ADVERTISEMENT

ಫಿನ್ಲೆಂಡ್‌ನ ಜೀವಕೇಂದ್ರ ಹೆಲ್ಸಿಂಕಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2016, 19:30 IST
Last Updated 11 ಜೂನ್ 2016, 19:30 IST
ಹೆಲ್ಸಿಂಕಿಯ ರೈಲ್ವೆ ಚೌಕದಲ್ಲಿರುವ ವಿಶೇಷ ವಾಸ್ತುಶಿಲ್ಪಕ್ಕೆ ಹೆಸರಾದ ಕೇಂದ್ರ ರೈಲ್ವೆ ನಿಲ್ದಾಣ
ಹೆಲ್ಸಿಂಕಿಯ ರೈಲ್ವೆ ಚೌಕದಲ್ಲಿರುವ ವಿಶೇಷ ವಾಸ್ತುಶಿಲ್ಪಕ್ಕೆ ಹೆಸರಾದ ಕೇಂದ್ರ ರೈಲ್ವೆ ನಿಲ್ದಾಣ   

ಯುರೋಪ್‌ನ ಲಂಡನ್‌, ಪ್ಯಾರಿಸ್‌ಗಳಂತೆ ಫಿನ್ಲೆಂಡ್‌ನ ಹೆಲ್ಸಿಂಕಿ ಪ್ರವಾಸಿಗರ ಪಾಲಿಗೆ ಚುಂಬಕಕೇಂದ್ರವೇನಲ್ಲ. ಆದರೆ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸೌಂದರ್ಯದೊಂದಿಗೆ ಮಿಳಿತಗೊಂಡಿರುವ ನಗರದ ಆಧುನಿಕತೆ ಹೆಲ್ಸಿಂಕಿಗೆ ಅಪೂರ್ವ ಶೋಭೆ ತಂದುಕೊಟ್ಟಿದೆ.

ವಿಶ್ವದ ಉತ್ತರದ ತುದಿಯಲ್ಲಿರುವ ಫಿನ್ಲೆಂಡ್ ದೇಶದ ರಾಜಧಾನಿ ಹೆಲ್ಸಿಂಕಿ ಯುರೋಪ್‌ನ ಇತರ ಮುಖ್ಯ ನಗರಗಳಾದ ಲಂಡನ್, ಪ್ಯಾರಿಸ್, ಆಮ್‌ಸ್ಟರ್‌ಡ್ಯಾಮ್‌ಗಳಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವುದಿಲ್ಲ.

ಸಾಮಾನ್ಯವಾಗಿ ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್ ನೋಡಲು ಹೋಗುವ ಪ್ರವಾಸಿಗರು ಹೆಲ್ಸಿಂಕಿಗೂ ಹೋಗುವುದುಂಟು. ‘ವಿಶ್ವದ ವಿನ್ಯಾಸ ರಾಜಧಾನಿ’ ಎನ್ನುವ ಪಟ್ಟವನ್ನು 2012ರಲ್ಲಿ ಪಡೆದ ಈ ಅಂದದ ನಗರ ಇಬ್ಬರು ಹೆಸರಾಂತ ವಿನ್ಯಾಸಕಾರರಿಂದಲೇ ರೂಪುಗೊಂಡಿದೆ.

ಹನ್ನೆರಡರಿಂದ ಹತ್ತೊಂಬತ್ತನೇ ಶತಮಾನದವರಗೆ ಸ್ವೀಡನ್‌ನ ಒಂದು ಭಾಗವಾಗಿದ್ದ ಫಿನ್ಲೆಂಡ್ ರಷ್ಯಾದ ಅಧೀನದಲ್ಲಿ ಬಂದು, ಮೊದಲನೇ ಮಹಾಯುದ್ಧದ ನಂತರ ಗಣರಾಜ್ಯವಾಗಿ ರೂಪಿತಗೊಂಡಿತು.

1812ರಿಂದಲೇ ಫಿನ್ಲೆಂಡ್ ದೇಶದ ರಾಜಧಾನಿಯಾಗಿರುವ ಹೆಲ್ಸಿಂಕಿ ನಗರದಲ್ಲಿ ನಾಲ್ಕು ಮುಖ್ಯ ಚೌಕಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ‘ಸೆನೆಟ್ ಚೌಕ’. ಈ ಚೌಕದ ಮುಖ್ಯ ಆಕರ್ಷಣೆ, ಎತ್ತರದ ಪ್ರದೇಶದಲ್ಲಿ ಭವ್ಯವಾಗಿ ರೂಪಿಸಲಾಗಿರುವ ಹೆಲ್ಸಿಂಕಿ ಕ್ಯಾಥೆಡ್ರಲ್.

ಇದು ಹೆಲ್ಸಿಂಕಿ ನಗರದ ಅತಿ ಪ್ರಸಿದ್ಧ ಸ್ಥಳ. ಹಸಿರು ಬಣ್ಣದ ದೊಡ್ಡ ಗೋಪುರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಚಿಕ್ಕ  ಗೋಪುರಗಳನ್ನು ಹೊಂದಿರುವ ಈ ಚರ್ಚ್ ನಿಯೋ ಕ್ಲಾಸಿಕಲ್ ಶೈಲಿಯಲ್ಲಿದೆ.

ಇದನ್ನು ಕಟ್ಟಲು ಸುಮಾರು 22 ವರ್ಷಗಳು ತಗುಲಿದ್ದು, 1852ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತು. ಈ ಚರ್ಚ್‌ನ ತಾರಸಿಯ ಮೇಲೆ 12 ಅಫೋಸಲ್‌ಗಳ (ಕ್ರಿಸ್ತನ ಅನುಯಾಯಿಗಳು) ಮೂರ್ತಿಗಳು ಇವೆ. ಹೊರಗಿನಿಂದ ಅತ್ಯಂತ ದೊಡ್ಡದಾಗಿ ಈ ಚರ್ಚ್ ಕಂಡರೂ ಒಳಗೆ ಅಷ್ಟೇನೂ ವಿಶಾಲವಾಗಿಲ್ಲ. ಚರ್ಚ್‌ನ ಒಳಭಾಗದಲ್ಲಿ ಹಲವಾರು ವಿಖ್ಯಾತ ಕಲಾಕೃತಿಗಳು ಇವೆ.

ಚರ್ಚ್‌ನ ಕೆಳಭಾಗದಲ್ಲಿ ಇರುವ ಸೆನೆಟ್ ಚೌಕದ ಮಧ್ಯಭಾಗದಲ್ಲಿ 1894ರಲ್ಲಿ ಸ್ಥಾಪಿಸಲಾದ ರಷ್ಯಾದ ದೊರೆ ಅಲೆಕ್ಸಾಂಡರ್ II  ಪ್ರತಿಮೆ ಇದೆ. ಪ್ರತಿಮೆಯ ಸುತ್ತಲೂ ಇರುವ ಮೂರ್ತಿಗಳು ಕಾನೂನು, ಸಂಸ್ಕೃತಿ ಹಾಗೂ ರೈತರನ್ನು ಪ್ರತಿನಿಧಿಸುತ್ತವೆ. ಹೆಲ್ಸಿಂಕಿಯ ಸರ್ವಾಂಗೀಣ ಪ್ರಗತಿಗೆ ಅಲೆಕ್ಸಾಂಡರ್ ಕಾರಣನಾದ್ದರಿಂದ ಆತನಿಗೆ ಈ ನಗರದಲ್ಲಿ ಗೌರವದ ಸ್ಥಾನ.  

ಸೆನೆಟ್ ಚೌಕದ ಬಲಭಾಗದಲ್ಲಿ ಹೆಲ್ಸಿಂಕಿ ವಿಶ್ವವಿದ್ಯಾಲಯದ ಕಟ್ಟಡವಿದೆ. ಈ ವಿಶ್ವವಿದ್ಯಾಲಯ 1640ರಲ್ಲಿ ಸ್ಥಾಪಿತವಾಗಿ, ಕಳೆದ ನಾಲ್ಕು ಶತಮಾನಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಈ ಕಟ್ಟಡದ ಸಭಾಭವನವು ಯಾವುದೇ ಪಾರ್ಲಿಮೆಂಟ್ ಭವನವನ್ನೂ ತನ್ನ ಸೌಂದರ್ಯದಲ್ಲಿ ಮೀರಿಸುತ್ತದೆ. ಇಲ್ಲಿನ ಅಪೂರ್ವ ಕಲಾಕೃತಿಗಳು ಜನರ ಮನತಣಿಸುತ್ತದೆ.

ವಿಶ್ವವಿದ್ಯಾಲಯದ ಮುಂಭಾಗದಲ್ಲಿ 1818ರಲ್ಲಿ ಕಟ್ಟಲಾದ ಅರಮನೆ ಇದೆ. ಇಲ್ಲಿ ಕೆಲಕಾಲ ಆ ದೇಶದ ಪಾರ್ಲಿಮೆಂಟ್ ಸಭೆಗಳೂ ನಡೆಯುತ್ತಿದ್ದುದು ಒಂದು ವಿಶೇಷ.

ಕಾಲಾನುಕ್ರಮದಲ್ಲಿ ಇದನ್ನು ಸರ್ಕಾರಿ ಕಚೇರಿಗಳ ಉಪಯೋಗಕ್ಕೆಂದು ಮೀಸಲಿಡಲಾಗಿದ್ದು, ಪ್ರಸ್ತುತ ದೇಶದ ಪ್ರಧಾನ ಮಂತ್ರಿಗಳ ಕಚೇರಿ, ಮುಖ್ಯ ನ್ಯಾಯಾಧೀಶರ ಕಚೇರಿ ಹಾಗೂ ದೇಶದ ವಿತ್ತ ಮಂತ್ರಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸೆನೆಟ್ ಚೌಕದಲ್ಲಿ ಇರುವ ಈ ಮೂರೂ ಮುಖ್ಯ ಕಟ್ಟಡಗಳು 19ನೇ ಶತಮಾನದಲ್ಲಿ ಫಿನ್ಲೆಂಡ್ ಯಾವ ವಿಷಯಗಳಿಗೆ ಆದ್ಯತೆ ನೀಡಿತ್ತು ಎನ್ನುವುದನ್ನು ಬಿಂಬಿಸುತ್ತವೆ.

ಅರಮನೆಯು ಆಡಳಿತದ ಕೇಂದ್ರವಾದರೆ, ಕ್ಯಾಥೆಡ್ರಲ್ ಧರ್ಮದ ಕೇಂದ್ರವಾಗಿದ್ದು, ವಿಶ್ವವಿದ್ಯಾಲಯವು ಜ್ಞಾನದ ತಾಣವಾಗಿದೆ. ಅಂದಿನ ಕಾಲದಲ್ಲಿ ಇಲ್ಲಿ ಆಡಳಿತ, ಧರ್ಮ ಹಾಗೂ ಜ್ಞಾನಕ್ಕೆ ಸಮಾನ ಆದ್ಯತೆ ಇತ್ತು ಎಂದು ತಿಳಿಯಬಹುದು.

ಕ್ಯಾಥೆಡ್ರಲ್‌ನ ಪಕ್ಕದಲ್ಲಿಯೇ 1833ರಲ್ಲಿ ಕಟ್ಟಲಾದ ಪುರಭವನವಿದೆ. 1896ರಲ್ಲಿ ಈ ಕಟ್ಟಡದಲ್ಲಿಯೇ ‘ಲ್ಯೂಮಿಯರ್ ಕಂಪೆನಿ’ ಮೊಟ್ಟಮೊದಲ ಚಲನಚಿತ್ರವನ್ನು ಪ್ರದರ್ಶಿಸಿತು. 1913ರಲ್ಲಿ ಈ ಕಟ್ಟಡವನ್ನು ಪುರಭವನವನ್ನಾಗಿ ಪರಿವರ್ತಿಸಲಾಯಿತು.

ಸೆನೆಟ್ ಚೌಕದಿಂದ ನಾಲ್ಕೈದು ಕಟ್ಟಡಗಳ ಸಮುಚ್ಛಯವನ್ನು ದಾಟಿದರೆ ನಗರದ ಇನ್ನೊಂದು ಮುಖ್ಯಚೌಕವಾದ ‘ಮಾರ್ಕೆಟ್ ಚೌಕ’ವಿದೆ. ಈ ವಿಶಾಲವಾದ ‘ಮಾರುಕಟ್ಟೆ ಚೌಕ’ ಸಮುದ್ರ ತೀರದಲ್ಲಿದ್ದು, ಇಲ್ಲಿನ ಮುಖ್ಯ ಕಟ್ಟಡ ಹಳೆಯ ಮಾರುಕಟ್ಟೆ ಭವನ. ಪ್ರತಿದಿನವೂ ಇಲ್ಲಿ ಹಲವಾರು ವರ್ತಕರು ತರಕಾರಿ, ಹಣ್ಣು–ಹಂಪಲು, ಮೀನು, ಮಾಂಸ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. 

ಈ ಚೌಕದ ಎದುರುಗಡೆ ‘ಹ್ಯಾವಿಸ್ ಅಮಂಡಾ’ ಎಂಬ ನೀರಿನ ದೊಡ್ಡ ಬುಗ್ಗೆ ಇದೆ. ಈ ಬುಗ್ಗೆಯ ಮಧ್ಯಭಾಗದಲ್ಲಿ ಕಂಚಿನಿಂದ ಮಾಡಿದ ಯುವತಿಯ ಪ್ರತಿಮೆ ಇದೆ. ನೀರಿನಿಂದ ಮೇಲೇರುತ್ತಿರುವಂತೆ ಬಿಂಬಿಸಲಾಗಿರುವ ಈ ಪ್ರತಿಮೆಯು ಬಾಲ್ಟಿಕ್ ಸಮುದ್ರದಿಂದ ಉಂಟಾದ ಹೆಲ್ಸಿಂಕಿ ನಗರದ ಉಗಮವನ್ನು ಸಾರುತ್ತದೆ ಎನ್ನಲಾಗಿದೆ. 

ಸುಮಾರು ಒಂದು ಕಿ.ಮೀ ದೂರದಲ್ಲಿಯೇ ಎಸ್‌ಪ್ಲನೇಡ್ ಉದ್ಯಾನವನವಿದೆ. ಈ ಉದ್ಯಾನವನ ಹೆಲ್ಸಿಂಕಿ ಮಾರುಕಟ್ಟೆ ಚೌಕದಿಂದ ಹೆಲ್ಸಿಂಕಿ ರೈಲ್ವೆ ಚೌಕಕ್ಕೆ ಸಂಪರ್ಕವನ್ನು ಕಲ್ಪಿಸಿದ್ದು, ತನ್ನ ಇನ್ನೂರು ವರ್ಷಗಳ ಇತಿಹಾಸದಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ಈ ಉದ್ಯಾನವನದಲ್ಲಿ ಇರುವ ಅತಿ ಪ್ರಮುಖ ಪ್ರತಿಮೆ ಯೊಹಾನ್ ರೋನೆಬರ್ಗ್ ಎನ್ನುವವನದ್ದು. ಈತ ಫಿನ್ಲೆಂಡ್ ದೇಶದ ರಾಷ್ಟ್ರಕವಿ. ಸಾಮಾನ್ಯವಾಗಿ ಯುರೋಪಿನ ಜನ ಕಲಾಕಾರರಿಗೆ ಸಾಕಷ್ಟು ಪ್ರಾಧಾನ್ಯ ನೀಡುವುದರಿಂದ, ಜನನಾಯಕರಲ್ಲದೆ ಕಲಾವಿದರ ಪ್ರತಿಮೆಗಳನ್ನೂ ನಾವು ಸಾರ್ವಜನಿಕ ಸ್ಥಳದಲ್ಲಿ ಕಾಣಬಹುದಾಗಿದೆ.

ಸೆನೆಟ್ ಚೌಕ ಹಾಗೂ ಮಾರುಕಟ್ಟೆ ಚೌಕಗಳ ಬಳಿ ಹಲವಾರು ಮುಖ್ಯ ಕಟ್ಟಡಗಳಿವೆ. ಫಿನ್ಲೆಂಡ್ ದೇಶದ ರಾಷ್ಟ್ರಪತಿಗಳ ವಸತಿಗೃಹ, ಹೆಲ್ಸಿಂಕಿ ನಗರದ ವಸ್ತುಸಂಗ್ರಹಾಲಯ, ಇವುಗಳಲ್ಲಿ ಮುಖ್ಯವಾದವು.

ವಿಶಾಲವಾದ ರೈಲ್ವೆ ಚೌಕದಲ್ಲಿ ಹೆಲ್ಸಿಂಕಿ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಫಿನ್ನಿಷ್ ರಾಷ್ಟ್ರೀಯ ರಂಗಮಂದಿರವಿದೆ. ಈ ಎರಡೂ ಕಟ್ಟಡಗಳೂ ತಮ್ಮ ವಿಶೇಷ ವಾಸ್ತುಶಿಲ್ಪಕ್ಕೆ ಹೆಸರಾಗಿವೆ. ರಂಗಮಂದಿರವನ್ನು 1902ರಲ್ಲಿ ಕಟ್ಟಲಾಗಿದ್ದು, ಇಂದಿಗೂ ಅಲ್ಲಿ ನಾಟಕಗಳ ಪ್ರದರ್ಶನಗಳು ನಡೆಯುತ್ತವೆ.

ಹೆಲ್ಸಿಂಕಿ ನಗರದ ಹಸಿರು ಬಣ್ಣದ ಟ್ರ್ಯಾಮ್‌ಗಳು ಈ ನಗರದ ಮುಖ್ಯ ಸಂಪರ್ಕ ಸಾಧನ. ನಾವು ಇಂತಹ ಒಂದು ಟ್ರ್ಯಾಮ್‌ನಲ್ಲಿ  ಕುಳಿತು ಪಾರ್ಲಿಮೆಂಟ್ ಭವನದ ಭವ್ಯ ಕಟ್ಟಡವನ್ನು ನೋಡಿ, ‘ಫಿನ್‌ಲ್ಯಾಂಡಿಯಾ ಹಾಲ್’ ಎಂದು ಕರೆಯಲಾಗುವ ಈ ದೇಶದ ಅತೀ ಆಕರ್ಷಣೀಯ ಹಾಗೂ ಹೆಸರಾಂತ ಸಭಾಂಗಣಕ್ಕೆ ಹೋದೆವು.

ಫಿನ್ಲೆಂಡ್‌ನ ಖ್ಯಾತ ವಾಸ್ತುಶಿಲ್ಪಿ ಆಲ್ಟೋ ವಿನ್ಯಾಸಗೊಳಿಸಿದ ಈ ಸಭಾಂಗಣ ಇಟಾಲಿಯನ್ ಅಮೃತಶಿಲೆಯಿಂದ ರೂಪುಗೊಂಡಿದ್ದು ಅತ್ಯಂತ ಸುಂದರವಾಗಿದೆ.

1971ರಲ್ಲಿ ನಿರ್ಮಾಣಗೊಂಡ ಫಿನ್‌ಲ್ಯಾಂಡಿಯಾ ಹಾಲ್‌ನಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಭಾಗೃಹಗಳಿದ್ದು, ಎಲ್ಲ ತರಹದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಇಲ್ಲಿನ ಅತಿದೊಡ್ಡ ಸಭಾಗೃಹದಲ್ಲಿ 1700 ಜನ ಕೂರಬಹುದು.

ಫಿನ್‌ಲ್ಯಾಂಡಿಯಾ ಸಭಾಂಗಣದ ಪಕ್ಕದಲ್ಲಿಯೇ ‘ಫಿನ್ನಿಷ್ ರಾಷ್ಟ್ರೀಯ ಒಪೇರಾ’ ಸಭಾಗೃಹವಿದೆ. 1993ರಲ್ಲಿ ಕಟ್ಟಲಾದ ಈ ಮಂದಿರದಲ್ಲಿ ಸಂಗೀತ (ಒಪೇರಾ) ಹಾಗೂ ನೃತ್ಯ (ಬ್ಯಾಲೆ) ಪ್ರದರ್ಶನಗಳು ನಡೆಯುತ್ತವೆ.

ಇದರ ಬಳಿಯಲ್ಲಿರುವ ಇನ್ನೊಂದು ಕಟ್ಟಡವೇ ಫಿನ್‌ಲ್ಯಾಂಡ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯ. ಈ ಸಂಗ್ರಹಾಲಯದಲ್ಲಿ ಇತಿಹಾಸಪೂರ್ವದಿಂದ ಇಲ್ಲಿಯವರೆಗೆ ಫಿನ್ಲೆಂಡ್ ದೇಶ ಬೆಳೆದ ಬಗ್ಗೆ ಅಪೂರ್ವ ಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ. 

ಒಲಿಂಪಿಕ್ ಕ್ರೀಡಾಂಗಣ ಹೆಲ್ಸಿಂಕಿಯ ಮತ್ತೊಂದು ವಿಶೇಷ. ಫಿನ್ಲೆಂಡ್ ದೇಶದ ಅತಿ ದೊಡ್ಡ ಕ್ರೀಡಾಂಗಣವಾದ ಈ ಸ್ಟೇಡಿಯಂ, 1940ರಲ್ಲಿನ ಒಲಿಂಪಿಕ್ ಕ್ರೀಡೆಗಳಿಗಾಗಿ ರೂಪುಗೊಂಡಿತು.

ಆ ವರ್ಷ ವಿಶ್ವಮಹಾಯುದ್ಧ ನಡೆಯುತ್ತಿದ್ದರಿಂದ ಈ ಕ್ರೀಡಾಂಗಣವನ್ನು 1952ರ ಕ್ರೀಡೆಗಳಿಗೆ ಬಳಸಲಾಯಿತು. ಈ ಕ್ರೀಡಾಂಗಣದಲ್ಲಿ ಸುಮಾರು 50,000 ಪ್ರೇಕ್ಷಕರು ಕೂರಬಹುದು. ಈ ಸ್ಟೇಡಿಯಂನ ಕೇಂದ್ರಬಿಂದು ಒಲಿಂಪಿಕ್ ಗೋಪುರ. 240 ಅಡಿ ಎತ್ತರದ ಈ ಗೋಪುರದಿಂದ ಹೆಲ್ಸಿಂಕಿ ನಗರದ ವಿಹಂಗಮ ನೋಟವನ್ನು  ನೋಡಬಹುದು.

ಸಮುದ್ರದ ಹಿನ್ನೀರಿನಿಂದ ಉಂಟಾಗಿರುವ ಸರೋವರ ಹಾಗೂ ಅದರ ಬದಿಯಲ್ಲಿ ಇರುವ ‘ಚಳಿಗಾಲದ ಉದ್ಯಾನವನ’ ಕೂಡ ಪ್ರವಾಸಿಗರನ್ನು ಸೆಳೆಯುತ್ತವೆ. ಈ ಉದ್ಯಾನವನದಲ್ಲಿ ಮಧ್ಯಾಹ್ನ 12 ಗಂಟೆಯಾದರೂ ನೂರಾರು ಜನರು ಸೈಕ್ಲಿಂಗ್, ವಾಕಿಂಗ್ ಹಾಗೂ ಜಾಗಿಂಗ್ ಮಾಡುತ್ತಿದ್ದರು.

ಹೆಲ್ಸಿಂಕಿಯಲ್ಲಿ ನಾನು ತೀರಾ ಮೆಚ್ಚಿದ ಜಾಗವೆಂದರೆ ‘ಕಂಫಿ ಚಾಪ್ಪೆಲ್ ಆಫ್ ಸೈಲೆನ್ಸ್’. ಇದು ವಿಶಾಲವಾದ ಬಂಡೆಯ ಒಳಗೆ ಗೋಲಾಕಾರವಾಗಿ ಕಟ್ಟಿರುವಂತೆ ಕಾಣುವ ಪ್ರಾರ್ಥನಾ ಮಂದಿರ.

ಗೋಡೆಗಳಿಗೆ ಮರದ ತಟ್ಟುಗಳನ್ನು ಅಳವಡಿಸಲಾಗಿರುವ ಈ ಮಂದಿರವನ್ನು ಧ್ಯಾನಕ್ಕಾಗಿಯೇ ಕಟ್ಟಲಾಗಿದ್ದು, ಹಲವಾರು ಜನ ಇಲ್ಲಿಗೆ ಬಂದು ಕೆಲವು ನಿಮಿಷಗಳನ್ನು ಧ್ಯಾನದಲ್ಲಿ ಕಳೆದುಹೋಗುತ್ತಾರೆ. ಈ ವಿಶಿಷ್ಟ ಧ್ಯಾನಗೃಹವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ತನ್ನ ವಿಶಿಷ್ಟ ವಿನ್ಯಾಸಕ್ಕೆ ಜಗತ್ತಿನಲ್ಲಿ  ಪ್ರಸಿದ್ಧಿಯಾಗಿದೆ.

ಫಿನ್ನಿಷ್ ಜನರು ಕ್ರೀಡಾ ಪ್ರಿಯರು, ಸ್ನೇಹಜೀವಿಗಳು, ಕಲೆಗಳಲ್ಲಿ ಆಸಕ್ತರು. ಹೆಲ್ಸಿಂಕಿಯಲ್ಲಿ ಹಲವಾರು ಭಾರತೀಯ ಉಪಹಾರಗೃಹಗಳಿವೆ. ಈ ನಗರದ ಮುಖ್ಯರಸ್ತೆಗಳು ಉದ್ದ ಅಗಲದ ಗ್ರೀಡ್ ರೂಪದಲ್ಲಿರುವುದರಿಂದ ಪ್ರಯಾಣಿಕರಿಗೆ ಓಡಾಡಲು ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT