ADVERTISEMENT

ತಾಜಾ ತಾಜಾ ನಿತ್ಯಮಲ್ಲಿಗೆ...

ಆರ್‌.ಜೆ.ಯೋಗಿತಾ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ಗ್ಲಾಮರ್, ಸಾಂಪ್ರದಾಯಿಕ ಲುಕ್ ಎರಡರಲ್ಲೂ ಗಮನ ಸೆಳೆಯುವ ಮಾನ್ವಿತಾ ತಮ್ಮ ಚೊಚ್ಚಲ ಸಿನಿಮಾ ‘ಕೆಂಡಸಂಪಿಗೆ’ಯಲ್ಲಿ ಉತ್ತಮ ನಟನೆಯ ಮೂಲಕ ಭರವಸೆಯ ನಟಿ ಎನ್ನಿಸಿಕೊಂಡಿದ್ದಾರೆ.

‘ನಟಿಯಾದವಳಿಗೆ ಅಭಿನಯ ಎಷ್ಟು ಮುಖ್ಯವೋ ಅಂದದ ದೇಹ ಸಿರಿ ಕಾಪಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ’ ಎನ್ನುವ ಮಾನ್ವಿತಾ ಅವರಿಗೆ ಡಯೆಟ್‌ ಮಾಡದೇ ದೇಹ ದಂಡಿಸಿ ಫಿಟ್‌ನೆಸ್‌ ಕಾಯ್ದುಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ. ಇಚ್ಛೆಯಿದ್ದಷ್ಟು ತಿಂದರೂ ಸುಂದರ ದೇಹಸಿರಿಯನ್ನು ಕಾಪಾಡಿಕೊಳ್ಳುವ ಕಲೆ ಇವರಿಗೆ ಕರಗತ. ಅಂದಹಾಗೆ, ಫಿಟ್‌ನೆಸ್‌ ಕಾಯ್ದುಕೊಳ್ಳುವ ಗುಟ್ಟು ಏನೆಂದು ಮಾನ್ವಿತಾ ಅವರನ್ನು ಕೇಳಿದರೆ ಮೂರೇ ಪದಗಳಲ್ಲಿ ‘ವ್ಯಾಯಾಮ, ವ್ಯಾಯಾಮ, ವ್ಯಾಯಾಮ’ ಎನ್ನುತ್ತಾರೆ.

‘ಒಂದು ದಿನವೂ ತಪ್ಪದೇ ವ್ಯಾಯಾಮ ಮಾಡುವ ರೂಢಿ ಬೆಳೆಸಿಕೊಂಡಿದ್ದೇನೆ. ಏರೋಬಿಕ್ಸ್‌, ಜಾಗಿಂಗ್‌ ಇವೆಲ್ಲಕ್ಕಿಂತ ನನಗೆ ಜಿಮ್‌ನಲ್ಲಿ ಬೆವರಿಳಿಸುವುದು ತುಂಬ ಇಷ್ಟ. ಇದೇ ನನ್ನ ದೇಹಾಕಾರದ ಗುಟ್ಟು. ದೇಹ ಫಿಟ್‌ ಆಗಿದ್ದರೆ, ಮನಸ್ಸು ಲವಲವಿಕೆಯಿಂದ ಇರುತ್ತದೆ’ ಎನ್ನುವ ಇವರ ದಿನಚರಿ ಬೆಳಿಗ್ಗೆ 6ಕ್ಕೆ ಪ್ರಾರಂಭಗೊಳ್ಳುತ್ತದೆ.

‘ಬೆಳಿಗ್ಗೆ ಎದ್ದು ಸಪೋಟ ಜ್ಯೂಸ್‌ ಅಥವಾ ಮೊಳಕೆ ಕಾಳು ತಿಂದು ಜಿಮ್‌ಗೆ ಹೋಗುತ್ತೇನೆ. ಜಿಮ್‌ಗೆ ಹೋಗದ ಸಮಯದಲ್ಲಿ ಮನೆಯಲ್ಲೇ ಲಘು ವ್ಯಾಯಾಮ, ಯೋಗ ಮಾಡುತ್ತೇನೆ. ಯೋಗ ನನಗೆ ಬಹಳ ಇಷ್ಟ. ಮನಸ್ಸು, ದೇಹ ಎರಡನ್ನೂ ಅದು ಫಿಟ್‌ ಆಗಿ ಇರಿಸುತ್ತದೆ. ಅದರಿಂದ  ಇಡೀ ದಿನ ಖುಷಿ ತುಂಬಿರುತ್ತದೆ’ ಎಂದು ಮೊಗದ ಮಂದಹಾಸದ ಕಾರಣ ತಿಳಿಸುತ್ತಾರೆ.

‘ಉದ್ದಿನ ಖಾದ್ಯಗಳು ಬಹಳ ಪ್ರಿಯ. ಹಾಗಾಗಿ ಬೆಳಿಗ್ಗೆ ತಿಂಡಿಗೆ ಇಡ್ಲಿ, ದೋಸೆಗೆ ಮೆನುವಿಲ್ಲಿ ಅವಕಾಶ ಹೆಚ್ಚು. ತಿಂಡಿ ವೇಳೆ ಬಾಳೆಹಣ್ಣು ಸೂಕ್ತವಲ್ಲ. ಹಾಗಾಗಿ ಅದನ್ನು ಬಿಟ್ಟು ಸೇಬು ಮತ್ತಿತರೆ ಹಣ್ಣುಗಳನ್ನು ತಿನ್ನುತ್ತೇನೆ’ ಎನ್ನುತ್ತಾರೆ ಮಾನ್ವಿತಾ. ಅಲ್ಲದೆ ಬೆಳಿಗ್ಗೆ ತಿಂಡಿಯ ನಂತರ ನಾಲ್ಕು ಮೊಟ್ಟೆಯ ಬಿಳಿಭಾಗವನ್ನೂ ಅವರು ತಿನ್ನುತ್ತಾರೆ.

ಇನ್ನು ಮಧ್ಯಾಹ್ನ ಸಾಮಾನ್ಯ ಊಟ, ಚಪಾತಿ ಪಲ್ಯ, ಅನ್ನ ಸಾರು ಅವರ ಆಹಾರ. ವಾರಕ್ಕೆ ಎರಡು ದಿನ ಊಟಕ್ಕೆ ಚಿಕನ್ ಅಥವಾ ಮೀನು ಇರಲೇಬೇಕು. ‘ನಾನ್‌ವೆಜ್‌ ಅಂದರೆ ನನಗೆ ಪ್ರಿಯ. ಅದರಲ್ಲೂ ಮೀನಿನಿಂದ ತಯಾರಿಸಿದ ಎಲ್ಲ ಬಗೆಯ ಖಾದ್ಯಗಳು ನನಗಿಷ್ಟ. ಹೆಚ್ಚು ಎಣ್ಣೆ ಬಳಸದೆ ಮಾಡಿದ ಮಾಂಸ ಖಾದ್ಯಗಳನ್ನು ಸವಿಯುತ್ತೇನೆ’ ಎನ್ನುವ ಅವರು, ಸೊಪ್ಪಿನ ಪಲ್ಯ, ಗ್ರೀನ್‌ ಸಲಾಡ್  ಅನ್ನು ಕೂಡ ಹೆಚ್ಚಾಗಿ ಸೇವಿಸುತ್ತಾರೆ.

‘ಸಂಜೆ ಹೊತ್ತು ಸ್ವಲ್ಪ ಸಮಯ ವಾಕಿಂಗ್‌ ಅಥವಾ ಡಾನ್ಸ್‌ ವರ್ಕೌಟ್‌ ಮಾಡುತ್ತೇನೆ. ಆನಂತರ ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಅಥವಾ ಎಳನೀರು  ಕುಡಿಯುತ್ತೇನೆ. ಕಾಫಿ, ಟೀ, ಹಾಲು, ಗ್ರೀನ್‌ ಟೀ ಹೀಗೆ ಯಾವುದರ ಅಭ್ಯಾಸವೂ ಇಲ್ಲ. ರಾತ್ರಿ ಆದಷ್ಟೂ ಕಡಿಮೆ ಆಹಾರ ಸೇವಿಸುತ್ತೇನೆ. ಒಂದು ಚಪಾತಿ ಅಥವಾ ಸ್ವಲ್ಪ ಅನ್ನ. ರಾತ್ರಿ ಹೆಚ್ಚು ತಿನ್ನುವುದು ದೇಹಕ್ಕೆ ಒಳ್ಳೆಯದಲ್ಲ ಎನ್ನುವುದು ನನ್ನ ನಂಬಿಕೆ. ಹಾಗಾಗಿ ರಾತ್ರಿ ಎಷ್ಟು ಕಡಿಮೆ ತಿನ್ನಲು ಸಾಧ್ಯವೋ ಅಷ್ಟೂ ಕಡಿಮೆ ಆಹಾರ ಸೇವಿಸುತ್ತೇನೆ’ ಎಂದು ಅವರು ತಮ್ಮ ಆಹಾರ ಕ್ರಮದ ವಿವರಗಳನ್ನು ಒಪ್ಪಿಸುವರು.

ನೃತ್ಯಮೋಹಿ
ಶಾಲಾ ದಿನಗಳಲ್ಲಿ ನೃತ್ಯ ಪ್ರೀತಿ ಬೆಳೆಸಿಕೊಂಡಿದ್ದ ಮಾನ್ವಿತಾ ಫ್ರೀಸ್ಟೈಲ್‌ ನೃತ್ಯಗಾರ್ತಿ. ಈ ನೃತ್ಯ ಪ್ರೀತಿ ಫಿಟ್‌ನೆಸ್‌ ಕಾಯ್ದುಕೊಳ್ಳಲು ಅವರಿಗೆ ನೆರವಾಗಿದೆ. ಸಮಯ ಸಿಕ್ಕಾಗೆಲ್ಲ ನೃತ್ಯದಲ್ಲೇ ಮೈಮರೆಯಲು ಇಚ್ಛಿಸುವ ಇವರಿಗೆ ಮಾಧುರಿ ದೀಕ್ಷಿತ್‌ ಅವರ ನೃತ್ಯ ಅಚ್ಚುಮೆಚ್ಚು.

ತ್ವಚೆಯ ರಕ್ಷಣೆಗೆ ಮನೆಯಲ್ಲೇ ಪರಿಹಾರ ಕಂಡುಕೊಂಡಿರುವ ಮಾನ್ವಿತಾ ಪಾರ್ಲರ್‌ಗೆ ಹೋಗುವುದು ಕಡಿಮೆ. ‘ಬಾದಾಮಿಯನ್ನು ರುಬ್ಬಿ ಮುಖಕ್ಕೆ ಲೇಪಿಸಿಕೊಳ್ಳುವುದು. ಟೊಮೆಟೊ ರಸವನ್ನು ಕಣ್ಣಿಗೆ ಹಾಕಿಕೊಳ್ಳುವುದು ಹೀಗೆ ಮನೆಯಲ್ಲೇ ಏನೇನು ಸಾಧ್ಯವೋ ಅವೆಲ್ಲವನ್ನು ಮಾಡುತ್ತೇನೆ. ಇದು ನೈಸರ್ಗಿಕ ಸೌಂದರ್ಯವನ್ನು ತಂದುಕೊಡುತ್ತದೆ. ಹಾಗಾಗಿ ನನ್ನ ಮುಖದ ಮೇಲೆ ಒಂದೂ ಕಲೆ ಇಲ್ಲ’ ಎಂದು ತಮ್ಮ ಹೊಳೆಯುವ ತ್ವಚೆಯ ಗುಟ್ಟ ರಟ್ಟು ಮಾಡಿದರು. ಜಂಕ್‌ಫುಡ್‌, ಚಾಟ್ಸ್‌ ಇವೆಲ್ಲವುಗಳಿಂದ ದೂರ ಇರುವ ಮಾನ್ವಿತಾ ಅಪರೂಪಕ್ಕೆ ಪಾನಿಪುರಿ ತಿನ್ನುತ್ತಾರೆ. ‘ಪಿಜ್ಜಾ, ಬರ್ಗರ್‌ನಲ್ಲಿರುವಷ್ಟು ಕೊಬ್ಬಿನಾಂಶ ಇನ್ನಾವುದರಲ್ಲೂ ಇಲ್ಲ’ ಎನ್ನುವುದು ಗೊತ್ತಿದ್ದೂ ಅಪರೂಪಕ್ಕೆ ಅವುಗಳ ರುಚಿಯನ್ನೂ ಸ್ವಲ್ಪ ನೋಡುವುದಿದೆ.

ಅನಂತ್‌ನಾಗ್‌ ಅಚ್ಚುಮೆಚ್ಚು
‘ಸಮಯ ಸಿಕ್ಕಾಗೆಲ್ಲ ಸಿನಿಮಾ ನೋಡುತ್ತೇನೆ. ಹೊರಗೆಲ್ಲೋ ಸುತ್ತುವುದಕ್ಕಿಂತ ಸಿನಿಮಾ ನೋಡುವುದೇ ನನಗೆ ಹೆಚ್ಚು ಇಷ್ಟ.  ನಟನೆಗೆ ಹೆಚ್ಚು ಪ್ರಾಶಸ್ತ್ಯ ಇರುವ ಸಿನಿಮಾಗಳನ್ನು ನೋಡುತ್ತೇನೆ. ಸಹಜವಾಗಿ ನಟಿಸುವ ಅನಂತ್‌ನಾಗ್‌ ನನಗೆ ಅಚ್ಚುಮೆಚ್ಚು. ಜತೆಗೆ ರಮೇಶ್‌ ಅರವಿಂದ್‌, ಕಮಲ್‌ ಹಾಸನ್‌, ನಾಸಿರುದ್ದೀನ್‌ ಷಾ, ನವಾಜುದ್ದೀನ್‌ ಸಿದ್ದಿಕಿ, ವಿದ್ಯಾ ಬಾಲನ್‌, ಕಂಗನಾ ರನೋಟ್‌ ಅವರ ಅಭಿನಯವೂ ತುಂಬ ಇಷ್ಟ. ಅವರ ಅಭಿನಯದ ಮೂಲಕ ನನ್ನ ನಟನೆಯನ್ನು ಪಕ್ವ ಮಾಡಿಕೊಳ್ಳುತ್ತೇನೆ. ಇದುವರೆಗೂ ಯಾವುದೇ ಕಲಿಕಾ ತರಬೇತಿ ಪಡೆಯದ ನನಗೆ ಇವರೇ ಗುರುಗಳು’ ಎನ್ನುತ್ತಾರೆ ಮಾನ್ವಿತಾ.

ಯಾವುದೇ ನಿರೀಕ್ಷೆ ಇಲ್ಲದೆ ಸಿಕ್ಕ ‘ಕೆಂಡಸಂಪಿಗೆ’ ಸಿನಿಮಾ ಅವಕಾಶ ಒಂದು ಸರ್‌ಪ್ರೈಸ್ ಎಂದೇ ಅವರು ನಂಬಿದ್ದಾರೆ. ‘ಚಿತ್ರಕ್ಕೆ ಆಯ್ಕೆಯಾದಾಗ ತುಂಬಾ ಖುಷಿಪಟ್ಟೆ. ಚಿತ್ರದಲ್ಲಿನ ನನ್ನ ಅಭಿನಯಕ್ಕೆ ಸ್ನೇಹಿತರಿಂದ ಅಭಿಮಾನದ ಮಹಾಪೂರವೇ ಹರಿದು ಬಂತು. ಎಲ್ಲೇ ಹೋದರೂ ಗೌರಿ ಎಂದೇ ಗುರುತಿಸುತ್ತಾರೆ. ಈಗ ಜನರ ನಿರೀಕ್ಷೆ ಹೆಚ್ಚಾಗಿದೆ. ಅವರ ಅಭಿಮಾನಕ್ಕೆ ತಕ್ಕಂತೆ ನಟಿಸಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಕೆಂಡಸಂಪಿಗೆ ನಂತರ ಅನೇಕ ಕಥೆಗಳನ್ನು ಕೇಳಿದ್ದೇನೆ. ಆದರೆ ಯಾವುದೂ ಹಿಡಿಸಿಲ್ಲ. ಮೊದಲ ಸಿನಿಮಾದಲ್ಲೇ ಉತ್ತಮ ಕಥೆಗೆ ಅಭಿನಯಿಸಿದ್ದೇನೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆನ್ನುವ ಹಂಬಲವಿದೆ’ ಎಂದು ಸಿನಿಮಾ ಆಯ್ಕೆಯ ತಮ್ಮ ಮಾನದಂಡದ ಸೂಚನೆ ಬಿಟ್ಟುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.