ADVERTISEMENT

ಎಂ.ಬಿ. ಸಿಂಗ್‌ 90ರ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 22 ಮೇ 2015, 19:30 IST
Last Updated 22 ಮೇ 2015, 19:30 IST

ಎಂ.ಬಿ. ಸಿಂಗ್‌ ಅವರಿಗೆ ಅಭಿನಂದನೆ ಮತ್ತು ‘ಎಂ.ಬಿ. ಸಿಂಗ್‌: ಕನ್ನಡ ಪತ್ರಿಕೋದ್ಯಮದ ಕಟ್ಟಾಳು’ ಕೃತಿ ಬಿಡುಗಡೆ. ಮೇ 24ರ ಭಾನುವಾರ, ಬೆಳಗ್ಗೆ 10.30ಕ್ಕೆ. ಸ್ಥಳ: ಕಬ್ಬನ್‌ ಪಾರ್ಕ್‌ನಲ್ಲಿರುವ ಪ್ರೆಸ್‌ ಕ್ಲಬ್‌ ಸಭಾಂಗಣ. ಅಭಿನಂದನಾ ಭಾಷಣ: ಜಿ.ಎನ್‌. ರಂಗನಾಥ ರಾವ್, ಎಚ್‌.ಎನ್‌.ಆನಂದ.

ಕನ್ನಡ ಪತ್ರಿಕೋದ್ಯಮದಲ್ಲಿ ಎಂ.ಬಿ. ಸಿಂಗ್‌ ಅವರದು ಬಹು ಮುಖ್ಯ ಹೆಸರು. ಅನೇಕ ಪತ್ರಕರ್ತರು ತಮ್ಮ ವರದಿಗಳ ಮೂಲಕ, ಅಂಕಣಗಳ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ಎಂ.ಬಿ. ಸಿಂಗ್ ತಮ್ಮ ಬರವಣಿಗೆಗಿಂತಲೂ ಬರೆಸುವ ಮೂಲಕ ಪ್ರಸಿದ್ಧರಾದವರು. ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿ.’ನ ಮೂರು ಕನ್ನಡ ಪ್ರಕಟಣೆಗಳಿಗೆ ಸಂಪಾದಕರಾಗಿ ಅವರು ಮಾಡಿದ ಕೆಲಸ ದೊಡ್ಡದು.

ಎಂ.ಬಿ. ಸಿಂಗ್‌ ಅವರ ಪೂರ್ಣ ಹೆಸರು ಮದನ್ ಸಿಂಗ್‌ ಭುವನ್ ಸಿಂಗ್. ಅವರು ಜನಿಸಿದ್ದು ಮೈಸೂರಿನಲ್ಲಿ– 1925ರ ಮೇ 24ರಂದು. ಆರಂಭದಲ್ಲಿ ‘ಮಾತೃಭೂಮಿ’, ‘ವಾರ್ತಾ’, ‘ಚಿತ್ರಗುಪ್ತ’, ‘ವಿಶ್ವಕರ್ನಾಟಕ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಸಿಂಗ್‌ ಅವರು, 1953ರಲ್ಲಿ ‘ಪ್ರಜಾವಾಣಿ’ ಸೇರಿದರು. ಅಲ್ಲಿಂದ ಸುಮಾರು ಮೂರೂವರೆ ದಶಕಗಳ ಕಾಲ ‘ಪ್ರಜಾವಾಣಿ’ ಬಳಗದ ಪತ್ರಿಕೆಗಳಲ್ಲಿ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ‘ಸುಧಾ’ ಹಾಗೂ ’ಮಯೂರ’ ಪತ್ರಿಕೆಗಳಿಗೆ ಸ್ಪಷ್ಟ ರೂಪು ತಂದುಕೊಟ್ಟ ಅಗ್ಗಳಿಕೆ ಅವರದು.

ಪತ್ರಿಕೋದ್ಯಮವನ್ನು ಒಂದು ಬದ್ಧತೆ ಮತ್ತು ವ್ಯಸನದಂತೆ ಹಚ್ಚಿಕೊಂಡವರು ಎಂ.ಬಿ. ಸಿಂಗ್‌. ಅವರೇ ಹೇಳಿರುವಂತೆ– ‘‘ಕಚೇರಿಗೆ ನಾನು ಬೆಳಿಗ್ಗೆ 9ಕ್ಕೇ ಹೋಗುತ್ತಿದ್ದೆ. ಕಸ ಗುಡಿಸಿ, ಹಳೆಯ ಪೇಪರ್‌ಗಳನ್ನು ಯಾರೂ ಹೊರಗೆ ಹಾಕದೇ ಇದ್ದರೆ ನಾನೇ ಆ ಕೆಲಸವನ್ನು ಮಾಡುತ್ತಿದ್ದೆ. ಎಂದೂ ಗಡಿಯಾರ ನೋಡಿ ಕೆಲಸ ಮಾಡಲಿಲ್ಲ. ಲೇಖಕರನ್ನು ಖುದ್ದು ಹುಡುಕಿಕೊಂಡು ಹೋಗುತ್ತಿದ್ದೆ. ಬರೆಯುವಂತೆ ಓಲೈಸಲು ಸಾಕಷ್ಟು ಹೆಣಗಾಡಿದ್ದೂ ಇದೆ. ಇವನ್ನೆಲ್ಲಾ ನೋಡಿದ ಸಹೋದ್ಯೋಗಿಗಳು ತಂತಾವೇ ಪ್ರೀತಿಯಿಂದ ಕೆಲಸ ಮಾಡ ತೊಡಗಿದರು. ನಾನು ಒತ್ತಡ ಹೇರಿ ಕೆಲಸ ಮಾಡಿಸಲಿಲ್ಲ. ಕೆಲಸದ ಬಗೆಗೆ ಪ್ರೀತಿ ಮೂಡಿಸಿದೆನಷ್ಟೆ’’.

ಜಿ.ಪಿ. ರಾಜರತ್ನಂ ಅವರನ್ನು ಸಾಹಿತ್ಯದ ಪರಿಚಾರಕ ಎಂದು ಗುರುತಿಸಲಾಗುತ್ತದೆ. ಪತ್ರಿಕೋದ್ಯಮ ಸಂದರ್ಭದಲ್ಲಿ ಈ ‘ಪರಿಚಾರಿಕ’ ವಿಶೇಷಣ ಎಂ.ಬಿ. ಸಿಂಗ್‌ ಅವರಿಗೆ ಒಪ್ಪುತ್ತದೆ. ಅವರ ಈ ಪರಿಚಾರಿಕೆ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ ಟೀಯೆಸ್ಸಾರ್ ಪ್ರಶಸ್ತಿಗಳು ಸಂದಿವೆ.

ಅಸಲಿ ಕಸುಬುದಾರರಾದ ಎಂ.ಬಿ. ಸಿಂಗ್ ಕನ್ನಡ ಪತ್ರಿಕೋದ್ಯಮ ರೂಪಿಸಿದ ವಿಶಿಷ್ಟ ಮಾದರಿಗಳಲ್ಲೊಂದು. ಈ ಹಿರಿಯರಿಗೆ ಈಗ 90 ವರ್ಷದ ಸಂಭ್ರಮ. ನಾಳೆ (ಮೇ 24) ಅವರ ಹುಟ್ಟುಹಬ್ಬ. ಈ ತೊಂಬತ್ತರ ಸಂಭ್ರಮ­ವನ್ನು ‘ಅಭಿನಂದನಾ ಕಾರ್ಯಕ್ರಮ’ದ ರೂಪದಲ್ಲಿ ‘ವಿಕಾಸ ಪ್ರಕಾಶನ’ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ‘ಎಂ.ಬಿ. ಸಿಂಗ್‌: ಕನ್ನಡ ಪತ್ರಿಕೋದ್ಯಮದ ಕಟ್ಟಾಳು’ ಅಭಿನಂದನಾ ಕೃತಿ ಬಿಡುಗಡೆ ಆಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT