ADVERTISEMENT

ಕೆಂಡಲ್‌ ಜೆನ್ನರ್‌ ಸೌಂದರ್ಯ ಸೂತ್ರ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 30 ಮೇ 2016, 19:30 IST
Last Updated 30 ಮೇ 2016, 19:30 IST
ಕೆಂಡಲ್‌ ಜೆನ್ನರ್‌ ಸೌಂದರ್ಯ ಸೂತ್ರ
ಕೆಂಡಲ್‌ ಜೆನ್ನರ್‌ ಸೌಂದರ್ಯ ಸೂತ್ರ   

ಜನಪ್ರಿಯ ರೂಪದರ್ಶಿ ಕೆಂಡಲ್‌ ಜೆನ್ನರ್‌ ಅವರಿಗೆ ಸಹಜ ಸೌಂದರ್ಯದಲ್ಲಿಯೇ ತಮ್ಮನ್ನು ತೋರ್ಪಡಿಸಿಕೊಳ್ಳುವುದೆಂದರೆ ಹೆಚ್ಚು ಇಷ್ಟ. ಇತ್ತೀಚೆಗೆ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸೌಂದರ್ಯ ಮೀಮಾಂಸೆಯ ಕುರಿತು ಮಾತನಾಡಿದ್ದಾರೆ.

‘ಕಡಿಮೆ ಅಲಂಕಾರವೇ ಹೆಚ್ಚಿನ ಸೌಂದರ್ಯ ಅಭಿವ್ಯಕ್ತಿಸಬಲ್ಲದು ಎಂಬ ಮಾತನ್ನು ನಂಬುತ್ತೇನೆ. ಅದು ನಮ್ಮ ಸಹಜ ಸೌಂದರ್ಯವನ್ನು ತೋರಿಸುತ್ತದೆ. ನನಗೆ ತೆಳುವಾಗಿ ಐ ಲೌನರ್‌ ಅನ್ನು ಹಚ್ಚಿಕೊಳ್ಳುವುದು ಇಷ್ಟ. ಅದನ್ನು ಎಷ್ಟು ಉಪಯೋಗಿಸಬೇಕು ಎಂಬ ಪ್ರಜ್ಞೆಯೂ ನನಗಿದೆ’ ಎಂದು ಅವರು ಹೇಳಿದ್ದಾರೆ. ಹಾಗೆಂದು ಮೆಕಪ್‌ ವರ್ಜ್ಯ ಎಂಬುದು ಅವರ ಅಭಿಪ್ರಾಯವಲ್ಲ.

‘ಇದು ನನ್ನ ದೇಹದ ಬಗ್ಗೆ, ಸೌಂದರ್ಯದ ಬಗ್ಗೆ ನಾನು ತಳೆದಿರುವ ನಿಲುವು. ಅದು ಎಲ್ಲರಿಗೂ ಅನ್ವಯಿಸಬೇಕಿಲ್ಲ’ ಎಂಬ ಎಚ್ಚರವೂ ಅವರಿಗಿದೆ. ಸೌಂದರ್ಯದ ಕುರಿತು ಸಹಜತೆಯನ್ನೇ ನೆಚ್ಚಿರುವ ಕೆಂಡಲ್‌ ಫಿಟ್‌ನೆಸ್‌ ವಿಷಯಕ್ಕೆ ಬಂದರೆ ಮಾತ್ರ ತುಂಬಾ ಕಟ್ಟುನಿಟ್ಟು.

‘ಬಹುಶಃ, ನಾನು ವ್ಯಾಯಾಮದ ವಿಷಯದಲ್ಲಿ ಅಷ್ಟೊಂದು ಕಟ್ಟುನಿಟ್ಟು ನಿಯಮಗಳನ್ನು ಪಾಲಿಸದಿದ್ದರೂ ಹೀಗೆಯೇ ಕಾಣುತ್ತೇನೆ. ಆದರೆ ಅದು ನನಗೆ ಇಷ್ಟವಿಲ್ಲ. ನಾನು ವರ್ಕ್‌ಔಟ್ ವಿಚಾರದಲ್ಲಿ ಯಾವಾಗಲೂ ಕ್ರಿಯಾಶೀಲಳಾಗಿರುತ್ತೇನೆ. ನನ್ನ ಮಾನಸಿಕ ನೆಮ್ಮದಿಗೂ ವರ್ಕ್‌ಔಟ್‌ ಅನಿವಾರ್ಯವಾಗಿದೆ’ ಎಂದು ಅವರು ತಮ್ಮ ವ್ಯಾಯಾಮ ಬದ್ಧತೆಯನ್ನು ಸಾರಿ ಹೇಳಿದ್ದಾರೆ.

‘ನಾನು ಹೊಟ್ಟೆಯನ್ನು ತೋರಿಸುವಂತಹ ಹಲವು ಫೋಟೊ ಶೂಟ್‌ಗಳಲ್ಲಿ ಪಾಲ್ಗೊಳ್ಳುತ್ತೇನೆ. ಇಂಥ ಸಮಯದಲ್ಲಿ ನಮ್ಮ ದೇಹದ ಬಗ್ಗೆ ನಂಬಿಕೆ ಇದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ’ ಎನ್ನುವ ಕೆಂಡಲ್‌ ಅವರು ಆಹಾರ ಪದ್ಧತಿಯ ಕುರಿತೂ ಸಾಕಷ್ಟು ಕಾಳಜಿ ವಹಿಸುತ್ತಾರೆ.

‘ನನ್ನ ಫಿಟ್‌ನೆಸ್‌ನಲ್ಲಿ ಆರೋಗ್ಯಕರ ಆಹಾರ ಸೇವನೆಯ ಪಾಲು ದೊಡ್ಡದು. ಹಸಿದ ಹೊಟ್ಟೆಯಲ್ಲಿ ವರ್ಕ್‌ಔಟ್‌ಗಿಳಿದಾಗೆಲ್ಲ ಆಹಾರದ ಅವಶ್ಯಕತೆ ನನಗೆ ಮನದಟ್ಟಾಗುತ್ತದೆ’ ಎನ್ನುವ ಅವರಿಗೆ ಪಾಸ್ತಾ ಎಂದರೆ ಅಚ್ಚುಮೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.