ADVERTISEMENT

ಉದ್ಯಮಗಳಿಗೆ ವರವಾದ ಸಾಮಾಜಿಕ ಮಾಧ್ಯಮ

ಅನಿತಾ ಎಚ್.
Published 12 ಡಿಸೆಂಬರ್ 2016, 19:30 IST
Last Updated 12 ಡಿಸೆಂಬರ್ 2016, 19:30 IST
ಉದ್ಯಮಗಳಿಗೆ ವರವಾದ ಸಾಮಾಜಿಕ ಮಾಧ್ಯಮ
ಉದ್ಯಮಗಳಿಗೆ ವರವಾದ ಸಾಮಾಜಿಕ ಮಾಧ್ಯಮ   

ಸಾಮಾಜಿಕ ಜಾಲತಾಣಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳು ವರವೂ ಹೌದು, ಶಾಪವೂ ಹೌದು. ವಿಶ್ವದಾದ್ಯಂತ ಜನರನ್ನು ಒಗ್ಗೂಡಿಸಲು ಸಾಮಾಜಿಕ ಜಾಲತಾಣಗಳು ನೆರವಾಗಿವೆ.

ಸಾಮಾಜಿಕ ಜಾಲತಾಣಗಳು ಉದ್ಯಮಗಳ ಅಭಿವೃದ್ಧಿಗೂ ಪರಿಣಾಮಕಾರಿ ಎನಿಸಿವೆ. ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಇವೇ ಮೊದಲಾದವುಗಳ ಮೂಲಕ ಉತ್ಪನ್ನ ಮತ್ತು ಸೇವೆಗಳಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಿದೆ.

ನವೋದ್ಯಮ ಆರಂಭಿಸುವವರ ಪಾಲಿಗಂತೂ ಸಾಮಾಜಿಕ ಜಾಲತಾಣಗಳು ವರದಾನ ಎನಿಸಿವೆ. ಪಾಠಶಾಲೆಗಳ ಪ್ರಚಾರಕ್ಕೂ ಆನ್‌ಲೈನ್‌ ಮೊರೆ ಹೋದವರುಂಟು. ಈ ಕುರಿತು ಕೆಲವರು ಮೆಟ್ರೊದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕೆಲಸ ಸುಲಭ ಎನಿಸಿದೆ
ಕಾಲೇಜು ವಿದ್ಯಾಭ್ಯಾಸ ಮುಗಿಸಿ, 1994ರಲ್ಲಿ ಬೆಂಗಳೂರಿಗೆ ಬಂದೆ. ಹತ್ತು ವರ್ಷಗಳ ಕಾಲ ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಿದೆ. 2005ರಲ್ಲಿ ‘ಮನು ಗ್ರಾಫಿಕ್ಸ್‌’ ಎಂಬ ಸ್ವ ಉದ್ಯಮ ಆರಂಭಿಸಿದೆ.

ವಿಸಿಟಿಂಗ್‌ ಕಾರ್ಡ್‌, ಎನ್‌ವೆಲಪ್ ಕವರ್, ಲೆಟರ್‌ಹೆಡ್‌, ಟೇಬಲ್‌ ಕ್ಯಾಲೆಂಡರ್‌, ಬ್ರೋಷರ್‍, ವಿವಿಧ ಕಂಪೆನಿಗಳ ಮಾಸಿಕ ಪತ್ರಿಕೆ, ಪ್ರಾಡಕ್ಟ್‌ ಬಾಕ್ಸ್‌, ಪೋಸ್ಟರ್‍್ಸ್‌ ಸೇರಿದಂತೆ ಮುದ್ರಣಕ್ಕೆ ಸಂಬಂಧಿಸಿದ ವಿವಿಧ ಕೆಲಸಗಳನ್ನು ನಾವು ನಿರ್ವಹಿಸುತ್ತೇವೆ.

ಸಾಮಾಜಿಕ ಜಾಲತಾಣಗಳ ಬಳಕೆ ನಮ್ಮ ಎಲ್ಲ ಕೆಲಸವನ್ನು ಸುಲಭಗೊಳಿಸಿದೆ. ಈ ಮೊದಲು ಕೆಲಸವೊಂದರ ವಿನ್ಯಾಸ ಮಾಡಿದ ಬಳಿಕ ಗ್ರಾಹಕರನ್ನು ನೇರವಾಗಿ ಸಂಪರ್ಕಿಸಿ ಒಪ್ಪಿಗೆ ಪಡೆಯುತ್ತಿದ್ದೆವು.

ನಗರದ ವಿವಿಧ ಮೂಲೆಗಳಲ್ಲಿ ನಮ್ಮ ಗ್ರಾಹಕರು ಹಂಚಿ ಹೋಗಿದ್ದಾರೆ. ಸಂಚಾರ ದಟ್ಟಣೆ ಕಾರಣ ಪ್ರತಿಯೊಬ್ಬರನ್ನು ಸಂಪರ್ಕಿಸಲು ದಿನಗಟ್ಟಲೆ ಸಮಯ ವ್ಯಯಿಸಬೇಕಿತ್ತು. ಗ್ರಾಹಕರನ್ನು ಸಂಪರ್ಕಿಸಲು ಒಂದು ಇಡೀ ದಿನ, ಮುದ್ರಣದ ಕೆಲಸಕ್ಕೆ ಮತ್ತೊಂದು ದಿನ– ಹೀಗೆ ಒಂದೇ ಕೆಲಸಕ್ಕೆ ಎರಡು ದಿನ ವ್ಯಯಿಸಬೇಕಾಗುತ್ತಿತ್ತು.

ಆದರೆ ಈಗ ಹಾಗಿಲ್ಲ. ಉತ್ಪನ್ನವೊಂದರ ವಿನ್ಯಾಸವನ್ನು ಇ–ಮೇಲ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಗ್ರಾಹಕರಿಗೆ ಕಳುಹಿಸುತ್ತೇವೆ. ಅವರು ಅದನ್ನು ನೋಡಿ ಒಪ್ಪಿಗೆ ಸೂಚಿಸಿದ ಬಳಿಕ ಕೂಡಲೇ ಮುದ್ರಣ ಕೆಲಸ ಆರಂಭಿಸುತ್ತೇವೆ. ತಿರುಗಾಟ, ಸಂಚಾರ ದಟ್ಟಣೆ ಈ ಯಾವುದರ ಸಮಸ್ಯೆಯೂ ಇಲ್ಲದೆ ಅನಾಯಾಸವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಉದ್ದಿಮೆಯೂ ಅಭಿವೃದ್ಧಿ ಕಂಡಿದೆ.

ಉದ್ದಿಮೆಗಳಿಗೆ ಮಾತ್ರವಲ್ಲ ಸ್ನೇಹಿತರು, ಸಂಬಂಧಿಗಳನ್ನೂ ಒಂದೆಡೆ ಸೇರಿಸಲೂ ಸಾಮಾಜಿಕ ಜಾಲತಾಣಗಳು ಸಹಕಾರಿ. ನಮ್ಮದು ಸ್ನೇಹಿತರ ದೊಡ್ಡ ಬಳಗ. ನಾವೆಲ್ಲ ಸೇರಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದೇವೆ. ಪರಸ್ಪರರ ಮನೆಯಲ್ಲಿ ಏನೇ ಕಾರ್ಯಕ್ರಮಗಳಿದ್ದರೂ ವಾಟ್ಸ್‌ಆ್ಯಪ್‌ನಲ್ಲಿ ಹಾಕುತ್ತೇವೆ. ಒಂದೇ ಸಂದೇಶ ಒಮ್ಮೆಲೆ ನೂರಕ್ಕೂ ಹೆಚ್ಚು ಜನರಿಗೆ ಮುಟ್ಟುತ್ತದೆ.

ಅಯ್ಯೋ ಕಾರ್ಯಕ್ರಮದ ಬಗ್ಗೆ ಗೊತ್ತಾಗಲಿಲ್ಲ ಎಂದು ಯಾರೂ ಆಪಾದನೆ ಮಾಡಲು ಅವಕಾಶವಿಲ್ಲ. ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಭಾಗವಾಗಿವೆ. 
-ಗೋಪಾಲ್‌ ಮನುವಾಚಾರ್ಯ, ಮನು ಗ್ರಾಪಿಕ್ಸ್‌, ಅಗ್ರಹಾರ ದಾಸರಹಳ್ಳಿ

*
ಮನೆ ಮಾತಾಗಲು ನೆರವಾದ ನವ ಮಾಧ್ಯಮ
ನಾನು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದೇನೆ. ಆದರೆ ಪರಿಸರ ನನ್ನ ಆಸಕ್ತಿಯ ಕ್ಷೇತ್ರ. ಬಿದಿರಿನಿಂದ ನೈಜ ಪರಿಸರದ ಅನುಭವ ನೀಡುವ ಕಟ್ಟಡದ ನಿರ್ಮಾಣ, ಉತ್ಪನ್ನಗಳ ತಯಾರಿಕೆ ನನ್ನ ವೃತ್ತಿ. ಸುಮಾರು ಆರು ವರ್ಷಗಳಿಂದ ಈ ಉದ್ಯಮ ನಡೆಸಿಕೊಂಡು ಬಂದಿದ್ದೇನೆ ಉತ್ತಮ ಪ್ರತಿಕ್ರಿಯೆ ಇದೆ. ಸಾಮಾಜಿಕ ಜಾಲತಾಣಗಳ ಸಹಾಯದಿಂದಾಗಿ ಇಂದು ಈ ಉದ್ಯಮವು ಮನೆ ಮಾತಾಗಿ ಮಾರ್ಪಟ್ಟಿದೆ.

ADVERTISEMENT

ನಮ್ಮಲ್ಲಿ ಬಿದಿರು ಉತ್ಪನ್ನಗಳ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಕುಶಲಕರ್ಮಿಗಳು, ವಿನ್ಯಾಸಗಾರರು, ಎಂಜಿನಿಯರ್‌ಗಳು ಇದ್ದಾರೆ. ಭದ್ರತಾ ಕೊಠಡಿ, ರೆಸಾರ್ಟ್‌ಗಳು, ವಾಹನಗಳ ನಿಲುಗಡೆ ಸ್ಥಳ ಇತ್ಯಾದಿಗಳನ್ನು ಪರಿಸರ ಸ್ನೇಹಿ ಬಿದಿರಿನಿಂದಲೇ ವಿನ್ಯಾಸಗೊಳಿಸಿದ್ದೇವೆ. ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯ, ದೇಶಗಳಲ್ಲಿಯೂ ನಮ್ಮ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಇದೆ.
www.bamboooz.com ಮತ್ತು www.feelbambu.com ವೆಬ್‌ಸೈಟ್‌ ತೆರೆದಲ್ಲಿ ಈ ಬಗ್ಗೆ ತಿಳಿಯಬಹುದು.
-ಇಂದ್ರಾಣಿ ಮುಖರ್ಜಿ, ಬೆಂಗಳೂರು

*
ವಿದ್ಯಾರ್ಥಿಗಳನ್ನು ಸೆಳೆದ ಸಂಪರ್ಕ ಜಾಲ
ನಾನು ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ವಿಷಯದ ಪ್ರಾಧ್ಯಾಪಕಿಯಾಗಿದ್ದೆ. ಮಕ್ಕಳ ವಿದ್ಯಾಭ್ಯಾಸದ ಕಾರಣ ನಿವೃತ್ತಿ ಪಡೆದು, ಮನೆಯಲ್ಲಿಯೇ ‘ಎಜ್ಯುಸಿಟಿ ಸ್ಟಡಿ ಸೆಂಟರ್‌’ ಆರಂಭಿಸಿದೆ.

ಎಂಜಿನಿಯರಿಂಗ್‌, ಡಿಪ್ಲೊಮಾ, ಬಿಸಿಎ, ಬಿಎಸ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತೇನೆ. ಸೆಂಟರ್‌ ಆರಂಭಿಸುವುದಕ್ಕೂ ಮುನ್ನ ‘urbanpro’ ಆನ್‌ಲೈನ್‌ ಮಾಧ್ಯಮದಲ್ಲಿ ನನ್ನ ವಿದ್ಯಾಭ್ಯಾಸ, ಸೆಂಟರ್‌ನಲ್ಲಿ ಯಾವ ಯಾವ ವಿಷಯಗಳನ್ನು ಕಲಿಸಲಾಗುತ್ತದೆ ಇತರೆ ಮಾಹಿತಿಗಳನ್ನು ಪ್ರಕಟಿಸಿದ್ದೆವು. ಅದನ್ನು ನೋಡಿ ನಿಧಾನವಾಗಿ ಒಬ್ಬೊಬ್ಬರೆ ವಿದ್ಯಾರ್ಥಿಗಳು ಸಂಪರ್ಕಿಸಿದರು.

ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ‘ಒನ್‌ ಟು ಒನ್‌’ ನಿಯಮ ಪಾಲಿಸಲಾಗುತ್ತದೆ. ಜೈವಿಕ ತಂತ್ರಜ್ಞಾನದ ವಿಷಯವಾದರೆ ನಾನೇ ಪಾಠ ಮಾಡುತ್ತೇನೆ. ಇತರೆ ವಿಷಯಗಳನ್ನು ಕಲಿಸಲು ನಮ್ಮಲ್ಲಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಮಯಕ್ಕೆ ಅನುಗುಣವಾಗಿ ತರಗತಿಗಳನ್ನು ನಡೆಸುತ್ತೇವೆ.

ಸೆಂಟರ್‌ ಕುರಿತು ಆನ್‌ಲೈನ್‌ ಮಾಧ್ಯಮದಲ್ಲಿ ಪ್ರಕಟಿಸಿದ್ದು ಬಿಟ್ಟರೆ ಬೇರೆ ಯಾವ ದಾರಿಯನ್ನೂ ಅನುಸರಿಸಲಿಲ್ಲ. ಪ್ರತಿಕ್ರಿಯೆ ಚೆನ್ನಾಗಿದೆ. ಅಂತರ್ಜಾಲ ಮಾಧ್ಯಮವನ್ನು ಕೆಲವರು ದುರ್ಬಳಕೆ ಮಾಡುವುದಿದೆ. ಈ ಬಗ್ಗೆ ಎಚ್ಚರ ವಹಿಸುವುದೂ ಅಗತ್ಯ.
-ಡಾ.ಗೀತಾ, ಎಜ್ಯುಸಿಟಿ ಸ್ಟಡಿ ಸೆಂಟರ್‌, ವಿಜಯನಗರ

*
ಹೆದ್ದಾರಿ ಪ್ರಯಾಣಿಕರಿಗೆ ಆ್ಯಪ್‌
ಯಾವುದೇ ಉದ್ಯಮಗಳ  ಆರಂಭದಲ್ಲಿ ಸಾಮಾಜಿಕ ಜಾಲತಾಣಗಳು ನಿರ್ವಹಿಸುವ ಪಾತ್ರ ಮಹತ್ತರವಾದುದು. ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರನ್ನು ಸೆಳೆಯುವ ಶಕ್ತಿ ಅದಕ್ಕೆ ಇದೆ. ಇದರ ಆಧಾರದಲ್ಲಿಯೇ ‘highwaydelite’ (ಹೈವೆಡಿಲೈಟ್‌) ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಹೆದ್ದಾರಿಗಳ ನಿರ್ದಿಷ್ಟ ಸ್ಥಳಗಳಲ್ಲಿ ರೆಸ್ಟೋರೆಂಟ್‌, ಹೋಟೆಲ್‌, ಲಾಡ್ಜ್‌, ಪೆಟ್ರೋಲ್‌ ಬಂಕ್‌, ವಾಹನ ರಿಪೇರಿ ಅಂಗಡಿ, ತುರ್ತು ಕರೆಗೆ ನಂಬರ್‌ ಇತ್ಯಾದಿ ಸೇವೆಗಳ ಬಗ್ಗೆ ಪ್ರಯಾಣಿಕರು ಈ ಆ್ಯಪ್‌ ಮೂಲಕ ಮಾಹಿತಿ ಪಡೆಯಬಹುದು.

ಸದ್ಯ ಹೆದ್ದಾರಿಯ ಸುಮಾರು ಆರು ಸಾವಿರ ಕಿ.ಮೀ.ವರೆಗಿನ ಮಾಹಿತಿಯನ್ನು ಮಾತ್ರ ನೀಡಲಾಗಿದೆ. ಹೋಟೆಲ್‌, ಪೆಟ್ರೋಲ್‌ ಬಂಕ್‌ಗಳಲ್ಲಿರುವ ಶೌಚಾಲಯ ವ್ಯವಸ್ಥೆ ಕುರಿತೂ ಮಾಹಿತಿ ಇದೆ. ಅದರ ಚಿತ್ರಗಳೂ ಆ್ಯಪ್‌ನಲ್ಲಿ ದೊರೆಯುವುದರಿಂದ ಪ್ರಯಾಣಿಕರು ತಮಗೆ ಬೇಕಾದ ಹೋಟೆಲ್‌ ಆಯ್ದುಕೊಳ್ಳಲು ಅನುಕೂಲವಾಗಿದೆ.

ಇದು ಸಣ್ಣ ಉದಾಹರಣೆ ಮಾತ್ರ. ಇಂತಹ ಅದೆಷ್ಟೋ ಉದ್ದೇಶಗಳಿಗೆ ಸಾಮಾಜಿಕ ಜಾಲತಾಣಗಳು ಸಹಕಾರಿ. ಇದರಿಂದಾಗಿ ಮಾಹಿತಿಯೊಂದನ್ನು ನಿಮಿಷ ಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಆದ್ದರಿಂದಲೇ ಅನೇಕ ಕಂಪೆನಿಗಳೂ ತಮ್ಮ ಉತ್ಪನ್ನಗಳ ಜಾಹೀರಾತಿಗೆ ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಮೊದಲಾದವುಗಳ ಮೊರೆ ಹೋಗಿರುವುದನ್ನು ನಾವು ಕಾಣುತ್ತೇವೆ.
-ರಾಜೇಶ್‌ ಜಿ.,
ಸಿಇಒ, ಹೈವೆಡಿಲೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.