ADVERTISEMENT

‘ಜಿಲೇಬಿ’ಗೆ ಪೂಜಾಗಾಂಧಿ ಮೆರುಗು

ಸಿನಿ ಲೋಕ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
‘ಜಿಲೇಬಿ’ಗೆ ಪೂಜಾಗಾಂಧಿ ಮೆರುಗು
‘ಜಿಲೇಬಿ’ಗೆ ಪೂಜಾಗಾಂಧಿ ಮೆರುಗು   

ಚಿತ್ರದ ಟ್ರೇಲರ್‌ ಮತ್ತು ಮೇಕಿಂಗ್ ವಿಡಿಯೊ ತೋರಿಸುವಾಗಲೇ ಒಂದೆರಡು ಶಿಳ್ಳೆ ಬಿದ್ದವು. ಇಷ್ಟು ಬೇಗ ಮುಗಿಯಿತಾ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾಗಲೇ ಕತ್ತಲು ತುಂಬಿದ ಸಭಾಂಗಣವನ್ನು ಬೆಳಕು ಆವರಿಸಿಕೊಂಡಿತು. ತಕ್ಷಣ ತಮ್ಮ ಚಿತ್ರತಂಡದೊಂದಿಗೆ ವೇದಿಕೆ ಏರಿದ ನಿರ್ದೇಶಕ ಲಕ್ಕಿ ಶಂಕರ್, ತಮ್ಮ ಸಿನಿಮಾ ‘ಜಿಲೇಬಿ’ ಬಗ್ಗೆ ಮಾಹಿತಿ ನೀಡಲು ಮೈಕ್ ಹಿಡಿದರು.

‘ಈಗಾಗಲೇ ಪೂರ್ಣಗೊಂಡಿರುವ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದೆ. ಮೂವರು ಬ್ರಹ್ಮಚಾರಿ ಹುಡುಗರು ಹಾಗೂ ಯುವತಿಯೊಬ್ಬಳ ಮಧ್ಯೆ 48 ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದೆ. ಚಿತ್ರದ ಶೀರ್ಷಿಕೆಗೆ ಅಡಿಬರಹದಂತೆ ಸಿನಿಮಾ ಕೂಡ ಹಾಟ್ ಅಂಡ್ ಸ್ವೀಟ್ ಆಗಿದೆ’ ಎಂದರು ಶಂಕರ್‌.

‘ಬಡತನದಲ್ಲಿ ಬೆಂದು ಬಂದ ಹುಡುಗಿಯೊಬ್ಬಳು ಸಮಾಜವನ್ನು ಎದುರಿಸಿ ಹೇಗೆ ಧೈರ್ಯವಾಗಿ ಬದುಕುತ್ತಾಳೆ ಎಂಬುದು ಜಿಲೇಬಿಯೊಳಗೆ ಅಡಕವಾಗಿದೆ. ಕಥೆಯಲ್ಲಿ ಹಾಸ್ಯದಷ್ಟೆ ಥ್ರಿಲ್ಲಿಂಗ್ ಇದೆ’ ಎಂದು ಚಿತ್ರದ ಎಳೆಗಳನ್ನು ಬಿಚ್ಚಿಟ್ಟರು.

‘ಮನರಂಜನೆ ಲೇಪ ಇರುವ ವೈಬ್ರಂಟ್ ಪಾತ್ರವನ್ನು ಮೊದಲ ಸಲ ಮಾಡಿದ್ದೇನೆ. ಇಲ್ಲಿನ ಸಂಭಾಷಣೆಗಳು ಅತಿರೇಕವಾಗಿರದೆ, ಮಾಮೂಲಾಗಿ ನಡೆಯುವ ಮಾತುಕತೆಯಂತಿವೆ. ಅದಕ್ಕಾಗಿಯೇ ಕಥೆ ಕೇಳಿದ ತಕ್ಷಣ ನಟಿಸಲು ಒಪ್ಪಿದೆ’ ಎಂದರು ಪೂಜಾ.

ಚಿತ್ರದಲ್ಲಿ ಬ್ರಹ್ಮಚಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಯಶಸ್ ಸೂರ್ಯ, ವಿಜಯ್ ಚೆಂಡೂರು ಹಾಗೂ ನಾಗೇಂದ್ರ ತಮ್ಮ ಪಾತ್ರಗಳನ್ನು ಪರಿಚಯಿಸಿಕೊಂಡರು. ‘ಜಿಲೇಬಿ ತಿಂದಾಗ ಆಗುವ ಖುಷಿ ಈ ಚಿತ್ರ ನೋಡುವ ಪ್ರೇಕ್ಷಕನಿಗೂ ಸಿಗುತ್ತದೆ’ ಎಂದು ಸಿನಿಮಾವನ್ನು ಬಣ್ಣಿಸಿದ ಮೂವರೂ, ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

ಚಿತ್ರದಲ್ಲಿರುವ ಮೂರು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಜೇಮ್ಸ್, ‘ಈ ಸಿನಿಮಾದಲ್ಲಿ ಹಾಡುಗಳು ಹೇಗೆ ಬಂದು ಹೋಗುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಹಾಡುಗಳು ಬಾಲಿವುಡ್ ಶೈಲಿಯಲ್ಲಿವೆ’ ಎಂದು ಗಮನ ಸೆಳೆದರು. ಎಂ.ಆರ್. ಸೀನು ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.