ADVERTISEMENT

ಕೊಡಗಿನ ಕಾವೇರಿ ಮಂಜಿನ ಮಡಿಕೇರಿ...

ಗಣೇಶ ವೈದ್ಯ
Published 5 ಸೆಪ್ಟೆಂಬರ್ 2014, 19:30 IST
Last Updated 5 ಸೆಪ್ಟೆಂಬರ್ 2014, 19:30 IST

ರಸ್ತೆ, ಬೆಟ್ಟ ಗುಡ್ಡಗಳನ್ನೆಲ್ಲ ಮಡಿಲಲ್ಲಿಟ್ಟುಕೊಂಡು ಹರಿದಾಡುತ್ತಿತ್ತು ಮಂಜು. ಅದಕ್ಕೆ ಸಾಥ್ ನೀಡುವಂತೆ ಬಿಡದೆ ಸುರಿವ ತುಂತುರು. ಕೂರ್ಗ್ ಪ್ರವೇಶಿಸುತ್ತಿದ್ದಂತೆ ಆಳೆತ್ತರದ ಕಾಫಿ ಗಿಡಗಳು, ಪೊದೆ ಪೊದೆಯಾಗಿ ಮರಕ್ಕೆ ಹಬ್ಬಿದ ಮೆಣಸಿನ ಬಳ್ಳಿಗಳು ಸ್ವಾಗತ ಕೋರುವಂತೆ ತಲೆಯಾಡಿಸುತ್ತಿದ್ದವು. ಬೆಳಗಿನ ಜಾವ 7 ಗಂಟೆ. ಚುಮುಚುಮು ಚಳಿ. ಸ್ವಲ್ಪ ಬೆಚ್ಚಗಾಗಲು ಕೂರ್ಗ್‌ ಸ್ಪೆಷಲ್ ಕಾಫಿ ಕುಡಿದು ಪ್ರಯಾಣ ಮುಂದುವರಿಸಿ ಮಡಿಕೇರಿ ಸಮೀಪಿಸಿದಾಗ ಮನಸಿಗೆ ಆಹ್ಲಾದವೆನಿಸಿತ್ತು.

ರಾತ್ರಿ 2 ಗಂಟೆಗೇ ಬೆಂಗಳೂರಿನಿಂದ ಶುರುವಾದ ನಮ್ಮ ಪಯಣ ಮೊದಲು ಸಾಗಿದ್ದು 340 ಕಿ.ಮೀ ದೂರದ ಕೊಡಗಿನ ಭಾಗಮಂಡಲದತ್ತ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲ ತೊಳೆದುಹೋಗುತ್ತವೆ ಎಂಬ ಪ್ರತೀತಿಯಿದೆ. ಅಲ್ಲಿ ಪಾಪ ಕಳೆದು ಮುಂದೆ ಸಾಗಿದರೆ 8 ಕಿ.ಮೀ ದೂರದಲ್ಲಿ ಕಾವೇರಿ ಉಗಮ ಸ್ಥಾನ. ತಲಕಾವೇರಿ ತೀರ್ಥ ಸ್ನಾನ ಮಾಡಿ ಪುಣ್ಯವನ್ನೂ ಸಂಪಾದಿಸಿದೆವು. ಇದು ಭಗಂಡೇಶ್ವರ ಸ್ವಾಮಿಯ ಸನ್ನಿಧಿಯೂ ಹೌದು.

ದೇವಾಲಯದ ಎಡ ಮಗ್ಗುಲಿಗಿರುವ ಕಲ್ಲು ಮೆಟ್ಟಿಲುಗಳನ್ನೇರಿ ಏದುಸಿರು ಬಿಡುತ್ತ ಬ್ರಹ್ಮಗಿರಿ ಗುಡ್ಡದ ತುದಿ ತಲುಪಿದರೆ ಭಾಗಮಂಡಲದ ದರ್ಶನ ಸಿಗುತ್ತದೆ. ಹೀಗೆ ದರ್ಶನ ಪಡೆಯಲು ದೇವರ ಆಶೀರ್ವಾದಕ್ಕಿಂತ ಮಂಜಿನ ಕೃಪೆ ಮುಖ್ಯ. ಜೋರಾಗಿ ಗಾಳಿ ಬೀಸಿದಾಗ ಮಾತ್ರ ಒಂದು ಕ್ಷಣ ಮಂಜು ಸರಿದು ಮತ್ತೆ ಆವರಿಸಿಬಿಟ್ಟಿತ್ತು.

ಅಬ್ಬಿಯ ಅಬ್ಬರ ಕಣ್ಣಿಗೆ ಹಬ್ಬ
ಭಾಗಮಂಡಲದಿಂದ 42 ಕಿ.ಮೀ. ಸಾಗಿದ ನಮಗೆ ಸಿಕ್ಕಿದ್ದು ಅಬ್ಬಿ ಫಾಲ್ಸ್‌. ವಿಶಾಲ ಬಂಡೆಯ ಮೇಲಿನಿಂದ ಭೋರೆಂದು ಹಾಲ್ನೊರೆಯಂತೆ ಇಳಿಯುವ ಅಬ್ಬಿ ನೀರಿನ ವೈಭವ ಕಣ್ಣಿಗೆ ಹಬ್ಬವೇ ಸೈ. ಮಳೆ ಇರಲಿ ಇಲ್ಲದಿರಲಿ, ಫಾಲ್ಸ್‌ ಎದುರಿನ ತೂಗು ಸೇತುವೆ ಮೇಲೆ ನಿಂತವರು ತೊಯ್ದು ತೊಪ್ಪೆಯಗುವುದು ಕಡ್ಡಾಯ.

ಜಿಗಣೆ ಕಾಟ ಸಹಿಸಿಕೊಂಡು ಪಾರ್ಕಿಂಗ್ ಸ್ಥಳದಿಂದ ಸ್ವಲ್ಪ ದೂರ ನಡೆದರೆ ಅಬ್ಬಿ ಎದುರಾಗುತ್ತದೆ. ಚಳಿಗೆ ಔಷಧಯೆಂಬಂತೆ ಬಿಸಿ ಬಿಸಿಯಾದ ಈರುಳ್ಳಿ ಬಜ್ಜಿ, ಬಟಾಟೆ ಬೋಂಡಾ ನಮ್ಮ ಟಾನಿಕ್ ಆಗಿತ್ತು.

ರಾಜಾಸೀಟ್‌ನ ನೋಟ
ಅಬ್ಬಿಯಿಂದ 9 ಕಿ.ಮೀ ದೂರದಲ್ಲಿರುವ ಮತ್ತೊಂದು ಪ್ರೇಕ್ಷಣೀಯ ಸ್ಥಳ ರಾಜಾಸೀಟ್. ಈ ಉದ್ಯಾನದ ಬಣ್ಣ ಬಣ್ಣದ ಹೂಗಳು ಮಡಿಕೇರಿಯ ತಾಜಾತನಕ್ಕೆ ಸಾಕ್ಷಿಯಂತಿದೆ. ವಿಶಾಲವಾದ ವೀಕ್ಷಣಾ ಸ್ಥಳದಲ್ಲಿ ನಿಂತು ಮಂಜಿನ ಆಟದ ಮಧ್ಯೆಯೇ ಗದ್ದೆ, ಕಾಫಿ ತೋಟಗಳನ್ನು ಕಣ್ತುಂಬಿಕೊಳ್ಳಬಹುದು.

ಮುಂದಿನ ದಾರಿ ದುಬಾರೆ
ದುಬಾರೆ ಆನೆ ಶಿಬಿರಕ್ಕೆ ರಾಜಾಸೀಟ್‌ನಿಂದ 40 ಕಿ.ಮೀ. ದೂರ. ಆನೆಗಳನ್ನು ಪಳಗಿಸುವ ಈ ತಾಣ ಮೋಜು ಮಸ್ತಿಗೆ ಎಲ್ಲೆಯಿಲ್ಲದ ಅವಕಾಶ ತೆರೆದಿಡುತ್ತದೆ. ಮೈದುಂಬಿ ಹರಿವ ಕಾವೇರಿಯ ಒಂದು ದಂಡೆಗೆ ‘ವಾಹನ ನಿಲುಗಡೆ’. ಅಲ್ಲಿಂದ ಮೋಟಾರ್ ಬೋಟ್‌ ಏರಿ ನದಿಯ ಮತ್ತೊಂದು ಪಕ್ಕಕ್ಕೆ ಹೋದರೆ ಅಲ್ಲಿದೆ ಮದ್ದಾನೆಗಳನ್ನು ಪಳಗಿಸುವ ಜಾಗ.

ಬೆಳಗಿನ ಅವಧಿಯಲ್ಲಾದರೆ ಆನೆಗಳಿಗೆ ನಾವೇ ಮೇವು ಉಣಿಸಬಹುದು. ರೋಚಕತೆ ಬಯಸುವವರಾದರೆ ಆನೆಗಳ ಮೇಲೆ ಜಾಲಿ ರೈಡ್ ಮಾಡಲೂಬಹುದು. ಬೆಳಿಗ್ಗೆ 8.30ರಿಂದ ೧೨ರವರೆಗೆ ಮಾತ್ರ ಈ ಸೌಲಭ್ಯ ಲಭ್ಯ. ಅದು ಬಿಟ್ಟರೆ ಮಧ್ಯಾಹ್ನ 4.30ರಿಂದ 5.30ರವರೆಗೆ ಆನೆಗಳನ್ನು ನೋಡಿ ಖುಷಿ ಪಡಬಹುದಷ್ಟೆ. ಸವಾರಿಗೆ ಆಸ್ಪದವಿಲ್ಲ. ಕಾವೇರಿಯಲ್ಲಿ ರ್‍್ಯಾಫ್ಟಿಂಗ್‌ನಂತಹ ಮೋಜಿನಾಟಕ್ಕೆ ಅನುವು ಮಾಡಿಕೊಡಲಾಗಿದೆ. ಗಾಳಿ ತುಂಬಿದ ದೋಣಿಯಲ್ಲಿ ಒಬ್ಬ ವ್ಯಕ್ತಿ 7 ಕಿಲೋ ಮೀಟರ್‌ನ ಸಂಚಾರಕ್ಕೆ ₨ 500.

ನಿಸರ್ಗಧಾಮದ ಸೌಂದರ್ಯ
ದುಬಾರೆಯಿಂದ 15 ಕಿ.ಮೀ. ಬಂದರೆ ಸಿಗುವ ಪ್ರಕೃತಿ ಸೌಂದರ್ಯ ತಾಣವೇ ಕಾವೇರಿ ನಿಸರ್ಗಧಾಮ. ಹೆದ್ದಾರಿ ಪಕ್ಕದಲ್ಲೇ ವಿಶಾಲವಾಗಿ ಹರಡಿಕೊಂಡಿರುವ ಕಾಡನ್ನು ಅಭಿವೃದ್ಧಿಪಡಿಸಿ ಚಂದಗಾಣಿಸಲಾಗಿದೆ. ನಿಸರ್ಗಧಾಮದ ಹೆಬ್ಬಾಗಿಲು ಹೊಕ್ಕುತ್ತಿದ್ದಂತೆಯೇ ಸುಸಜ್ಜಿತ ನಗರಿಯಂತೆ ಕಾಣುವ ಪೇಟೆ ತೆರೆದುಕೊಳ್ಳುತ್ತದೆ. ಕೊಡಗಿನ ವಿಶೇಷ ಉಡುಗೆ, ಆಹಾರ, ಪೇಯ, ಜೇನುತುಪ್ಪ, ಹೋಮ್ ಮೇಡ್ ಚಾಕಲೇಟ್‌, ವೈನ್‌ಗಳು ಇಲ್ಲಿನ ವಿಶೇಷಗಳು.

ಪೇಟೆಯ ಹಿಂಬದಿಗೆ ಹರಿವ ಕಾವೇರಿ ತಟದಲ್ಲಿ ಕಾಡು. ತೂಗು ಸೇತುವೆಯನ್ನು ದಾಟಿ ಮುಂದೆ ಸಾಗಿದರೆ ಪುಟು ಪುಟು ಪುಟಿಯುವ ಮೊಲಗಳು. ತಮ್ಮನ್ನು ನೋಡಲೆಂದು ಬಂದವರಿಗೆ ಆತಿಥ್ಯ ನೀಡುವಂತೆ ನಮ್ಮನ್ನು ಎದುರುಗೊಂಡವು. ಹಾಗೆಯೇ ದಟ್ಟ ಕಾನನದೊಳಗೆ ಮುನ್ನಡೆದರೆ ಜಿಂಕೆ ಪಾರ್ಕ್. 15–20 ಜಿಂಕೆಗಳ ಸಂಸಾರ ಅದು. ನಾವು ನೀಡುವ ಸೌತೆಕಾಯಿ ಸಿಪ್ಪೆ ತಿನ್ನುತ್ತ, ಹೇಗಿದ್ದೀರಿ ಎನ್ನುವಂತೆ ಕೊಂಬುಗಳನ್ನು ಅಲ್ಲಾಡಿಸಿ ಬೀಳ್ಕೊಡುತ್ತವೆ. ಕೇಬಲ್ ಮೇಲೆ ಜಾರುವ ಸಾಹಸ ಕ್ರೀಡೆಯೂ ಇಲ್ಲಿದೆ.

ಶಾಂತಿ ಧಾಮ ಗೋಲ್ಡನ್ ಟೆಂಪಲ್
ಕೊನೆಯದಾಗಿ ಕುಶಾಲನಗರದ ಸಮೀಪವಿರುವ ಬೌದ್ಧ ಮಂದಿರದ ಭೇಟಿ ನಮ್ಮ ಪ್ರವಾಸದ ಪ್ರಯಾಸವನ್ನು ತುಸು ತಣಿಸಿತು. ವಿಶಾಲವಾದ ಕ್ಯಾಂಪಸ್, ಶಾಂತ ವಾತಾವರಣ, ಪ್ರಾರ್ಥನಾ ಮಂದಿರ, ನಗು ಮೊಗದಿಂದ ಸುತ್ತಾಡುವ ಕೆಂಪು ವಸ್ತ್ರಧಾರಿ ಬೌದ್ಧ ಸನ್ಯಾಸಿಗಳು. ಚಿನ್ನದ ಬಣ್ಣವನ್ನು ಮೈವೆತ್ತಿರುವ ದೇವಾಲಯದ ಗೋಡೆ ಮೇಲಿನ ಬಣ್ಣದ ಚಿತ್ತಾರ, ಬೃಹತ್ ಪಾಕ ಶಾಲೆ ಎಲ್ಲವೂ ಕಣ್ಮನ ಸೆಳೆಯುತ್ತವೆ.

ವಿಶೇಷವೆಂದರೆ ಇಷ್ಟೆಲ್ಲ ಸುತ್ತಾಡಿದ್ದು ಒಂದೇ ದಿನದಲ್ಲಿ. 24 ಗಂಟೆಗಳಲ್ಲಿ 800 ಕಿ.ಮೀ.ಗಳಷ್ಟು ಸುತ್ತಾಟದ ಸುಸ್ತು ಮೈಯನ್ನೆಲ್ಲ ಆವರಿಸಿತ್ತು. ಏನೇ ಆದರೂ ಸಮಾನ ಮನಸ್ಕರೊಟ್ಟಿಗೆ ಕಳೆದ ಆ ಕ್ಷಣದ ನೆನಪುಗಳು ಮಾತ್ರ ಮೈದುಂಬಿ ಹರಿವ ಅಬ್ಬಿಯಂತೆಯೇ.

ನಗರದ ಸುತ್ತ ಪಿಕ್‌ನಿಕ್‌ ಹೋಗಬಲ್ಲ ತಾಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ ಹೋಗಿ, ಸಂತಸದ ಕ್ಷಣಗಳನ್ನು ಮೊಗೆದುಕೊಂಡು ಬರಬಹುದಾದ ಕೆಲವು ತಾಣಗಳು ಅಪ್‌ಡೇಟ್‌ ಆಗಿವೆ. ತಲೆಎತ್ತಿರುವ ಹೊಸ ಪಿಕ್‌ನಿಕ್‌ ಸ್ಪಾಟ್‌ಗಳೂ ಉಂಟು. ವಾರಾಂತ್ಯದ ಓದಿಗೆ ಪ್ರತಿ ಶನಿವಾರದ ಸಂಚಿಕೆಯಲ್ಲಿ ಒಂದು ‘ಸುತ್ತಾಣ’ ಪ್ರಕಟವಾಗಲಿದೆ. ಓದುಗರೂ ಉತ್ತಮ ಗುಣಮಟ್ಟದ ಚಿತ್ರಗಳ ಸಹಿತ 500 ಪದಗಳಿಗೆ ಮೀರದಂತೆ ತಾಣಗಳ ಪರಿಚಯ ಮಾಡಿಕೊಡಬಹುದು. ಬರಹ, ನುಡಿ ಅಥವಾ ಯೂನಿಕೋಡ್‌ನಲ್ಲಿ ಬರೆದು metropv@prajavani.co.in ಇ–ಮೇಲ್‌ಗೆ ಕಳುಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT