ADVERTISEMENT

‘ನನ್ನ ಕನಸು ಮಿ.ವರ್ಲ್ಡ್‌’

ರೋಹಿಣಿ ಮುಂಡಾಜೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ವಿಷ್ಣುರಾಜ್‌ ಮೆನನ್‌
ವಿಷ್ಣುರಾಜ್‌ ಮೆನನ್‌   

ವಿಷ್ಣುರಾಜ್‌ ಮೆನನ್‌ ಎಂದರೆ ಅಷ್ಟು ಜನರಿಗೆ ಗೊತ್ತಾಗದು. ‘ಪೀಟರ್‌ ಇಂಗ್ಲೆಂಡ್‌ ಮಿಸ್ಟರ್‌ ಇಂಡಿಯಾ 2016’ ಸ್ಪರ್ಧೆ ವಿಜೇತ ವಿಷ್ಣು ಎಂದರೆ ಫ್ಯಾಷನ್‌ ಜಗತ್ತು ತಿರುಗಿನೋಡದೇ ಇರದು. ‘ಬೆಂಗಳೂರು ಹುಡುಗ’ ಎಂದೇ ತಮ್ಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ವಿಷ್ಣು, ವೈಟ್‌ಫೀಲ್ಡ್‌ನವರು.

‘ನಾನು ಓದಿದ್ದು ಸಿವಿಲ್‌ ಎಂಜಿನಿಯರಿಂಗ್‌. ಆದರೆ ನಟನೆ, ಮಾಡೆಲಿಂಗ್‌, ಫ್ಯಾಷನ್‌ ಲೋಕದಲ್ಲಿ ಹೆಸರು ಗಳಿಸಬೇಕು ಎಂಬ ಉಮೇದು ಬಹಳ ವರ್ಷಗಳಿಂದ ನನಗಿತ್ತು. ಹಾಗಾಗಿ ‘ಮಿಸ್ಟರ್‌ ಇಂಡಿಯಾ’ ಸ್ಪರ್ಧೆಯನ್ನೇ ನನ್ನ ಗುರಿಯಾಗಿಟ್ಟುಕೊಂಡು ಅದರಲ್ಲೇ ತೊಡಗಿಸಿಕೊಂಡೆ.

ಕಳೆದ ವರ್ಷ ಸ್ಪರ್ಧೆಯಲ್ಲಿ ಗೆದ್ದೆ. ಮುಂದಿನ ವರ್ಷ ಬ್ರಿಟನ್‌ನಲ್ಲಿ ‘ಮಿಸ್ಟರ್‌ ವರ್ಲ್ಡ್‌’ ಸ್ಪರ್ಧೆ ನಡೆಯಲಿದೆ. ಅದರಲ್ಲಿ ಗೆದ್ದು ಆ ವೇದಿಕೆಯಲ್ಲಿಯೂ ‘ಬೆಂಗಳೂರು ಹುಡುಗ ಗೆದ್ದ’ ಅನಿಸಿಕೊಳ್ಳಬೇಕು ಎಂಬುದು ಈಗ ನನ್ನ ಮುಂದಿರುವ ಗುರಿ’ ಎಂದು ಹೇಳುತ್ತಾರೆ ವಿಷ್ಣು.

ADVERTISEMENT

ವಿಷ್ಣು ಅವರ ಕನಸು ಮನಸೆಲ್ಲವೂ ಮಿಸ್ಟರ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗೆಲ್ಲುವ ಸುತ್ತಲೇ ಗಿರಕಿ ಹೊಡೆಯುತ್ತಿದೆ...

ದೇಹದಾರ್ಢ್ಯ, ಸೌಂದರ್ಯ, ಆತ್ಮವಿಶ್ವಾಸ, ಸಂವಹನ ಕಲೆ, ಆರೋಗ್ಯ, ಪ್ರತಿಭೆ, ಆಕರ್ಷಕ ವ್ಯಕ್ತಿತ್ವ, ಕೂದಲಿನ ಅಂದ, ಚರ್ಮದ ಚಂದ, ಬುದ್ಧಿಶಕ್ತಿ, ಸ್ಮರಣಾ ಶಕ್ತಿ, ನಟನೆ, ರ‍್ಯಾಂಪ್‌ವಾಕ್‌... ಹೀಗೆ ಹತ್ತಾರು ಆಯಾಮಗಳಲ್ಲಿ ಸ್ಪರ್ಧಿಗಳಿಗೆ ಸವಾಲುಗಳನ್ನು ಒಡ್ಡಲಾಗುತ್ತದೆ. ಈ ಒಂದೊಂದು ಸುತ್ತಿನಲ್ಲಿಯೂ ಉತ್ತಮ ಅಂಕ ಗಳಿಸಿದವರು ಮುಂದಿನ ಸುತ್ತು ಪ್ರವೇಶಿಸುತ್ತಾರೆ. ‘ಮಿಸ್ಟರ್‌ ವರ್ಲ್ಡ್‌’ ಸ್ಪರ್ಧೆಯಲ್ಲಿಯೂ ಇದೇ ಮಾದರಿಯ ಸುತ್ತುಗಳಿದ್ದರೂ ‘ಇಂಡಿಯಾ’ ಸ್ಪರ್ಧೆಗಿಂತ ಎಷ್ಟೋ ಪಟ್ಟು ಕಠಿಣವಾಗಿರುತ್ತದೆ.

‘ಸೌಂದರ್ಯ ಮತ್ತು ದೇಹದಾರ್ಢ್ಯ ಸ್ಪರ್ಧೆಗಳು ನೋಡುಗರ ಕಣ್ಣಿಗೆ ಸರಳವಾಗಿ ಕಾಣಿಸಬಹುದು. ಇವರಿಗೆ ಬೇರೇನೂ ಕೆಲಸವಿಲ್ಲ ಎಂದು ಅನಿಸುವುದೂ ಉಂಟು. ಆದರೆ ‘ಮಿಸ್ಟರ್‌ ಇಂಡಿಯಾ’, ‘ಮಿಸ್ಟರ್‌ ವರ್ಲ್ಡ್‌’ನಂತಹ ದೊಡ್ಡ ಮಟ್ಟದ ಸ್ಪರ್ಧೆಗಳಿಗೆ ತಯಾರಾಗುವುದು ಲಘುವಾದ ವಿಷಯವಲ್ಲ. ದುಡ್ಡಿನ ಬಗ್ಗೆ ಯೋಚಿಸದೆ ಗುರಿಯತ್ತ ಗಮನ ಕೇಂದ್ರೀಕರಿಸುವುದು ಅನಿವಾರ್ಯ.

‘ಮಿಸ್ಟರ್‌ ಇಂಡಿಯಾ’ ಸ್ಪರ್ಧೆಯಲ್ಲಿ ಗೆದ್ದ ಮೇಲೆ ತಮ್ಮನ್ನು ಜಗತ್ತು ನೋಡುವ ರೀತಿಯೇ ಬದಲಾಗಿದೆ. ಹತ್ತಾರು ಕಂಪೆನಿಗಳು, ಬ್ರ್ಯಾಂಡ್‌ಗಳು, ವಸ್ತ್ರ ವಿನ್ಯಾಸಕರು, ಫ್ಯಾಷನ್‌ ಗುರುಗಳ ಬೆಂಬಲ ಸಿಗುತ್ತಿದೆ. ಹತ್ತಾರು ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಭಾಗವಹಿಸುವುದು, ಹೊಸ ಸ್ಪರ್ಧಿಗಳಿಗೆ ಸಹಕಾರ ನೀಡುವುದು, ಬಿಡುವಿಲ್ಲದ ಫ್ಯಾಷನ್‌ ಶೋಗಳು, ಬ್ರ್ಯಾಂಡಿಂಗ್‌ ಕಾರ್ಯಕ್ರಮಗಳು ಹೀಗೆ ಬ್ಯುಸಿಯಾಗಿರುತ್ತೇನೆ.

‘ಬೆಳಿಗ್ಗೆ ಆರು ಗಂಟೆಗೆ ಏಳುತ್ತೇನೆ. 50 ಬಸ್ಕಿ ಹೊಡೆಯುವಲ್ಲಿಂದ ನನ್ನ ದಿನ ಆರಂಭವಾಗುತ್ತದೆ. ಹಣ್ಣು ತಿನ್ನು, ತರಕಾರಿ ಕುಡಿ ಎಂಬುದು ನನ್ನ ಪಥ್ಯಾಹಾರದ ಪ್ರಮುಖ ಶಿಸ್ತು. ತರಕಾರಿಗಳ ಸೂಪ್‌, ಸಾರು ಹೆಚ್ಚಾಗಿ ಸೇವಿಸುತ್ತಿರುತ್ತೇನೆ. ಬೆಳಿಗ್ಗೆ ಮತ್ತು ಸಂಜೆ ಶ್ರಮದಾಯಕ ವರ್ಕೌಟ್‌ಗಳನ್ನು ಮಾಡುವ ಕಾರಣ ದಿನಕ್ಕೆ ಎಂಟರಿಂದ ಹತ್ತು ಲೀಟರ್‌ ನೀರು ಸೇವಿಸುತ್ತೇನೆ.

ದಿನಕ್ಕೆ 20ರಿಂದ 25 ಮೊಟ್ಟೆಯ ಬಿಳಿಭಾಗ, ಸ್ವಲ್ಪ ಅನ್ನ, ರಾತ್ರಿಗೆ ಹೆಚ್ಚು ಪ್ರೊಟೀನ್‌ ಇರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಬೇಯಿಸಿದ ಕೋಳಿ ಮಾಂಸ ಪ್ರತಿದಿನ ಇದ್ದೇ ಇರುತ್ತದೆ.

ಒಂದು ವಿಷಯ ಹೇಳ್ಲಾ? ನಾನೆಷ್ಟು ಸಂಪಾದಿಸುತ್ತೇನೆ ಎಂದು ನಾನು ಲೆಕ್ಕ ಇಟ್ಟುಕೊಳ್ಳಬಹುದು. ಆದರೆ ನನ್ನ ಗುರಿ ಸಾಧಿಸಬೇಕಾದರೆ ನಾನೆಷ್ಟು ಖರ್ಚು ಮಾಡುತ್ತೇನೆ ಎಂಬ ಲೆಕ್ಕ ಇಟ್ಟುಕೊಳ್ಳುವುದೇ ಇಲ್ಲ. ಯಾಕೆಂದರೆ ನನಗೆ ಗುರಿ ಮುಟ್ಟುವುದು ಮುಖ್ಯ.

ನಾನು ವಿವಾಹಿತನಲ್ಲ. ಎಲ್ಲಿ ಹೋದರೂ ಹುಡುಗಿಯರು ಬೆನ್ನು ಬೀಳುವುದು ಇದ್ದಿದ್ದೇ. ಆದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ನನ್ನಮ್ಮ ಮಾದರಿ. ಅವರದೇ ಸದ್ಗುಣಗಳನ್ನು ಹೊಂದಿರುವ ಹುಡುಗಿಯನ್ನೇ ಮದುವೆಯಾಗಲು ಬಯಸುತ್ತೇನೆ. ಎಲ್ಲಕ್ಕಿಂತ ಮೊದಲು ‘ಮಿಸ್ಟರ್‌ ವರ್ಲ್ಡ್‌’ ಆಗಬೇಕು’ ಎಂದು ನಗುತ್ತಾರೆ ವಿಷ್ಣುರಾಜ್‌ ಮೆನನ್.

ಸಂಪರ್ಕಕ್ಕೆ: facebook.com/vishnu.rajsmenon

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.