್ಸ್‌ ಕೂರಿಸುವ ಕಾಯಕ ಮಾಡುವ ಬಸವರಾಜ ಹಾನಗಲ್‌ ಎಂಬ ಯುವಕ ತಮ್ಮ ಗಳಿಕೆಯಿಂದ ಉಳಿಸಿದ ₹ 50 ಸಾವಿರವನ್ನು ಈ ಕೆರೆಯ ಅಭಿವೃದ್ಧಿಗೆ ನೀಡಿದರು. ಪ್ರತಿದಿನ ಸರಾಸರಿಯಾಗಿ ₹400ರಷ್ಟು ಗಳಿಸುವ ಅವರು, ಗಳಿಸಿದ್ದರಲ್ಲಿ ಉಳಿಸಿದ ಹಣವನ್ನು ಕೆರೆಯ ಅಭಿವೃದ್ಧಿಗೆ ಕೊಟ್ಟುಬಿಟ್ಟರು. ಅವರ ಈ ನಡೆ ಉಳಿದವರಿಗೂ ಸ್ಫೂರ್ತಿಯ ಚಿಲುಮೆಯಾಯಿತು.

‘ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಮಧ್ಯರಾತ್ರಿ ನಮ್ಮನ್ನು ಎಬ್ಬಿಸುತ್ತಿದ್ದರು. ಅಕ್ಕಪಕ್ಕದವರು ಏಳುವ ಮೊದಲೇ ಬಾವಿಯಿಂದ ನೀರು ತರಲು ಹೇಳುತ್ತಿದ್ದರು. ಒಂದೊಮ್ಮೆ ತಡವಾದರೆ ಆ ದಿನ ನೀರಿಗೆ ಪರದಾಡಬೇಕಾದ ಸ್ಥಿತಿ. ಆ ವಾತಾವರಣ ಮತ್ತೆ ಸೃಷ್ಟಿಯಾಗಬಾರದು ಎನ್ನುವ ಕಾರಣಕ್ಕಾಗಿಯೇ ಕೆರೆ ಅಭಿವೃದ್ಧಿಗೆ ಕೈಜೋಡಿಸಿದೆ’ ಎನ್ನುತ್ತಾರೆ ಬಸವರಾಜ.

ಗ್ರಾಮದವರ ಉತ್ಸಾಹಕ್ಕೆ ಆನೆಬಲ ತಂದುಕೊಟ್ಟಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ. ಕೆರೆ ಅಭಿವೃದ್ಧಿಗೆ ₹11ಲಕ್ಷ ಆ ಸಂಸ್ಥೆಯಿಂದ ಬಂತು. ಗ್ರಾಮಸ್ಥರೇ ಕೆರೆ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಅದರ ಉಸ್ತುವಾರಿ ನೋಡಿಕೊಳ್ಳಲು ಆರಂಭಿಸಿದರು. ಆರು ಸಾವಿರ ಟ್ರ್ಯಾಕ್ಟರ್‌ಗಳಷ್ಟು ಹೂಳನ್ನು ಮೇಲೆತ್ತಲಾಯಿತು.

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಕುಸಮಾಧರ, ದೇವರಹುಬ್ಬಳ್ಳಿಯಲ್ಲಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಯುವಕರು ಹೆಚ್ಚು ಉತ್ಸಾಹದಿಂದ ಕೆರೆ ಅಭಿವೃದ್ಧಿಯಲ್ಲಿ ಪಾಲ್ಗೊಂಡರು. ಕೆರೆ ಅಭಿವೃದ್ಧಿ ಸಮಿತಿಯು ಕುಡಿಕೆರೆಯನ್ನು ಶುಚಿಯಾಗಿಟ್ಟುಕೊಂಡರೆ ಸಂಸ್ಥೆಯ ಉದ್ದೇಶ ಈಡೇರುತ್ತದೆ’ ಎಂದು ಹೇಳುತ್ತಾರೆ.

ನಾಲ್ಕು ನಾಯಿಗಳು ಸಿಟ್ಟಿನಲ್ಲಿ ಕಾಲು ಕೆರೆದರೂ ಸಾಕಷ್ಟು ಮಣ್ಣು ಹೊರಹೋಗುತ್ತಿತ್ತು. ಆದರೆ ಸರ್ಕಾರದಿಂದ ಕೆರೆ ಅಭಿವೃದ್ಧಿಗಾಗಿ ಬಂದ ಲಕ್ಷಾಂತರ ರೂಪಾಯಿಯಲ್ಲಿ ಒಂದಿಷ್ಟು ಹೂಳೂ ಹೊರಹೋಗಲಿಲ್ಲ. ಗ್ರಾಮದ ಜನರೆಲ್ಲ ಕೆರೆ ಅಭಿವೃದ್ಧಿಗೆ ಒಟ್ಟಾಗಿದ್ದು ಖುಷಿ ಕೊಟ್ಟಿದೆ. ಈ ಮಳೆಗಾಲದಲ್ಲಿ ಕೆರೆ ತುಂಬಿದರೆ ನಾಲ್ಕೈದು ವರ್ಷಗಳವರೆಗೆ ಎಂತಹ ಸನ್ನಿವೇಶವನ್ನೂ ಎದುರಿಸಬಹುದು ಎಂಬ ಆತ್ಮಸ್ಥೈರ್ಯ ಬಂದಿದೆ ಎನ್ನುತ್ತಾರೆ ಸ್ವಾಮೀಜಿ.
ಕೆರೆಯೀಗ ಮಳೆಗಾಗಿ ಕಾದಿದ್ದರೆ, ಹುಗ್ಗಿಪ್ರಿಯರು ಕೆರೆ ತುಂಬಲು ಕಾದಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.