ADVERTISEMENT

ಮೈಸೂರು ಲಹರಿ ಹಾಂಕಾಂಗ್‌ ಸಿರಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 19:30 IST
Last Updated 20 ಡಿಸೆಂಬರ್ 2014, 19:30 IST
ಮೈಸೂರು ಲಹರಿ ಹಾಂಕಾಂಗ್‌ ಸಿರಿ
ಮೈಸೂರು ಲಹರಿ ಹಾಂಕಾಂಗ್‌ ಸಿರಿ   

ಬಿ.ಆರ್‌. ಛಾಯಾ ಕನ್ನಡದ ವಿಶಿಷ್ಟ ಗಾಯಕಿ. ಅವರ ಕೊರಳಿನಲ್ಲಿ ನೂರಾರು ಸಿನಿಮಾ ಗೀತೆಗಳು, ಭಾವಗೀತೆಗಳು ಜೀವಗೊಂಡಿವೆ. ತಮ್ಮ ಧ್ವನಿಯಲ್ಲಿ ಚಿಣ್ಣರ ಹುಮ್ಮಸ್ಸನ್ನು ಉಳಿಸಿಕೊಂಡಿರುವ ಈ ಗಾಯಕಿ ತಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದ ಮೈಸೂರು ಹಾಗೂ ಹಾಂಕಾಂಗ್‌ಗಳ ಚೆಲುವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಮ್ಮೂರು ಮೈಸೂರು...
ಮೈಸೂರು ನನ್ನ ತಾಯಿಯ ಊರು. ನನಗೂ ಆಪ್ತವಾದ ಊರಿದು. ನನಗೆ ತಿಳಿವಳಿಕೆ ಬಂದಾಗಿನಿಂದ ಮೈಸೂರಿಗೆ ನನಗೆ ನಂಟಿದೆ. ಅಜ್ಜನ ಮನೆಗೆ ಹೋಗುವುದೆಂದರೆ ಸಡಗರ. ಮೈಸೂರು ದಸರಾ ಅಂತೂ ನನ್ನನ್ನು ಯಾವತ್ತಿಗೂ ಕೈ ಬೀಸಿ ಕರೆಯುವ ‘ನಮ್ಮ ಮನೆಯ ಹಬ್ಬ’ದಂತೆ. ಚಿಕ್ಕವಳಿದ್ದಾಗ ಜಯಚಾಮರಾಜೇಂದ್ರ ಒಡೆಯರ್‌ ಅವರ ದರ್ಬಾರ್ ನೋಡಿ ಬೆರಗಾಗಿದ್ದೆ. ಅರಮನೆಗೆ ದೀಪಗಳ ಹೊದಿಕೆ, ಚಿನ್ನದ ಸಿಂಹಾಸನ, ಒಡೆಯರ್‌ ಗತ್ತು, ಜಾತ್ರೆಯ ವೈಭೋಗ ಬಣ್ಣಿಸಲಸದಳ. ಅದೊಂದು ಕಿನ್ನರ ಲೋಕದಂತೆ ಈಗಲೂ ನನ್ನನ್ನು ಕಾಡುತ್ತದೆ.

ಮೈಸೂರಿಗೆ ಹೋದಾಗ ವರ್ಷಕ್ಕೊಮ್ಮೆ ನನ್ನಜ್ಜ ಚರ್ಮದ ಚಪ್ಪಲಿ ಹೊಲಿಸಿ ಕೊಡುತ್ತಿದ್ದರು. ಪ್ರತಿ ವರ್ಷವೂ ಹೊಸ ಹೊಸ ವಿನ್ಯಾಸದ ಚಪ್ಪಲಿ. ಆಗೆಲ್ಲ ಈಗಿನಂತೆ ತರಹೇವಾರಿ ವಿನ್ಯಾಸದ ಚಪ್ಪಲಿಗಳು ಸಿಗುತ್ತಿರಲಿಲ್ಲವಲ್ಲ. ಮೈಸೂರಿಗೆ ಹೋದರೆ ನನಗೆ ಹೊಸ ಚಪ್ಪಲಿ ಸಿಗುತ್ತದೆ ಎಂಬ ಆ ನೆನಪು ಇಂದಿಗೂ ಹಸಿರಾಗಿದೆ. ಆ ಕಾರಣಕ್ಕಾಗಿಯೂ ಮೈಸೂರು ನನಗೆ ಮೆಚ್ಚು.

ತಾತನ ಕುಟುಂಬ, ಸಂಬಂಧಿಕರೆಲ್ಲ ಸೇರಿ ಬಗೆ ಬಗೆಯ ತಿನಿಸು ಮಾಡಿಕೊಂಡು ಪಿಕ್‌ನಿಕ್‌ಗೆಂದು ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದೆವು. ಕಾವೇರಿ ದಡದಲ್ಲಿನ ವಿಹಾರ, ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ನಾವು ನೋಡೇ ಇರದ ದೇಶವಿದೇಶಗಳ ಹೊಸ ರೀತಿಯ ಹಕ್ಕಿಗಳನ್ನು ನೋಡುತ್ತ ಮೈಮರೆಯುವುದು, ರಿವರ್‌ ರ್‍ಯಾಫ್ಟಿಂಗ್– ಇವೆಲ್ಲ ಎಂದಿಗೂ ಮರೆಯಲಾರದ ಸಂಗತಿಗಳು. ಕೆಆರ್‌ಎಸ್‌ನಲ್ಲಿ ಸಂಗೀತಕ್ಕೆ ತಕ್ಕಂತೆ ಬಳುಕುವ ಬಣ್ಣ ಬಣ್ಣದ ಕಾರಂಜಿ ನಮ್ಮನ್ನೂ ಗುನುಗುವಂತೆ ಮಾಡುತ್ತದೆ.

ಅರಮನೆ ಎದುರಿನ ವಿಶಾಲವಾದ ರಸ್ತೆಗಳು, ಇತಿಹಾಸ ಹೇಳುವ ದೊಡ್ಡ ದೊಡ್ಡ ಕಟ್ಟಡಗಳು, ಪ್ರಾಣಿ ಸಂಗ್ರಹಾಲಯ ಹೀಗೆ ಮನಸಿಗೆ ಮುದ ನೀಡುವ ಎಷ್ಟೆಲ್ಲ ತಾಣಗಳು ಒಂದೇ ಕಡೆ ನೋಡಲು ಸಿಗುವ ಜಾಗ ಮೈಸೂರು. ನಾನು ಸಂಗೀತದಲ್ಲಿ ಗುರುತಿಸಿಕೊಂಡ ನಂತರವಂತೂ ದಸರಾದ ಕಾಯಂ ಅತಿಥಿಯಾಗಿದ್ದೇನೆ. ನನಗೆ ಗಾಯನ ಒಲಿದಿದ್ದೂ ಮೈಸೂರಿನಿಂದ ಎಂದರೆ ತಪ್ಪಾಗಲಾರದು. ನನ್ನ ತಾತ, ಅಮ್ಮ ಸಂಗೀತ ಬಲ್ಲವರಾಗಿದ್ದರು.

ಈಗ ಬೆಂಗಳೂರಿನಿಂದ ಮೈಸೂರಿಗೆ ಹೋಗುವುದು ತೀರಾ ಸುಲಭವಾಗಿದೆ. ಬೆಂಗಳೂರಿನಷ್ಟು ಒತ್ತಡ ಅಲ್ಲಿಲ್ಲ. ಮೈಸೂರು ಸ್ವಚ್ಛ ನಗರ. ಜನ ಶಾಂತ ಸ್ವಭಾವದವರು. ಮೈಸೂರಿಗೆ ಹೋದರೆ ವಿಶ್ರಾಂತ ಮನೋಭಾವ ಆವರಿಸುತ್ತದೆ. ಅಲ್ಲೇ ವಾಸವಾಗಿರಬೇಕೆಂಬ ಆಸೆಯೂ ನನಗಿದೆ.

ಅಚ್ಚರಿಗಳ ಹಾಂಕಾಂಗ್
ಹಾಂಕಾಂಗ್ ನನ್ನಿಷ್ಟದ ಮತ್ತೊಂದು ಪ್ರವಾಸಿ ತಾಣ. ಪದೇ ಪದೇ ಭೇಟಿ ನೀಡಬೇಕೆನಿಸುವ ನಗರ ಅದು. 2011ರಲ್ಲಿ ಅಲ್ಲಿನ ಕನ್ನಡ ಸಂಘದವರು ನನ್ನನ್ನು ಕಛೇರಿಗೆಂದು ಕರೆಸಿದ್ದರು. ಆ ಭೇಟಿ ನನಗೆ ಮರೆಯಲಾರದ ಅನುಭವವೇ. ಕಛೇರಿ ಒಂದೇ ದಿನದ್ದಾದರೂ ನನ್ನ ಸ್ನೇಹಿತೆಯ ಮನೆಯಲ್ಲಿ ಒಂದು ವಾರವಿಡೀ ಉಳಿದುಕೊಂಡಿದ್ದೆ. ಅಲ್ಲಿನ ಕಟ್ಟಡಗಳು ಮುಗಿಲಿಗೆ ಮುತ್ತಿಕ್ಕುವ ತವಕದಲ್ಲಿದ್ದಂತೆ ಕಾಣುತ್ತವೆ. ನನ್ನ ಸ್ನೇಹಿತೆಯ ಮನೆಯಿದ್ದುದು ಎಪ್ಪತ್ತನೇ ಮಹಡಿ. ಅದೇ ಕೊನೆಯದಲ್ಲ. ಅದರ ಮೇಲೆ ಮತ್ತೆಷ್ಟು ಮಹಡಿಗಳಿವೆ, ಎಣಿಸಲಿಲ್ಲ. ಕೊನೆಯಲ್ಲಿ ಒಂದು ಏಣಿ ಹಾಕಿದರೆ ಆಕಾಶವೇ ಕೈಗೆಟಕಬಹುದೇನೋ!

ಒಂದೇ ಕಟ್ಟಡದಲ್ಲಿ ಸಾವಿರಾರು ಮನೆಗಳು. ಲಿಫ್ಟ್‌ನಲ್ಲಿ ನಿಂತರೆ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಪ್ಪತ್ತನೇ ಮಹಡಿಯಲ್ಲಿರುತ್ತೇವೆ. ಕಟ್ಟಡಕ್ಕೇ ನೇರ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲು. ಉದ್ಯೋಗಕ್ಕೆ ಹೋಗುವವರು ಮೊಟ್ರೊ ರೈಲಿನಲ್ಲಿ ಹೋಗಿಬಿಡುತ್ತಾರೆ. ಉಳಿದಂತೆ ಆ ಕಟ್ಟಡದಲ್ಲೇ ಬೃಹತ್ ಶಾಪಿಂಗ್ ಮಳಿಗೆಗಳು, ಒಳಗೇ ಉದ್ಯಾನವನ; ಹೀಗೆ ಜೀವನಕ್ಕೆ ಏನೇನು ಅವಶ್ಯವೋ ಅವೆಲ್ಲ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಸಿಗುವ ಸೌಲಭ್ಯವುಳ್ಳ ಕಟ್ಟಡಗಳನ್ನು ಅಲ್ಲಿ ಕಂಡೆ. ಅಬ್ಬಾ... ಮನುಷ್ಯನ ತಲೆ ಈ ರೀತಿಯೂ ಯೋಚನೆ ಮಾಡುತ್ತದಾ? ಅದಕ್ಕೆ ತಕ್ಕಂತೆ ಇಂತಹ ಅದ್ಭುತಗಳ ಸೃಷ್ಟಿಯೂ ಸಾಧ್ಯವಾ?

ಎಂಬ ಪ್ರಶ್ನೆಗಳು ನನ್ನಲ್ಲಿ ಆಗ ಮೂಡಿದವು. ಒಂದೊಂದು ಕಟ್ಟಡವೂ ಒಂದೊಂದು ಪ್ರಪಂಚವೇ ಸೈ.
ಎಪ್ಪತ್ತನೇ ಮಹಡಿಯ ಬಾಲ್ಕನಿಯಲ್ಲಿ ರಾತ್ರಿ ಹೊತ್ತು ನಿಂತು, ಮೇಲೆ ನೋಡಿದರೂ ನಕ್ಷತ್ರ, ಕೆಳಗೆ ನೋಡಿದರೂ ನಕ್ಷತ್ರ! ರಾತ್ರಿಯಲ್ಲಿ ಬಣ್ಣ ಬಣ್ಣದ ದೀಪಗಳ ಬೆಳಕಿನಲ್ಲಿ ಮೀಯುವಂತೆ ಕಾಣಿಸುವ ರಸ್ತೆಗಳು. ಹಾಂಕಾಂಗ್ ಸುರಕ್ಷಿತ ನಗರವೂ ಹೌದು. ಮಧ್ಯರಾತ್ರಿ ಒಂದು ಗಂಟೆಯಲ್ಲೂ ಒಬ್ಬಳೇ ಹುಡುಗಿ ಮೆಟ್ರೊ ರೈಲಿನಲ್ಲಿ ಓಡಾಡುವಷ್ಟು ಭದ್ರತೆ ಅಲ್ಲಿದೆ. ಬೆಟ್ಟದ ಮಧ್ಯೆ ಇರುವ ಎತ್ತರದ ಗೌತಮ ಬುದ್ಧನ ಪ್ರತಿಮೆ, ಹಾಂಕಾಂಗ್ ನಗರ ಯಾರನ್ನಾದರೂ ಮತ್ತೆ ಮತ್ತೆ ಸೆಳೆಯುವಂಥದ್ದು. ಅವಕಾಶ ಸಿಕ್ಕರೆ ಮತ್ತೊಮ್ಮೆ ಹಾಂಕಾಂಗ್‌ಗೆ ಹೋಗುವ ಉತ್ಸಾಹದಲ್ಲಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT