ADVERTISEMENT

‘ಜೀವ ಸೇವೆಯೇ ದೇಶ ಸೇವೆ’

ಕಾವ್ಯ ಸಮತಳ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಊಟ ಬಡಿಸುವುದರಲ್ಲಿ ನಿರತರಾಗಿರುವ ಸ್ವಯಂಸೇವಕರು
ಊಟ ಬಡಿಸುವುದರಲ್ಲಿ ನಿರತರಾಗಿರುವ ಸ್ವಯಂಸೇವಕರು   

‘ಜೀವ ಸೇವೆಯೇ ದೇಶ ಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿರುವ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಜೀವನೋತ್ಸಾಹ ತುಂಬುವುದರ ಮೂಲಕ ಅವರೊಟ್ಟಿಗೆ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆ ‘ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನ’.

2014ರ ಡಿಸೆಂಬರ್‌ನಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಸ್ವಾತ್ಮಾರಾಮಾನಂದರ ನಾಯಕತ್ವದಲ್ಲಿ ಆರಂಭವಾದ ಪ್ರತಿಷ್ಠಾನವು ಪ್ರತಿ ತಿಂಗಳ ಮೊದಲ ಭಾನುವಾರ ಕಿದ್ವಾಯಿ ಆಸ್ಪತ್ರೆಯಲ್ಲಿ ಸತ್ಸಂಗ, ಭಜನೆ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ವಿವಿಧ ಕ್ಷೇತ್ರಗಳ ಸಾಧಕರು, ಕ್ಯಾನ್ಸರ್‌ ಪೀಡಿತರಿಗೆ ಧೈರ್ಯ ನೀಡುವಂತಹ ಮಾತುಗಳನ್ನಾಡುತ್ತಾ ಅವರೊಂದಿಗೆ ಕಾಲ ಕಳೆಯುತ್ತಾರೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಮಹಿಳೆಯರು, ನಿವೃತ್ತರು ಸ್ವಯಂ ಸೇವಕರೂ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.

ADVERTISEMENT

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಕೃಷ್ಣ, ರುಕ್ಮಿಣಿಯಂತೆ ಅಲಂಕಾರ ಮಾಡಿ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿಕೊಂಡು ಬಂದಿದೆ. ಆಸ್ಪತ್ರೆಯಲ್ಲಿರುವ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವ ಪಾಲಕರಿಗೆ ಆರ್ಥಿಕವಾಗಿ ನೆರವಾಗುವಂತೆ, ಔದ್ಯೋಗಿಕ ತರಬೇತಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದ್ದು, ಟೈಲರಿಂಗ್‌, ದಾರದ ಉಂಡೆ ತಯಾರಿ, ಪ್ಲಾಸ್ಟಿಕ್‌ ಬುಟ್ಟಿ ಹೆಣೆಯುವುದು, ಪೇಪರ್‌ ಕವರ್‌ ತಯಾರಿಕೆ ಹೀಗೆ ಸ್ವ ಉದ್ಯೋಗದ ತರಬೇತಿ ನೀಡುತ್ತಿದೆ.

ಪ್ಲಾಸ್ಟಿಕ್‌ ಬುಟ್ಟಿ ಹೆಣೆಯುವುದರಲ್ಲಿ ತೊಡಗಿರುವ ಮಹಿಳೆಯರು

ಚಿಕಿತ್ಸಾ ಅವಧಿ ಮುಗಿದ ನಂತರ, ರೋಗಿಗಳು ಸಂಜೆ 4ರಿಂದ 5.30 ಗಂಟೆಯವರೆಗೆ ಅರೆಕಾಲಿಕ ಉದ್ಯೋಗ ಮಾಡುತ್ತಾರೆ. ಇಲ್ಲಿ ಕೆಲಸ ಮಾಡುವವರಿಗೆ ಊಟದ ವ್ಯವಸ್ಥೆ ಹಾಗೂ ವಾರಕ್ಕೆ ₹ 200 ಗೌರವಧನ ನೀಡಲಾಗುತ್ತದೆ.

ಇಲ್ಲಿ ತಯಾರಿಸಿದ ಬುಟ್ಟಿ, ಪೇಪರ್‌ ಕವರ್‌ಗಳನ್ನು ವಿವಿಧ ಸ್ವಯಂ ಸೇವಕರು ಖರೀದಿಸುವುದರ ಮೂಲಕ ಬೆಂಬಲಿಸುತ್ತಿದ್ದಾರೆ.

ಪ್ರತಿ ತಿಂಗಳು ಸುಮಾರು 50 ಸ್ವಯಂ ಸೇವಕರು ಈ ಸೇವಾ ಕಾರ್ಯದಲ್ಲಿ ಭಾಗವಹಿಸುತ್ತಾರೆ. ವಿವಿಧ ಕಾಲೇಜು ವಿದ್ಯಾರ್ಥಿಗಳು ಕೂಡ ಸ್ವ ಇಚ್ಛೆಯಿಂದ ಸೇವೆ ಸಲ್ಲಿಸುವುದು ವಿಶೇಷ. ಪ್ರತಿಷ್ಠಾನ ನಡೆಸುತ್ತಿರುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಜನರೇ ಸ್ವಂತ ಹಣ ವ್ಯಯಿಸುತ್ತಿದ್ದಾರೆ.

ಹಾಗೆಯೇ ಕ್ಯಾನ್ಸರ್‌ ಪೀಡಿರಿಗೆ ಅಗತ್ಯವಿರುವ ಫ್ಲಾಸ್ಕ್‌, ಹೊದಿಕೆ, ಬಟ್ಟೆಗಳನ್ನು ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಜನರಿಂದ ಬಟ್ಟೆಗಳನ್ನು ಸಂಗ್ರಹ ಮಾಡಲಾಗುತ್ತದೆ.

‘ಪ್ರತಿಷ್ಠಾನದಿಂದ ಇಲ್ಲಿಯವರೆಗೂ ಒಟ್ಟು 37 ಸೇವಾ ಕಾರ್ಯಕ್ರಮಗಳು ರಾಮಕೃಷ್ಣಾಶ್ರಮದ ಸ್ವಾಮಿ ತದ್ಯುಕ್ತಾನಂದಜೀ ಮಹಾರಾಜ್‌ ಅವರ ನೇತೃತ್ವದಲ್ಲಿ ನಡೆಯುತ್ತಿವೆ. ಪ್ರತಿಷ್ಠಾನದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಜನರ ಸೇವೆ ಮಾಡುವುದರಿಂದ ಸಂತೋಷ ಕಂಡುಕೊಂಡಿದ್ದೇನೆ’ ಎನ್ನುತ್ತಾರೆ ಪ್ರತಿಷ್ಠಾನದ ಟ್ರಸ್ಟಿ ಆನಂದ್‌.

ವೃತ್ತಿಯಲ್ಲಿ ಕಟ್ಟಡ ಗುತ್ತಿಗೆದಾರರಾಗಿರುವ ಅವರು, ‘ನಮ್ಮಲ್ಲಿ ಆಹಾರ ನಿರ್ವಹಣೆ ಘಟಕವಿದ್ದು ಅದಮ್ಯ ಚೇತನ, ಇಸ್ಕಾನ್‌ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಹಸಿದವರಿಗೆ ಮತ್ತು ಸ್ಲಂ ಜನರಿಗೆ ಹಂಚುತ್ತಿದ್ದೇವೆ’ ಎನ್ನುತ್ತಾರೆ.

ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆಯುವ ಪ್ರತಿ ತಿಂಗಳ ಮೊದಲ ಭಾನುವಾರ ನಡೆಯುವ ಕಾರ್ಯಕ್ರಮಕ್ಕೆ ಆಸಕ್ತರಿಗೆ ಮುಕ್ತ ಆಹ್ವಾನವಿದೆ. ಸಂಪರ್ಕ–ಆನಂದ್‌: 9448308249.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.