ADVERTISEMENT

ನಗರದಾಚೆಗಿನ ಕೃಷಿಲೋಕ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ಕನಕಪುರ ಬಳಿ ಗೋಮಾಳಗಳಿಗೂ ಕೊಳಚೆ ನೀರು ಹರಿದಿರುವುದು
ಕನಕಪುರ ಬಳಿ ಗೋಮಾಳಗಳಿಗೂ ಕೊಳಚೆ ನೀರು ಹರಿದಿರುವುದು   

ಅಕ್ಕಪಕ್ಕದ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಮಹಾನಗರ ಹಿಗ್ಗುತ್ತಾ ಹೋದಂತೆ ಕೃಷಿ ವಲಯ ಕುಗುತ್ತಾ ಹೋಯಿತು. ನಗರದ ಕೊಳೆಯನ್ನೆಲ್ಲಾ ಆ ಭಾಗಗಳಿಗೆ ಹರಿಸುತ್ತಾ ಹೋದಂತೆ ಭೂಮಿಯ ಮೇಲೆ ಮತ್ತು ಒಳಗಿನ ನೀರೂ ವಿಷವಾಗುತ್ತಾ ಬಂತು. ಹಾಗಂತ ಇರುವ ಜಮೀನುಗಳಲ್ಲೇ, ಕಾಲಕ್ಕೆ ತಕ್ಕುದಾದ ಬೆಳೆಗಳನ್ನು ಬೆಳೆಯುವ ಉಮೇದು ಕಮ್ಮಿಯಾಗಿಲ್ಲ.

ನಗರದ ಹೊರವರ್ತುಲಗಳಲ್ಲಿ ಉಳಿದುಕೊಂಡಿರುವ ಕೃಷಿ ಭೂಮಿಯ ವಾಸ್ತವ ಚಿತ್ರಣವೇನು, ಅಲ್ಲಿ ಬೆಳೆಯುವ ತರಕಾರಿ, ಸೊಪ್ಪು, ಹಣ್ಣು, ಹೂವುಗಳಿಗೆ ಯಾವ ನೀರು ಬಳಕೆಯಾಗುತ್ತಿದೆ, ಕೊಳಚೆ ಸಾಗುವ ಹಾದಿ ಮತ್ತು ವಿಸರ್ಜನೆಯಾಗುವ ಪ್ರದೇಶದ ಮೇಲೆ ಕೊಳಚೆ ನೀರು, ತ್ಯಾಜ್ಯ ಬೀರಿರುವ ಪರಿಣಾಮಗಳೇನು ಎಂಬ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವವರು ಎಂ.ಜಿ. ರಸ್ತೆಯ ಮೆಟ್ರೊ ರಂಗೋಲಿ ಕಲಾ ಕೇಂದ್ರಕ್ಕೆ ಭೇಟಿ ನೀಡಬಹುದು. ನಗರದ ಹೊರವರ್ತುಲ ಪ್ರದೇಶಗಳ ಅನೇಕ ವಾಸ್ತವ ಚಿತ್ರಣಗಳ ಮೇಲೆ ಬೆಳಕು ಚೆಲ್ಲುವ ಛಾಯಾಚಿತ್ರಗಳ ಪ್ರದರ್ಶನ ಅಲ್ಲಿ ನಡೆದಿದೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧನಾ ತಂಡ ನಡೆಸಿದ ಅಧ್ಯಯನದ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಛಾಯಾಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾಲಯವು ಏರ್ಪಡಿಸಿದೆ.

ADVERTISEMENT

ರಿಯಲ್‌ ಎಸ್ಟೇಟ್‌ ಕ್ಷೇತ್ರದ ಕೊಳ್ಳುಬಾಕತನ, ಕೃಷಿ ಜಮೀನುಗಳಲ್ಲೇ ತಲೆಯೆತ್ತಿರುವ ಕೈಗಾರಿಕೆಗಳು, ಗೋಮಾಳಗಳನ್ನೂ ಬಿಡದ ಫ್ಯಾಕ್ಟರಿಗಳು, ಬೆಳೆಗಳು, ಜನಜೀವನ ಹೀಗೆ ಹಲವು ಆಯಾಮಗಳನ್ನು ನೋಡುಗರ ಮುಂದಿಡುತ್ತದೆ ಇಲ್ಲಿನ ಛಾಯಾಚಿತ್ರಗಳು. ಆಸಕ್ತರಿಗೆ ಪ್ರತಿ ಚಿತ್ರದ ಬಗ್ಗೆಯೂ ಮಾಹಿತಿ ನೀಡಲು ವಿಶ್ವವಿದ್ಯಾಲಯದ ಸಂಶೋಧನಾ ತಂಡದ ಸದಸ್ಯರೂ ಸ್ಥಳದಲ್ಲಿ ಲಭ್ಯವಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.