ADVERTISEMENT

ಆಕೆ ಮಾಡಿದ ತಪ್ಪೇನು?

ಸುಮಲತಾ ಎನ್, ಪದ್ಮನಾಭ ಭಟ್ಟ
Published 27 ಮೇ 2016, 19:50 IST
Last Updated 27 ಮೇ 2016, 19:50 IST
ಆಕೆ ಮಾಡಿದ ತಪ್ಪೇನು?
ಆಕೆ ಮಾಡಿದ ತಪ್ಪೇನು?   

ನಗರಕ್ಕೆ ಮೊದಲ ಬಾರಿ ಬಂದ ಹುಡುಗಿಯೊಬ್ಬಳು ದಾರಿ ತಪ್ಪಿಸಿಕೊಂಡು ಕಾಣೆಯಾಗುತ್ತಾಳೆ. ಆಕೆಯ ತಂದೆ ತನ್ನ ಮಗಳನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಡುತ್ತಾನೆ. ಕೊನೆಗೂ ಮಗಳು ಸಿಗುತ್ತಾಳೆ. ಆದರೆ ತಂದೆ ಅವಳನ್ನು ನಿರಾಕರಿಸುತ್ತಾನೆ. ಕಾರಣ; ಅತ್ಯಾಚಾರ.
ಇಂಥ ಉದಾಹರಣೆಗಳು ನೂರಾರಿವೆ.

ಭಾರತದಲ್ಲಿ ಪ್ರತಿ 22 ಗಂಟೆಗೆ ಒಬ್ಬರ ಮೇಲೆ ಅತ್ಯಾಚಾರ ನಡೆಯುತ್ತಿದೆ. 2014ರಲ್ಲಿ 35,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ನಡೆಯುವುದು, ಅದು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು, ಆರೋಪಿಗೆ ಶಿಕ್ಷೆ ಆಗುವುದು ಸಹಜ ಪ್ರಕ್ರಿಯೆ ಎಂಬಂತೆ ನಡೆದು ಹೋಗುತ್ತಿದೆ. ಆದರೆ ಅತ್ಯಾಚಾರಕ್ಕೆ ಒಳಗಾದವರ ನಂತರದ ಬದುಕು...?

‘ಈ ಪ್ರಶ್ನೆಯೇ ಚಿತ್ರದ ತಿರುಳು’ ಎಂದು ಮಾತು ಆರಂಭಿಸಿದರು ರಾಖಿ ಬೋಸ್. ಅವರು ಅತ್ಯಾಚಾರ ನಂತರದ ಕರಾಳ ಬದುಕು ಬಿಂಬಿಸುವ ‘ಲಾಪತಾ’ ಎಂಬ ಕಿರುಚಿತ್ರದ ನಾಯಕಿ. ಕಿರುಚಿತ್ರವನ್ನು ಲೆಬೆಡಾ ಪ್ರೊಡಕ್ಷನ್ ತಂಡ ಸಿದ್ಧಪಡಿಸಿದೆ. ಚಿತ್ರತಂಡದ ಚುಕ್ಕಾಣಿ ಹಿಡಿದ ದೇವಾನಂದ ಮಹಾಕುದ್ ನಿಧಾನವಾಗಿ ಮಾತು ಆರಂಭಿಸಿದರು. ಅವರ ಮಾತಿನಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ನೋವಿನ ಹಲವು ನಿದರ್ಶನಗಳು ಪ್ರಸ್ತಾಪಗೊಂಡವು.

ಅತ್ಯಾಚಾರಕ್ಕೆ ಒಳಗಾಗಿ 42 ವರ್ಷಗಳ ಕಾಲ ನರಳುತ್ತಲೇ ಬದುಕಿದ ಅರುಣಾ ಶಾನಭಾಗ್ ಕಥೆ ಒಡಿಶಾ ಮೂಲದ ದೇವಾನಂದ್ ಅವರನ್ನು ಬಹುವಾಗಿ ಕಾಡಿತಂತೆ. ಅಭಿನಯ ಹಾಗೂ ನಿರ್ದೇಶನದ ತರಬೇತಿಗೆಂದು ಬೆಂಗಳೂರಿನ ಹಾದಿ ಹಿಡಿದ ಇವರನ್ನು ಅತ್ಯಾಚಾರ, ವಿಚ್ಛೇದನ, ಕೌಟುಂಬಿಕ ದೌರ್ಜನ್ಯಗಳು ಹಾಗೂ ಮಹಿಳೆಯರು ತಮ್ಮ ಬದುಕಿನಲ್ಲಿ ಅನುಭವಿಸುವ ನಿರಾಕರಣೆಗಳು ಚಿಂತನೆಗೆ ಹಚ್ಚಿತು.
ಆದರೆ ಅತ್ಯಾಚಾರದಂಥ ಸೂಕ್ಷ್ಮ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಲು ಹೆಚ್ಚಿನವರು ಒಪ್ಪುತ್ತಿರಲಿಲ್ಲ. ಇದೇ ವಿಚಾರದ ಬಗ್ಗೆ ದೇವಾನಂದ್ ಸಂಶೋಧನೆ ಆರಂಭಿಸಿದರು.

ಬೆಚ್ಚಿಬೀಳಿಸುವ ಹಲವು ಸಂಗತಿಗಳು ಬೆಳಕಿಗೆ ಬಂದವು. ಎಷ್ಟೋ ಸುಶಿಕ್ಷಿತ ಮಹಿಳೆಯರೂ ದೌರ್ಜನ್ಯ  ಸಹಿಸಿ ಒಂಟಿಯಾಗಿ ನರಳುತ್ತಲೇ ಉಳಿದುಬಿಡುವ ಸಂಗತಿ ಅರಿವಾಯಿತು. ಅತ್ಯಾಚಾರಕ್ಕೆ ಒಳಗಾದವರ ಮಾನಸಿಕ ಸ್ಥಿತಿ, ಅವರನ್ನು ಕುಟುಂಬದವರೂ ಕೈಬಿಡುವ, ತನ್ನದಲ್ಲದ ತಪ್ಪಿಗೆ ದುಃಖ ನುಂಗುವ, ಮೌನದಲ್ಲೇ ಎಲ್ಲವನ್ನೂ ಸಹಿಸಿಕೊಳ್ಳುವ ಸಾಕಷ್ಟು ಉದಾಹರಣೆಗಳು ಅವರಿಗೆ ಕಾಣಿಸಿತು.

ಅತ್ಯಾಚಾರದ ಬಗ್ಗೆ ದಿನನಿತ್ಯ ಮಾತನಾಡುತ್ತಿದ್ದರೂ ಅದರ ಗಂಭೀರ ಪರಿಣಾಮದ ಕುರಿತು ಯೋಚಿಸುವವರು ಕಡಿಮೆ. ಅತ್ಯಾಚಾರಕ್ಕೆ ಒಳಗಾದವರನ್ನು  ಸಮಾಜ ನಡೆಸಿಕೊಳ್ಳುವ ರೀತಿಯೂ ಭಿನ್ನ. ‘ಸಮಾಜವು ಅತ್ಯಾಚಾರ ಸಂತ್ರಸ್ತರ ಕುಟುಂಬವನ್ನು ಬೆಂಬಲಿಸಿದರೆ, ಕುಟುಂಬವೂ ಅತ್ಯಾಚಾರಕ್ಕೆ ಒಳಗಾದವರನ್ನು ನಡೆಸಿಕೊಳ್ಳುವ ರೀತಿ ಬದಲಾಗುತ್ತದೆ’ ಎನ್ನುವ ಸಾರವನ್ನು ಚಿತ್ರತಂಡ ಹೇಳಹೊರಟಿದೆ.
ಚಿತ್ರ ಮಾಡುವುದು ಹೆಚ್ಚಲ್ಲ, ಅದನ್ನು ಜನರು ನೋಡಬೇಕು. ನಾವು ಪ್ರತಿನಿಧಿಸುತ್ತಿರುವ ವಿಚಾರಕ್ಕೆ ಜನರ ಬೆಂಬಲ ಇದೆ ಎಂಬುದು ತಿಳಿಯಬೇಕು ಎಂಬ ಕಾರಣಕ್ಕೆ ಚಿತ್ರವನ್ನು ‘ಕ್ರೌಡ್ ಫಂಡಿಂಗ್’ ಮೂಲಕ ರೂಪಿಸುವ ಯೋಜನೆಯನ್ನು ಚಿತ್ರತಂಡ ರೂಪಿಸಿತು.

ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರದ ಉದ್ದೇಶಗಳನ್ನು ಹರಿಬಿಟ್ಟರು. ನೋಡನೋಡುತ್ತಲೇ ಹಣ ಕೈ ಸೇರಿತು. ₹80 ಸಾವಿರ ರೂಪಾಯಿಯ ಬಂಡವಾಳದಲ್ಲಿ ಕಿರುಚಿತ್ರ ಸಿದ್ಧವಾಯಿತು. ‘ಹೀಗೆ ಜನರಿಂದ ದೇಣಿಗೆ ತೆಗೆದುಕೊಳ್ಳಲೂ  ಕಾರಣವಿದೆ. ಜನರು ಹಣ ಕೊಟ್ಟಿದ್ದಾರೆ ಎಂದರೆ ಆ ಚಿತ್ರ ನೋಡೇ ನೋಡುತ್ತಾರೆ. ಚಿತ್ರ ನೋಡಬೇಕೆನ್ನುವ ನಮ್ಮ ಹಂಬಲ ಸಾಕಾರಗೊಂಡಂತೆ ಆಗುತ್ತದೆ. ಮೊದಲ ಹಂತದಲ್ಲೇ 200ಕ್ಕೂ ಹೆಚ್ಚು ಮಂದಿ ಹಣದ ಸಹಾಯ ಮಾಡಿದರು. ಅಲ್ಲದೆ ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹಣ ಹಾಕಿದ್ದಾರೆ’ ಎಂದು ವಿವರಿಸಿದರು ರಾಖಿ.

ಚಿತ್ರದಲ್ಲಿ ಒಟ್ಟು 20 ಮಂದಿ ಇದ್ದಾರೆ. ಚಿತ್ರ ಕೇವಲ ಎಂಟೂವರೆ ನಿಮಿಷಗಳದ್ದು. ಬೆಂಗಳೂರಿನಲ್ಲೇ ಎರಡು ದಿನಗಳಲ್ಲಿ ಚಿತ್ರೀಕರಣ ಮುಗಿದಿದೆ. ಕಥೆ, ಚಿತ್ರಕಥೆ, ಸಂಶೋಧನೆ, ನಟರ ಆಡಿಷನ್ ಬೆಂಗಳೂರಿನಲ್ಲಿಯೇ ನಡೆದಿದೆ. ‘ಚಿತ್ರಕ್ಕೆ ಕೇವಲ ವೃತ್ತಿಪರವಾಗಿ ಕೆಲಸ ಮಾಡುವವರು ಮಾತ್ರವಲ್ಲದೇ ಭಾವನಾತ್ಮಕವಾಗಿ ಜತೆಗೂಡುವವರು ಬೇಕಿತ್ತು. ಎಲ್ಲರ ಶ್ರಮದ ಫಲ ಈ ಕಿರುಚಿತ್ರ’ ಎನ್ನುತ್ತಾರೆ ದೇವಾನಂದ್.
ಮುಂದಿನ ದಿನಗಳಲ್ಲಿ ಚಿತ್ರತಂಡ ‘ವಿಶ್‌ಬೆರಿ ಅಭಿಯಾನ’ ಪ್ರಾರಂಭಿಸುತ್ತಿದೆ. ಭಾರತದ ಮೂಲೆಮೂಲೆಗೂ ಚಿತ್ರವನ್ನು ಕೊಂಡೊಯ್ಯಬೇಕು ಎಂಬುದು ತಂಡದ ಹಂಬಲ.   ಆನ್‌ಲೈನ್ ಚರ್ಚೆಗೂ ಆಹ್ವಾನವಿದೆ. 

ಮಾಹಿತಿಗೆ: goo.gl/5JKxgw ನೋಡಿರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT