ADVERTISEMENT

ಡಾ.ಬಿ.ಸಿ.ರಾಯ್ ಜನ್ಮದಿನ ವೈದ್ಯರ ಪಾಲಿಗೆ ಪವಿತ್ರ ದಿನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ಡಾ.ಬಿದನ್ ಚಂದ್ರ ರಾಯ್
ಡಾ.ಬಿದನ್ ಚಂದ್ರ ರಾಯ್   

ಪ್ರತಿ ವರ್ಷ ಜುಲೈ 1ರಂದು ವೈದ್ಯರು ಸೇವಾ ದಿನವಾಗಿ ಆಚರಿಸುತ್ತಾರೆ. ಇದು ಭಾರತದ ವೈದ್ಯರೆಲ್ಲರೂ ಗೌರವಿಸುವ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮ ದಿನ (ಜನನ 1882). ಇವರ ಸ್ಮರಣಾರ್ಥ ಈ ದಿನವನ್ನು ಭಾರತ ಸರ್ಕಾರ ‘ವೈದ್ಯರ ದಿನ’ ಎಂದು ಆಚರಿಸುವಂತೆ ಸೂಚಿಸಿದೆ.

ಪಾಟ್ನಾದಲ್ಲಿ ಜನಿಸಿದ ಡಾ.ಬಿ.ಸಿ.ರಾಯ್ ಅವರು ಕೊಲ್ಕತ್ತಾದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ನಂತರ ಲಂಡನ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು.

ಕೊಲ್ಕತ್ತಾ ನಗರದ ಜನರ ಕಲ್ಯಾಣಕ್ಕಾಗಿ ಬಹುವಾಗಿ ಶ್ರಮಿಸಿದರು. ಇದಕ್ಕಿಂತ ಮಿಗಿಲಾಗಿ ವೈದ್ಯರಿಗೆ ಮಾರ್ಗ ದರ್ಶನ ನೀಡಲು ಭಾರತೀಯ ಆರೋಗ್ಯ ಮಂಡಳಿಯನ್ನು ಆರಂಭಿಸಿದರು. ಅದರ ಮೊಟ್ಟಮೊದಲ ಅಧ್ಯಕ್ಷರಾಗಿ 1939ರಲ್ಲಿ ಆಯ್ಕೆ ಆದರು. ಈ ಸ್ಥಾನವನ್ನು ಇವರು 1945ರವರೆಗೂ ಅಲಂಕರಿಸಿದ್ದರು.

1931ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 1961ರಲ್ಲಿ ಭಾರತ ಸರ್ಕಾರ ಡಾ.ರಾಯ್ ಅವರಿಗೆ ‘ಭಾರತ ರತ್ನ’ ಬಿರುದು ನೀಡಿತು. ಇವರು ತಮ್ಮ 82ನೇ ವಯಸ್ಸಿನಲ್ಲಿ (ಮರಣ ಜುಲೈ 1, 1962) ನಿಧನರಾದರು.

1976ರಲ್ಲಿ ಡಾ.ರಾಯ್ ಹೆಸರಿನಲ್ಲಿ ‘ಡಾ.ಬಿ.ಸಿ.ರಾಯ್ ಪ್ರಶಸ್ತಿ’ ಆರಂಭವಾಯಿತು. ವೈದ್ಯ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಭಾರತ ವೈದ್ಯಕೀಯ ಮಂಡಳಿ ಈ ಪ್ರಶಸ್ತಿ ನೀಡುತ್ತದೆ.

ಡಾ.ರಾಯ್ ಅವರ ದೃಷ್ಟಿಯಲ್ಲಿ ‘ಸ್ವರಾಜ್ಯ’ ಎಂಬ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತನಾಗಿರಬೇಕು.

ವೈದ್ಯರ ದಿನದಂದು ಅನೇಕ ವೈದ್ಯಕೀಯ ಸಂಸ್ಥೆಗಳು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತವೆ. ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ದಂತ ಪರೀಕ್ಷೆ, ಮಧುಮೇಹ ಶಿಬಿರ, ಇತ್ಯಾದಿ ಸೇವಾ ಚಟುವಟಿಕೆಗಳು ನಗರದ ವಿವಿಧೆಡೆ ನಡೆಯುತ್ತವೆ.

ಇದರ ಜೊತೆಗೆ ಮಾನಸಿಕ ಆರೋಗ್ಯ ರಕ್ಷಣೆಯೂ ಅಷ್ಟೇ ಮುಖ್ಯ. ಮನಸ್ಸಿಗೆ ಮುದ ನೀಡುವ ಸಲುವಾಗಿಯೇ ಹುಟ್ಟಿರುವ ಸಂಸ್ಥೆ, ‘ವೈದ್ಯ ಕಲಾರಂಗ’. ಈ ಸಂಸ್ಥೆ ಕಲೆಯ ಮೂಲಕ ಡಾ.ರಾಯ್ ಅವರಿಗೆ ನಮನ ಸಲ್ಲಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.