ADVERTISEMENT

ಕರಿ ಹೊಗೆಯ ಕಿರಿಕಿರಿ

ಪ್ರವೀಣ ಕುಮಾರ್ ಪಿ.ವಿ.
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಕಸ ಸಂಗ್ರಹಿಸುವ ಗೂಡ್ಸ್‌ ಆಟೊವೊಂದು ಹೊಗೆ ಕಾರುತ್ತಿರುವ ಪರಿನೋಡಿ. ಇದು ಇಂದಿರಾನಗರದಲ್ಲಿ ಕಂಡುಬಂದ ದೃಶ್ಯ	ಚಿತ್ರ: ರಂಜು ಪಿ.
ಕಸ ಸಂಗ್ರಹಿಸುವ ಗೂಡ್ಸ್‌ ಆಟೊವೊಂದು ಹೊಗೆ ಕಾರುತ್ತಿರುವ ಪರಿನೋಡಿ. ಇದು ಇಂದಿರಾನಗರದಲ್ಲಿ ಕಂಡುಬಂದ ದೃಶ್ಯ ಚಿತ್ರ: ರಂಜು ಪಿ.   

ಮನೆ ಮನೆಯಿಂದ ಕಸ ಸಂಗ್ರಹಿಸಲು ಬರುವ ಗೂಡ್ಸ್‌ ರಿಕ್ಷಾಗಳನ್ನು ಗಮನಿಸಿ. ಪಳೆಯುಳಿಕೆಯಂತೆ  ಕಾಣುವ ಈ ವಾಹನ, ವಾರ್ಡಿನ ಓಣಿಗಳಲ್ಲಿ ಹಾದು ಬರುವಾಗ ಜನರಿಗೆ ಸೂಚನೆ ನೀಡಲು ಕರೆ ಗಂಟೆ (ಹಾರ್ನ್‌) ಬಳಸಬೇಕಾಗಿಯೇ ಇಲ್ಲ.  ಇದರ ಎಂಜಿನ್‌ನ ಭಾರಿ ಸದ್ದು ಕಿವಿಗೆ ಬೀಳುತ್ತಲೇ ಮನೆ ಮಂದಿ ಕಸದ ಬುಟ್ಟಿಯೊಂದಿಗೆ ಹೊರಗೆ ಬಂದು ನಿಲ್ಲುತ್ತಾರೆ.  ಕಸವನ್ನು ತುಂಬಿಕೊಂಡ ಬಳಿಕ ಈ ವಾಹನ ಭಾರಿ ಪ್ರಮಾಣದಲ್ಲಿ ಕಡು ಕಪ್ಪು ಹೊಗೆಯನ್ನು ಕಾರುತ್ತಾ,  ಮತ್ತೆ ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತ ಮುಂದಕ್ಕೆ ಸಾಗುತ್ತದೆ. ಕಸ ಕೊಟ್ಟ ಸಾರ್ವಜನಿಕರಿಗೆ ಕಪ್ಪು ಹೊಗೆಯ ಭಕ್ಷೀಸು.

ಕಸ ಸಾಗಿಸುವ ಈ ವಾಹನಕ್ಕೆ  ಮಾತ್ರ ಸ್ವಚ್ಛತೆಯ ಪಾಠ ಅನ್ವಯಿಸುವುದಿಲ್ಲ. ನಾವೆಲ್ಲ ಉಸಿರಾಡುವ ಗಾಳಿಯನ್ನು ಇದು ಮತ್ತಷ್ಟು ಕಲುಷಿತಗೊಳಿಸುತ್ತಿದೆ.

ಬಿಎಂಟಿಸಿಯ ಅನೇಕ ಬಸ್‌ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.  ಇವು  ಹೊಗೆ ಕಾರುವ ರೀತಿ ದಂಗು ಬಡಿಸುವಂತಿದೆ. ಇವುಗಳ   ಕೊಳವೆಯಿಂದ  ಹೊರಬರುವ ಹೊಗೆಯ ಪ್ರಮಾಣ ನೋಡಿದರೆ, ವಾಯುಮಾಲಿನ್ಯ ತಪಾಸಣೆಗೆ ಒಳಪಡಿಸಿರುವ ಬಗ್ಗೆ ಬಲವಾದ ಸಂದೇಹ ಮೂಡುತ್ತದೆ.

ADVERTISEMENT

ನಗರದಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇಲ್ಲೂ ಹೊಂಜು ದಟ್ಟೈಸುತ್ತಿದೆ.  ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಎಚ್ಚೆತ್ತ ಸರ್ಕಾರವೂ, ವಾಹನಗಳಿಂದಾಗಿ ಉಂಟಾಗುವ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು  ಹಾತೊರೆಯುತ್ತಿದೆ.   ಅಚ್ಚರಿಯೆಂದರೆ, ಸಾರ್ವಜನಿಕರಿಗೆ ಮೇಲ್ಪಂಕ್ತಿ ಹಾಕಿ ಕೊಡಬೇಕಾದ ಸರ್ಕಾರಿ ವಾಹನಗಳು, ಸರ್ಕಾರದ ಕೆಲಸಕ್ಕೆ ನಿಯೋಜಿತವಾದ ವಾಹನಗಳು, ಸರ್ಕಾರಿ ಸಾರಿಗೆ ಸಂಸ್ಥೆ ವಾಹನಗಳೇ ಮಾಲಿನ್ಯ ನಿಯಂತ್ರಣದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಮಾಲಿನ್ಯ ನಿಯಂತ್ರಣದ ಸಲುವಾಗಿ ರಚಿಸಲಾದ ಜಂಟಿ ಮೇಲ್ವಿಚಾರಣಾ ಸಮಿತಿ 2016ರ ಜೂನ್‌ ತಿಂಗಳಲ್ಲಿ  ಐದು ದಿನ ವಾಹನಗಳ ತಪಾಸಣೆ ನಡೆಸಿತ್ತು.  ಈ ಸಂದರ್ಭದಲ್ಲಿ    ಸರ್ಕಾರದ  ವಾಹನಗಳು ಹೊರಸೂಸುವ ಹೊಗೆಯ ಪ್ರಮಾಣ ಕಂಡು ಸಮಿತಿಯ ಸದಸ್ಯರೇ ಕಂಗಾಲಾಗಿದ್ದರು.  ಕೆಲವು ವಾಹನಗಳು ನಿಗದಿತ ಮಿತಿಗಿಂತ  ಶೇ 90ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಹೊಗೆ ಸೂಸುತ್ತಿರುವುದು ಪತ್ತೆಯಾಗಿತ್ತು. ಡೀಸೆಲ್‌  ವಾಹನಗಳ ಪೈಕಿ ಶೇಕಡಾ 71ರಷ್ಟು  ಹಾಗೂ ಪೆಟ್ರೋಲ್‌ ವಾಹನಗಳ ಪೈಕಿ ಶೇ 42ರಷ್ಟು, ಮಾಲಿನ್ಯ ನಿಯಂತ್ರಣ ಪರೀಕ್ಷೆಯಲ್ಲಿ  ಅನುತ್ತೀರ್ಣವಾಗಿದ್ದವು.

ಮನೆ ಮನೆಯಿಂದ ಕಸ ಸಂಗ್ರಹಿಸುವ ರಿಕ್ಷಾದ ಉದಾಹರಣೆಯನ್ನೇ ನೋಡೋಣ. ಈ ಕಾರ್ಯವನ್ನು  ಬಿಬಿಎಂಪಿ ಹೊರಗುತ್ತಿಗೆ ನೀಡಿದೆ. ಇದಕ್ಕೆ ಬಳಸುವ ವಾಹನದ ವ್ಯವಸ್ಥೆಯನ್ನು ಗುತ್ತಿಗೆದಾರರೇ ಮಾಡಿಕೊಳ್ಳಬೇಕು. ಒಂದಷ್ಟು ಹಣ ಉಳಿಸುವ ಸಲುವಾಗಿ ಅವರು ಹಳೆಯ ವಾಹನವನ್ನೇ ಹೆಚ್ಚಾಗಿ  ಬಳಸುತ್ತಾರೆ. ಕೆಲವು ವಾಹನಗಳಲ್ಲಿ ಡೀಸೆಲ್‌ಗೆ ಕಲಬೆರಕೆ ಮಾಡುವುದೂ ಉಂಟು. ಇದನ್ನು ಸ್ವತಃ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಕಸಸಾಗಣೆ ವಾಹನವನ್ನು ಯಾವ ಅಧಿಕಾರಿಯೂ ತಡೆದು ತಪಾಸಣೆ ಮಾಡುವುದಿಲ್ಲ. ಗುತ್ತಿಗೆದಾರರು ಈ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ.
‘ಕಸ ಸಾಗಿಸುವ ವಾಹನವನ್ನು ತಡೆದು ರಸ್ತೆಯಲ್ಲಿ ಹೆಚ್ಚು ಹೊತ್ತು ನಿಲ್ಲಿಸಿಕೊಳ್ಳಲು ಆಗದು. ತಪಾಸಣೆ ನಡೆಸಿದರೆ ಅದರಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯೇ ಆಗುತ್ತದೆ’ ಎನ್ನುತ್ತಾರೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರ ಕುಮಾರ್‌.

‘ವಾಹನಗಳನ್ನು ತಡೆದು ನಿಲ್ಲಿಸಿ ದಂಡ ವಿಧಿಸುವುದರಿಂದ ಹೊಗೆಯ ಪ್ರಮಾಣಕ್ಕೆ ಕಡಿವಾಣ ಹಾಕಬಹುದು ಎಂಬುದು ತಪ್ಪು ಕಲ್ಪನೆ. ಈ ವಾಹನಗಳು ಮಾಲಿನ್ಯ ನಿಯಂತ್ರಣಕ್ಕೆ ಬದ್ಧವಾಗಿರುವಂತೆ ನೋಡಿಕೊಳ್ಳುವ ಹೊಣೆ ಬಿಬಿಎಂಪಿ ಅಧಿಕಾರಿಗಳಿಗೂ ಇದೆ. ತೀರ ಹಳೆಯ ವಾಹನಗಳನ್ನು ಈ ಉದ್ದೇಶಕ್ಕೆ ಬಳಸದಂತೆ ಬಿಬಿಎಂಪಿ ನಿಗಾ ವಹಿಸಬೇಕು’ ಎಂದು ಅವರು ಹೇಳುತ್ತಾರೆ.

(ಲಕ್ಷ್ಮಣ)

ಕಸ ಸಾಗಣೆಗೆ ಹಳೆಯ ವಾಹನಗಳೇ ಹೆಚ್ಚಾಗಿ ಬಳಕೆಯಾಗುತ್ತಿರುವುದು ನಿಜ ಎಂಬುದನ್ನು  ಬಿಬಿಎಂಪಿ ಅಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ.
‘ಕಸ ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸಲು ನಾವು ಬಯಸಿದ್ದೇವೆ. ಇದಕ್ಕಾಗಿಯೇ 500 ಗೂಡ್ಸ್‌ ರಿಕ್ಷಾಗಳನ್ನು ಖರೀದಿಸಲಿದ್ದೇವೆ. ಆ ಬಳಿಕ ಸಮಸ್ಯೆ ಬಗೆಹರಿಯಲಿದೆ’ ಎನ್ನುವುದು  ಬಿಬಿಎಂಪಿ ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ  ಸರ್ಫರಾಜ್‌ ಖಾನ್‌ ಅವರ ವಿಶ್ವಾಸ. 

‘ಇನ್ನು ಮುಂದೆ ಕಸ ಸಂಗ್ರಹದ ಗುತ್ತಿಗೆ ನೀಡುವಾಗ  ಮೂರು ವರ್ಷಕ್ಕಿಂತ ಹಳೆಯ ವಾಹನ ಬಳಸಬಾರದು ಎಂಬ ಷರತ್ತು ವಿಧಿಸುತ್ತೇವೆ’ ಎಂದೂ ಅವರು ಹೇಳುತ್ತಾರೆ.

ಬಸ್‌ಗಳ ಮಾಲಿನ್ಯ ಪತ್ತೆಗೆ ಬಿಎಂಟಿಸಿ ಡಿಪೊಗಳಲ್ಲೇ ಹೊಗೆ ತಪಾಸಣಾ ಸಾಧನಗಳಿವೆ. ಬಸ್‌ಗಳು ಇಲ್ಲೇ ಮಾಲಿನ್ಯ ಪ್ರಮಾಣವನ್ನು ತಪಾಸಣೆ ಮಾಡಿಸಿಕೊಳ್ಳಬಹುದು. ಆದರೂ, ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸುವ ತಪಾಸಣೆ ವೇಳೆ ಕೆಲವು ಬಿಎಂಟಿಸಿ ಬಸ್‌ಗಳ ಮಾಲಿನ್ಯ ನಿಗದಿತ ಮಿತಿಗಿಂತ ಹೆಚ್ಚೇ ಇರುವುದು ಕಂಡು ಬಂದಿದೆ.

ಹೆಚ್ಚು ಹೊಗೆ ಉಗುಳುವ ಬಸ್‌ಗಳ  ಬಗ್ಗೆ ಮಾಹಿತಿ ನೀಡುವಂತೆ ವರ್ಷದ ಹಿಂದೆ ಬಿಎಂಟಿಸಿ  ಸಾರ್ವಜನಿಕ ಪ್ರಕಟಣೆ ನೀಡಿತ್ತು. ಸುಮಾರು 450 ಮಂದಿ ದೂರು ನೀಡಿದ್ದರು. ಈ ಪೈಕಿ 130  ದೂರು ನಿಜವಾಗಿತ್ತು. ಹೊಗೆ ಕಾರುವ ಬಸ್‌ಗಳನ್ನು ಪತ್ತೆ ಹಚ್ಚಲು  ನೆರವಾದವರಿಗೆ ಬಿಎಂಟಿಸಿ ತಲಾ ₹ 1 ಸಾವಿರ ಬಹುಮಾನವನ್ನೂ ನೀಡಿತ್ತು.

ಸರ್ಕಾರಿ ಕಾರ್ಯಕ್ಕೆ ಬಳಸುವ ವಾಹನಗಳಿಗೆ ಅಥವಾ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಹೊಗೆ ತಪಾಸಣೆಯಿಂದ ವಿನಾಯಿತಿ ಏನೂ ಇಲ್ಲ.  ಆದರೆ ಅಧಿಕಾರಿಗಳು ಕಾಳಜಿ ವಹಿಸದೇ ಇರುವುದರಿಂದ ಈ ಸಮಸ್ಯೆ ಮುಂದುವರಿಯುತ್ತಿದೆ.  ‘ನಾವು 25 ಸಾವಿರ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ಅದರಿಂದ ಲಭಿಸುವ ದತ್ತಾಂಶಗಳ ಆಧಾರದಲ್ಲಿ ಸಮಗ್ರ ವರದಿ ತಯಾರಿಸಲು ಸಿದ್ಧತೆ ನಡೆಸಿದ್ದೇವೆ.  ಇದುವರೆಗೆ 10 ಸಾವಿರ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಇದರಲ್ಲಿ ಸರ್ಕಾರಿ ಕೆಲಸಕ್ಕೆ ಬಳಕೆಯಾಗುವ ವಾಹನಗಳು ಎಷ್ಟು ಎಂಬ ನಿಖರ ವಿವರ ಲಭ್ಯ ಇಲ್ಲ. ಅಧ್ಯಯನ ಪೂರ್ಣಗೊಂಡ ಬಳಿಕ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ.

‘ಬಿಎಂಟಿಸಿ ಬಸ್‌ಗಳಿರಲಿ, ಸರ್ಕಾರಿ ಇಲಾಖೆಗಳಿಗೆ ಸೇರಿದ ವಾಹನಗಳಿರಲೀ ಅಥವಾ ಕಸ ಸಾಗಿಸುವ ವಾಹನಗಳೇ ಇರಲಿ. ಅವು ವಿಪರೀತ ಹೊಗೆ ಉಗುಳುತ್ತಿರುವುದು ಕಂಡು ಬಂದರೆ ಸಾರ್ವಜನಿಕರು  ಮಂಡಳಿಯ ಗಮನಕ್ಕೆ  ತರಬಹುದು. ಮಾಲಿನ್ಯ ನಿಯಂತ್ರಣ  ಮಾನದಂಡವನ್ನು ಪಾಲಿಸದ   ವಾಹನಗಳನ್ನು ಬಳಸದಂತೆ ಸಂಬಂಧ ಪಟ್ಟ ಅಧಿಕಾರಿಗೆ ಪತ್ರ ಬರೆಯುತ್ತೇವೆ’ ಎಂದು ಅವರು ಹೇಳುತ್ತಾರೆ.

**

ಜನರ ನಿಷ್ಕಾಳಜಿ
ಒಂದು ವರ್ಷ ಮೀರಿದ ಎಲ್ಲ ವಾಹನಗಳು ವರ್ಷಕ್ಕೆ ಎರಡು ಬಾರಿಯಾದರೂ ಹೊಗೆ ಉಗುಳುವಿಕೆಯ ತಪಾಸಣೆಗೆ ಒಳಪಡಬೇಕು. ವಾಯು ಮಾಲಿನ್ಯ ನಿಯಂತ್ರಣ ದೃಢೀಕರಣ ಪತ್ರವನ್ನು ಹೊಂದಬೇಕು ಎಂಬುದು ನಿಯಮ. ಆದರೆ ಬಹುತೇಕ  ವಾಹನಗಳ ಮಾಲೀಕರು ಇದನ್ನು ಪಾಲಿಸುತ್ತಿಲ್ಲ. ಶೇಕಡಾ 15ರಿಂದ 20ರಷ್ಟು  ವಾಹನಗಳು ಮಾತ್ರ ವಾಯುಮಾಲಿನ್ಯ ನಿಯಂತ್ರಣ ದೃಢೀಕರಣ ಪತ್ರ ಹೊಂದಿವೆ ಎನ್ನುತ್ತಾರೆ ಬೆಂಗಳೂರು ನಗರ ಸಂಚಾರ ಪೊಲೀಸ್‌ ಇಲಾಖೆ ಅಧಿಕಾರಿಗಳು.

**

ನಾವು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಸೂಸುವ ಬಸ್‌ಗಳನ್ನು ರಸ್ತೆಗೆ ಇಳಿಸುವುದಿಲ್ಲ. ಪ್ರತಿ ವಾಹನವನ್ನು ತಿಂಗಳಿಗೆ ಒಂದು ಬಾರಿಯಾದರೂ ಮಾಲಿನ್ಯ ನಿಯಂತ್ರಣದ ತಪಾಸಣೆಗೆ ಒಳಪಡಿಸುತ್ತೇವೆ.


–ಏಕರೂಪ್‌ ಕೌರ್‌,
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.