ADVERTISEMENT

ದಕ್ಷಿಣ ಭಾರತ ರಂಗೋತ್ಸವ

ಹರವು ಸ್ಫೂರ್ತಿ
Published 19 ಏಪ್ರಿಲ್ 2016, 19:42 IST
Last Updated 19 ಏಪ್ರಿಲ್ 2016, 19:42 IST
‘ಚರಿತ್ರಪುಸ್ತಕತಿಲ್‌ ಎಕ್ಕುಓರೇಡು’ ಮಲಯಾಳಂ ನಾಟಕ
‘ಚರಿತ್ರಪುಸ್ತಕತಿಲ್‌ ಎಕ್ಕುಓರೇಡು’ ಮಲಯಾಳಂ ನಾಟಕ   

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ದಕ್ಷಿಣ ಭಾರತ ಕೇಂದ್ರವು ಆಯೋಜಿಸಿರುವ 10 ದಿನಗಳ ‘ದಕ್ಷಿಣ ಭಾರತ ರಂಗೋತ್ಸವ’ (ಏಪ್ರಿಲ್ 20ರಿಂದ 29) ಇಂದಿನಿಂದ ನಗರದ ಗುರುನಾನಕ್ ಭವನದಲ್ಲಿ ಆರಂಭಗೊಳ್ಳಲಿದೆ. ಎರಡು ವರ್ಷದಿಂದ ಎನ್‌ಎಸ್‌ಡಿ  ದಕ್ಷಿಣ ಭಾರತ ಕೇಂದ್ರ ಹಲವು ರಂಗಭೂಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.

ಅಭಿನಯ ತರಬೇತಿಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ರಂಗೋತ್ಸವನ್ನು ಆಯೋಜನೆ ಮಾಡಲಾಗಿದೆ. ಜೊತೆಗೆ ದಕ್ಷಿಣ ಭಾರತದಲ್ಲಿ ಎನ್‌ಎಸ್‌ಡಿ ಸಂಸ್ಥೆಯನ್ನು ಪ್ರಬಲವಾಗಿ ಕಟ್ಟುವ, ದಕ್ಷಿಣ ಭಾರತೀಯರಿಗೆ ಉತ್ತಮವಾದ ರಂಗರೂಪವನ್ನು ಪರಿಚಯಿಸುವ ಉದ್ದೇಶವನ್ನು ರಂಗೋತ್ಸವ ಹೊಂದಿದೆ.

ಎನ್‌ಎಸ್‌ಡಿ ದಕ್ಷಿಣ ಭಾರತ ಕೇಂದ್ರದಲ್ಲಿ ಕರ್ನಾಟಕ, ತೆಲಂಗಾಣ, ಸೀಮಾಂಧ್ರ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಲಕ್ಷದ್ವೀಪದಿಂದ ಇಪ್ಪತ್ತು ವಿದ್ಯಾರ್ಥಿಗಳು ಇದ್ದಾರೆ. ಈ ಹತ್ತು ದಿನಗಳ ರಾಷ್ಟ್ರೀಯ ನಾಟಕೋತ್ಸದಲ್ಲಿ ದ್ರಾವಿಡ ಭಾಷೆಗಳೊಂದಿಗೆ ಉತ್ತರದ ಹಿಂದಿ ಭಾಷೆಯ ನಾಟಕಗಳ ಪ್ರದರ್ಶನವೂ ಇದೆ.

‘ನಾವು ಇಂದು ದೇಶದಲ್ಲಿ ಆಗುತ್ತಿರುವ ಅಸಹಿಷ್ಣುತೆ, ಇತರೆ ರಾಷ್ಟ್ರೀಯ ಚರ್ಚೆಗಳನ್ನು ನೋಡುತ್ತಿದ್ದೇವೆ. ದೇಶಭಕ್ತಿ ಪ್ರಶ್ನೆಯಾಗುತ್ತಿರುವ ಈ ಹೊತ್ತಿಗೆ ವಿಭಿನ್ನ ಆಶಯ, ದೃಷ್ಟಿಕೋನದಲ್ಲಿ ರಂಗಭೂಮಿಯನ್ನು ನೋಡಬೇಕಾಗುತ್ತದೆ. ಇವುಗಳ ಭಿನ್ನಾಭಿಪ್ರಯಗಳನ್ನು ಮೀರಿ ಅಖಂಡತೆ ತೋರಬೇಕು. ರಂಗಭೂಮಿ ಮನೋರಂಜನೆಗೂ ಮೀರಿದ ಮಾಧ್ಯಮ’ ಎನ್ನುತ್ತಾರೆ ದಕ್ಷಿಣ ಭಾರತ ರಂಗೋತ್ಸವದ ನಿರ್ದೇಶಕ ಸಿ.ಬಸವಲಿಂಗಯ್ಯ.

ಈ ದಕ್ಷಿಣ ಭಾರತ ರಂಗೋತ್ಸವ ಕೇವಲ ನಾಟಕೋತ್ಸವವಾಗಿ ಉಳಿಯದೆ, ಸಾಮಾಜಿಕ ಪ್ರಜ್ಞೆ ಮೂಡಿಸುವ ಜವಾಬ್ದಾರಿಗಳನ್ನು ಹೊಂದಿದೆ. ದಕ್ಷಿಣ ಭಾರತ ರಂಗೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ  ಆಯೋಜಿಸಲಾಗಿದೆ. ಪ್ರಸ್ತುತ ದಕ್ಷಿಣ ಭಾರತ ರಂಗೋತ್ಸವವು ಉತ್ತರ ಭಾರತದ ಕೆಲವು ಪ್ರಮುಖ ನಾಟಕಗಳು ಹಾಗೂ ದಕ್ಷಿಣ ಭಾರತದ ದ್ರಾವಿಡ ಭಾಷೆಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಮತ್ತು ಕೇರಳ ರಾಜ್ಯಗಳ ನಾಟಕಗಳನ್ನು ಒಳಗೊಂಡಿದೆ.

‘ಬೆಂಗಳೂರಿಗಷ್ಟೆ ರಂಗೋತ್ಸವ ಸೀಮಿತವಾಗಿಲ್ಲ, ದಕ್ಷಿಣ ಭಾಗದ ರಂಗಕಲಾವಿದರ ಭಾಗವಹಿಸುವಿಕೆ ಇದೆ,  ನಾಟಕ ಆಯ್ಕೆಯಲ್ಲೂ ಎಚ್ಚರವಾಗಿ ವರ್ತಮಾನಕ್ಕೆ ಬೇಕಾದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ, ವಿಭಿನ್ನ ಬಗೆಯ ನಾಟಕ ಈ ಬಾರಿ ನಾಟಕೋತ್ಸವದ ವಿಶೇಷ’ ಎನ್ನುತ್ತಾರೆ ಸಿ.ಬಸವಲಿಂಗಯ್ಯ.

ವಿಶೇಷ ನಾಟಕಗಳ ಆಯ್ಕೆ
ಈ ಬಾರಿಯ ಎನ್‌ಎಸ್‌ಡಿ ದಕ್ಷಿಣ ಭಾರತ ನಾಟಕೋತ್ಸವದಲ್ಲಿ ಹಲವು ವಿಶೇಷ ನಾಟಕಗಳ ಆಯ್ಕೆ ಇದೆ. ‘ತಾವೂಸ್ ಚಮನ್ ಕಿ ಮೈನಾ’ ಎಂಬ ಹಿಂದಿ ನಾಟಕವು ನಾಯರ್ ಮಸೂದ್ ಅವರ ಉರ್ದು ಕಥೆ ಆಧಾರಿತ ನಾಟಕವಾಗಿದ್ದು, ಇದರ ರಂಗಪ್ರಯೋಗವನ್ನು ನೋಡಲು ಪಾಕಿಸ್ತಾನದ ಹಲವು ರಂಗಕರ್ಮಿಗಳು ಬರಲಿದ್ದಾರಂತೆ. ಇದರ ರಂಗಾನುವಾದ ನಿರ್ದೇಶನ ಅತುಲ್‌ ತಿವಾರಿ ಅವರದ್ದು.

ಕನ್ನಡ ರಂಗಭೂಮಿಯ ಐತಿಹಾಸಿಕ ನಾಟಕ ‘ಮುಖ್ಯಮಂತ್ರಿ’ ಕೂಡ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾಗಂಗೋತ್ರಿ  ತಂಡದಿಂದ ನಾಟಕ ಪ್ರದರ್ಶನಗೊಳ್ಳಿದೆ. ಮುಖ್ಯಮಂತ್ರಿ ಕೃಷ್ಣ ದ್ವೈಪಾಯನ ಕೌಶಲ್ ಪಾತ್ರವನ್ನು ಡಾ. ಮುಖ್ಯಮಂತ್ರಿ ಚಂದ್ರು ನಿರ್ವಹಿಸಲಿದ್ದಾರೆ. ಒಂದು ದಿನಕ್ಕೆ 50 ರೂಪಾಯಿ ಪ್ರವೇಶ ದರ. ಒಟ್ಟಾರೆ 10 ದಿನಗಳ ನಾಟಕೋತ್ಸವಕ್ಕೆ ₹400.

ಉದ್ಘಾಟನಾ ಕಾರ್ಯಕ್ರಮದ ವಿವರಗಳು
* ಉದ್ಘಾಟನೆ: ಗಿರೀಶ ಕಾರ್ನಾಡ,
* ಅತಿಥಿ: ಉಮಾಶ್ರೀ,
* ಅಧ್ಯಕ್ಷತೆ: ಮರುಳಸಿದ್ಧಪ್ಪ,
* ಉಪಸ್ಥಿತಿ: ಕೆ.ಎ. ದಯಾನಂದ, ಸಿ. ಬಸವಲಿಂಗಯ್ಯ,
* ಸಹಕಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
* ಸ್ಥಳ: ಗುರುನಾನಕ್‌ ಭವನ, ವಸಂತನಗರ, ಮಹಾವೀರ ಆಸ್ಪತ್ರೆ ಹತ್ತಿರ, ಸಂಜೆ 6
* ಪ್ರತಿದಿನ ನಾಟಕ ಪ್ರದರ್ಶನ: ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.