ADVERTISEMENT

ಅಂತರಂಗದ ದೃಷ್ಟಿ ನೆಚ್ಚಿ...

ಬದುಕು ಬನಿ

ಪ್ರಜಾವಾಣಿ ವಿಶೇಷ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST
ಗೆಳೆಯ ಹನುಮಂತರಾಯ ಅವರ ಜತೆ ಅಶೋಕ್‌ ಕುಮಾರ್‌
ಗೆಳೆಯ ಹನುಮಂತರಾಯ ಅವರ ಜತೆ ಅಶೋಕ್‌ ಕುಮಾರ್‌   

ನನ್ನ ಹೆಸರು ಅಶೋಕ್‌ ಕುಮಾರ್‌ ವಿ. ದೊಡ್ಡಬಳ್ಳಾಪುರದವನು. ನಮ್ಮ ತಂದೆ ನಿವೃತ್ತ ಪೊಲೀಸ್‌ ಅಧಿಕಾರಿ. ನಾವು ನಾಲ್ಕು ಜನ ಮಕ್ಕಳು. ಇಬ್ಬರು ಹೆಣ್ಣು, ಇಬ್ಬರು ಗಂಡು. ನಾನೇ ಚಿಕ್ಕವನು. ಯಲಹಂಕದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ಎರಡನೇ ವರ್ಷದಲ್ಲಿ ಓದುತ್ತಿದ್ದೀನಿ.

ನಾನು ಕುರುಡ. ಇಲ್ಲೇ ಜೀವನಹಳ್ಳಿಯಲ್ಲಿ ‘ಸ್ನೇಹದೀಪ್‌ ಟ್ರಸ್ಟ್‌ ಫಾರ್‌ ಡಿಸೇಬಲ್‌’ ಎನ್‌ಜಿಓ ನಡೆಸುವ ಅಂಧರ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗುತ್ತೇನೆ. ಈ ಹಾಸ್ಟೆಲ್‌ನಲ್ಲಿ ನನ್ನಂಥವರೇ 150 ವಿದ್ಯಾರ್ಥಿಗಳಿದ್ದಾರೆ.
ನನಗೆ ಹುಟ್ಟಿನಿಂದಲೇ ಕುರುಡು. ಚಿಕ್ಕಂದಿನಲ್ಲಿ ತುಂಬಾ ಜನ ಡಾಕ್ಟರ್‌ಗೆ ತೋರಿಸಿ ನನ್ನ ದೃಷ್ಟಿ ಮರಳಿಸಲು ಸಾಧ್ಯವಾ ಎಂದು ಪ್ರಯತ್ನಿಸಿದರು. ಆದರೆ ಅದು ಅಸಾಧ್ಯ ಎಂದು ಗೊತ್ತಾಗಿ ಸುಮ್ಮನಾದರು.

ಮೊದಲಿಗೆ ನನಗೆ ಅಂಧ ವಿದ್ಯಾರ್ಥಿಗಳಿಗೆಂದೇ ವಿಶೇಷ ಶಾಲೆಗಳು ಇರುತ್ತವೆ ಎನ್ನುವುದು ಗೊತ್ತಿರಲಿಲ್ಲ. ಆದ್ದರಿಂದ ಏಳನೇ ತರಗತಿಯವರೆಗೆ ಸಾಮಾನ್ಯ ಶಾಲೆಯಲ್ಲಿಯೇ ಓದಬೇಕಾಯ್ತು. ನಂತರ ಇಂದಿರಾನಗರದಲ್ಲಿ ದೃಷ್ಟಿಹೀನರಿಗಾಗಿಯೇ ವಿಶೇಷ ಶಾಲೆ ಇರುವುದು ತಿಳಿದು ಇಲ್ಲಿಗೆ ಬಂದು ಸೇರಿಕೊಂಡೆ. ಆಗಲೇ ಜೀವನಹಳ್ಳಿಯಲ್ಲಿನ ಅಂಧ ವಿದ್ಯಾರ್ಥಿಗಳ ಹಾಸ್ಟೆಲ್‌ಗೂ ಸೇರಿಕೊಂಡಿದ್ದು. ಇದುವರೆಗೆ ತೀರಾ ಒಂಟಿ ಅನಿಸುತ್ತಿದ್ದ ನನಗೆ ಈ ಹಾಸ್ಟೆಲ್‌ ಮತ್ತು ಶಾಲೆಯಲ್ಲಿ ನನ್ನಂಥವರೇ ಅನೇಕ ಗೆಳೆಯರ ಸ್ನೇಹ ಸಿಕ್ಕಿತು. ನನ್ನ ಆತ್ಮವಿಶ್ವಾಸವೂ ಹೆಚ್ಚಿತು.

ಹತ್ತನೇ ತರಗತಿಯವರೆಗೂ ಇಂದಿರಾನಗರದ ವಿಶೇಷ ಶಾಲೆಯಲ್ಲಿಯೇ ಓದಿದ್ದು. ನಂತರ ಪಿಯುಸಿಗೆ ಶಿವಾಜಿನಗರದ ಸಾಮಾನ್ಯ ಪಿಯುಸಿ ಕಾಲೇಜಿಗೆ ಸೇರಿಕೊಂಡೆ.

ಅದು ಅಂಧ ವಿದ್ಯಾರ್ಥಿಗಳ ಕಾಲೇಜು ಅಲ್ಲದಿದ್ದರೂ ನಾವು ಅನೇಕ ಅಂಧ ವಿದ್ಯಾರ್ಥಿಗಳು ಒಟ್ಟಿಗೇ ಸೇರಿಕೊಂಡಿದ್ದರಿಂದ ಹೊಂದಿಕೊಳ್ಳುವುದು ನಮಗೇನೂ ಕಷ್ಟವೆನಿಸಲಿಲ್ಲ. ಅಲ್ಲದೇ ಪ್ರಾಧ್ಯಾಪಕರು ಮತ್ತು ಸಹಪಾಠಿಗಳೂ ತುಂಬಾ ಸಹಕಾರ ನೀಡಿದರು. ಪಿಯುಸಿಯಲ್ಲಿ ನಾನು ಶೇ 62 ಅಂಕ ಗಳಿಸಿ ತೇರ್ಗಡೆಯಾದೆ. ಪಿಯುಸಿ ನಂತರ ಯಲಹಂಕದಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದೇನೆ. ಇದೀಗ ಎರಡನೇ ವರ್ಷ.

ಅಲ್ಲಿಯೂ ಅಭ್ಯಾಸ ಚೆನ್ನಾಗಿಯೇ ನಡೆಯುತ್ತಿದೆ. ಸಾಮಾನ್ಯವಾಗಿ ನಾನು ತರಗತಿಯಲ್ಲಿ ಶಿಕ್ಷಕರು ಮಾಡಿದ ಪಾಠವನ್ನು ಕೇಳಿ ಅರ್ಥಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಕೆಲವು ವಿಷಯಗಳು ಬ್ರೈಲ್‌ ಲಿಪಿಯಲ್ಲಿ ದೊರೆಯುತ್ತವೆ. ಅಲ್ಲದೇ ನಮ್ಮ ಹಿರಿಯ ಅಂಧ ವಿದ್ಯಾರ್ಥಿಗಳು ಮುದ್ರಿಸಿಟ್ಟ ಆಡಿಯೊಗಳೂ ಹೆಚ್ಚು ಸಹಾಯಕವಾಗುತ್ತವೆ. ಪರೀಕ್ಷೆಯಲ್ಲಿ ಪ್ರಶ್ನೆಗೆ ನಾನು ಮೌಖಿಕವಾಗಿ ಹೇಳಿದ ಉತ್ತರವನ್ನು ಸಹಾಯಕರು ಬರೆಯುತ್ತಾರೆ.

ಸಮಸ್ಯೆ ಬರುವುದು ಪಠ್ಯ ಬದಲಾವಣೆ ಆದಾಗ. ಕಳೆದ ವರ್ಷ ಅರ್ಥಶಾಸ್ತ್ರದ ಪಠ್ಯ ಬದಲಾವಣೆಯಾಯ್ತು. ಹೀಗೆ ಇಡೀ ಪಠ್ಯವೇ ಬದಲಾದಾಗ ನಮಗೆ ಬ್ರೈಲ್‌ ಲಿಪಿಯ ನೋಟ್ಸ್‌ ಸಿಗಲ್ಲ. ಆಡಿಯೊಗಳೂ ಸಿಗಲ್ಲ. ಆಗ ಎಲ್ಲವನ್ನೂ ನಾವೇ ಸ್ವತಃ ತಯಾರಿಸಿಕೊಳ್ಳಬೇಕು. ಆಗ ಸ್ವಲ್ಪ ಕಷ್ಟವಾಗುತ್ತದೆ.

ಅಂಥ ಸಂದರ್ಭದಲ್ಲಿ ನೆರವಿಗೆ ಬರುವುದು ಸ್ನೇಹಿತರು. ಅವರು ಪಠ್ಯವನ್ನು ಓದಿ ಹೇಳುತ್ತಾರೆ. ಮುದ್ರಿಸಿಕೊಡುತ್ತಾರೆ. ಹೇಗೋ ಮಾಡಿ ಕಷ್ಟಪಟ್ಟು ನಾವು ತಯಾರಿಸಿದ ಈ ಎಲ್ಲ ನೋಟ್ಸ್‌ ನಮಗಿಂತ ಕಿರಿಯ ಅಂಧ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತವೆ. ನನಗೆ ಅರ್ಥಶಾಸ್ತ್ರ ತುಂಬಾ ಇಷ್ಟ. ಕಂಪ್ಯೂಟರ್‌ ಬಗೆಗೂ ಆಸಕ್ತಿಯಿದೆ.

ಬಿ.ಎ. ಮುಗಿಸಿ ‘ನೆಟ್‌ವರ್ಕಿಂಗ್‌ ಅಂಡ್‌ ಹಾರ್ಡ್‌ವೇರ್‌’ ಕೋರ್ಸ್‌ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಆರಂಭದಲ್ಲಿ ತುಸು ಕಷ್ಟವಾದರೂ ಆ ಕೌಶಲ ರೂಢಿಸಿಕೊಂಡರೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ. ಮಾಡಬಲ್ಲೆ ಎಂಬ ವಿಶ್ವಾಸವೂ ಇದೆ. ಒಮ್ಮೆ ಯಾವ ಯಾವ ಭಾಗಗಳನ್ನು ಹೇಗೆ ಎಲ್ಲಿ ಜೋಡಿಸಬೇಕು ಎಂಬುದನ್ನು ಕೈಯಿಂದ ಮುಟ್ಟಿ ತಿಳಿದುಕೊಂಡರೆ ಆಮೇಲೆ ಅದನ್ನು ನೆನಪಿಟ್ಟುಕೊಂಡು ಸುಲಭವಾಗಿ ಅಸೆಂಬಲ್‌ ಮಾಡಬಹುದು.

ಹತ್ತನೇ ತರಗತಿಯಲ್ಲಿದ್ದಾಗ ನ್ಯಾಷನಲ್‌ ಫೆಡರೇಷನ್‌ ಫಾರ್‌ ಬ್ಲೈಂಡ್‌ ಸಂಸ್ಥೆ ನಮ್ಮ ದೈನಂದಿನ ಕಾರ್ಯಗಳನ್ನು ಹೇಗೆ ಸ್ವತಂತ್ರವಾಗಿ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಎರಡು ತಿಂಗಳು  ತರಬೇತಿ ನೀಡಿತ್ತು. ಉದಾಹರಣೆಗೆ ಒಂದು ಹೊಸ ಜಾಗಕ್ಕೆ, ಹೊಸ ಮನೆಗೆ ಹೋದಾಗ ಮೊದಲು ಆ ಸ್ಥಳದ ಪರಿಚಯ ಮಾಡಿಕೊಳ್ಳುವುದು. ಆ ಮನೆಯ ಗೋಡೆ ಹಿಡಿದುಕೊಂಡು ಎಷ್ಟು ಕಿಟಕಿಗಳಿವೆ, ಎಷ್ಟು ಬಾಗಿಲುಗಳಿವೆ, ಎಲ್ಲೆಲ್ಲಿ ಎಷ್ಟೆಷ್ಟು ಮೆಟ್ಟಿಲುಗಳಿವೆ ಎಂದು ಎಲ್ಲವನ್ನೂ ಮುಟ್ಟಿ ನೋಡಿ ನೆನಪಿಟ್ಟುಕೊಳ್ಳುವುದು. ನಂತರ ಆ ನೆನಪನ್ನು ಆಧರಿಸಿಯೇ ಓಡಾಡುವುದು. ಈ ತರಬೇತಿ ನನಗೆ ತುಂಬಾ ಸಹಾಯಕವಾಗಿದೆ. ಇಂದು ನಾನು ಬಹುತೇಕ ಸ್ವತಂತ್ರವಾಗಿಯೇ ಓಡಾಡಿ ನನ್ನ ಕೆಲಸ ಮಾಡಿಕೊಳ್ಳಲು ಸಾಧ್ಯವಾಗಿದೆ.
ನನಗೆ ದೃಷ್ಟಿ ಮರಳಿ ಬರುವುದಿಲ್ಲ ಎಂಬುದು ಗೊತ್ತು. ಆದರೆ ಅದನ್ನೇ ನೆನೆಸಿಕೊಂಡು ಕೂತರೆ ಬದುಕು ಸಾಗುವುದಿಲ್ಲ. ಅಪ್ಪ, ಅಮ್ಮ , ಅಣ್ಣ, ಅಕ್ಕ ಎಲ್ಲರೂ ನನಗೆ ಬೆಂಬಲ ನೀಡುತ್ತಾರೆ.

ಆದರೂ ಒಬ್ಬನೇ ಇರುವಾಗ ಈ ಜಗತ್ತಿನಲ್ಲಿ ಎಲ್ಲರಂತೆ ನಾನೂ ಇಲ್ಲ ಎಂಬ ನೋವು ಕಾಡುತ್ತದೆ. ತುಂಬಾ ಬೇಜಾರಾಗುತ್ತದೆ. ಹಾಸ್ಟೆಲ್‌ನಲ್ಲಿ ನನ್ನಂಥವರೇ ತುಂಬಾ ಸ್ನೇಹಿತರ ಜತೆಗೆ ಇರುವಾಗ ಒಂದು ಆತ್ಮೀಯ ವಾತಾವರಣ ಇರುತ್ತದೆ. ಆಗ ನಮ್ಮಲ್ಲಿನ ಕೊರತೆ ಅಷ್ಟೊಂದು ಕಾಡುವುದಿಲ್ಲ. ನಮ್ಮೆಲ್ಲರ ಅಂತರಂಗದಲ್ಲಿಯೂ ಒಂದು ದೃಷ್ಟಿಯಿದೆ. ಅದರಿಂದ ನಾವೆಲ್ಲರೂ ಸೇರಿ ಏನಾದರೂ ಸಾಧನೆ ಮಾಡಬಹುದು ಎಂಬ ವಿಶ್ವಾಸ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.