ADVERTISEMENT

ಕನ್ನಡ ಯಾನದ ಜೊತೆ ಹಾಸ್ಯದ ಪಯಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
ಕನ್ನಡ ಯಾನದ ಜೊತೆ ಹಾಸ್ಯದ ಪಯಣ
ಕನ್ನಡ ಯಾನದ ಜೊತೆ ಹಾಸ್ಯದ ಪಯಣ   

ಕನ್ನಡದಲ್ಲಿ ಹಾಸ್ಯದ ಕಾರ್ಯಕ್ರಮಗಳು ಅದರಲ್ಲೂ ಸ್ಟ್ಯಾಂಡ್‌ಅಪ್ ಕಾಮಿಡಿ ಎನ್ನುವ ಪರಿಕಲ್ಪನೆಯನ್ನು ಮುನ್ನೆಲೆಗೆ ತರಬೇಕು ಎಂಬ ಕಾರಣಕ್ಕೆ ತಂಡ ಕಟ್ಟಿದವರು ಅನೂಪ್ ಮಯ್ಯ.

ಅನೂಪ್ ಮೂಲತಃ ಮಂಗಳೂರಿನ ವರು. ಡಿಪ್ಲೊಮಾ ಓದಿ ಬೆಂಗಳೂರಿನ ಐಟಿ ಸ್ಟಾರ್ಟ್ಅಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ವೃತ್ತಿ ಯೊಂದಿಗೆ ಸ್ಟ್ಯಾಂಡ್ಅಪ್ ಕಾಮಿಡಿ ಕಾರ್ಯಕ್ರಮಗಳನ್ನು ನೀಡುವುದರಲ್ಲೂ ಬ್ಯುಸಿ ಆಗಿದ್ದಾರೆ.

ಇವರ ಕಾಮಿಡಿ ತಂಡ 'ಲೋಲ್‌ಬಾಗ್' ಹುಟ್ಟಿಕೊಳ್ಳುವ ಹಿಂದೆ ಒಂದು ಪುಟ್ಟ ಕಥೆಯಿದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಹಂಬಲ ಅನೂಪ್ ಅವರಿಗಿತ್ತು. ಇದಕ್ಕೆಂದು ಕನ್ನಡ ಗೊತ್ತಿಲ್ಲ ಡಾಟ್ ಕಾಂ ಆರಂಭಿಸಿ, ಕನ್ನಡವನ್ನು ಹಾಡಿನ ಮೂಲಕ ಸೃಜನಶೀಲವಾಗಿ ಕಲಿಸುವ ಪ್ರಯೋಗವನ್ನೂ ಮಾಡಿದರು. ನಂತರ ಹಾಸ್ಯ ಇವರ ಪಾಠಕ್ಕೆ ಸಹಾಯ ಮಾಡಿತು.

ADVERTISEMENT

‘ಪಾಠದ ಮಧ್ಯೆ ಕಾಮಿಡಿ ಸೇರಿಸಿ ಹೇಳಿಕೊಟ್ಟೆವು. ಖುಷಿಯಾಗಿ ಕಲಿಯಲು ಆರಂಭಿಸಿದರು. ಇದನ್ನೇ ಏಕೆ ಸ್ಟ್ಯಾಂಡ್ ಅಪ್ ಕಾಮಿಡಿಗೆ ಒಗ್ಗಿಸಿಕೊಳ್ಳಬಾರದು ಅನ್ನಿಸಿತು. ಆಗ ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದವರನ್ನು ಒಂದೆಡೆ ತರುವ ವೇದಿಕೆ ಕಲ್ಪಿಸಿದೆ. ಅಲ್ಲಿಂದ ಶುರುವಾಯಿತು ನಮ್ಮ ಹಾಸ್ಯದ ಯಾನ’ ಎಂದು ಆರಂಭದ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಅನೂಪ್.

ಮೊದಲಿನಿಂದಲೂ ಇಂಗ್ಲಿಷ್, ಹಿಂದಿ ಕಾಮಿಡಿ ಶೋಗಳನ್ನು ನೋಡುತ್ತಿದ್ದ ಅನೂಪ್ ಅವರಲ್ಲಿ ‘ಅರ್ಬನ್ ಸ್ಟ್ಯಾಂಡ್‌ ಅಪ್ ಕಾಮಿಡಿ’ ರೂಪದಲ್ಲಿ ಕಾರ್ಯಕ್ರಮ ನೀಡುವ ಆಲೋಚನೆ ಮೂಡಿತು. ಜೊತೆಗೆ ಈ ಕ್ಷೇತ್ರದಲ್ಲಿ ಯುವಜನರು ಅತಿ ಕಡಿಮೆ ಸಂಖ್ಯೆಯಲ್ಲಿ ಇರುವುದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡರು.

ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಪಾಠ ಮಾಡುವಾಗ ಏನೆಲ್ಲಾ ಸಮಸ್ಯೆಯಾಗುತ್ತದೆ, ಕಲಿಯುವವರು ಏನೆಲ್ಲಾ ತಪ್ಪು ಮಾಡುತ್ತಾರೆ ಎಂಬ ಕಲಿಕಾ ಪ್ರಕ್ರಿಯೆಯನ್ನೇ ಕಾಮಿಡಿಗೆ ವಿಷಯ ಮಾಡಿಕೊಂಡರು. ನಂತರ ಪ್ರತಿನಿತ್ಯದ ಸಂಗತಿಗಳೇ ಕಾಮಿಡಿಗೆ ವಸ್ತುವಾದವು.

‘ಮದುವೆ ಮನೆಯ ಘಟನೆಗಳು, ಐಟಿ ಕೆಲಸದ ಗೋಜಲುಗಳು, ರಾಜಕಾರಣಿಗಳ ಅವಾಂತರಗಳು, ಅಷ್ಟೇ ಏಕೆ ಮೊನ್ನೆ ಮೊನ್ನೆ ಬಿಡುಗಡೆಯಾದ ಐಫೋನ್‌ 10 ಬಗ್ಗೆಯೂ ಕಾಮಿಡಿ ಮಾಡುತ್ತೇವೆ. ವಿಷಯದ ಪರಿಮಿತಿಯೇ ನಮಗಿಲ್ಲ’ ಎಂದು ಹೇಳಿಕೊಳ್ಳುತ್ತಾರೆ.

ಕಾಲೇಜು, ಕಾರ್ಪೊರೇಟ್ ಸಂಸ್ಥೆಗಳು, ಕೆಲ ಖಾಸಗಿ ಸಂಸ್ಥೆಗಳಿಗೆ ಹೋಗಿ ಶೋಗಳನ್ನು ನೀಡುತ್ತಾರೆ. ಇದುವರೆಗೂ ಸುಮಾರು 40 ಶೋಗಳನ್ನು ನೀಡಿದ್ದಾರೆ. ತಂಡದಲ್ಲಿ ಆರು ಮಂದಿ ಪ್ರದರ್ಶಕರು, ಫೋಟೊ, ವಿಡಿಯೊ, ಮಾರ್ಕೆಟಿಂಗ್‌ಗೆ ಮೂರು ಜನ ಇದ್ದಾರೆ.

ಕಾಮಿಡಿ ಮಾಡುವವರಿಗೆ ಕಿವಿ, ಕಣ್ಣು ಸದಾ ತೆರೆದಿರಬೇಕು, ಸಮಾಜದ ವಿಷಯಗಳಿಗೆ ಅಪ್‌ಡೇಟ್ ಆಗಿರಬೇಕು ಎನ್ನುವ ಅನೂಪ್, ಒಂದು ವಿಷಯವನ್ನು ಮೂರು ತಿಂಗಳ ನಂತರ ಬಳಸುವುದಿಲ್ಲ. ಕಾರ್ಯಕ್ರಮದ ಸ್ಥಳವನ್ನು ಅವಲಂಬಿಸಿ ಶೋಗೆ ತಯಾರಿ ನಡೆಸುತ್ತಾರೆ.

‘ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕುರಿತು ಜೋಕ್ ಮಾಡಿದರೆ ಏನು ತಿಳಿಯುತ್ತೆ?, ಹಾಗೆಯೇ ಬೆಂಗಳೂರಿನ ಸಂಗತಿಯನ್ನು ಮಂಗಳೂರಿಗೆ ಹೋಗಿ ಹಾಸ್ಯ ಮಾಡಿದರೆ ಅವರಿಗೆ ಹೇಗೆ ತಲುಪುತ್ತೆ? ಆದ್ದರಿಂದ ಸ್ಥಳವನ್ನು ನೋಡಿಕೊಂಡು ತಯಾರಿ ಮಾಡಿಕೊಳ್ಳುತ್ತೇವೆ’ ಎಂದು ವಿವರಿಸುತ್ತಾರೆ.

ಅನೂಪ್‌ಗೆ ಕಾಮಿಡಿ ಸವಾಲು ಕೂಡ ಹೌದು. ಎಷ್ಟೋ ಬಾರಿ ಜೋಕ್ ಮಾಡಿದರೂ ನಗದೇ ಇದ್ದಾಗ ಆ ಕ್ಷಣ ಇನ್ನೊಂದು ಜೋಕ್ ಮಾಡಿ ನಗಿಸಿ ಎಲ್ಲೂ ಬ್ರೇಕ್ ಆಗದಂತೆ ಮುಂದೆ ಹೋಗುವುದು ಚಾಲೆಂಜಿಂಗ್ ಎನ್ನುತ್ತಾರೆ.

ಆದರೆ ಕನ್ನಡ ಕಾಮಿಡಿ ಶೋಗಳೆಡೆಗೆ ಸ್ವಲ್ಪ ನಿರ್ಲಕ್ಷ್ಯ ಇರುವ ಕುರಿತ ಬೇಸರವೂ ಅವರಿಗಿದೆ. ‘ಇಂಗ್ಲಿಷ್‌ ಕಾಮಿಡಿ ಶೋಗೆ ಸಾವಿರ ರೂಪಾಯಿ ಟಿಕೆಟ್‌ ಕೊಡಲು ಸಿದ್ಧವಿರುವ ಕನ್ನಡದ ಜನ, ಕನ್ನಡದಲ್ಲಿ ಶೋ ಕೊಡ್ತೀವಿ ಅಂದ್ರೆ ಏಕೆ 250 ರೂಪಾಯಿ ಕೊಡಬೇಕು ಎಂದು ಕೇಳುತ್ತಾರೆ’ ಎನ್ನುತ್ತಲೇ ತಮಗೆ ಸಿಕ್ಕಿರುವ ಬೆಂಬಲದ ಕುರಿತು ಖುಷಿ ವ್ಯಕ್ತಪಡಿಸುತ್ತಾರೆ.

ತಂಡದ ಎಲ್ಲರೂ ಬೇರೆ ಬೇರೆ ವೃತ್ತಿ. ಶೆಡ್ಯೂಲ್‌ಗೆ ತಕ್ಕಂತೆ ಅವರವರ ಮನೆಯಲ್ಲೇ ಅಭ್ಯಾಸ ನಡೆಸುತ್ತಾರೆ. ಇದಕ್ಕೆ ಮನೆಯವರ ಬೆಂಬಲವೂ ಸಾಕಷ್ಟಿದೆ. ‘ಅಮ್ಮ ನನ್ನ ಶೋಗಳಿಗೆ ಬರುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಸಾಗಬೇಕಾದ ದಾರಿ ಇನ್ನೂ ಇದೆ’ ಎನ್ನುತ್ತಾ ಕಾಮಿಡಿ ಕ್ಷೇತ್ರದಲ್ಲೇ ಭವಿಷ್ಯ ಕಂಡುಕೊಳ್ಳುವ ಹಂಬಲ ವ್ಯಕ್ತಪಡಿಸುತ್ತಾರೆ.

ಸಂಪರ್ಕಕ್ಕೆ: anupbmaiya@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.